ಭಕ್ತಿಪಂಥದೊಳಗಿನ ಚರಿತ್ರೆ

Update: 2024-01-06 06:46 GMT

ಕವಿ, ಸಂಸ್ಕೃತಿ ಚಿಂತಕ, ವಿಮರ್ಶಕ, ಅಂಕಣಕಾರ, ಅನುವಾದಕ ಮತ್ತು ಜನಪರ ಹೋರಾಟಗಾರರಾಗಿರುವ ಬಂಜಗೆರೆ ಜಯಪ್ರಕಾಶ್ ಹಿಂದುಳಿದ ಬುಡಕಟ್ಟು ಜಾತಿಯ ರೈತಾಪಿ ಕುಟುಂಬದಿಂದ ಬಂದವರು.

1985ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಪತ್ರಿಕೋದ್ಯಮ ಪದವಿ. 1987 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್.ಡಬ್ಲ್ಯು ಪದವಿ. ಕನ್ನಡ ವಿಶ್ವವಿದ್ಯಾಲಯದಿಂದ 1999ರಲ್ಲಿ ಡಾಕ್ಟರ್ ಆಫ್ ಲಿಟರೇಚರ್ (ಡಿ.ಲಿಟ್)ಪದವಿ. ಕಳೆದ ಮೂರು ದಶಕಗಳಿಂದ ಜನಪರ ಚಳವಳಿಗಳಲ್ಲಿ ಸಕ್ರಿಯ ಪಾತ್ರ. ಕನ್ನಡ ವಿಶ್ವವಿದ್ಯಾಲಯವು ಆರಂಭಿಸಿರುವ ದೇಸಿ ಸಂಸ್ಕೃತಿ ಅಧ್ಯಯನ ಮಂಡಲಿ ಸದಸ್ಯರಾಗಿ, 2005ರಿಂದ 2008ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯ ನಿರ್ವಹಣೆ. ಇವರ ಇಂಗ್ಲಿಷ್ ಅನುವಾದಿತ ಕೃತಿ ‘ಪಾಪ ನಿವೇದನೆ’ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2008ರ ಪುಸ್ತಕ ಪ್ರಶಸ್ತಿ ಬಂದಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇದೇ ರಾಮಾಯಣ, ಕನ್ನಡ ರಾಷ್ಟ್ರೀಯತೆ, ಉಲಿಯ ಉಯ್ಯಲೆ, ಆನು ದೇವಾ ಹೊರಗಣವನು ಇವರ ಮಹತ್ವದ ಸಂಸ್ಕೃತಿ ಚಿಂತನೆಗಳು. ಮಹೂವಾ, ನಾಳೆಗಾದರೂ ಸಿಗದೆ ನಿನ್ನ ತಾವಿನ ಗುರುತು, ಕಳೆದ ಕಾಲದ ಪ್ರೇಯಸಿಯರಿಗೆ ಇವರ ಕವನಸಂಕಲನಗಳು. ವಸಂತ ಮೇಘ ಗರ್ಜನೆ, ಮತ್ತೊಂದು ಪ್ರಸ್ಥಾನ, ಪ್ರವಾದಿ, ಹಿಂದೂಗಳು- ಬೇರೊಂದು ಚರಿತ್ರೆ ಮೊದಲಾದವುಗಳು ಇವರ ಅನುವಾದಿತ ಕೃತಿಗಳು.

ಭಕ್ತಿಪಂಥ ಮತ್ತುಚರಿತ್ರೆ ಅಥವಾ ಭಕ್ತಿಪಂಥದೊಳಗಿನ ಚರಿತ್ರೆ ಎನ್ನುವ ಅಂಶವಾಗಿ ಈದಿನ ಕೆಲವು ವಿಷಯಗಳನ್ನು ಚರ್ಚೆ ಮಾಡಬಹುದು ಎಂದು ನಾನು ಅಂದುಕೊಳ್ಳುತ್ತಿದ್ದೇನೆ. ಸಾಮಾನ್ಯವಾಗಿ ಈ ಬಗ್ಗೆ ಅಧ್ಯಯನಗಳನ್ನು ಮಾಡುವ ಸಂದರ್ಭದಲ್ಲಿ ಚರಿತ್ರೆಯನ್ನು ಒಂದು ಕಡೆಗಿಟ್ಟು, ಚರಿತ್ರೆಯ ಒಂದು ವಿದ್ಯಮಾನವನ್ನು ಸ್ವತಂತ್ರವಾದ ಒಂದು ಘಟನಾವಳಿ ಎನ್ನುವಂತೆ ನೋಡುವ ಪರಿಪಾಠವನ್ನು ಹಲವು ಕಡೆ ನೋಡುತ್ತೇವೆ. ಆದರೆ ಇನ್ನೊಂದು ಅಭ್ಯಾಸದ ಪ್ರಕಾರ ಚರಿತ್ರೆಯ ಚಲನೆಯೊಳಗೆ ಈ ಬಗೆಯ ಒಂದು ಪಂಥ ಅಥವಾ ಈ ಬಗೆಯ ಒಂದು ವಿದ್ಯಮಾನ ಸಂಭವಿಸಿದ್ದಕ್ಕೆ ಇದ್ದ ಪ್ರೇರಣಾಶಕ್ತಿಗಳು ಏನೇನು ಎನ್ನುವುದನ್ನು ನೋಡುವ ಒಂದು ಕ್ರಮವಿದೆ. ಎಲ್ಲವೂ ಪರಸ್ಪರ ಅವಲಂಬಿಯಾಗಿರುವಂತಹ, ಪರಸ್ಪರ ಸಂಬಂಧಿಯಾಗಿರುವಂತಹ ಈ ಘಟನಾ ಕ್ರಮಗಳಲ್ಲಿ ಒಂದು ಪಂಥವನ್ನು ಒಬ್ಬ ವ್ಯಕ್ತಿಯ ಜೊತೆಗೋ ಅಥವಾ ಒಂದು ಗ್ರಂಥದ ಜೊತೆಗೋ ಮಾತ್ರ ಇಟ್ಟು ನೋಡಿದರೆ ಸಾಕಾಗುವುದಿಲ್ಲ ಎಂಬುದು ಈ ಗ್ರಹಿಕೆಯ ಕ್ರಮ.

ಈಗ ಕರ್ನಾಟಕದ ಭಕ್ತಿಪಂಥಗಳ ಕೆಲವು ಅಂಶಗಳನ್ನು ನೋಡಲಿಕ್ಕಾಗಿ ಚರಿತ್ರೆಯ ಕ್ರಿ. ಶ. 6 ರಿಂದ ಕ್ರಿ.ಶ. 15ರ ವರೆಗಿನ ಕಾಲಘಟ್ಟವನ್ನು ನಾವು ಪರಿಶೀಲಿಸಬೇಕಾಗುತ್ತದೆ. ಈ ಕಾಲಖಂಡದ ಕರ್ನಾಟಕದಲ್ಲಿ ಹಲವು ಅಭೂತಪೂರ್ವ ಚಲನಶೀಲ ವಿದ್ಯಮಾನಗಳು ಸಂಭವಿಸಿವೆ. ಅದರಲ್ಲಿ ಕೆಲವು ಬಹಳ ದೊಡ್ಡ ವಿದ್ಯಮಾನಗಳು. ಇನ್ನು ಕೆಲವು ಅಷ್ಟು ದೊಡ್ಡವೆಂದು ಗುರುತಾದವುಗಳಲ್ಲ. ಹೀಗಿದ್ದರೂ, ನಾನು ಆರಂಭದಲ್ಲೇ ಹೇಳಿದಂತೆ ಎಲ್ಲವೂ ಕೂಡ ಪರಸ್ಪರ ಸಂಬಂಧಿಯಾಗಿವೆ. ಪರಸ್ಪರ ಅವಲಂಬಿತವಾಗಿವೆ. ಒಂದರ ಕಾರ್ಯದಿಂದ ಮತ್ತೊಂದು ಕಾರಣವು, ಮತ್ತೊಂದರ ಕಾರಣದಿಂದ ಒಂದು ಕಾರ್ಯವು- ಈ ಕಾರ್ಯಕಾರಣ ಸಿದ್ಧಾಂತವನ್ನು ಬಿಟ್ಟು ನಾವು ಇದನ್ನು ನೋಡುವುದು ಸರಿಯಾಗುವುದಿಲ್ಲ.

ಕ್ರಿ. ಶ. 6 ರಿಂದ ಕ್ರಿ. ಶ. 15 ರವರೆಗಿನ ಕಾಲಘಟ್ಟ. ಇದನ್ನು ನಾವು ಕರ್ನಾಟಕದ ಆರಂಭಿಕ ಮಧ್ಯಯುಗ ಅಥವಾ ಒಟ್ಟಾರೆಯಾಗಿ ಮಧ್ಯಯುಗ ಅಂತ ಕರೆಯಬಹುದು. ಆಗ ಇಲ್ಲಿ ಸಂಭವಿಸಿದಂತಹ ಹಲವು ಮುಖ್ಯ ರಾಜಕೀಯ ಘಟನಾವಳಿಗಳ ಒಂದು ಸ್ಥೂಲ ಕ್ರಮವನ್ನು ನಿಮಗೆ ಹೇಳಲು ಬಯಸುತ್ತೇನೆ. ಈ ಭೂಮಿಕೆ ಕ್ರಿ. ಶ 6 ರಿಂದ ಬೆಳೆಯಲಾರಂಭಿಸಿದ್ದು ಕ್ರಿ. ಶ. 7ಕ್ಕೆ ಬಂದಾಗ ಒಂದು ನಿರ್ಣಾಯಕ ಕಾಲವನ್ನು ಮುಟ್ಟಿತು. ಕ್ರಿ. ಶ. 7ನೆಯ ಶತಮಾನದಲ್ಲಿ ಎರಡನೇ ಪುಲಕೇಶಿಯು ಕನೂಜಿನ ಹರ್ಷವರ್ಧನನನ್ನು ನರ್ಮದೆಯ ತೀರದಲ್ಲಿ ಸೋಲಿಸಿದ. ಉತ್ತರ ಭಾರತದ ಒಬ್ಬ ರಾಜನನ್ನು ಕರ್ನಾಟಕದ ಬಾದಾಮಿ ಚಾಲುಕ್ಯರ ಒಬ್ಬ ರಾಜನಾದ ಇಮ್ಮಡಿ ಪುಲಕೇಶಿ ಸೋಲಿಸಿದ. ಅದರ ನಂತರ ಕ್ರಿ. ಶ. 753ರಲ್ಲಿ ಚಾಲುಕ್ಯರು ಸೋತು ರಾಷ್ಟ್ರಕೂಟರು ಆಳ್ವಿಕೆಗೆ ಬಂದರು.

ಕ್ರಿ. ಶ. 793 ರಿಂದ ಕ್ರಿ. ಶ. 814ರವರೆಗೆ ಆ ಮೂರನೇ ಗೋವಿಂದನ ಕಾಲದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯ ವಿಸ್ತಾರ ಗೊಂಡಿತು (ಅದು 8ನೇ ಶತಮಾನದ ಕೊನೆ 9ನೇ ಶತಮಾನದ ಆರಂಭ: ಕ್ರಿ. ಶ. 793-814). ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶದ ಕೆಲವು ಭಾಗಗಳನ್ನು ಅದು ತನ್ನೊಳಗೆ ಅಡಕಗೊಳಿಸಿಕೊಂಡಿತ್ತು. ಆ ಸಮಯದಲ್ಲಿ ಆಳ್ವಿಕೆಗೆ ಬಂದವನು ಅಮೋಘವರ್ಷ. ಕ್ರಿ.ಶ. 821-878. ಆ ಕಾಲಘಟ್ಟದಲ್ಲಿ ಕವಿರಾಜಮಾರ್ಗ ಪ್ರಕಟಗೊಂಡಿತು. ಇದು ಕನ್ನಡದ ಮೊದಲ ಲಾಕ್ಷಣಿಕ ಗ್ರಂಥ. ಹಲವು ಕಾಲದವರೆಗೆ ಅಮೋಘವರ್ಷನೇ ಕವಿರಾಜಮಾರ್ಗವನ್ನು ಬರೆದವನು ಎಂದಿತ್ತು, ಈಗ ಬರೆಸಿದವನು ಎನ್ನುತ್ತಿದ್ದಾರೆ. ಅದೇನೇ ಆದಾಗಲೂ ಕೂಡ ಆ ಅವಧಿಯಲ್ಲಿ, 9ನೇ ಶತಮಾನದ ಅವಧಿಯಲ್ಲಿ ಕವಿರಾಜಮಾರ್ಗ ಎನ್ನುವ ಲಾಕ್ಷಣಿಕ ಕೃತಿ ಬಂದಿತು. ಆ ನಂತರ ಈ ದಕ್ಷಿಣ ಭಾಗದಲ್ಲಿ- ಇಲ್ಲಿವರೆಗೂ ನಾವು ಮಾತಾಡಿದ್ದು ಕರ್ನಾಟಕದ ಉತ್ತರ ಭಾಗ-ದಕ್ಷಿಣಭಾಗದಲ್ಲಿ ಕ್ರಿ. ಶ. 999ರ ವೇಳೆಗೆ ಗಂಗರು ದುರ್ಬಲರಾದರು ಅಥವಾ ಅವರ ಅಧಿಕಾರ ಕ್ಷೀಣಿಸಿತು. ಹೊಯ್ಸಳರು ಪ್ರವರ್ಧಮಾನಕ್ಕೆ ಬಂದರು. ಹೊಯ್ಸಳರ ನಂತರ ಕ್ರಿ. ಶ. 1336 ರಿಂದ ಅಂದರೆ 14ನೇ ಶತಮಾನದ ಮೊದಲ ಭಾಗ ದಲ್ಲಿ ವಿಜಯನಗರ ಸಾಮ್ರಾಜ್ಯ ಅಸ್ತಿತ್ವಕ್ಕೆ ಬಂತು. ಇದು ಸ್ಥೂಲವಾಗಿ ಈ ಅವಧಿಯ ರಾಜಕೀಯಾಳ್ವಿಕೆಯ ಕ್ರಮ.


 



ಕ್ರಿ. ಶ. 6 ರಿಂದ 15ನೆಯ ಶತಮಾನದವರೆಗಿನ ಚರಿತ್ರೆಯ ಈ ಚಲನಶೀಲತೆಯನ್ನು ಈ ಕಾಲಾವಧಿಯ ವಿದ್ಯಮಾನಗಳ ಜೊತೆಗೆ ಜೋಡಿಸಿ ನೋಡುವುದು ಹೇಗೆ? ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾಗಿರುವ ಒಂದು ಅಂಶ-ಕರ್ನಾಟಕದ ದಕ್ಷಿಣ ಭಾಗದಲ್ಲಿ ಗಂಗರು ಮತ್ತು ಹೊಯ್ಸಳರು ಮುಖ್ಯವಾಗಿ ಆಳ್ವಿಕೆ ಮಾಡಿದ್ದರೆ, ಉತ್ತರ ಕರ್ನಾಟಕದಲ್ಲಿ ಬಹಳಷ್ಟು ರಾಜವಂಶಗಳು ಆಗಿಹೋಗಿವೆ. ಅದರಲ್ಲಿ ವಾಯವ್ಯದಲ್ಲಿ ಕದಂಬರು, ಬಾದಾಮಿ ಚಾಲುಕ್ಯರು ಮತ್ತು ಸೇವುಣರು ದೇವಗಿರಿಯವರೆಗೆ ಆಳ್ವಿಕೆ ಮಾಡುತ್ತಾಇದ್ದರು. ಬೀದರ್, ಗುಲ್ಬರ್ಗದಲ್ಲೂ ಕೂಡ ಸೇವುಣರ ಆಳ್ವಿಕೆ ಇತ್ತು. ಈಶಾನ್ಯದಲ್ಲಿ ರಾಷ್ಟ್ರಕೂಟರು ಮತ್ತು ಕಲ್ಯಾಣಿ ಚಾಲುಕ್ಯರು, ಕಲಚೂರಿಗಳೂ ಕೂಡ ಕಲ್ಯಾಣಿ ಚಾಲುಕ್ಯರ ನಂತರ ಆಳ್ವಿಕೆಯನ್ನು ಮಾಡಿದರು. ನಾವು ಇಷ್ಟು ಹಂತಗಳ ಪರಿಶೀಲನೆಯಿಂದ ಕೆಲವು ಅಂಶಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಮೊದಲನೆಯದಾಗಿ, ನಾವು ಗಮನಿಸಬೇಕಾದ್ದು ಹರ್ಷವರ್ಧನನನ್ನು ಇಮ್ಮಡಿ ಪುಲಿಕೇಶಿ ಸೋಲಿಸಿದ್ದು. ಇದು ಯಾಕೆ ಬಹಳ ಮುಖ್ಯ? ಅದನ್ನು ಒಂದು ಯುದ್ಧದ ಘಟನೆ ಮಾತ್ರ ಅಂತ ಯಾಕೆ ಬಿಟ್ಟುಬಿಡಬಾರದು? ಅದನ್ನು ಇನ್ನೂ ವಿಸ್ತಾರವಾಗಿ ಅರ್ಥ ಮಾಡಿಕೊಳ್ಳುವುದೆಂದರೆ ಅದು ಚರಿತ್ರೆಯ ಒಳಗನ್ನು ಅರಿಯುವ ಕ್ರಮ ಅಥವಾ ಚರಿತ್ರೆಯ ವಿದ್ಯಮಾನವನ್ನು ನಾವು ಗ್ರಹಿಸುವ ಕ್ರಮವಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಆಳ್ವಿಕೆ ಮಾಡುತ್ತಿದ್ದ ಇಮ್ಮಡಿ ಪುಲಕೇಶಿ ಉತ್ತರ ಭಾರತದ ಬಹಳ ದೊಡ್ಡ ಸಾಮ್ರಾಜ್ಯದ ಒಡೆಯನಾದ ಹರ್ಷವರ್ಧನನನ್ನು ಸೋಲಿಸಿದ ಅಂದರೆ ಅದು ನಮಗೆ ಒಂದು ಮುಖ್ಯವಾದ ಬೆಳವಣಿಗೆಯನ್ನು ಸೂಚಿಸುತ್ತದೆ. ಮೊದಲು ಉತ್ತರ ಭಾರತದಲ್ಲಿ ಬಹಳ ದೊಡ್ಡದೊಡ್ಡ ಸಾಮ್ರಾಜ್ಯಗಳು ರಚನೆಯಾದವು. ಅವುಗಳ ಆಶ್ರಯದಲ್ಲಿ, ಅವುಗಳ ಸಂಪರ್ಕದಲ್ಲಿ, ಅವುಗಳ ಒಡನಾಟದಲ್ಲಿ ರೂಪುಗೊಂಡವುಗಳು ಈ ದಕ್ಷಿಣದ ರಾಜ್ಯಗಳು.

ಉತ್ತರ ಭಾರತದಲ್ಲೇ ಮೊದಲ ಮುಖ್ಯ ರಾಜವಂಶಗಳು ಬೆಳೆಯುವುದಕ್ಕೆ ಮುಖ್ಯವಾದ ಕಾರಣ ಅಲ್ಲಿನ ವಿಸ್ತಾರವಾದ ಗಂಗಾ ಮತ್ತು ಯಮುನಾ ನದಿಗಳ ಮೈದಾನ ಪ್ರದೇಶ. ಅಲ್ಲಿ ಕೃಷಿಗೆ ಪೂರಕವಾದ ಸಂಪನ್ಮೂಲಗಳು ಲಭ್ಯವಿದ್ದವು. ವಿಸ್ತಾರವಾದ ಮೈದಾನ ಪ್ರದೇಶ ಮತ್ತು ಹೊಲಗಳು ಲಭ್ಯ ಇದ್ದವು. ಅಂಥ ಕಡೆಗಳಲ್ಲಿ ಸಾಮ್ರಾಜ್ಯಗಳು ಬೆಳೆಯುವುದಕ್ಕೆ ದೊಡ್ಡ ಅವಕಾಶವಾಗುತ್ತದೆ. ಅದು ಮಗಧ ಸಾಮ್ರಾಜ್ಯ ಇರಬಹುದು, ಗುಪ್ತ ಸಾಮ್ರಾಜ್ಯ ಇರಬಹುದು, ಆನಂತರದಲ್ಲಿ ಬಂದ ಎಲ್ಲಾ ಪ್ರಬಲ ಸಾಮ್ರಾಜ್ಯಗಳೂ ಕೂಡ ಆ ಗಂಗಾ ಮತ್ತು ಯಮುನಾ ನದಿಗಳ ಮೈದಾನ ಪ್ರದೇಶಗಳಲ್ಲಿ ಬಂದಿರುವಂತಹವೇ. ಇದು ಕರ್ನಾಟಕದ ಮಟ್ಟಿಗೆ ಹೇಳಬೇಕು ಅಂದರೆ ಕರ್ನಾಟಕದಲ್ಲಿ ಉತ್ತರದಲ್ಲಿರುವಷ್ಟು ವಿಸ್ತಾರವಾದ ಮೈದಾನ ಪ್ರದೇಶಗಳು ಕಡಿಮೆ. ಆದರೆ ಇರುವುದರಲ್ಲೇ ನಮಗೆ ಚೆನ್ನಾಗಿ ಲಭ್ಯವಿರುವ ಫಲವತ್ತಾದ ಮೈದಾನ ಪ್ರದೇಶಗಳು, ಕೃಷಿಯ ಪ್ರದೇಶಗಳು ಉತ್ತರ ಕರ್ನಾಟಕದ ಭಾಗದಲ್ಲಿವೆ. ಕೃಷ್ಣಾ-ತುಂಗಭದ್ರಾ ನದಿಗಳ ನಡುವಿನ ಪ್ರದೇಶ ಅದು. ಆದ್ದರಿಂದಲೇ ಕರ್ನಾಟಕದ ಬಹುಪಾಲು ರಾಜ್ಯಭಾರಗಳೆಲ್ಲಾ ಅಲ್ಲಿ ಮೊದಲು ಬೆಳೆದವು. ಅದು ಬರೀ ಫಲವತ್ತಾದ ಭೂಮಿ ಮಾತ್ರವಲ್ಲ, ಕೃಷಿಗೆ ಬಹಳ ಸುಲಭವಾಗಿ ಒದಗಬಹುದಾದ ಭೂಮಿಯೂ ಆಗಿತ್ತು.

ಕರಿ ಮಣ್ಣಿನ ಭೂಮಿಗೆ ಆಳವಾದ ಉಳುಮೆ ಅಗತ್ಯವಿರುತ್ತದೆ. ಕಬ್ಬಿಣದ ಗುಳವಿರುವ ನೇಗಿಲು ಗುಪ್ತರ ಕಾಲದ ಹೊತ್ತಿಗೇ ಬಂದು ಆಗಿತ್ತು. ಉತ್ತರ ಕರ್ನಾಟಕದಲ್ಲಿ ಫಲವತ್ತಾದ ನದೀ ಬಯಲುಗಳಿವೆ. ವಿಸ್ತಾರವಾದ ದಖನ್ ಪ್ರಸ್ಥಭೂಮಿ ಇದೆ. ಇದು ಅಲ್ಲಿನ ಕೃಷಿ ಬೆಳವಣಿಗೆಗೆ ಬಹಳ ಪೂರಕವಾಗಿ ಕೆಲಸ ಮಾಡಿದ್ದರಿಂದಲೇ ಅಲ್ಲಿ ಹೆಚ್ಚಿನ ರಾಜವಂಶಗಳು ಆಳ್ವಿಕೆ ಮಾಡಿದವು. ಹೆಚ್ಚಿನ ಸಾಮ್ರಾಜ್ಯಗಳೂ ಕೂಡ ಅಲ್ಲಿ ಸ್ಥಾಪನೆಯಾದವು. ಅದೇನೇ ಇರಲಿ ಅಲ್ಲಿ ರಾಜ್ಯಭಾರ ಮಾಡಿದಂತಹ ಇಮ್ಮಡಿ ಪುಲಕೇಶಿ ಕನೂಜಿನ ಹರ್ಷವರ್ಧನನನ್ನು ಸೋಲಿಸಿದ ಅನ್ನುವಂಥದ್ದು ಯಾಕೆ ಬಹಳ ಮುಖ್ಯ ಅನ್ನುವುದನ್ನು ನಾವು ಪರಿಶೀಲಿಸಬೇಕು.

ಕ್ರಿ.ಶ.6ರಲ್ಲಿ ಚಾಲುಕ್ಯರ ಕಾಲದಲ್ಲಿ ಶುರುವಾದ ಕೃಷಿ ವಿಸ್ತರಣೆಯ ಕೆಲಸ ಕ್ರಿ.ಶ.7ರ ಹೊತ್ತಿಗೆ ಒಂದು ಹಂತಕ್ಕೆ ಬಂದಿದೆ. ದೊಡ್ಡ ಸೈನ್ಯವನ್ನು ಸಾಕುವುದಕ್ಕೆ ನಮಗೆ ಬಹಳ ಮುಖ್ಯವಾಗಿ ಆಹಾರೋತ್ಪನ್ನಗಳ ಲಭ್ಯತೆ ಇರಬೇಕು. ಅವರಿಗೆ ಸಂಬಳ ಸಾರಿಗೆಗಳನ್ನು ಕೊಡುವುದಕ್ಕೆ, ಇತರೆ ಸೌಕರ್ಯಗಳನ್ನ ಕಲ್ಪಿಸುವುದಕ್ಕೆ ಹಣಕಾಸಿನ ಆದಾಯ ಅಂದರೆ ಸಾಕಷ್ಟು ತೆರಿಗೆ ಬರಬೇಕು. ಇಷ್ಟಿದ್ದರೆ ಮಾತ್ರ ಪರಿಗಣನೀಯವಾಗಿ ದೊಡ್ಡದಾದ ಒಂದು ಸೈನ್ಯವನ್ನು ಕಾಪಾಡುವುದಕ್ಕೆ ಸಾಧ್ಯ. ದೊಡ್ಡ ಸೈನ್ಯವನ್ನು ಕಾಪಾಡಿದರೆ ದೊಡ್ಡ ಸಾಮ್ರಾಜ್ಯವನ್ನು ಕಟ್ಟುವುದಕ್ಕೆ ಸಾಧ್ಯ. ವಿಜಯನಗರದವರ ಸೈನ್ಯ ಎಷ್ಟು ದೊಡ್ಡದಿತ್ತು, ಅದು ಎಷ್ಟು ದೊಡ್ಡ ದಕ್ಷಿಣ ಭಾರತೀಯ ಸಾಮ್ರಾಜ್ಯವಾಗಿ ಬೆಳೆದಿತ್ತು ಅನ್ನುವುದನ್ನು ಇತಿಹಾಸದಲ್ಲಿ ನಾವು ಗಮನಿಸಿದ್ದೇವೆ.

ಹರ್ಷವರ್ಧನನ ಮೇಲಿನ ಇಮ್ಮಡಿ ಪುಲಕೇಶಿಯ ವಿಜಯ ಕೇವಲ ಪುಲಕೇಶಿಯ ಪರಾಕ್ರಮ ಅಂತ ನಾವು ಭಾವಿಸಬೇಕಾದುದಿಲ್ಲ. ಕರ್ನಾಟಕ ಬಲ ಎನ್ನುವ ಹೆಸರಿನ ಸೈನ್ಯ ಸ್ಥಾಪನೆಯಾಗಿ, ಉತ್ತರ ಭಾರತದ ದೊಡ್ಡ ಸೈನ್ಯದ ಮೇಲೆ ದಾಳಿ ಮಾಡಿ ಸೋಲಿಸಬೇಕೆಂದರೆ ಅದಕ್ಕೆ ಬೇಕಾಗಿರುವ ಆರ್ಥಿಕ ಮತ್ತು ಸಾಮಾಜಿಕ ಬಲ, ಪರಿಸ್ಥಿತಿಯ ಅನುಕೂಲ ಒದಗಿರಬೇಕು. ಆದ್ದರಿಂದ ಸಾಕಷ್ಟು ದೊಡ್ಡ ಪ್ರಮಾಣದ ಸೈನ್ಯ ಮತ್ತು ಅದಕ್ಕೆ ಪೂರಕವಾದ ಎಲ್ಲ ಸಂಪನ್ಮೂಲ, ಅದಕ್ಕೆ ಬೇಕಾದ ವ್ಯಾಪಕ ಕೃಷಿ ಉತ್ಪನ್ನಗಳು, ತೆರಿಗೆಯ ಸಂಗ್ರಹ, ಇವುಗಳೆಲ್ಲದರ ಆಧಾರದಲ್ಲಿ ಈ ವಿಜಯ ಸಾಧ್ಯವಾಯಿತು. ಅಂದರೆ ಅದು ಇನ್ನೊಂದು ರೂಪದಲ್ಲಿ ಕರ್ನಾಟಕದ ಪರಿಸ್ಥಿತಿಗಳಲ್ಲಿ ಆಗ ಬಂದಿದ್ದ ಒಂದು ಬಲವರ್ಧನೆಯನ್ನು ಸೂಚಿಸುತ್ತಿದೆ. ಅಲ್ಲಿಯವರೆಗೆ ಸಾಮ್ರಾಜ್ಯಗಳಿದ್ದಂತಹ ಪರಿಸ್ಥಿತಿಗೂ ಈಗ ಕ್ರಿ. ಶ. 7ರ ನಂತರದ ಸಾಮ್ರಾಜ್ಯಗಳ ಬಲಾಬಲಗಳ ಪರಿಸ್ಥಿತಿಗೂ ವ್ಯತ್ಯಾಸಗಳು ಬಂದಿವೆ.

ನಿರಂತರವಾಗಿ ಕ್ರಿ ಶ. 7ನೇ ಶತಮಾನದಿಂದ ಕ್ರಿ. ಶ. 15ನೆಯ ಶತಮಾನದವರೆಗಿನ ಕರ್ನಾಟಕದ ಸಾಮಾಜಿಕ ವಿಕಾಸವು ಅದರ ಕೃಷಿ ವಿಸ್ತರಣೆ, ವಾಣಿಜ್ಯ ವಿಸ್ತರಣೆ, ನಗರಗಳ ವಿಸ್ತರಣೆ, ಸಂತೆ-ಪಟ್ಟಣಗಳ ವಿಸ್ತರಣೆ, ನಾಣ್ಯಗಳನ್ನು ಟಂಕಿಸುವುದರ ಹೆಚ್ಚಳ ಇವುಗಳೊಂದಿಗೆ ಬೆಳೆಯುತ್ತಲೇ ಹೋಯಿತು. ಈ ಪ್ರಕ್ರಿಯೆಯೆಲ್ಲದರ ಒಂದು ಸೂಚನೆಯಾಗಿ ಯುದ್ಧದ ಘಟನೆಯನ್ನು ನಾವು ಗಮನಿಸಬೇಕಾಗುತ್ತದೆ. ಬಾದಾಮಿ ಚಾಲುಕ್ಯರು ಸೋತ ನಂತರ ಬಂದದ್ದು ರಾಷ್ಟ್ರಕೂಟರು. ನಮಗೆ ರಾಜವಂಶಗಳು ಸೋತಿದ್ದು, ರಾಜವಂಶಗಳು ಗೆದ್ದಿದ್ದು ಸದಾ ಮುಖ್ಯವಾದ ಅಂಶ ಆಗಬೇಕಾಗಿಲ್ಲ. ಒಂದು ಕಾಲಾವಧಿಯಲ್ಲಿ ಬಂದ ಸಾಮಾಜಿಕ ಸಂಚಲನೆ, ಬೆಳವಣಿಗೆ, ಆರ್ಥಿಕ ಪರಿಸ್ಥಿತಿಯಲ್ಲಿ ಬಂದ ಮುನ್ನಡೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧಗಳಲ್ಲಿ ಕಂಡುಬಂದ ವಿನ್ಯಾಸಗಳು ಇವುಗಳೇ ಹೆಚ್ಚು ಪರಿಗಣನಾರ್ಹ.


 



ಕ್ರಿ.ಶ. 8ನೇ ಶತಮಾನದಲ್ಲಿ ರಾಷ್ಟ್ರಕೂಟರು ವಿಸ್ತಾರವಾದ ಸಾಮ್ರಾಜ್ಯವನ್ನು ಕಟ್ಟಿದರು. ರಾಷ್ಟ್ರಕೂಟರ ಆಡಳಿತ ಕಾಲದಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಮತ್ತು ಶಾಸನ ಭಾಷೆಯಾಗಿ ಬಳಕೆಯಾಯಿತು. ರಾಷ್ಟ್ರಕೂಟರ ಸಾಮಂತನಾಗಿದ್ದ ಅರಿಕೇಸರಿಯ ಆಸ್ಥಾನದಲ್ಲಿ ಪಂಪ ಇದ್ದು, ಕನ್ನಡದ ಮೊದಲ ಒಂದು ಕಾವ್ಯಗ್ರಂಥವನ್ನು ಬರೆದ. ಅಂದರೆ ಈಗ ನಾವಿದನ್ನು ಪರಸ್ಪರ ಸಂಬಂಧಿಯಾಗಿ ಗಮನಿಸಬಹುದು. ಇಮ್ಮಡಿ ಪುಲಕೇಶಿ ಸಮಯದ ಹೊತ್ತಿಗೆ ಕರ್ನಾಟಕ ಮಾಡಿಕೊಂಡಿದ್ದ ಬಲವರ್ಧನೆ ರಾಷ್ಟ್ರಕೂಟರ ಕಾಲದಲ್ಲಿ ಇನ್ನೂ ಸ್ವಲ್ಪ ಹೆಚ್ಚಳಗೊಂಡಿದೆ. ಆದ್ದರಿಂದಲೇ ಕನ್ನಡಕ್ಕೆ ಶಕ್ತಿ ಬಂದಿದೆ ಅನ್ನುವುದರ ಸೂಚಕವಾಗಿ, ಸಂಸ್ಕೃತದ ಮಾರ್ಗವನ್ನು ಬಿಟ್ಟು ಕನ್ನಡದಲ್ಲಿ ಕಾವ್ಯ ಬರೆಯಬಲ್ಲೆ ಅನ್ನುವ ಒಬ್ಬ ಕವಿ ಹುಟ್ಟಿದ. ಕವಿರಾಜಮಾರ್ಗ ಅನ್ನುವಂಥಾದ್ದು ಇದಕ್ಕೆ ಪೂರಕವಾಗಿ ನಿಂತಿದೆ. ಕವಿರಾಜಮಾರ್ಗದ ಹಿನ್ನೆಲೆ ಇಟ್ಟುಕೊಳ್ಳದೆ ನಾವು ಪಂಪನನ್ನು ಕಲ್ಪಿಸಿಕೊಳ್ಳುವುದು ಸೂಕ್ತವಲ್ಲ. ಹಲವು ಕನ್ನಡಂಗಳಿದ್ದಂತಹ ಕರ್ನಾಟಕದೊಳಗೆ, ರಾಜಮಾನ್ಯವಾಗಿರುವಂತಹ ಒಂದು ಭಾಷೆಯನ್ನು ಬಳಸುವುದಕ್ಕೆ ಬೇಕಾದ ಸನ್ನದ್ಧತೆ ಒದಗಿಸಲು ಲಾಕ್ಷಣಿಕಗ್ರಂಥ ಬಂದಿದೆ. ಅದು ಕವಿಗಳ ಮಾರ್ಗವೂ ಹೌದು, ರಾಜರ ಮಾರ್ಗವೂ ಹೌದು. ಈ ಭಾಷೆಯನ್ನು ಬಳಸಿ ಸಾಹಿತ್ಯ ಕೃತಿಗಳನ್ನು ನಿರ್ಮಿಸಬಹುದು, ಶಾಸ್ತ್ರ ಕೃತಿಗಳನ್ನು ರಚಿಸಬಹುದು. ಒಂದು ಭಾಷಾಮಾರ್ಗವನ್ನು ಹೇಳುವ ಲಾಕ್ಷಣಿಕ ಗ್ರಂಥ ಬಂದಿದೆ ಅನ್ನುವುದೇ ಒಂದು ಸಮಾಜ ತನ್ನನ್ನು ಆಂತರಿಕವಾಗಿ ಸುಸಂಯೋಜಿತಗೊಳಿಸಿಕೊಳ್ಳುವ ಪ್ರಯತ್ನಗಳ ಸೂಚನೆಯಾಗಿದೆ. ಪರಸ್ಪರ ಹೋಲಿಕೆಯ ಭಾಷಿಕರಿರುವ ಪ್ರಾಂತಗಳ ನಡುವೆ ಒಂದು ಸಂಯೋಜನೆಯನ್ನು ಏರ್ಪಡಿಸಿಕೊಳ್ಳುವ ರಾಜಾಡಳಿತ ಪ್ರಯತ್ನಗಳ ಸೂಚನೆಯಿದೆ.

ಒಂದು ಆಡಳಿತ ಪ್ರಾಂತಕ್ಕೆ ಮಾತ್ರ ಸೀಮಿತವಾಗಿರದೆ ಹಲವು ಪ್ರಾಂತಗಳ ಜೊತೆಗೆ ಆಡಳಿತ ವ್ಯವಹಾರವನ್ನು ನಡೆಸುವುದಕ್ಕೆ ಬೇಕಾಗಿರುವಂತಹ ಭಾಷಾ ಭಂಡಾರವನ್ನು ಅದು ವೃದ್ಧಿಪಡಿಸುತ್ತಾ ಇದೆ. ಒಂದು ಸಾಮಾನ್ಯೀಕೃತವಾಗಿರುವ ಶಾಸ್ತ್ರಭಾಷೆಯನ್ನು, ಗ್ರಾಂಥಿಕ ಭಾಷೆಯನ್ನು ರೂಪಿಸುತ್ತಾ ಇದೆ. ಆ ಹಿನ್ನೆಲೆ ಇತ್ತಾದ್ದರಿಂದಲೇ ಪಂಪನಿಗೆ ಸಂಸ್ಕೃತದ ಬದಲು ಕನ್ನಡದಲ್ಲಿ ಕಾವ್ಯ ಬರೆಯಲು ಸಾಧನ ಲಭ್ಯವಾಯಿತು. ವಸ್ತು ಮಹಾಭಾರತದ್ದೇ. ಆದರೆ ಅದನ್ನು ಕನ್ನಡದ ಪರಿಸ್ಥಿತಿ ಮತ್ತು ಸಂಸ್ಕೃತಿಗೆ ಅನುಗುಣವಾಗಿ ಬದಲಾಯಿಸಿ ನಿರೂಪಿಸಿದ. ಇದು ಕನ್ನಡತನದ ಅಸ್ಮಿತೆ ನಿರ್ಮಾಣದ ಒಂದು ಮಾದರಿ.

ಪಂಪನ ಈ ಕಾಲಘಟ್ಟದ ನಂತರ ನಮಗೆ ಕಂಡುಬರುವುದೇ 12ನೆಯ ಶತಮಾನದ ವಚನಕಾರರ ಕಾಲಘಟ್ಟ. 6ನೇ ಶತಮಾನದಿಂದ ಹಿಡಿದು 12ನೇ ಶತಮಾನದವರೆಗೆ ಬಂದ ಬೆಳವಣಿಗೆಗಳು, ಅದರಲ್ಲೂ ಮುಖ್ಯವಾಗಿ ಕೃಷಿಯಲ್ಲಿ ಬಂದ ಬೆಳವಣಿಗೆಗಳು ನಮಗೆ ಮುಖ್ಯವಾಗಿ ಕಂಡುಬರುವುದು 8ರಿಂದ 10ನೇ ಶತಮಾನದವರೆಗಿನ ರಾಷ್ಟ್ರಕೂಟರ ಆಳ್ವಿಕೆಯ ಸಮಯದಲ್ಲಿ. ಆಗ ಮತ್ತು ಆನಂತರದ ಸಮಯದಲ್ಲಿ ಬ್ರಹ್ಮದೇಯ ಮತ್ತು ದೇವದೇಯ ಎಂಬ ಹೆಸರಲ್ಲಿ ಹೆಚ್ಚುಹೆಚ್ಚು ಭೂಮಿದಾನಗಳನ್ನು ಕೊಟ್ಟಿರುವುದನ್ನು ಕಾಣುತ್ತೇವೆ. ಬ್ರಹ್ಮದೇಯಗಳೆಲ್ಲವೂ ಬ್ರಾಹ್ಮಣರಿಗೆ, ಅಗ್ರಹಾರಗಳಿಗೆ ಸಂಬಂಧಪಟ್ಟ ಭೂದಾನಗಳು, ಉಂಬಳಿಗಳು ಮತ್ತು ದತ್ತಿಗಳು. ದೇವದೇಯಗಳು ದೇವಸ್ಥಾನಗಳಿಗೆ ಕೊಟ್ಟಂತಹ ದಾನಗಳು ಉಂಬಳಿಗಳು. ವಿಸ್ತಾರವಾದ ಕೃಷಿಭೂಮಿ ದೇವಸ್ಥಾನದ ಮತ್ತು ಅಗ್ರಹಾರಗಳ ನಿಯಂತ್ರಣದಲ್ಲಿದೆ. ಇವುಗಳ ನಡುವೆ ಸ್ವತಂತ್ರ ರೈತಾಪಿಯಾಗಿ ಬೆಳೆಯುತ್ತಿರುವ ಒಂದು ಸಣ್ಣ ವರ್ಗವೂ ತಲೆಯೆತ್ತುತ್ತಾ ಇದೆ. ಸ್ಥಳೀಯವಾಗಿ ಕಾಡು ಕಡಿದು ಕೃಷಿಯನ್ನು ನಡೆಸುತ್ತಿರುವವರು ಇವರು. ಪ್ರಭುತ್ವ ಅದನ್ನು ಬೆಂಬಲಿಸುತ್ತಿದೆ.

ಕೆಲವು ಸಲ ಕುಶಲಕರ್ಮಿಗಳಿಗೂ ದಾನ ದತ್ತಿಗಳನ್ನ ಕೊಡಲಾಗಿದೆ. ಅವರೆಲ್ಲರೂ ಕಸುಬುದಾರ ವರ್ಗದವರು. ಹೆಚ್ಚಿನ ಸಾಮಾನ್ಯ ರೈತರು ಭೂರಹಿತರಾಗಿದ್ದಾರೆ. ಅವರೆಲ್ಲರೂ ಕೂಡ ಅಗ್ರಹಾರಗಳ ಅಥವಾ ದೇವಸ್ಥಾನ ಸಂಕೀರ್ಣಗಳ ಆಡಳಿತಕ್ಕೆ ಒಳಪಟ್ಟಿದ್ದಾರೆ. ಕ್ರಿ.ಶ. 8 ರಿಂದ 10ನೆಯ ಶತಮಾನಗಳ ಆ ಕಾಲಘಟ್ಟದಲ್ಲಿ ದೇವಸ್ಥಾನಗಳು ಮತ್ತು ಅಗ್ರಹಾರಗಳು ಸ್ಥಳೀಯವಾಗಿ ಒಂದು ಸಾಮಂತ ಆಡಳಿತ ಕೇಂದ್ರದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬರುತ್ತದೆ. ತೆರಿಗೆ ಸಂಗ್ರಹ, ತೆರಿಗೆ ನಿಗದಿ, ಅಪರಾಧಕ್ಕೆ ದಂಡನೆ ನಿರ್ಣಯಗಳನ್ನು ಮಾಡುವುದರ ಜೊತೆಗೆ ಭೂಮಿಯನ್ನು ಪುನರ್ ಹಂಚಿಕೆ ಮಾಡುವುದು, ಸಮುದಾಯ ಭೂಮಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಹಳೆಯ ರೈತರನ್ನು ಒಕ್ಕಲೆಬ್ಬಿಸಿ ಹೊಸಬರನ್ನು ನೆಲೆಗೊಳಿಸುವ ಕೆಲಸಗಳನ್ನೂ ಮಾಡುವುದನ್ನು ಕಾಣಬಹುದು. ಕೆಲವು ಮಠ ಮತ್ತು ದೇವಸ್ಥಾನಗಳು ನಾಣ್ಯವನ್ನು ಟಂಕಿಸುವ ಅಧಿಕಾರವನ್ನೂ ಕೂಡ ರಾಜರುಗಳಿಂದ ಪಡೆದಿರುತ್ತವೆ. ನಾಣ್ಯ ಟಂಕಿಸುವ ಕೆಲಸವನ್ನು ರಾಜಾಡಳಿತ ಮಾತ್ರ ಕೈಗೊಳ್ಳದೆ ಕೆಲವೊಂದು ವಾಣಿಜ್ಯ ಶ್ರೇಣಿಗಳಿಗೆ, ಮಠಗಳಿಗೆ, ದೇವಸ್ಥಾನ ಸಂಕೀರ್ಣಗಳಿಗೆ ಕೂಡ ವಹಿಸಿಕೊಡಲಾಗಿತ್ತು.

ಅಂದರೆ ಕ್ರಿ. ಶ. 10ನೇ ಶತಮಾನ ಅಥವಾ 11ನೇ ಶತಮಾನಕ್ಕೆ ಬರುವ ಹೊತ್ತಿಗೆ ಈ ಬ್ರಹ್ಮದೇಯ ಮತ್ತು ದೇವದೇಯಗಳ ಕಾರಣದಿಂದಾಗಿ ಅಗ್ರಹಾರಗಳ ಬ್ರಾಹ್ಮಣರು, ದೇವಸ್ಥಾನಗಳ ಪುರೋಹಿತರು, ಆಡಳಿತ ಮಂಡಳಿ ಧರ್ಮದರ್ಶಿಗಳು ಮತ್ತು ಅವರಿಗೆ ಪೂರಕವಾಗಿ ನಿಂತಿರುವ ರಾಜಮಾನ್ಯರ ಕೈಯಲ್ಲಿ ಸಾಮಾಜಿಕ ಅಧಿಕಾರ ಕೇಂದ್ರೀಕರಣಗೊಂಡಿದೆ. ಈ ಸನ್ನಿವೇಶದಲ್ಲಿ ಕರ್ನಾಟಕದಲ್ಲಿ ವಾಣಿಜ್ಯ ಬೆಳವಣಿಗೆಯೂ ಹೆಚ್ಚಳಗೊಂಡಿತು.

ಗುಪ್ತರ ರಾಜ್ಯಭಾರ ಮತ್ತು ನಂತರದ ಅವಧಿಯಲ್ಲಿ ನಗರೀಕರಣ ಪ್ರಕ್ರಿಯೆ ಸ್ವಲ್ಪ ಹಿನ್ನಡೆ ಅನುಭವಿಸಿತು. ವಾಣಿಜ್ಯ ವಹಿವಾಟುಗಳೂ ಕೂಡ ಸ್ವಲ್ಪ ಹಿನ್ನೆಡೆ ಅನುಭವಿಸಿದವು. ಆಗ ನಗರಗಳನ್ನು ಬಿಟ್ಟು ಪುನಃ ಹಳ್ಳಿಗಳ ಕಡೆ ಜನರ ಮರುವಲಸೆ ಆರಂಭವಾಗಿತ್ತು. ಆದರೆ ಆ ನಂತರದಲ್ಲಿ ಕ್ರಿ. ಶ. 9-10ನೇ ಶತಮಾನದ ಹೊತ್ತಿಗೆ ಕರ್ನಾಟಕದಲ್ಲಿ ಪಟ್ಟಣಗಳ ರಚನೆ ಮತ್ತು ವಾಣಿಜ್ಯದ ಉತ್ಕರ್ಷ ಹೆಚ್ಚಳಗೊಂಡಿತು. ದಕ್ಷಿಣಾಪಥ ಮತ್ತುಅದಕ್ಕೆ ಸಂಬಂಧಪಟ್ಟ ವಾಣಿಜ್ಯ ಮಾರ್ಗಗಳಲ್ಲಿ ಈ ಬೆಳವಣಿಗೆ ಕಂಡುಬಂತು. ಪಂಡರಾಪುರದಿಂದ ಆರಂಭಗೊಂಡು ಸೊಲ್ಲಾಪುರ, ಕೂಡಲಸಂಗಮ, ಬಳ್ಳಿಗಾವಿ, ಹುನಗುಂದವನ್ನು ಒಳಗೊಂಡಂತೆ ಹೊಸಪೇಟೆಯವರೆಗೆ ಇರುವ ವಾಣಿಜ್ಯ ಮಾರ್ಗ ಇದು. ಈ ವಾಣಿಜ್ಯ ಮಾರ್ಗದ ಅಕ್ಕಪಕ್ಕದಲ್ಲಿ ಕೃಷಿ ಉತ್ಪನ್ನಗಳ ವ್ಯಾಪಾರ ಉತ್ಕರ್ಷ ಕಂಡಿತು. ವ್ಯಾಪಾರಿಗಳು ಕೃಷಿ ಉತ್ಪನ್ನಗಳನ್ನು ಕೊಳ್ಳುವ ಜೊತೆಗೆ ಅಲ್ಲಿರುವ ಕುಶಲಕರ್ಮಿಗಳ ಸರಕುಗಳಿಗೂ ಬೇಡಿಕೆ ಹೆಚ್ಚಳಗೊಳಿಸುತ್ತಾರೆ. ಈ ಸಮಯದಲ್ಲಿ ರೈತರಿಗಿಂತ ಬಹಳ ಬೇಗನೆ ನಗದು ವಾಣಿಜ್ಯ ವ್ಯವಹಾರದೊಳಕ್ಕೆ ಕುಶಲಕರ್ಮಿಗಳು ಸೇರಿಕೊಂಡರು.

ಕುಶಲಕರ್ಮಿಗಳಲ್ಲಿ ಬ್ರಹ್ಮದೇಯ ಅಥವಾ ದೇವದೇಯಗಳಿಗೆ ಸಂಬಂಧಪಟ್ಟ ಉಂಬಳಿ ಊರುಗಳಲ್ಲಿ ವಾಸಮಾಡುತ್ತಿದ್ದವರೇ ಹೆಚ್ಚು. ಅವರ ಕಸಬುದಾರಿಕೆಯ ವಿಸ್ತರಣೆಗೆ ಊಳಿಗಮಾನ್ಯ ಹಿಡಿತವೊಂದು ಸಂಕೋಲೆಯಾಗಿತ್ತು. ಅವರ ದುಡಿಮೆಯ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿರಲಿಲ್ಲ. ಅದು ಊಳಿಗಮಾನ್ಯ ಸೇವೆಯ ಬಗೆಯಲ್ಲಿತ್ತು. ಅವರಿಗೆ ಜೀವನ ನಿರ್ವಹಣೆಗೆ ಅಗತ್ಯವಾದ ಆಹಾರ ಸಾಮಗ್ರಿಗಳನ್ನು ಕೊಡಲಾಗುತ್ತಿತ್ತೇ ಹೊರತು, ಅವರು ಒಂದು ವರ್ಷದಲ್ಲಿ ಎಷ್ಟೇ ಸರಕುಗಳನ್ನು ಉತ್ಪಾದನೆ ಮಾಡಿದರೂ ಕೂಡ ಅದಕ್ಕೆ ತಕ್ಕನಾಗಿ ಬೆಲೆ ಲೆಕ್ಕಹಾಕುತ್ತಿರಲಿಲ್ಲ. ಅದು ಆಯಗಾರ ಪದ್ಧತಿ. ದೇವಸ್ಥಾನಕ್ಕೆ, ಅಗ್ರಹಾರಕ್ಕೆ ಮತ್ತು ಅಲ್ಲಿರುವಂತಹ ಎಲ್ಲಾ ಕುಟುಂಬಿಕರಿಗೆ ವರ್ಷಕ್ಕೆ ಏನು ಸರಕುಗಳು ಬೇಕೋ ಅವೆಲ್ಲವನ್ನು ಒದಗಿಸುವುದು ಕುಶಲಕರ್ಮಿಗಳ ಜವಾಬ್ದಾರಿ. ಅದಕ್ಕೆ ಬದಲಿಯಾಗಿ ವಾರ್ಷಿಕವಾಗಿ, ಅರೆ ವಾರ್ಷಿಕವಾಗಿ ಬೆಳೆದ ಕಾಳುಕಡಿಗಳನ್ನು ಕೊಡುವುದು ಆಯಗಾರ ಪದ್ಧತಿಯ ವಿಧಾನ.

ಇದಕ್ಕೆ ಬದಲಿಯಾಗಿ ಸರಕುಗಳಿಗೆ ಬೆಲೆಯನ್ನು ನಿಗದಿಪಡಿಸಿ ಅದಕ್ಕೆ ಒಂದಿಷ್ಟು ನಗದು, ಒಂದಿಷ್ಟು ಕಳುಕಡಿಗಳನ್ನು ಕೊಡುವುದು, ಮತ್ತೆ ಪ್ರತಿಯೊಂದು ಸರಕಿಗೂ ಅದರ ಸಂಖ್ಯೆಯ ಆಧಾರದಲ್ಲಿ ಮೌಲ್ಯವನ್ನು ಪಾವತಿ ಮಾಡುವ ವಿಧಾನವನ್ನು ಆ ವಾಣಿಜ್ಯ ಮಾರ್ಗದುದ್ದಕ್ಕೂ ಸಂಚರಿಸುತ್ತಿದ್ದ ವ್ಯಾಪಾರಿಶ್ರೇಣಿಗಳವರು ಅನುಸರಿಸುತ್ತಿದ್ದರು. ಆ ಹೊಸ ಅಭ್ಯಾಸ ಕುಶಲಕರ್ಮಿ ಜನರಿಗೆ ಆದಾಯ ಒದಗಿಸುತ್ತಿತ್ತು. ಇದರಿಂದಾಗಿ ಊಳಿಗಮಾನ್ಯತೆಯ ಆಯಗಾರ ಚಾಕರಿ ಹಿಡಿತದಿಂದ ಬಿಡುಗಡೆಗೊಳ್ಳುವ ಹಂಬಲ ಕಸಬುದಾರ ಪಂಗಡಗಳಲ್ಲಿ ಬಲಗೊಂಡಿತು. ಅವರಲ್ಲಿ ಜಾಗ್ರತಿ ಹೊಂದಿದವರೆಲ್ಲಾ ಈ ಊಳಿಗಮಾನ್ಯ ಹಿಡಿತ ಇದ್ದಂತಹ ಅಗ್ರಹಾರಗಳು ಮತ್ತು ದೇವಸ್ಥಾನಗಳ ಸಂಕೀರ್ಣ ವ್ಯಾಪ್ತಿಯಿಂದ ಹೊರಗೆ ಬಂದು ಪಟ್ಟಣಗಳ ವಾಣಿಜ್ಯದಲ್ಲಿ ಪಾಲ್ಗೊಳ್ಳುವ, ಪಟ್ಟಣಗಳಲ್ಲಿ ನೆಲೆಸುವ ಪ್ರಯತ್ನಗಳನ್ನು ಆರಂಭಿಸಿದರು.

ಅವರಿಂದ ಬರುವ ನಗದು ತೆರಿಗೆ ಆದಾಯದ ಕಡೆ ಗಮನ ಇಟ್ಟು, ಕುಶಲಕರ್ಮಿಗಳಿಗೆ ನಗರ/ಪಟ್ಟಣಗಳಲ್ಲಿ ನೆಲೆಸುವ ಸ್ವಾತಂತ್ರ್ಯವನ್ನು ಕೊಡಲು ರಾಜಾಡಳಿತಕ್ಕೆ ಮನಸ್ಸಿದೆ. ಆದರೆ ಊಳಿಗಮಾನ್ಯ ವರ್ಗಗಳಿಗೆ ಮನಸ್ಸಿಲ್ಲ. ಈ ಸಂಘರ್ಷಾತ್ಮಕ ಸನ್ನಿವೇಶದಲ್ಲಿ ಶರಣಚಳವಳಿ ಆರಂಭವಾಯಿತು. ಆ ಆಂದೋಲನ ಆರಂಭವಾಗುವುದಕ್ಕೆ ಆಗಿನ ಸಾಮಾಜಿಕ ಬೆಳವಣಿಗೆಗಳು, ಕೃಷಿ-ವಾಣಿಜ್ಯ ಬೆಳವಣಿಗೆ, ನಗರಗಳ ಬೆಳವಣಿಗೆ ಇವೆಲ್ಲವೂ ಕೂಡ 10-11ನೇ ಶತಮಾನದಿಂದಲೇ ಒತ್ತಾಸೆ ಒದಗಿಸಿದ್ದವು. ಆದ್ದರಿಂದಲೇ ನಮಗೆ ಕೆಲವು ಆರಂಭಿಕ ವಚನಕಾರರು 11ನೇ ಶತಮಾನದ ಕೊನೆಯ ಭಾಗದ ಹೊತ್ತಲ್ಲಿ ಕೂಡ ಕಂಡುಬರುತ್ತಾರೆ. 12ನೆಯ ಶತಮಾನದ ಮಧ್ಯಭಾಗ ಈ ಸಂಚಲನೆಯ ಸಾಂದ್ರಕಾಲ. ಕಲ್ಯಾಣ ಹಾಗೂ ಅದರ ಸುತ್ತಲ ಪ್ರಾಂತ್ಯಗಳಲ್ಲೇ ಅದು ಹೆಚ್ಚು ಕ್ರಿಯಾಶೀಲವಾಗಿತ್ತು. ಆ ವಾಣಿಜ್ಯ ಮಾರ್ಗದುದ್ದಕ್ಕೂ ಬಂದಂತಹ ವಾಣಿಜ್ಯ ಬೆಳವಣಿಗೆ, ಆ ಪ್ರದೇಶದಲ್ಲಿ ಉಂಟಾದಂತಹ ವ್ಯವಸಾಯಕ ಮತ್ತು ಸರಕು ಉತ್ಪಾದನೆಯ ಉತ್ಕರ್ಷ ಕರ್ನಾಟಕದ ಬೇರೆ ಭಾಗಗಳಲ್ಲಿ ಆಗಿರಲಿಲ್ಲ. ಆದ್ದರಿಂದ ಅದು ಈ ಪ್ರಾಂತ್ಯಕ್ಕೆ ಹೆಚ್ಚು ಸಂಬಂಧಿಸಿದ ಒಂದು ಸಂಚಲನೆಯಾಗಿತ್ತು. ಅದು ಶರಣ ಚಳವಳಿ ಅಥವಾ ವಚನಕಾರರ ಚಳವಳಿ ಎನ್ನುವ ರೂಪವನ್ನು ಪಡೆದುಕೊಂಡು ಅಂತಿಮವಾಗಿ ತನ್ನನ್ನು ಹಿಡಿದಿಟ್ಟಿದ್ದ ಊಳಿಗಮಾನ್ಯ ಶಕ್ತಿಗಳಾದ ಪುರೋಹಿತಶಾಹಿ, ಜಾತಿವ್ಯವಸ್ಥೆ, ಭೂಮಾಲಿಕತ್ವ ಇವುಗಳ ವಿರುದ್ಧ ತನ್ನ ಬಂಡುಕೋರತನವನ್ನು ಪ್ರಕಟಿಸಿತು.

ಅದು ಸಾಮಾಜಿಕ ಉತ್ಪಾದನೆಯಲ್ಲಿ ತೊಡಗಿ ಮೇಲ್ಮುಖವಾಗಿ ಚಲಿಸಲು ಪೂರಕವಾಗಿ ಸಾಮಾಜಿಕ ಸ್ವಾತಂತ್ರ್ಯಬೇಕಿತ್ತು. ಆ ಸಾಮಾಜಿಕ ಸ್ವಾತಂತ್ರ್ಯ ಕೇವಲ ರಾಜನ ಕಾನೂನುಗಳಿಂದ ಮಾತ್ರ ಬರುವಂಥಾದ್ದಲ್ಲ. ಆ ಸ್ವಾತಂತ್ರ್ಯ ಧಾರ್ಮಿಕ ಮತ್ತು ಮಾನಸಿಕ ಸ್ವಾತಂತ್ರ್ಯವೂ ಆಗಿರಬೇಕಿತ್ತು. ಆ ಸ್ವಾತಂತ್ರ್ಯ ಬರಬೇಕೆಂದರೆ ಅವರಿಗೆ ಆಧ್ಯಾತ್ಮಿಕ ಸ್ವಾತಂತ್ರ್ಯ ಅಗತ್ಯವಾಗಿ ಬೇಕಿತ್ತು. ಆದ್ದರಿಂದ ತಮಗೆ ಬೇಕಾದ ದೇವರನ್ನು, ಅದಕ್ಕೆ ಬೇಕಾದ ಆರಾಧನಾ ಪದ್ಧತಿಯನ್ನು ಸೃಷ್ಟಿಸಿಕೊಳ್ಳುವುದರ ಮುಖಾಂತರವಾಗಿ ವಚನಕಾರರು ಹೊಸದೊಂದು ಸಾಮಾಜಿಕ ವ್ಯವಸ್ಥೆ ನಿರ್ಮಿಸುವ ಆಶಯವನ್ನು ಪ್ರತಿಪಾದಿಸಿದರು. ತಮ್ಮ ಹಳೆಯ ಮಾನಸಿಕ ಮತ್ತು ಸಾಮಾಜಿಕ ಸಂಕೋಲೆಗಳಿಂದ ಬಿಡಿಸಿಕೊಳ್ಳುವುದು ಅವರ ಗುರಿ. ಅದರಿಂದಾಗಿಯೇ ದೇವಸ್ಥಾನದ ಬಗ್ಗೆ ಅವರು ನಿರಾಕರಣೆಯನ್ನು ಪ್ರಕಟಪಡಿಸಿದರು. ದೇಹವೇ ದೇಗುಲ ಎಂದರು. ಯಾಕೆಂದರೆ ದೇವಾಲಯ ಎನ್ನುವುದು ಕೇವಲ ದೇವರಿರುವ ಜಾಗ ಮಾತ್ರ ಅಲ್ಲ. ಆಗಿನ ಸಾಮಾಜಿಕ ವ್ಯವಸ್ಥೆಯಲ್ಲಿ ದೇವಸ್ಥಾನಗಳು ಭೂಮಿಕಾಣಿ ನಿರ್ವಹಣೆಯಿಂದ ಹಿಡಿದು ಲೇವಾದೇವಿ ವಹಿವಾಟನ್ನೂ ನಿರ್ವಹಿಸುತ್ತಿದ್ದಂತಹ ಒಂದು ಊಳಿಗಮಾನ್ಯ ಆಡಳಿತ ಘಟಕ. ಇವರೆಲ್ಲರೂ ಕೂಡ ಅದರ ತೊತ್ತುಗಳು, ಊಳಿಗದವರು. ಪುರೋಹಿತರು ಮತ್ತು ಪೂಜಾರಿಗಳು ಕೇವಲ ಪೂಜೆ ಮಾಡುವವರಾಗಿರಲಿಲ್ಲ, ಇವರ ದಾಸ್ಯದ ಸಂಕೋಲೆಗಳನ್ನ ಹಿಡಿದಿಟ್ಟಿರುವಂಥವರಾಗಿದ್ದರು. ಶಾಸ್ತ್ರ, ಪುರಾಣ, ಧಾರ್ಮಿಕ ವಿಧಿ ವಿಧಾನಗಳೆಲ್ಲವೂ ಇವರ ಸಾಮಾಜಿಕ ಬಂಧನವನ್ನು ಬಿಗಿ ಮಾಡುವುದಕ್ಕಿದ್ದ ಸಾಧನಗಳಾಗಿದ್ದವು.

ದೇವಸ್ಥಾನಕ್ಕೆ ಹೋಗುವುದು, ವ್ರತಾಚರಣೆ ಕೈಗೊಳ್ಳುವುದು, ಪೂಜೆಪುನಸ್ಕಾರಗಳಿಗೆ ಹಣ ಖರ್ಚು ಮಾಡುವುದು ಎನ್ನುವುದಕ್ಕೆ ಬೇಕಾಗಿರುವ ಸಂಪನ್ಮೂಲ ಊಳಿಗದವರಿಗೆ ಇರುವುದಿಲ್ಲ. ಇವರ ದುಡಿಮೆ-ಗಳಿಕೆ ಅನ್ನುವಂಥಾದ್ದು ಬಹಳ ಮಿತವಾದುದಾಗಿರುತ್ತದೆ. ಜೀವನ ನಿರ್ವಹಣೆಗೆ ಮಾತ್ರ ಸಾಲುವಂತಿರುತ್ತದೆ. ನಿರಂತರವಾಗಿ ಕಾಯಕದಲ್ಲಿ ತೊಡಗಿರಬೇಕಾದ ಅನಿವಾರ್ಯತೆ ಇರುತ್ತದೆ. ಹಾಗಾಗಿ ಇವರೊಂದು ಸಿದ್ಧಾಂತ ಮಂಡಿಸಿ ಪೂಜೆ ಅನ್ನುವುದು ಬೇರೆಯಲ್ಲ, ಕಾಯಕ ಎನ್ನುವುದು ಬೇರೆಯಲ್ಲ ಎಂದರು. ಅವರ ಭೌತಿಕ ಪರಿಸ್ಥಿತಿಗಳಲ್ಲಿ ಕಾಯಕವನ್ನು ನಿಲ್ಲಿಸಿ ಪೂಜೆಗೋಸ್ಕರ ಹೋಗಿಬರುವಷ್ಟು ಬಿಡುವಿಲ್ಲ. ಆದ್ದರಿಂದ ಅದು ಒಂದು ಸಿದ್ಧಾಂತವಾಗಿ ಕಾಯಕವೇ ಪೂಜೆ ಎಂದಾಗುತ್ತದೆ. ಈ ಪವಿತ್ರವಾದ ಸರಕುಗಳನ್ನು ಉತ್ಪಾದನೆ ಮಾಡಿ ಜೀವನ ನಿರ್ವಹಣೆಗೆ ಕಾರಣವಾಗುತ್ತಿರುವ ಈ ದೇಹವೇ ದೇಗುಲ. ಈ ದೇಹವನ್ನು ದೇಗುಲದಷ್ಟು ಪವಿತ್ರ ಅನ್ನುವಲ್ಲಿ ಎರಡು ಅಂಶಗಳಿವೆ. ಒಂದು, ಕಾಯಕದ ಆಧಾರದಲ್ಲಿ ಮೇಲು-ಕೀಳು ಎಂದು ತೀರ್ಮಾನ ಮಾಡಿದ್ದಂತಹ ಸಾಮಾಜಿಕ ನಿಲುವುಗಳನ್ನು ಮುರಿದು ಹಾಕಬೇಕು. ಎರಡನೆಯದು ಜಾತಿಗಳ ಆಧಾರದಲ್ಲಿ ಕುಶಲಕರ್ಮಿಗಳನ್ನ ಮೇಲು-ಕೀಳು ಅಂತ ವಿಂಗಡಿಸಿರುವಂತಹ ಸಾಮಾಜಿಕ ಪದ್ಧತಿಗಳನ್ನು ಪ್ರಶ್ನಿಸಬೇಕು. ವಿರೋಧಿಸಬೇಕು. ದೇಹವೇ ದೇಗುಲ ಆದಾಗ ದೇಹ ಪವಿತ್ರ ಎಂದಾಗುತ್ತದೆ. ಪವಿತ್ರ ಎಂದಾದಮೇಲೆ ಆ ಪಾವಿತ್ರ್ಯದಲ್ಲಿ ಮೇಲು-ಕೀಳು ಇರಲು ಸಾಧ್ಯವಿಲ್ಲ. ‘ಕಾಯಕ ಆವುದಾದಡೇನು, ಮಾಡುವ ಮಾಟ ಒಂದೇ’. ಆ ಶ್ರಮ ಬಳಕೆಯಾಗುವುದು ಪ್ರಕೃತಿಯ ಮುಂದುವರಿಕೆಗೆ, ಸಮಾಜದ ಉಳಿವಿಗೆ. ಆದ್ದರಿಂದ ಅದು ದೈವದ ಪೂಜೆಯಾಗಿದೆ.

ದಾಸೋಹ ಪರಿಕಲ್ಪನೆ ಕುಶಲಕರ್ಮಿಗಳು ತಮ್ಮ ನಡುವೆ ಏರ್ಪಡಿಸಿಕೊಂಡಿಸಿಕೊಂಡ ಒಂದು ಸಹಕಾರ ತತ್ತ್ವ. ಎಲ್ಲರಿಗೂ ಎಲ್ಲಾ ಕಾಲದಲ್ಲೂ ಆದಾಯ ಇರುವುದಿಲ್ಲ. ಆದ್ದರಿಂದ ತಾವೊಬ್ಬರೇ ದುಡಿದು, ತಾವೊಬ್ಬರೇ ತಿನ್ನಬಾರದು. ತಾನು ದುಡಿದಿದ್ದರಲ್ಲಿ ಇನ್ನೊಬ್ಬರಿಗೂ ಉಣಬಡಿಸಬೇಕು. ಆಗ ಅದು ಸ್ವಂತದ ಮನೆಯಲ್ಲ. ಸರ್ವರ ಮಹಾಮನೆಯಾಗಿ ಮಾರ್ಪಡುತ್ತೆ. ಅಲ್ಲಿ ದಾಸೋಹಭೋಜನ, ಶರಣ ತತ್ತ್ವ ಎರಡೂ ಇರುತ್ತದೆ.


 



ಇವರಲ್ಲಿ ಯಾರೂ ಮಾಲಕರಿಲ್ಲ. ಯಾರೂ ಕೂಲಿಯವರಿಲ್ಲ. ಎಲ್ಲರೂ ಸ್ವಯಂ ಕುಶಲಕರ್ಮಿಗಳು. ಸ್ವಯಂಕಸುಬುದಾರರು. ತಮ್ಮ ಕಚ್ಚಾವಸ್ತುಗಳನ್ನು ತಾವಿಟ್ಟುಕೊಂಡು ತಾವು ಕೆಲಸ ಮಾಡುವವರು. ಕುಟುಂಬದವರೆಲ್ಲಾ ಸೇರಿ ಮಾಡುವ ಶ್ರಮ ಇದೆ. ಗಂಡ-ಹೆಂಡತಿ ಎಲ್ಲರೂ ಸೇರಿಯೇ ಮಾಡುವಂತಹ ಪರಿಶ್ರಮದ ಕೆಲಸಗಳು ಇವು. ಆ ಕಾಯಕತತ್ತ್ವದ ಆಧಾರದಲ್ಲಿಅವರಿಗೆ ಹೊಳೆದದ್ದು ‘ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದುಶಿವಂಗೆ’. ಕೃಷಿ ಮತ್ತು ಕುಶಲಕರ್ಮಿ ಉತ್ಪಾದನಾ ವ್ಯವಸ್ಥೆಗಳ ನಡುವೆ ಒಂದು ವ್ಯತ್ಯಾಸವನ್ನು ನಾವು ಗಮನಿಸಬಹುದು. ಕೃಷಿಯಲ್ಲಿ ಮಹಿಳೆ ಪಾಲ್ಗೊಳ್ಳುವ ಬಹುಪಾಲು ಕೆಲಸಗಳು ಅರೆಕುಶಲಿಯಾಗಿರುವಂತಹ ಕೆಲಸಗಳು. ಕಳೆ ಕೀಳುವಂಥಾದ್ದು, ಬಿತ್ತನೆಗೆ ನೆರವಾಗುವಂಥಾದ್ದು, ಕೊಯ್ಲು ಮಾಡುವಂಥಾದ್ದು. ಅದನ್ನು ಹೆಣ್ಣುಮಕ್ಕಳು ಒಬ್ಬರ ಬದಲು ಒಬ್ಬರು ಬಹುಶಃ ನಿರ್ವಹಣೆ ಮಾಡಬಹುದು. ಒಂದು ಆಳು ಅಂತ ಇದ್ದರೆ ಸರಿ, ನಡೆಯುತ್ತದೆ. ಕುಶಲಕರ್ಮಿಗಳ ಕಾಯಕ ಮತ್ತು ಉತ್ಪಾದನಾ ಪರಿಸ್ಥಿತಿ ಬೇರೆ. ಇಲ್ಲಿ ನೇಕಾರಿಕೆಯಲ್ಲಿ ತೊಡಗುವುದು ಅಂತ ಹೇಳಿದರೆ ಹೆಣ್ಣೆಷ್ಟು ಕುಶಲಿಯೋ ಗಂಡೂ ಅಷ್ಟೇ ಕುಶಲಿ. ಕೌಶಲ್ಯಾಧಾರಿತವಾಗಿ ಶ್ರಮ ವಿಭಜನೆ ಆಗಿರುತ್ತದೆ. ಒಬ್ಬರು ಹಾಸು ಹಾಕಿದರೆ ಮತ್ತೊಬ್ಬರು ನೇಯಬೇಕು. ಅಷ್ಟು ಸುಲಭವಾಗಿ ಬೇರೆ ಯಾರೋ ಒಬ್ಬರನ್ನು ತಂದು ಈ ಕೆಲಸಗಳನ್ನು ಆ ದಿನದ ಮಟ್ಟಿಗೆ ಎಂಬಂತೆ ನೆರವೇರಿಸುವುದಕ್ಕೆ ಆಗುವುದಿಲ್ಲ.

ಆದ್ದರಿಂದ ಶ್ರಮದ ಮಹತ್ವದ ಬಗ್ಗೆ ವ್ಯಕ್ತಿ ಅಸ್ಮಿತೆಯ ಬಗ್ಗೆ ಅವರಿಗೆ ಭಾವನೆಗಳು ಬೆಳೆಯುತ್ತವೆ. ಆದ್ದರಿಂದ ಹೆಣ್ಣು-ಗಂಡುಮೇಲು-ಕೀಳಲ್ಲ. ಹೆಣ್ಣಿಲ್ಲದೆ ಗಂಡಿಲ್ಲ. ಗಂಡು ಹೆಣ್ಣು ಜೊತೆಯಾಗೇ ಇರಬೇಕು. ಅವರಿಬ್ಬರೂ ಜೊತೆಯಾಗಿರುವುದು ಹಿತವಪ್ಪುದು ಶಿವಂಗೆ. ಹೆಣ್ಣು ಯಾವುದೇ ಕಾರಣಕ್ಕೂ ಮೋಕ್ಷಕ್ಕೆ ಅಡ್ಡ ಅಲ್ಲ. ವೈದಿಕ ಪರಿಭಾಷೆಯಲ್ಲಿ ಪುರೋಹಿತರ ಪರಿಭಾಷೆಯಲ್ಲಿ ಹೆಣ್ಣು ಅಶ್ರೇಷ್ಟ. ಮೋಕ್ಷಕ್ಕೆ ಅರ್ಹಳಲ್ಲದವಳು. ಆದರೆ ಕಾಯಕ ಜೀವಿಗಳ ಉತ್ಪಾದನಾ ಪರಿಸ್ಥಿತಿಯಲ್ಲಿ ಅವಳಿಲ್ಲದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಆ ಕಾಯಕ ನೆರವೇರಬೇಕಾದರೆ ಮಹಿಳೆಯರದೂ ವಿಶಿಷ್ಟ ಪಾಲಿದೆ. ಕುಶಲತೆಯ ಪಾತ್ರವಿದೆ. ಆದ್ದರಿಂದ ಸಹಜವಾಗಿ ಕುಶಲಕರ್ಮಿಗಳಿಗೆ ಮಹಿಳಾ ಸಮಾನತೆಯನ್ನು ಪ್ರತಿಪಾದಿಸುವ, ಆರಾಧನಾ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಬೆಂಬಲಿಸುವ, ಅವರಿಗೆ ಅಂಟುಮುಂಟು ಇಲ್ಲ ಎಂದು ಹೇಳುವ ನಿಲುವು ಹುಟ್ಟಿ ಬಂತು.

ಹೀಗೆ ಚರಿತ್ರೆಯ ಭೌತಿಕ ಪರಿಸ್ಥಿತಿಗಳ ಒತ್ತಾಸೆಗಳು ಒಂದು ಪಂಥ ಹುಟ್ಟಿಕೊಳ್ಳಲು, ತತ್ತ್ವಸಿದ್ಧಾಂತವನ್ನು ರೂಪಿಸಿಕೊಳ್ಳಲು ಕಾರಣವಾಗುತ್ತವೆ. ಆದರೆ ಆ ರೀತಿಯ ಹೊಸ ತತ್ತ್ವಗಳ ಪ್ರತಿಪಾದನೆಯನ್ನು ಮಾಡಿದಾಗ ಹಳೆಯ ಆಳುವ ವರ್ಗ ಸುಮ್ಮನಿರುವುದಿಲ್ಲ. ಆದರೆ ಹೊಸ ತತ್ತ್ವ ಪ್ರತಿಪಾದಿಸುವ ವರ್ಗಗಳಿಗೆ ಹೊಸದಾಗಿ ಆಳುವವರ್ಗ ಆಗುವುದಕ್ಕೆ ಬೇಕಾಗಿರುವ ರಾಜಕೀಯ ಶಕ್ತಿ, ಸಾಮಾಜಿಕ ಶಕ್ತಿ ಇನ್ನೂ ಕೈಗೂಡಿರುವುದಿಲ್ಲ. ಆಗ ಪರಿಮಾಣಾತ್ಮಕವಾಗಿ ಊಳಿಗಮಾನ್ಯ ವ್ಯವಸ್ಥೆ, ಜಾತಿ ವ್ಯವಸ್ಥೆಗಳೇ ಇನ್ನೂ ದೊಡ್ಡದಾಗಿವೆ. ಜಾತಿಯನ್ನು ಬಿಟ್ಟಿರುವವರು ಕೆಲವು ಲಕ್ಷಗಳ ಸಂಖ್ಯೆಯಲ್ಲಿದ್ದರೆ ಉಳಿದವರು ಕೋಟಿಗಳ ಸಂಖ್ಯೆಯಲ್ಲಿದ್ದಾರೆ. ಇವರ ಹೊಸ ಸಿದ್ಧಾಂತ ಅನ್ನುವಂಥಾದ್ದು ಬರಿ ಆಲೋಚನೆ ಮಾತ್ರವಾಗಿದ್ದರೆ ಅವರ ಮೇಲೆ ದಾಳಿ ಮಾಡುವ ಅಗತ್ಯ ರಾಜಾಡಳಿತಕ್ಕೆ ಬರುತ್ತಿರಲಿಲ್ಲ. ಊಳಿಗಮಾನ್ಯ ಶಕ್ತಿಗಳಿಗೆ ಶರಣ ಚಳವಳಿಯನ್ನು ಸದೆ ಬಡಿಯಬೇಕು ಎನ್ನುವ ಅಗತ್ಯವೇ ಕಂಡುಬರುತ್ತಿರಲಿಲ್ಲ. ಅವರ ಪಾಡಿಗೆ ಅವರ ಕೆಲಸವನ್ನು ಮಾಡುತ್ತಾ, ಅವರ ಪಾಡಿಗವರು ವಚನ ಹಾಡಿಕೊಂಡು, ಅವರ ಪಾಡಿಗವರು ಹಂಚಿಕೊಂಡು ಊಟ ಮಾಡುತ್ತಾ, ಪರಸ್ಪರ ಸಹಕರಿಸಿಕೊಂಡಿರುತ್ತಾರೆ ಎಂದು ಸುಮ್ಮನಿರುತ್ತಿದ್ದರೇನೋ. ಅದು ಅಂತರ್ಜಾತೀಯ ವಿವಾಹದವರೆಗೆ ಹೋದಾಗ ಅದು ಸಾಮಾಜಿಕ ಸಂಬಂಧಗಳಲ್ಲಿ ನಿರ್ಣಾಯಕವಾದ ಏರುಪೇರನ್ನು ಉಂಟುಮಾಡುತ್ತದೆ. ಜಾತಿಗಳು ಕೇವಲ ಕಲ್ಪಿತ ಮನೋಸ್ಥಿತಿ ಮಾತ್ರ ಅಲ್ಲ. ಪ್ರತಿ ಜಾತಿಗೂ ಇಲ್ಲಿನ ಉತ್ಪಾದನಾ ವ್ಯವಸ್ಥೆಯಲ್ಲಿ ಒಂದು ಪಾತ್ರ, ಸಂಪತ್ತಿನ ಹಂಚಿಕೆಯಲ್ಲಿ ಒಂದು ಪಾತ್ರ ನಿಗದಿಪಡಿಸಲಾಗಿದೆ. ಸಾಂಸ್ಕೃತಿಕ ನಿರ್ವಹಣೆಯಲ್ಲಿ ಒಂದು ಬಾಬನ್ನು ನಿಗದಿಗೊಳಿಸಲಾಗಿದೆ. ಅವುಗಳನ್ನ ಮಿಶ್ರ ಮಾಡಿದರೆ ಒಟ್ಟಾರೆ ಆರ್ಥಿಕ ಪರಿಸ್ಥಿತಿಯಲ್ಲಿ ಗೋಜಲು ಉಂಟಾಗುತ್ತದೆ. ಆದ್ದರಿಂದ ಶರಣ ಚಳವಳಿಯನ್ನು ದಮನಕ್ಕೀಡು ಮಾಡಲಾಯಿತು.

ಆದರೆ ಹೊಸ ಆಶಯಗಳ ಬೆಳವಣಿಗೆ ನಿಲ್ಲಲಿಲ್ಲ. ಶರಣ ಚಳವಳಿ ಚದುರಿ ಹೋದಾದ ಮೇಲೂ ಕರ್ನಾಟಕದಲ್ಲಿ ವಾಣಿಜ್ಯದ ಉತ್ಕರ್ಷ ಹಾಗೂ ಕೃಷಿ ಉತ್ಪಾದನಾ ಹೆಚ್ಚಳ ಮುಂದುವರಿದಿತ್ತು. 14-15ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಮಯದಲ್ಲಿ ಇದೇ ರೀತಿಯ ಕುಶಲಕರ್ಮಿ, ಸೇವಾವೃತ್ತಿನಿರತ ಮತ್ತು ಯೋಧಜಾತಿ ಸಮುದಾಯಗಳ ಸಾಮಾಜಿಕ ಬಿಡುಗಡೆಯ ಸಿದ್ಧಾಂತ ಅಥವಾ ಸಾಮಾಜಿಕ ಬದಲಾವಣೆಯ ಆಶಯ ಮುಂದಕ್ಕೆ ಬಂದಿತು. ಕುಲಗಳ ಶ್ರೇಷ್ಠತೆ ನಿರಾಕರಣೆ ಮಾಡುವ ಆಶಯಗಳ ಹರಿದಾಸ ಚಳವಳಿಗೆ ಅಲ್ಲಿನ ಪ್ರಭುತ್ವ ನೇರವಾಗಿ ನೆರವನ್ನು ನೀಡಿದೆ. ಆ ಹೊತ್ತಿಗೆ ಊಳಿಗಮಾನ್ಯ ಪ್ರಭುತ್ವ ಕೇವಲ ವ್ಯವಸಾಯದ ತೆರಿಗೆ ಮತ್ತು ಉತ್ಪನ್ನಗಳ ಮೇಲೆ ಆಧರಿಸಿರಬೇಕಾದ ಪರಿಸ್ಥಿತಿ ಇರಲಿಲ್ಲ. ವಾಣಿಜ್ಯ ಸ್ವಭಾವ ಅನ್ನುವುದು ಪ್ರಭುತ್ವದಲ್ಲಿ ಬೆಳೆಯುತ್ತಿತ್ತು. ಮಾರುಕಟ್ಟೆಯಲ್ಲಿ ಹೆಚ್ಚೆಚ್ಚು ಮಾರಾಟವಾಗುವಂತಹ ವ್ಯವಸಾಯಕ ಉತ್ಪನ್ನಗಳು ಅವರಿಗೆ ಬೇಕಾಗಿದ್ದವು. ಅಂತಹ ಕೃಷಿ ಉತ್ಪನ್ನಗಳನ್ನ ಹೆಚ್ಚು ಮಾಡಲಿಕ್ಕಾಗಿಯೇ ಕೆರೆ ಕಟ್ಟೆ ಮತ್ತೆ ಕಾಲುವೆಗಳನ್ನು ನಿರ್ಮಿಸಲಾಯಿತು. ಕೃಷಿಯಲ್ಲಿ ವಾಣಿಜ್ಯ ಉತ್ಪನ್ನಗಳನ್ನು ಬೆಳೆಸುವ ಪದ್ಧತಿ, ಅವುಗಳನ್ನು ಮಾರಾಟ ಮಾಡಿ ರಾಜ್ಯಕ್ಕೆ ಆದಾಯವನ್ನು ಪಡೆಯುವ ಮನಃಸ್ಥಿತಿ ಬಂದ ತಕ್ಷಣ ಪ್ರಭುತ್ವವು ವಾಣಿಜ್ಯಕ್ಕೆ ಪೂರಕವಾಗಿರುವ ಹರಿದಾಸ ಚಳವಳಿಗೆ ಬೆಂಬಲ ನೀಡಿತು.

ರೈತರು ಮಾರುಕಟ್ಟೆಗೋಸ್ಕರವಾಗಿಯೂ ಬೆಳೆಯುವುದಕ್ಕೆ ಶುರು ಮಾಡಿದ ಮೇಲೆ ಅವರ ಆದಾಯದಲ್ಲಿ ಹೆಚ್ಚಳವಾಗಿ ಜೀವನದಲ್ಲಿ ಸುಧಾರಣೆ ಬಂದಿತು. ಹಳೆಯ ಸಾಮಾಜಿಕ ಸಿದ್ಧಾಂತಗಳ ಬದಲು ಹರಿದಾಸ ಪಂಥವನ್ನು ಬೆಂಬಲಿಸಲು ಅವರು ಮುಂದಾದರು. ಏಕೆಂದರೆ ಅದು ಮೋಕ್ಷದ ಸಾಧ್ಯತೆಯನ್ನು ಸರ್ವ ಜಾತಿಗಳಿಗೂ ಪ್ರತಿಪಾದಿಸುತ್ತಿತ್ತು. ಹರಿದಾಸರು ದೇವಸ್ಥಾನಗಳನ್ನು ಬಯಸಲಿಲ್ಲ. ದೇವರನ್ನು ಹೊಸ ಸ್ವಭಾವದಲ್ಲಿ ರೂಪಗೊಳಿಸಿಕೊಂಡರು. ಭಕ್ತವತ್ಸಲ ಅವನು. ಇವರ ಸಖ. ‘ನಂಬಿದವರ ಪೊರೆಯುವೆಯೆಂದು ನೆರೆ ನಂಬಿ ಬಂದೆನೋ ಹರಿಯೇ’ ಎಂದರು.

ವಚನಕಾರರ ಹಲವು ನಿಲುವುಗಳ ಜೊತೆ ಹರಿದಾಸ ಪಂಥಕ್ಕೆ ಸಾಮ್ಯತೆಇದೆ. ಪೂಜೆ, ವ್ರತ, ತೀರ್ಥಯಾತ್ರೆ ಇತ್ಯಾದಿಗಳೆಲ್ಲ ಅಗತ್ಯವಿಲ್ಲ. ನಂಬಿ ನೆನೆದರೆ ಸಾಕು. ಹೀಗೆ ಆರಾಧನೆ ಸರಳೀಕೃತಗೊಂಡಿದೆ. ಭಕ್ತಿಯಿಂದ ಹುಲ್ಲಿನ ದಳವನ್ನರ್ಪಿಸಿದರೂ ದೇವರಿಗೆ ಅದು ಸಲ್ಲುತ್ತದೆ. ಅದು ಕಾಣಿಕೆಯಾಗುತ್ತದೆ. ಬಿಡುಗಡೆಯ ಆಶಯಗಳಲ್ಲಿ ಈ ರೂಪಕಗಳು ಹೊಮ್ಮುತ್ತವೆ. ಅವರಿಗೆ ಬೇಕಿದ್ದದ್ದು ಸಾಮಾಜಿಕ ಬಿಡುಗಡೆ. ಅದು ಧಾರ್ಮಿಕ ಪಂಥದ ವೇಷ ಧರಿಸಿದೆ. ದೇವತಾರಾಧನೆಯ ಮುಖವಾಗಿಯೂ, ಭಕ್ತಿಯ ಮುಖವಾಗಿಯೂ ಅದು ಕಾಣಿಸುತ್ತಾಇದೆ. ಆದರೆ ಮುಖ್ಯವಾಗಿ ಕರ್ನಾಟಕದ ಸಮಾಜದಲ್ಲಿ ಬಂದಂತಹ ಹಳೆಊಳಿಗಮಾನ್ಯ ಪದ್ಧತಿಗೆ ಭಿನ್ನವಾದ ಒಂದು ಅರೆ ಊಳಿಗಮಾನ್ಯ ವ್ಯವಸ್ಥೆಯ ಪರವಾಗಿರುವ ಕುಶಲಕರ್ಮಿಗಳು ಮತ್ತು ಸೇವಾನಿರತ ಜಾತಿಗಳ ಬಿಡುಗಡೆಯ ಆಶಯದ ಅಂಗವಾಗಿ ಈ ಭಕ್ತಿಪಂಥಗಳು ರೂಪುಗೊಂಡವು. ಹಾಗೆ ರೂಪುಗೊಳ್ಳುವುದಕ್ಕೆ ಅಲ್ಲಿನ ವಾಣಿಜ್ಯ ವಹಿವಾಟು, ಕೃಷಿ ವಿಸ್ತರಣೆ ಒತ್ತಾಸೆ ನೀಡಿದವು. ಕೆಲವು ಹಂತಗಳಲ್ಲಿ ಪ್ರಭುತ್ವದ ಒತ್ತಾಸೆಯೂ ಇದ್ದಿತು.

ಪ್ರಭುತ್ವ ಅಂದರೆ ಬರಿ ರಾಜ ಮನೆತನ ಮಾತ್ರಅಲ್ಲ. ರಾಜನಿಗೆ ಬಹಳ ಆಸೆ ಇರಬಹುದು. ವ್ಯಾಪಾರ ವಾಣಿಜ್ಯದಿಂದ, ಪಟ್ಟಣಗಳಿಂದ ಬಹಳ ತೆರಿಗೆ ಬರುತ್ತದೆ ಎಂದು. ಆದರೆ ಊಳಿಗಮಾನ್ಯ ವ್ಯವಸ್ಥೆ ಪ್ರಭುತ್ವದ ದೊಡ್ಡ ಪಾಲುದಾರ. ಅದರ ಕೈಯಲ್ಲಿ ಭೂಮಿಕಾಣಿಗಳು ಇನ್ನೂ ದೊಡ್ಡ ಪ್ರಮಾಣದಲ್ಲಿ ಇವೆ. ಶಾಸ್ತ್ರಾಚಾರಗಳು, ಧರ್ಮ-ದೇವರು ಅದರ ನಿಯಂತ್ರಣದಲ್ಲಿವೆ. ಜಾತಿ ವ್ಯವಸ್ಥೆಯು ಅಲ್ಲಿರುವ ಶ್ರಮ ವಿಭಜನೆಯ ಸೂತ್ರದಿಂದಾಗಿ ಪಾಲಿಸಲೇಬೇಕಾಗಿರುವ ವ್ಯವಸ್ಥೆಯಾಗಿದೆ. ಪ್ರಭುತ್ವ ಆ ವ್ಯವಸ್ಥೆಯ ಅನುಮೋದನೆ ಪಡೆಯುವಷ್ಟು ಪ್ರಮಾಣದಲ್ಲಿ ಮಾತ್ರವೇ ಈ ಸಡಲೀಕರಣಗಳನ್ನು ಅನುಮತಿಸುತ್ತದೆ ಅಲ್ಲಿಯವರೆಗೆ ಈ ಪಂಥಗಳಿಗೆ ರಾಜಾಶ್ರಯ ಸಿಕ್ಕಿರುತ್ತದೆ. ಅವು ಮಿತಿಮೀರಿ ಮುಂದಿನ ಹಂತದ ಚಲನೆ ಅಥವಾ ಸ್ಥಿತ್ಯಂತರಕ್ಕೆ ಕಾರಣವಾಗುತ್ತಿವೆ ಎಂದಾದರೆ ಆಗ ಸಂಘರ್ಷ ಶುರುವಾಗುತ್ತದೆ. ಅಂತಹ ಸಂಘರ್ಷಗಳು ಬಂದಾಗ ಅನಿವಾರ್ಯವಾಗಿ ರಾಜಾಡಳಿತವು ಊಳಿಗಮಾನ್ಯ ಶಕ್ತಿಗಳ ಬೆಂಬಲಕ್ಕೆ ನಿಲ್ಲಬೇಕಾಗುತ್ತದೆ. ಆದ್ದರಿಂದಲೇ ಭಕ್ತಿ ಪಂಥಗಳ ಆಶಯಗಳು ಮಹೋನ್ನತವಾಗಿದ್ದರೂ ಅವು ಜನರನ್ನು ಪೂರ್ಣವಾಗಿ ಬಿಡುಗಡೆಗೊಳಿಸಲು ಆಗಲಿಲ್ಲ. ಆದರೆ ಹಿಂದಿನ ಕಾಲಘಟ್ಟಕ್ಕೆ ಹೋಲಿಸಿದರೆ ಎಷ್ಟೋ ಮುನ್ನಡೆಯ ಅಂಶಗಳನ್ನು ಗಳಿಸಿಕೊಳ್ಳಲು ಅವಕಾಶ ಪಡೆದದ್ದನ್ನು ನಾವು ಅಲ್ಲಿ ಕಾಣಬಹುದು.

ಭಕ್ತಿಪಂಥದೊಳಗಿನ ಪ್ರತಿಯೊಂದು ವಿವರದೊಳಗೂ ಕೂಡ ಚರಿತ್ರೆಯ ಪಾತ್ರವನ್ನು ನೋಡುವುದಕ್ಕೆ ನಮಗೆ ಅವಕಾಶ ಇದೆ. ಅದಕ್ಕಾಗಿ ಆಗಿನ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಪರಿಶೀಲನೆ ಮಾಡಬೇಕು. ಆಗ ಪ್ರತಿಯೊಂದು ಪಂಥದ ಯಥಾರ್ಥತೆ ಏನು ಅನ್ನುವುದರ ಗ್ರಹಿಕೆ ನಮಗೆ ಲಭ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ಬಂಜಗೆರೆ ಜಯಪ್ರಕಾಶ

contributor

Similar News

ಭಾವ - ವಿಕಲ್ಪ
ಕಥೆಗಾರ