ಎಸ್‌ಸಿ-ಎಸ್‌ಟಿ ಮಕ್ಕಳ ಶಿಕ್ಷಣದ ಮೇಲೆ ನಿರ್ಲಕ್ಷ್ಯ ಸಲ್ಲದು : ಶಾಸಕ ಶರಣಗೌಡ ಕಂದಕೂರ
ವಸತಿ ನಿಲಯ ತಕ್ಷಣ ಆರಂಭಿಸಲು ಸರ್ಕಾರಕ್ಕೆ ಆಗ್ರಹ
ಯಾದಗಿರಿ: ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಾಗಿರುವ ಯಾದಗಿರಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಅವಕಾಶಗಳಿಗೆ ಯಾವುದೇ ಕಾರಣಕ್ಕೂ ಧಕ್ಕೆಯಾಗಬಾರದು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಆಗ್ರಹಿಸಿದ್ದಾರೆ.
ನಗರದ ಮುದ್ನಾಳ ಸಮೀಪ 2019ರಲ್ಲಿ ಸುಮಾರು 23.75 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಸತಿ ನಿಲಯಗಳು ಹಲವು ವರ್ಷಗಳಿಂದ ವಿದ್ಯಾರ್ಥಿಗಳ ಬಳಕೆಗೆ ಬಾರದೆ ಖಾಲಿ ಉಳಿದಿರುವುದು ವಿಷಾದನೀಯ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಬೇರೆ ಜಿಲ್ಲೆಗಳಿಗೆ ತೆರಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲೇ ನಿರ್ಮಿಸಲಾಗಿರುವ ಸುಸಜ್ಜಿತ ವಸತಿ ನಿಲಯಗಳು ಬಳಕೆಯಾಗದೆ ಪಾಳು ಬೀಳುತ್ತಿರುವುದರಿಂದ ಜನಪ್ರತಿನಿಧಿಗಳನ್ನೇ ವಿದ್ಯಾರ್ಥಿಗಳು ಪ್ರಶ್ನಿಸುವಂತಾಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳೇ ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ವಸತಿ ನಿಲಯಗಳನ್ನು ಆರಂಭಿಸಬೇಕು. ಅವಕಾಶಗಳ ಕೊರತೆಯಿಂದ ಜಿಲ್ಲೆಯ ಯಾವುದೇ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತನಾಗಬಾರದು. ಅಗತ್ಯವಿದ್ದರೆ ಈ ವಿಷಯವನ್ನು ವಿಧಾನಸಭೆಯಲ್ಲೂ ಪ್ರಸ್ತಾಪಿಸುವುದಾಗಿ ಶಾಸಕರು ಎಚ್ಚರಿಕೆ ನೀಡಿದರು.
ವರದಿ ಬೆನ್ನಲ್ಲೇ ಕ್ರಮ :
ಮುದ್ನಾಳ ಸಮೀಪದ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ವಸತಿ ನಿಲಯ ಆರಂಭಿಸಬೇಕೆಂಬ ಕುರಿತು ಪ್ರಕಟವಾದ ವಾರ್ತಾಭಾರತಿಯ ವರದಿಯನ್ನು ಗಮನಿಸಿದ ಶಾಸಕ ಶರಣಗೌಡ ಕಂದಕೂರ, ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ತುಳಸಿ ಮದನಿ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಸಮಸ್ಯೆ ಶೀಘ್ರ ಪರಿಹರಿಸುವಂತೆ ಮನವಿ ಮಾಡಿದ್ದಾರೆ.
ಮುದ್ನಾಳ ಸಮೀಪ ನಿರ್ಮಿಸಿರುವ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ವಸತಿ ನಿಲಯವನ್ನು ಕೂಡಲೇ ಆರಂಭಿಸಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವಂತೆ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ತುಳಸಿ ಮದನಿ ಅವರಿಗೆ ದೂರವಾಣಿ ಮೂಲಕ ಮನವಿ ಮಾಡಿದ್ದೇನೆ. ನನ್ನ ಕ್ಷೇತ್ರ ಬೇರೆ ಇರಬಹುದು. ಆದರೆ ಜಿಲ್ಲೆಯ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಹಿತದ ವಿಚಾರ ಬಂದಾಗ ಅದು ನಮ್ಮೆಲ್ಲರ ಜವಾಬ್ದಾರಿ. ವಿಶೇಷವಾಗಿ ಬಡ, ಎಸ್‌ಸಿ-ಎಸ್‌ಟಿ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬುದೇ ನನ್ನ ಆಶಯ.
–ಶರಣಗೌಡ ಕಂದಕೂರ, ಗುರುಮಠಕಲ್ ಶಾಸಕರು