×
Ad

ಮತ್ತೆ ಯಾದಗಿರಿ ಜಿಲ್ಲಾ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ

ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದಿಂದ ತಪಾಸಣೆ

Update: 2026-07-06 21:42 IST

ಯಾದಗಿರಿ: ವಾರದೊಳಗೆ ಎರಡನೇ ಬಾರಿಗೆ ಯಾದಗಿರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ನ್ಯಾಯಾಲಯದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ನಗರದ ಹೊರವಲಯದಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಅನಾಮಧೇಯ ವ್ಯಕ್ತಿಯಿಂದ ಬಾಂಬ್ ಇರಿಸಿರುವುದಾಗಿ ಇ-ಮೇಲ್ ಬಂದ ತಕ್ಷಣ ನ್ಯಾಯಾಲಯದಲ್ಲಿದ್ದ ವಕೀಲರು, ಸಿಬ್ಬಂದಿ ಹಾಗೂ ಕಕ್ಷಿದಾರರನ್ನು ಸುರಕ್ಷಿತವಾಗಿ ಹೊರಗೆ ಸ್ಥಳಾಂತರಿಸಲಾಯಿತು.

ಮಾಹಿತಿ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಸ್ಥಳಕ್ಕೆ ಧಾವಿಸಿ ನ್ಯಾಯಾಲಯದ ಕಟ್ಟಡ, ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಮಗ್ರ ಶೋಧ ಕಾರ್ಯ ನಡೆಸಿದರು. ಹಲವು ಗಂಟೆಗಳ ಪರಿಶೀಲನೆಯ ಬಳಿಕ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗದ ಹಿನ್ನೆಲೆಯಲ್ಲಿ ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿದೆ.

ಕಳೆದ ವಾರವೂ ಇದೇ ನ್ಯಾಯಾಲಯಕ್ಕೆ ಇದೇ ರೀತಿಯ ಬೆದರಿಕೆ ಇ-ಮೇಲ್ ಬಂದಿದ್ದು, ವಾರದೊಳಗೆ ಮತ್ತೊಮ್ಮೆ ಇಂತಹ ಘಟನೆ ನಡೆದಿರುವುದು ನ್ಯಾಯಾಂಗ ವಲಯದಲ್ಲಿ ಆತಂಕ ಹೆಚ್ಚಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇ-ಮೇಲ್ ಕಳುಹಿಸಿದ ವ್ಯಕ್ತಿಯ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

ಕಳೆದ ಗುರುವಾರ ಬಂದಿದ್ದ ಬೆದರಿಕೆ ಇ-ಮೇಲ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿಯೂ ಬಾಂಬ್ ಇರಿಸಲಾಗಿದೆ ಎಂದು ಉಲ್ಲೇಖಿಸಿದ್ದ ಹಿನ್ನೆಲೆಯಲ್ಲಿ, ಸೋಮವಾರ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಸಿಬ್ಬಂದಿ ಯಾದಗಿರಿ ಜಿಲ್ಲಾಡಳಿತ ಭವನದಲ್ಲಿಯೂ ಸಮಗ್ರ ತಪಾಸಣೆ ನಡೆಸಿದರು. ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News