ಸುರಪುರ | ತಾಂತ್ರಿಕ ದೋಷದಿಂದ ಕೆಎಸ್‌ಆರ್‌ಟಿಸಿ ಬಸ್ ಅಪಘಾತ : ನಾಲ್ವರಿಗೆ ಗಾಯ
ಸುರಪುರ: ಸುರಪುರದಿಂದ ಕೆಂಭಾವಿ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಬುಧವಾರ ಮಧ್ಯಾಹ್ನ ಹೊಸ ಸಿದ್ದಾಪುರ ಗ್ರಾಮದ ಬಳಿ ತಾಂತ್ರಿಕ ದೋಷದಿಂದ ಅಪಘಾತಕ್ಕೀಡಾಗಿ ನಾಲ್ವರು ಗಾಯಗೊಂಡಿದ್ದಾರೆ.
ಸುರಪುರ ಡಿಪೋಗೆ ಸೇರಿದ ಬಸ್ ಮಧ್ಯಾಹ್ನ ಸುರಪುರ ಬಸ್ ನಿಲ್ದಾಣದಿಂದ ಕೆಂಭಾವಿಗೆ ತೆರಳುತ್ತಿದ್ದ ವೇಳೆ ಬಸ್‌ನ ಚಾಸಿಸ್ ಬೋಲ್ಟ್ ಏಕಾಏಕಿ ತುಂಡಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಭತ್ತದ ಗದ್ದೆಗೆ ಉರುಳಿಬಿದ್ದಿದೆ ಎಂದು ಸಂಚಾರಿ ನಿರೀಕ್ಷಕ ಸಂಗಮೇಶ ದಳವಾಯಿ ತಿಳಿಸಿದ್ದಾರೆ.
ಅಪಘಾತದಲ್ಲಿ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಸುರಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕ ನಿಂಗಣ್ಣ ಹಾಗೂ ನಿರ್ವಾಹಕರು ಅಪಾಯದಿಂದ ಪಾರಾಗಿದ್ದಾರೆ.
ಬಸ್‌ನಲ್ಲಿ ಒಟ್ಟು 124 ಪ್ರಯಾಣಿಕರಿದ್ದು, ಚಾಲಕ ನಿಂಗಣ್ಣ ಅವರ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಬಸ್ ನಿಯಂತ್ರಣ ತಪ್ಪುತ್ತಿದ್ದಂತೆ ತಕ್ಷಣವೇ ವೇಗವನ್ನು ಕಡಿಮೆ ಮಾಡಿ ನಿಲ್ಲಿಸಲು ಪ್ರಯತ್ನಿಸಿದ್ದರಿಂದ ಹೆಚ್ಚಿನ ಪ್ರಾಣಾಪಾಯ ಸಂಭವಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಸಂಚಾರಿ ನಿರೀಕ್ಷಕ ಸಂಗಮೇಶ ದಳವಾಯಿ, ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಚಾಲಕನ ಸಮಯಪ್ರಜ್ಞೆಯನ್ನು ಪ್ರಯಾಣಿಕರು ಮೆಚ್ಚಿ, ದೊಡ್ಡ ಅನಾಹುತದಿಂದ ಪಾರಾಗಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.