Yadgiri | ಮೃತ ಕಾರ್ಮಿಕನ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ಚೆಕ್ ವಿತರಣೆ
ಯಾದಗಿರಿ : ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟಿದ್ದ ಮೇಸ್ತ್ರಿ ಆನಂದ್ ಭೀಮಣ್ಣ ನಾಟೇಕಾರ್ ಅವರ ಕುಟುಂಬಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ 1 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಲಾಯಿತು.
ನಗರದ ಸುಭಾಷ್ ವೃತ್ತದ ಸಮೀಪದ ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ದೇವಜಿ ಜಾಧವ್ ಅವರು ಮೃತ ಆನಂದ್ ಅವರ ಪತ್ನಿ ಪ್ರೀತಿ ನಾಟೇಕಾರ್ ಅವರಿಗೆ 1 ಲಕ್ಷ ರೂ. ಮೊತ್ತದ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೇವಜಿ ಜಾಧವ್, ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರ ಕುಟುಂಬಗಳ ನೆರವಿಗೆ ಕಾರ್ಮಿಕರೇ ಒಂದಾಗಿ ನಿಲ್ಲುವುದು ಸಂಘದ ಪ್ರಮುಖ ಉದ್ದೇಶವಾಗಿದೆ. ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರವೂ ಇಂತಹ ಕುಟುಂಬಗಳಿಗೆ ಅಗತ್ಯ ಪರಿಹಾರ ಹಾಗೂ ವಿವಿಧ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಹುಲಗಪ್ಪ ಒಡೆಯರ್, ಪ್ರಧಾನ ಕಾರ್ಯದರ್ಶಿ ಬಾಬು, ಖಜಾಂಚಿ ಗೋಪಾಲ ಪವಾರ್, ಉಪಾಧ್ಯಕ್ಷ ರಾಜ್ ಮಹಮ್ಮದ್, ರೈಹೀಮಾನ್ ಸಾಬ್, ಉಮಾಕಾಂತ, ಗೋವಿಂದ ಗೋಪಾಲ, ಮರಿಲಿಂಗಪ್ಪ ಕೊಲ್ಲೂರಕರ್, ವೀರಣ್ಣ ಪರಸನಾಯಕ, ವಿಶ್ವನಾಥಪ್ಪ ಅಬ್ಬೇತುಮಕೂರ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.