×
Ad

Yadgiri | ಚಿತ್ರದುರ್ಗದಲ್ಲಿ ಜು.18ರಂದು ರಾಷ್ಟ್ರಮಟ್ಟದ ಭೋವಿ ಜನೋತ್ಸವ

Update: 2026-07-09 18:49 IST

ಯಾದಗಿರಿ: ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಜುಲೈ 18ರಂದು ನಡೆಯಲಿರುವ ರಾಷ್ಟ್ರಮಟ್ಟದ ಭೋವಿ ಜನೋತ್ಸವ ಸಮಾವೇಶದಲ್ಲಿ ಯಾದಗಿರಿ ಜಿಲ್ಲೆಯಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಉಸ್ತುವಾರಿ ಸಮಿತಿ ಅಧ್ಯಕ್ಷ ಸಿದ್ದು ಬಂಡಿ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಮಾವೇಶ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಸ್ವಾಮೀಜಿಯವರ ಪಟ್ಟಾಭಿಷೇಕದ 17ನೇ ಮಹೋತ್ಸವ, ಇಮ್ಮಡಿ ಲಾಂಛನ ದೀಕ್ಷೆಯ 28ನೇ ಮಹೋತ್ಸವ ಹಾಗೂ 40ನೇ ಸಿದ್ದರಾಮೇಶ್ವರ ವರ್ಧಂತ್ಯುತ್ಸವವನ್ನು ಆಚರಿಸಲಾಗುವುದು ಎಂದು ಹೇಳಿದರು.

ರಾಜ್ಯದಾದ್ಯಂತ ಪೂರ್ವಸಿದ್ಧತಾ ಸಭೆಗಳು ಪೂರ್ಣಗೊಂಡಿದ್ದು, ಲಕ್ಷಾಂತರ ಭಕ್ತರು ಹಾಗೂ ಭೋವಿ ಸಮಾಜದ ಸದಸ್ಯರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಮಾಜಿ ಸಚಿವ ಅರವಿಂದ ಲಿಂಬಾವಳಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ಐಎಎಸ್–ಕೆಎಎಸ್ ಅಧಿಕಾರಿಗಳು ಹಾಗೂ ವಿವಿಧ ರಾಜ್ಯಗಳ ಭೋವಿ ಸಮಾಜದ ಮುಖಂಡರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ರಕ್ತದಾನ ಶಿಬಿರ, ಸಿದ್ದರಾಮೇಶ್ವರರ ಕುರಿತು ವಿಶೇಷ ವಿಚಾರ ಸಂಕಿರಣ ಮತ್ತು ವಧು-ವರರ ಸಮಾವೇಶವೂ ಆಯೋಜಿಸಲಾಗಿದೆ ಎಂದು ಹೇಳಿದರು.

ಭೋವಿ ಸಮಾಜದ ಕಲ್ಲುಗಣಿಗಾರಿಕೆ ವೃತ್ತಿಯಲ್ಲಿ ತೊಡಗಿರುವವರಿಗೆ ಆಗುತ್ತಿರುವ ಕಿರುಕುಳವನ್ನು ತಡೆಯಬೇಕು. ಕಾಂಗ್ರೆಸ್‌ನಿಂದ ಆಯ್ಕೆಯಾದ ಭೋವಿ ಸಮಾಜದ ಒಬ್ಬ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಭೋವಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂಬ ಬೇಡಿಕೆಗಳನ್ನು ಸಮಾವೇಶದಲ್ಲಿ ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಗುವುದು ಎಂದು ಸಿದ್ದು ಬಂಡಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ತಿಪ್ಪಣ್ಣ ಒಡೆಯರ್, ಹಣಮಂತ ಜೂಕುರ್, ಅಶೋಕ ಉಮಾಲೂಟಿ, ರಾಮಾಂಜನೇಯ, ಪ್ರಕಾಶ ಬಳ್ಳಾರಿ, ಜಿಲ್ಲಾಧ್ಯಕ್ಷ ನಾಗಪ್ಪ ಬೆನಕಲ್, ಮಾರಪ್ಪ ವರ್ಕನಳ್ಳಿ, ಬಸವರಾಜ ಮುದ್ದಾಳ, ಹಳ್ಳೆಪ್ಪ ದೂತ್ರ, ಹಣಮಂತ ವಲ್ಯಾಪುರ, ದೇವರಾಜ್ ಮಸ್ಥನಹಳ್ಳಿ, ವಿಶ್ವನಾಥ ಮಂಜಲ್ಲರ, ನರಸಿಂಹ ಶಳಬಿಡಿ, ಮಹಾದೇವ ಗೋಪಾಲಪುರ, ಸಿದ್ದು ಕಳಕ, ಜಗ್ಗು ಚಿಂತನಳ್ಳಿ, ಸಂತೋಷ ಗುಂಜನೂರು, ಶರಣು ಭೈರಮಡ್ಡಿ, ಆನಂದ ಅಮ್ಮಾಪುರ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News