ಯಾದಗಿರಿ: ಕೇಂದ್ರ ಸರ್ಕಾರದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಲೋಪದೋಷಗಳು, ಗೊಂದಲಗಳು ಹಾಗೂ ಸಾರ್ವಜನಿಕರಲ್ಲಿ ಉಂಟಾಗಿರುವ ಆತಂಕವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ನಗರದಲ್ಲಿ ಮಂಗಳವಾರ ಬೃಹತ್ ಪಾದಯಾತ್ರೆ ನಡೆಸಲಾಯಿತು.

ನಗರದ ಮೈಲಾಪುರ ಅಗಸಿಯಿಂದ ಆರಂಭಗೊಂಡ ಪಾದಯಾತ್ರೆ ಗಾಂಧಿ ವೃತ್ತದವರೆಗೆ ಸಾಗಿತು. ಕಾಂಗ್ರೆಸ್ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಪಕ್ಷದ ಧ್ವಜಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ಈ ವೇಳೆ ಚುನಾವಣಾ ಆಯೋಗದ ಆಯುಕ್ತರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅರ್ಹ ಮತದಾರರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಮತದಾರರ ಹಕ್ಕುಗಳ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಅನಪುರ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ಹಾಗೂ ಜಿಲ್ಲಾ ವಕ್ತಾರ ಶ್ಯಾಮನನ್ ಮಾಳಿಕೇರಿ ಅವರು, ಮತದಾನದ ಹಕ್ಕು ಪ್ರಜಾಪ್ರಭುತ್ವದ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಆದ್ದರಿಂದ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕ, ನ್ಯಾಯಸಮ್ಮತ ಹಾಗೂ ನಿಯಮಾನುಸಾರ ನಡೆಯಬೇಕು ಎಂದು ಒತ್ತಾಯಿಸಿದರು.

ಎಸ್‌ಐಆರ್ ಪ್ರಕ್ರಿಯೆಯಿಂದ ಅರ್ಹ ಮತದಾರರ ಹೆಸರುಗಳು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಕೈಬಿಡದಂತೆ ಚುನಾವಣಾ ಅಧಿಕಾರಿಗಳು ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.

ಎಸ್‌ಐಆರ್ ಪ್ರಕ್ರಿಯೆ ಕುರಿತು ಸಾರ್ವಜನಿಕರಲ್ಲಿ ಇರುವ ಅನುಮಾನ ಮತ್ತು ಆತಂಕಗಳಿಗೆ ಚುನಾವಣಾ ಇಲಾಖೆ ಸ್ಪಷ್ಟನೆ ನೀಡಬೇಕು. ಮತದಾರರ ಹಕ್ಕುಗಳ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಹಿರಿಯ ಕಾಂಗ್ರೆಸ್ ಮುಖಂಡರಾದ ಬಸವರಾಜ ಜೈನ್, ಗುರುಮಿಠಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಚಪ್ಪಟ್ಲಾ, ಸೈದಾಪುರ ಬ್ಲಾಕ್‌ ಅಧ್ಯಕ್ಷ ನಿರಂಜನರೆಡ್ಡಿ, ಯ ರಾದಗಿರಿ ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನ ಇಟಗಿ, ಶಹಾಪುರ ಬ್ಲಾಕ್ ಅಧ್ಯಕ್ಷ ಶಿವಾಮಂಶಪ್ಪ ಸಾಹು, ಎಸ್‌ಟಿ ಘಟಕದ ಜಿಲ್ಲಾ ಅಧ್ಯಕ್ಷ ವೆಂಕಟೇಶ್ ಬೇಟೆಗಾರ, ಸಾಬಣ್ಣ ಬೋರಬಂಡ, ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ನೀಲೋಫರ್ ಬಾದಲ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಬಸ್ಸುಗೌಡ ಬಿಳಾ‌ರ್, ರಾಘವೇಂದ್ರ ಮಾನಸಗಲ್, ನಗರಸಭೆ ಮಾಜಿ ಸದಸ್ಯರಾದ ಗಣೇಶ್ ದುಪ್ಪಳ್ಳಿ, ವೆಂಕಟರೆಡ್ಡಿ ವನಿಕೇರಿ, ಹನುಮಂತ ನಾಯಕ್, ಬಾಬಾ, ಸುರೇಶ್ ಮಡ್ಡಿ, ಸಾಬಣ್ಣ ಕೆಂಗುರಿ, ಸಾಬಣ್ಣ ಬಾಡಿಯಾಲ್, ಲಕ್ಷ್ಮಣ ರಾಠೋಡ್, ಪ್ರತಾಪ್ ರಾಠೋಡ್, ಅಬ್ದುಲ್ ಕಿಲ್ಲೇಕೇರಿ, ಪದ್ಮಾವತಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡೂರ, ಮುಖಂಡರಾದ ಆರಿಫ್ ಕಾಡೂರ ಸೇರಿದಂತೆ ಇತರರಿದ್ದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor