Yadgiri | ದೇಶವನ್ನು ಮತ್ತೆ ಕಾಂಗ್ರೆಸ್ ತತ್ವಸಿದ್ಧಾಂತಗಳಿಂದ ಕಟ್ಟಬೇಕಿದೆ : ಕುಸುಕುಮಾರ್

ಸಂಘಟನಾ ಸೃಜನ್ ಮೂಲಕ ಪಕ್ಷ ಸಂಘಟನೆ ಬಲಪಡಿಸಲು ಕರೆ

Update: 2026-07-29 20:12 IST

ಯಾದಗಿರಿ: ಕೇಂದ್ರದ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿಯಾಗಿದ್ದು, ದೇಶದ ಯುವಜನರ ಕನಸುಗಳನ್ನು ಹೊಸಕಿ ಹಾಕಿದೆ. ದೇಶವನ್ನು ಮತ್ತೆ ಕಾಂಗ್ರೆಸ್ ಪಕ್ಷದ ತತ್ವಸಿದ್ಧಾಂತಗಳ ಆಧಾರದ ಮೇಲೆ ಕಟ್ಟಬೇಕಿದ್ದು, ಸಂಘಟನಾ ಸೃಜನ್ ಕಾರ್ಯಕ್ರಮದ ಮೂಲಕ ಪಕ್ಷದ ಬಲವರ್ಧನೆಗೆ ಎಲ್ಲರೂ ಮುಂದಾಗಬೇಕು ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಕುಸುಕುಮಾರ್ ಹೇಳಿದರು.

ನಗರದ ಎಸ್.ಡಿ.ಎನ್. ಹೋಟೆಲ್‌ನಲ್ಲಿ ಸಂಘಟನಾ ಸೃಜನ್ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆಶಯದಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಕಾರ್ಯಕರ್ತರು ಹಾಗೂ ಮುಖಂಡರ ಅಭಿಪ್ರಾಯದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ಸಂಘಟನಾ ಸೃಜನ್ ಕಾರ್ಯಕ್ರಮದ ಮೂಲಕ ಕಾರ್ಯಕರ್ತರ ಪರವಾಗಿ ಧ್ವನಿ ಎತ್ತುವ ಹಾಗೂ ಪಕ್ಷ ಸಂಘಟನೆಗೆ ಸಮರ್ಪಿತರಾಗಿರುವ ವ್ಯಕ್ತಿಗೆ ಜವಾಬ್ದಾರಿ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಕೆಲ ಮುಖಂಡರಲ್ಲಿ ಅಸಮಾಧಾನವಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಕಾಂಗ್ರೆಸ್ ಪಕ್ಷದಲ್ಲಿ ದೇರ್ ಇದೆ, ಆದರೆ ಅಂದೇರ್ ಇಲ್ಲ” ಎಂದು ಪ್ರತಿಕ್ರಿಯಿಸಿದರು.

ಬೂತ್ ಮಟ್ಟದಲ್ಲಿ ದುಡಿಯುವ ಕಾರ್ಯಕರ್ತರನ್ನು ಕೆಲವೊಮ್ಮೆ ತಕ್ಷಣ ಗುರುತಿಸಲು ಸಾಧ್ಯವಾಗದಿದ್ದರೂ, ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಅವಕಾಶ ಕಲ್ಪಿಸಿ ಮೇಲಕ್ಕೆ ತರುವ ಕೆಲಸ ನಡೆಯಲಿದೆ. ಅದಕ್ಕಾಗಿಯೇ ಸಂಘಟನಾ ಸೃಜನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಯಾದಗಿರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಈಗಾಗಲೇ ಬಲಿಷ್ಠವಾಗಿದ್ದು, ಇನ್ನಷ್ಟು ಕಾರ್ಯಕ್ರಮಗಳ ಮೂಲಕ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲು ಮುಖಂಡರು ಮುಂದಾಗಬೇಕು ಎಂದು ಕರೆ ನೀಡಿದರು.

ಜಿಲ್ಲೆಗೆ ಉಸ್ತುವಾರಿ ಸಚಿವರಿಲ್ಲದ ಕಾರಣ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಕಳೆದ ಮೂರು ವರ್ಷಗಳಲ್ಲಿ ಯಾದಗಿರಿ ವೈದ್ಯಕೀಯ ಕಾಲೇಜಿಗೆ 200 ಕೋಟಿ ರೂ. ಗೂ ಅಧಿಕ ಅನುದಾನ ನೀಡಲಾಗಿದೆ. ಜೊತೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅನುಮೋದನೆ ದೊರೆತಿದೆ. ಉಸ್ತುವಾರಿ ಸಚಿವರ ನೇಮಕ ಹೈಕಮಾಂಡ್‌ನ ತೀರ್ಮಾನಕ್ಕೆ ಸಂಬಂಧಿಸಿದ ವಿಷಯ ಎಂದು ಹೇಳಿದರು.

ಯಾದಗಿರಿ ಜಿಲ್ಲೆಯಲ್ಲಿ ಮೀಸಲು ಅನುದಾನದಿಂದ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಕುರಿತು ಪ್ರತ್ಯೇಕ ವೇದಿಕೆಯಲ್ಲಿ ಚರ್ಚೆ ನಡೆಸೋಣ ಎಂದು ಕುಸುಕುಮಾರ್ ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ, ಮಾಜಿ ಸಚಿವ ಬಾಬುರಾವ್ ಚಿಂಚನಸೂರು, ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ತುನ್ನೂರ, ಶಾಸಕ ರಾಜಾ ವೇಣುಗೋಪಾಲ ನಾಯಕ, ಕೆಪಿಸಿಸಿ ರಾಜ್ಯ ಪ್ರ.ಕಾ ರಾಜಗೋಪಾಲರೆಡ್ಡಿ, ಡಾ.ಶರಣಬಸಪ್ಪ ಕಾಮರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸ್ಸುಗೌಡ ಬಿಳ್ಹಾರ, ಕಾಂಗ್ರೆಸ್ ವಕ್ತಾರ ಶಾಮಸನ್ ಮಾಳಿಕೇರಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News