ಕಲ್ಯಾಣ ಕರ್ನಾಟಕ | ಸೌಹಾರ್ದ ಪರಂಪರೆ-ಸಾಮರಸ್ಯದ ಬದುಕು

Update: 2024-01-18 09:09 GMT

ಡಾ. ರಾಜಶೇಖರ ಹತಗುಂದಿಯವರು ಕನ್ನಡದ ಸಾಹಿತಿ ಮತ್ತು ಸಾಮಾಜಿಕ ಕಾರ್ಯಕರ್ತರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಗೆ ಪಾತ್ರರಾಗಿದ್ದು. ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

‘ಬುದ್ಧನ ನಾಡಿನಲ್ಲಿ’, ‘ಕಾಳ ಬೆಳುದಿಂಗಳ ಸಿರಿ’, ‘ಇನ್ ದಿ ಲ್ಯಾಂಡ್ ಆಫ್ ಬುದ್ಧ’, ‘ಆಯ್ದ ಕತೆಗಳು (ಸಂಪಾದಿತ ಕೃತಿ) ಇವರ ಪ್ರಮುಖ ಕೃತಿಗಳು. ಇವರಿಗೆ ೨೦೧೪ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಗೌರವ ಪ್ರಶಸ್ತಿ ದೊರಕಿದೆ. ಮಡಿಕೇರಿಯಲ್ಲಿ ನಡೆದ ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಡು-ನುಡಿ ಸೇವೆಗಾಗಿ ಗೌರವ ಸನ್ಮಾನ ವನ್ನು ತನ್ನದಾಗಿಸಿಕೊಂಡಿದ್ದಾರೆ. ತಮ್ಮ ರಾಜಕೀಯ ವಿಶ್ಲೇಷನಾತ್ಮಕ ಅಂಕಣಗಳಿಂದ ಇವರು ನಾಡಿನಾದ್ಯಂತ ಚಿರಪರಿಚಿತರು.

ಸ್ವಾತಂತ್ರ್ಯ ಪೂರ್ವದಲ್ಲಿ ಹೈದ್ರಾಬಾದ್ನ ನಿಜಾಮ್ ರಾಜ್ಯದ ಭಾಗವಾಗಿದ್ದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿವೆ. ಆದರೆ ಸಾಂಸ್ಕೃತಿಕವಾಗಿ ಸಮೃದ್ಧವಾಗಿವೆ. ಶರಣರು ಸಂತರು ಸೂಫಿಗಳು ನಡೆದಾಡಿದ ಈ ಜಿಲ್ಲೆಗಳಲ್ಲಿ ಸೌಹಾರ್ದ ಪರಂಪರೆ ಹಾಸುಹೊಕ್ಕಾಗಿದೆ. ಸಾಮರಸ್ಯದ ಬದುಕು ಸಮುದಾಯಗಳ ಜೀವದುಸಿರಾಗಿದೆ. ರಾಜಕೀಯ ಕಾರಣಕ್ಕೆ ಈ ಸೌಹಾರ್ದದ ಎಳೆಗಳನ್ನು, ಸಾಮರಸ್ಯದ ನೇಯ್ಗೆಯನ್ನು ವಿರೂಪಗೊಳಿಸುವ ಪ್ರಯತ್ನಗಳು ನಿರಂತರವಾಗಿ ನಡೆದಿವೆ.

ಈ ಭಾಗದಲ್ಲಿ ಸೌಹಾರ್ದ ಪರಂಪರೆ ಎಷ್ಟೊಂದು ಆಳವಾಗಿ ಬೇರು ಬಿಟ್ಟಿದೆಯೆಂದರೆ ಸಾಮರಸ್ಯದ ಬದುಕೆಂಬುದು ಸಮುದಾಯಗಳ ಜೀವನಕ್ರಮದ ‘ಲಯ’ ಆಗಿಬಿಟ್ಟಿದೆ. ಹನ್ನೆರಡನೇ ಶತಮಾನದ ಬಸವಾದಿ ಶರಣರ ಸಾಮಾಜಿಕ, ಧಾರ್ಮಿಕ ಕ್ರಾಂತಿಯ ಆತ್ಮದ ಭಾವ ಈ ಹೊತ್ತಿಗೂ ಜನಸಮುದಾಯಗಳ ಪ್ರಜ್ಞೆಯಲ್ಲಿ ಕಾವು ಪಡೆಯುತ್ತಲೇ ಇದೆ. ವಚನ ಚಳವಳಿಯ ಒಟ್ಟಾಶಯದ ನಂತರ ಬಂದ ತತ್ವಪದಕಾರರು, ಸೂಫಿಗಳ ಸಾಹಿತ್ಯ ಮತ್ತು ಬದುಕಿನ ಮೂಲಕ ನಮ್ಮ ಕಾಲದವರೆಗೆ ಪ್ರವಹಿಸುತ್ತಲಿದೆ. ಆ ಪ್ರಜ್ಞಾ ಪ್ರವಾಹ ಈ ಹೊತ್ತಿಗೂ ನಡೆಯುವ ಜಾತ್ರೆ-ಉರೂಸ್ಗಳಲ್ಲಿ ನಳನಳಿಸುತ್ತಿರುವುದನ್ನು ಎಲ್ಲ ಸಮುದಾಯಗಳ ಕ್ರಿಯಾಶೀಲ ಭಾಗವಹಿಸುವಿಕೆ ಮೂಲಕ ಕಂಡುಕೊಳ್ಳಬಹುದಾಗಿದೆ. ಇದೊಂದು ನಮ್ಮ ಕಾಲದ ಸಾಮಾಜಿಕ ಪವಾಡದಂತೆ ಗೋಚರಿಸುತ್ತದೆ.


 



ಕಲ್ಯಾಣ ಕರ್ನಾಟಕದ ಬಹುಪಾಲು ಸಣ್ಣಪುಟ್ಟ ಮಠಮಾನ್ಯಗಳಲ್ಲಿ ಪ್ರತಿ ತಿಂಗಳು ಭಜನೆಗಳು ನಡೆಯುವುದು ವಾಡಿಕೆ. ಆ ಭಜನಾ ಕಾರ್ಯಕ್ರಮದಲ್ಲಿ ಎಲ್ಲ ಸಮುದಾಯದವರು ಭಾಗವಹಿಸಿರುತ್ತಾರೆ. ಕಡಕೋಳ ಮಡಿವಾಳಪ್ಪ, ಖೈನೂರು ಕೃಷ್ಣಪ್ಪ,ಸೇರಿದಂತೆ ಚೆನ್ನೂರು ಜಲಾಲ್ ಸಾಬ್ ಮುಂತಾದವರ ತತ್ವಪದಗಳನ್ನೇ ಭಜನಾ ಹಾಡುಗಳಾಗಿ ಹಾಡುತ್ತಾರೆ. ಆ ತತ್ವಪದಗಳು ಒಣ ವೇದಾಂತದ, ಹುಸಿ ಆದ್ಯಾತ್ಮದ ತತ್ವ ಭೋಧಿಸುವುದಿಲ್ಲ. ಸಾಮಾಜಿಕ ವಾಸ್ತವದ ನಿಗಿನಿಗಿ ಕೆಂಡದಂಥ ವಿಚಾರ ಹೇಳುತ್ತವೆ. ಜಾತಿ ಮತ್ತು ಹೆಣ್ಣು ಗಂಡಿನ ನಡುವಿನ ಅಸಮಾನತೆ ವಿರೋಧಿಸುವ ತತ್ವಪದಗಳು ಸೌಹಾರ್ದ ಪರಂಪರೆಯ ಮುಂದುವರಿಕೆಯಂತಿವೆ. ಸಾಮರಸ್ಯದ ಬದುಕಿನ ಅಗತ್ಯತೆಯನ್ನು ಮನವರಿಕೆ ಮಾಡಿಕೊಡುತ್ತವೆ. ಆ ಭಜನಾ ಮಂಡಳಿಯ ಹಾಡುಗಳನ್ನು ಕೇಳಿದವರು ಕೂಡಿ ಬಾಳುವ ಪಾಠವನ್ನು ಅಂತರ್ಗತ ಮಾಡಿಕೊಂಡೆ ಹೋಗುತ್ತಾರೆ. ಸೂಫಿ ಗಾಯನವೂ ದರ್ಗಾಗಳಲ್ಲಿ ನಿರಂತರ ನಡೆಯುತ್ತಿರುತ್ತದೆ. ತತ್ವಪದಗಳ ಮತ್ತು ಸೂಫಿ ಹಾಡುಗಳ ತತ್ವ ಒಂದೇ ಅಭಿವ್ಯಕ್ತಿ ಕ್ರಮ ಬೇರೆ. ಭಾವವೊಂದೇ ಅಭಿವ್ಯಕ್ತಿಗಾಗಿ ಬಳಕೆಯಾದ ಭಾಷೆ ಬೇರೆ. ಇದು ಕಲ್ಯಾಣ ಕರ್ನಾಟದ ಪ್ರತಿ ಹಳ್ಳಿಗಳಲ್ಲಿ ನಿರಂತರವಾಗಿ ನಡೆಯುವ ಸಂಗೀತ ಸಾಹಿತ್ಯ ಮತ್ತು ವಿಚಾರಗಳ ಸಂಭ್ರಮ..

ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಶರಣರ ಮತ್ತು ಸೂಫಿ ಸಂತರ ಹೆಸರಲ್ಲಿ ಪ್ರತಿ ವರ್ಷಕ್ಕೊಮ್ಮೆ ಅಥವಾ ವರ್ಷದಲ್ಲಿ ಎರಡು ಬಾರಿ ಜಾತ್ರೆ-ಉರೂಸ್ ಗಳು ಜರುಗುತ್ತವೆ..ಈ ಜಾತ್ರೆ -ಉರೂಸ್ ಗಳಿಗೆ ಸರಕಾರದ ಅನುಧಾನ ದೊರೆಯುವುದಿಲ್ಲ. ಯಾವ ಭಕ್ತಾದಿಗಳಿಗೂ ಆವ್ಹಾನ ಪತ್ರ ಕಳುಹಿಸುವುದಿಲ್ಲ. ಆದರೆ ಶರಣರ ಜಾತ್ರೆಗಳಿಗೆ ಎಲ್ಲ ಸಮುದಾಯದವರು:ಮುಸ್ಲಿಮರು ಸೇರಿದಂತೆ ಲಕ್ಷಾಂತರ ಭಕ್ತರು ಆಗಿಮಿಸುತ್ತಾರೆ. ಶ್ರದ್ದೆ ಭಕ್ತಿ ಮತ್ತು ಸಂಭ್ರಮದೊಂದಿಗೆ ಕುಟುಂಬ ಸಮೇತ ಭಾಗವಹಿಸುತ್ತಾರೆ. ಶರಣರ ಗದ್ದುಗೆಯ ದರ್ಶನ ಪಡೆದುಕೊಂಡು ಧನ್ಯತಾ ಭಾವ ಅನುಭವಿಸುತ್ತಾರೆ. ಯಾವ ಟಿ.ವಿ. ಚಾನಲ್ ಗಳೂ ಇದನ್ನು ದೊಡ್ಡದಾಗಿ ಬಿತ್ತರಿಸುವುದಿಲ್ಲ. ಆ ಜನ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

ಕಲಬುರಗಿ ನಗರದ ಹಝ್ರತ್ ಖ್ವಾಜಾ ಬಂದೇನವಾಜ್ ದರ್ಗಾದಲ್ಲಿ ಪ್ರತಿವರ್ಷ ಅದ್ದೂರಿ ಪ್ರಮಾಣದಲ್ಲಿ ಉರೂಸ್ ಜರುಗುತ್ತದೆ. ಆ ಉರೂಸ್ ತಿಂಗಳಾನುಗಟ್ಟಲೆ ನಡೆಯುತ್ತದೆ. ಕರ್ನಾಟಕದ ಎಲ್ಲ ಸಮುದಾಯಗಳ ಭಕ್ತರು ಮಾತ್ರವಲ್ಲ :ವಿಶೇಷವಾಗಿ ಉತ್ತರ ಭಾರತದ ಆಸಾಂಖ್ಯಾತ ಜನ ಪಾಲ್ಗೊಳ್ಳುತ್ತಾರೆ. ಈ ಉರೂಸ್ ಆರಂಭವಾಗಬೇಕೆಂದರೆ: ಕಲಬುರಗಿಯ ಪ್ರಖ್ಯಾತ ಶರಣ, ಶರಣಬಸವೇಶ್ವರ ಅವರ ಸಂಸ್ಥಾನದಿಂದ ಗಂಧ ಬರಬೇಕು. ಅದು ಬಂದು ದರ್ಗಾ ತಲುಪಿದ ಮೇಲೆಯೇ ಉರೂಸ್ಗೆ ಅಧಿಕೃತವಾಗಿ ಚಾಲನೆ ದೊರೆಯುತ್ತದೆ. ಇದು ನೂರಾರು ವರ್ಷಗಳಿಂದ ಒಂದು ಪದ್ಧತಿಯಾಗಿ ನಡೆದುಕೊಂಡು ಬಂದಿದೆ. ಹಝ್ರತ್ ಖ್ವಾಜಾ ಬಂದೇನವಾಜ್ ಅವರ ಈ ಉರೂಸ್ ನಲ್ಲಿ ಎಲ್ಲ ಜಾತಿ ಜನವರ್ಗಗಳ ಅಪಾರ ಸಂಖ್ಯೆಯ ಹಿಂದೂಗಳು ತಮ್ಮ ಮನೆಯ ಹಬ್ಬವೆಂದೇ ಭಾವಿಸಿ ಅತ್ಯುತ್ಸಾಹದಿಂದ ಭಾಗವಹಿಸುತ್ತಾರೆ. ಅದೆಷ್ಟೋ ಹಿಂದುಗಳಿಗೆ ಹಝ್ರತ್ ಖ್ವಾಜಾ ಬಂದೇನವಾಜರು ಮನೆಯ ದೇವರು. ಪ್ರತಿವರ್ಷ ಉರೂಸ್ ಗೆ ಬಂದು ಹರಕೆ ತೀರಿಸುವುದು ಅವರ ಕುಟುಂಬದ ಕರ್ತವ್ಯ ಆಗಿರುತ್ತದೆ.ಹಿಂದೂ ಮುಸ್ಲಿಮರು ಭೇದ ಭಾವ ಎಣಿಸದೆ ಒಂದಾಗಿ ಉರೂಸ್ ನಲ್ಲಿ ಸಂಭ್ರಮಿಸುತ್ತಾರೆ.

ಕಲಬುರಗಿ ನಗರದಲ್ಲಿ ಅರಳಗುಂಡಗಿಯ ಶರಣ ಶ್ರೀ ಶರಣಬಸವೇಶ್ವರರ ದೇವಸ್ಥಾನ ಇದೆ. ಪ್ರತಿವರ್ಷ ಅದ್ದೂರಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಜಾತ್ರೆಯಲ್ಲಿ ರಥೋತ್ಸವ ಮುಖ್ಯ ಸಂಗತಿ. ಶರಣಬಸವೇಶ್ವರರ ರಥ ಎಳೆಯಲು ಚಾಲನೆ ಸಿಗಬೇಕೆಂದರೆ ಹಝ್ರತ್ ಖ್ವಾಜಾ ಬಂದೇನವಾಜ್ ದರ್ಗಾದಿಂದ ‘ಗಂಧ’ ಮೆರವಣಿಗೆಯಲ್ಲಿ ದೇವಸ್ಥಾನದವರೆಗೆ ಬರಬೇಕು. ಗಂಧ ಬಂದು ತಲುಪಿದ ಮೇಲೇಯೇ ರಥ ಎಳೆಯುತ್ತಾರೆ. ಕಲಬುರಗಿ ಶರಣಬಸವೇಶ್ವರ ಜಾತ್ರೆಯಲ್ಲಿ ಕಲ್ಯಾಣ ಕರ್ನಾಟಕದಿಂದ ಮಾತ್ರವಲ್ಲ ದೇಶದ ಎಲ್ಲ ರಾಜ್ಯಗಳಿಂದ ಭಕ್ತಾದಿಗಳು ಅತ್ಯಂತ ಸಂಭ್ರಮದಿಂದ ಭಾಗವಹಿಸಿರುತ್ತಾರೆ. ಇಲ್ಲಿ ಜಾತಿ ಭೇದವಿಲ್ಲ.ಮತ ಪಂಥಗಳ ಮೇಲಾಟವಿಲ್ಲ. ನೀವು ನಂಬಲಿಕ್ಕಿಲ್ಲ ಅಪಾರ ಸಂಖ್ಯೆಯ ಮುಸ್ಲಿಮ್ ಸಮುದಾಯ ಈ ಜಾತ್ರೆಯಲ್ಲಿ ಸಂಭ್ರಮದಿಂದ ಭಾಗವಹಿಸಿರುತ್ತಾರೆ. ಈ ಜಾತ್ರೆಯೂ ತಿಂಗಳಾನುಗಟ್ಟಲೆ ನಡೆಯುತ್ತದೆ. ಎಲ್ಲೆಡೆಯಿಂದ ಭಕ್ತರು ಬಂದು ಹೋಗುತ್ತಿರುತ್ತಾರೆ.

ಸುರಪುರ ತಾಲೂಕಿನ ತಿಂತಿಣಿ ಮೌನೇಶ್ವರ್ ಜಾತ್ರೆಯಲ್ಲೂ ಹಿಂದೂ ಮುಸ್ಲಿಮ್ ಸಮುದಾಯಗಳು ಒಟ್ಟಾಗಿ ಸಂಭ್ರಮದಿಂದ ಭಾಗವಹಿಸುತ್ತಾರೆ. ಲಕ್ಷ ಲಕ್ಷ ಭಕ್ತಾದಿಗಳು ಪಾಲ್ಗೊಂಡಿರುತ್ತಾರೆ. ಇಲ್ಲಿ,’‘ಏಕ್ ಲಾಕ್ ಪಾಂಚೋ ಫೈಗಂಬರ್..’-ಎಂಬ ಘೋಷಣೆ ಕೂಗುತ್ತಾರೆ. ಕಲಬುರಗಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಶಿವಲಿಂಗೇಶ್ವರ ದೇವಸ್ಥಾನ ಇದೆ. ಶಿವಲಿಂಗೇಶ್ವರರು ಜನಸಾಮಾನ್ಯರ ನಡುವೆ ಇದ್ದ ಸರಳ ಸಜ್ಜನಿಕೆಯ ಸಂತರು. ಇವರ ಭೇಟಿಗೆ ಬಹಮನಿ ಸುಲ್ತಾನರ ಆಸ್ಥಾನದ ಕವಿ, ಸಂತ, ರಾಯಭಾರಿ ಹಝ್ರತ್ ಖ್ವಾಜಾ ಬಂದೇನವಾಜರು ಬರುತ್ತಿರುತ್ತಾರೆ. ಆ ಹೊತ್ತಿನಲ್ಲಿ ಶಿವಲಿಂಗೇಶ್ವರರು ಒಂದು ಕಟ್ಟೆ ಮೇಲೆ ಕೂತು ತಮ್ಮ ಭಕ್ತರೊಂದಿಗೆ ಸಂವಾದ ನಡೆಸುತ್ತಿರುತ್ತಾರೆ. ಬಂದೇನವಾಜ್ ರು ಬರುತ್ತಿದ್ದಾರೆ ಎಂಬ ಸುದ್ದಿ ಕೇಳಿದ ಕೂಡಲೇ ಕೂತ ಕಟ್ಟೆಗೆ ಚಲಿಸಲು ಸೂಚಿಸುತ್ತಾರೆ. ಅವರು ಕೂತ ಕಟ್ಟೆ ಬಂದೇನವಾಜ್ ಅವರು ಬರುವತ್ತ ಸಾಗುತ್ತದೆ. ಹುಲಿ ಮೇಲೆ ಬರುತ್ತಿದ್ದ ಬಂದೇನವಾಜ್ ಅವರನ್ನು ಎದುರುಗೊಳ್ಳುವ, ಸ್ವಾಗತಿಸುವ ಪರಿ ಇದು. ಈ ಮಿಥ್ ನ್ನು ಅವರವರ ಭಾವಕ್ಕೆ ಹೇಗೆ ಬೇಕಾದರೂ ಅರ್ಥ ಮಾಡಿಕೊಳ್ಳಬಹುದು. ಆದರೆ ಅವರ ಸ್ನೇಹ ಭಾವದ ತೀವ್ರತೆ, ಭೇಟಿಯಾಗುವ ಹಂಬಲ ಎದುರುಗೊಳ್ಳುವ ಕ್ರಮದಲ್ಲೇ ಗುರುತಿಸಬಹುದು. ಸಾವಳಗಿಯಲ್ಲಿ ಪ್ರತಿವರ್ಷ ಶಿವಲಿಂಗೇಶ್ವರರ ರಥೋತ್ಸವ ಜರುಗುತ್ತದೆ. ರಥೋತ್ಸವಕ್ಕೆ ಚಾಲನೆ ದೊರೆಯುವುದೇ ಮುಸ್ಲಿಮ್ ದರ್ಗಾದಿಂದ ಬರುವ ಗಂಧದ ಮೂಲಕ. ಈ ಜಾತ್ರೆಯಲ್ಲೂ ಹಿಂದೂ ಮುಸ್ಲಿಮರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿರುತ್ತಾರೆ. ಜಾತಿ ಭೇದವಿಲ್ಲದೆ ನಡೆಯುವ ಈ ಜಾತ್ರೆ ಭಾವೈಕ್ಯತೆಯ ಸಂಕೇತದಂತಿದೆ. ಕಲಬುರಗಿಯ ಖ್ವಾಜಾ ಬಂದೇನವಾಜರು ಶಿವಲಿಂಗೇಶ್ವರರಿಗಾಗಿ ಮಾಂಸಹಾರದ ಭಕ್ಷ್ಯಗಳನ್ನು ಕಳುಹಿಸಿಕೊಟ್ಟಿರುತ್ತಾರೆ. ಆ ಭಕ್ಷ್ಯ ಶಿವಲಿಂಗೇಶ್ವರರ ಎದುರು ಸಸ್ಯಾಹಾರವಾಗುತ್ತದೆ. ಈಗಲೂ ಮುಸ್ಲಿಮ್ ಸಮುದಾಯ ಖೀಮಾದಂತಿರುವ ಗೋದಿ ಹಿಟ್ಟಿನಿಂದ ಮಾಡಿರುವ ಮಾಲದಿಯನ್ನು ಶಿವಲಿಂಗೇಶ್ವರರಿಗೆ ನೈವೇದ್ಯಯಾಗಿ ಅರ್ಪಿಸುತ್ತಾರೆ. ಆ ಇಬ್ಬರೂ ಸಂತರ ನಡುವೆ ಆಹಾರ ಪದ್ಧತಿ ಒಂದು ಸಮಸ್ಯೆ ಎನಿಸಲೇ ಇಲ್ಲ.ಸಾವಳಗಿ ಮತ್ತು ಸುತ್ತಮುತ್ತಲಿನ ನೂರಾರು ಹಳ್ಳಿಯ ಮುಸ್ಲಿಮರು ಹಿಂದೂಗಳು ಶಿವಲಿಂಗೇಶ್ವರರನ್ನು ಆರಾಧ್ಯ ದೈವವೆಂದು ಭಾವಿಸಿ ನಡೆದುಕೊಳ್ಳುತ್ತಾರೆ. ಅಲ್ಲೆಲ್ಲಾ ಹಿಂದೂ ಮುಸ್ಲಿಮ್ ಭೇಧ ಭಾವ ಕಾಣಿಸಿಕೊಂಡ ಸಣ್ಣ ನಿದರ್ಶನ ದೊರೆಯುವುದಿಲ್ಲ.

ಕಲಬುರಗಿ ಜಿಲ್ಲೆಯ ಆಳಂದ ಹಝ್ರತ್ ಶೇಖ್ ಅಲ್ಲಾವುದ್ದಿನ ಲಾಡಲೇ ಮಷ್ಯಾಕ ದರ್ಗಾದಿಂದಾಗಿ ಹೆಸರುವಾಸಿಯಾಗಿದೆ. ಇದು ಸೂಫಿ ಪರಂಪರೆಯ ಒಂದು ಶಾಖೆಯಾಗಿರುವ ಚಿಸ್ತಿ ಗುರು ಸಂಪ್ರದಾಯದ ಪ್ರಭಾವಶಾಲಿ ದರ್ಗಾ. ಅಜ್ಮೀರ್ಗೆ ಹೋಗಲು ಸಾಧ್ಯವಾಗದ ಎಲ್ಲರೂ ಇಲ್ಲೇ ದರ್ಶನ ಪಡೆಯುತ್ತಾರೆ. ಈ ದರ್ಗಾಕ್ಕೆ ಮುಸ್ಲಿಮರಿಗಿಂತಲೂ ಹಿಂದೂಗಳು ಹೆಚ್ಚು ನಡೆದುಕೊಳ್ಳುತ್ತಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯವರು ಹಿಂದುತ್ವದ ರಾಜಕೀಯದ ಭಾಗವಾಗಿ ಈ ದರ್ಗಾದಲ್ಲಿ ವಿವಾದ ಸೃಷ್ಟಿಸಿದರು. ಜನಸಾಮಾನ್ಯರು ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ೨೦೨೩ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹೀನಾಯವಾಗಿ ಸೋತರು. ಕಾಂಗ್ರೆಸ್ ಅಭ್ಯರ್ಥಿ ಬಿ.ರ್. ಪಾಟೀಲ್ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಇಲ್ಲಿ ನೀಡಿದ ನಿದರ್ಶನಗಳು ಕೇವಲ ಸ್ಯಾಂಪಲ್ ಅಷ್ಟೆ. ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಹಳ್ಳಿ ಹಳ್ಳಿಗಳಲ್ಲಿ ಜನತೆ ದೇವಸ್ಥಾನ- ದರ್ಗಾಗಳಿಗೆ ಭಕ್ತಿ ಭಾವದಿಂದ ನಡೆದುಕೊಳ್ಳುತ್ತಾರೆ.


 



ಕಲ್ಯಾಣ ಕರ್ನಾಟಕದ ಬಹುಪಾಲು ಹಳ್ಳಿಗಳು ಮೊಹರಂ ಹಬ್ಬವನ್ನು ಆಚರಿಸುತ್ತಾರೆ. ಮುಸ್ಲಿಮ್ ಸಮುದಾಯದವರು ಇಲ್ಲದ ಊರುಗಳಲ್ಲಿ ಮೊಹರಂ ಆಚರಣೆ ನಡೆಯುತ್ತದೆ. ಮೊಹರಂ ಆಚರಣೆ ಬದುಕಿನ ಭಾಗವಾಗಿದೆ. ಕೂಗು ಮಾರಿ ಶಾಸಕ ವಿಜಯಪುರದ ಬಸನಗೌಡ ಪಾಟೀಲ್ ಯತ್ನಾಳ್ ಕುಟುಂಬವೂ ದರ್ಗಾಗಳಿಗೆ ಪದ್ಧತಿಯಂತೆ ನಡೆದುಕೊಳ್ಳುತ್ತದೆ. ಕಲ್ಯಾಣ ಕರ್ನಾಟಕದ ಎಲ್ಲ ಜನಸಮುದಾಯದವರು: ಹಿಂದುಗಳಾಗಿದ್ದಾರೆ ದರ್ಗಾಕ್ಕೆ ಹೋಗುವುದು. ಮುಸ್ಲಿಮರು ಶರಣರ ಸಂತರ ಜಾತ್ರೆಯಲ್ಲಿ ಭಾಗವಹಿಸುವುದು ಸರ್ವೆಸಾಮಾನ್ಯ. ಅದೊಂದು ವಿಶೇಷ ವಿದ್ಯಮಾನವೆಂದು ಯಾರೂ ಭಾವಿಸುವುದಿಲ್ಲ.. ಅದು ಅವರಿಗೆ ಉಸಿರಾಡುವಷ್ಟೇ ಸಹಜ ಪ್ರಕ್ರಿಯೆ. ಈ ಭಾಗದಲ್ಲಿ ಹೊಸದಾಗಿ ಮದುವೆಯಾದವರು ಎಲ್ಲ ದೇವಸ್ಥಾನಗಳಿಗೆ ಹೋಗಿ ದರ್ಶನ ಪಡೆದಂತೆ ಎಲ್ಲ ದರ್ಗಾಗಳಿಗೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಬರುತ್ತಾರೆ.

ಕಲ್ಯಾಣ ಕರ್ನಾಟಕದ ಬಿಜೆಪಿ ರಾಜಕಾರಣಿಗಳು ಸಾಮಾನ್ಯವಾಗಿ ಹಿಂದೂ ಮುಸ್ಲಿಮ್ ಭೇದಭಾವದ ಚರ್ಚೆಯೇ ಮಾಡುವುದಿಲ್ಲ. ಸಂಸದ ಭಗವಂತ ಖುಬಾ, ಶಾಸಕರಾದ ಶಶೀಲ್ ನಮೋಶಿ, ಬಸವರಾಜ ಮತ್ತಿಮೂಡ, ಮಾಜಿ ಮಂತ್ರಿಗಳಾದ ಆನಂದ್ ಸಿಂಗ್, ಬಿ. ಶ್ರೀರಾಮುಲು, ಕರುಣಾಕರರೆಡ್ಡಿ, ರಾಜುಗೌಡ, ಶಿವನಗೌಡ ನಾಯಕ ಮತೀಯ ರಾಜಕಾರಣದ ಗೋಜಿಗೆ ಹೋಗುವುದಿಲ್ಲ. ಕಲ್ಯಾಣ ಕರ್ನಾಟಕದ ಬಹುತೇಕ ಬಿಜೆಪಿ ರಾಜಕಾರಣಿಗಳು ಮುಸ್ಲಿಮ್ ಮತಗಳನ್ನು ಪಡೆದೇ ಗೆಲ್ಲುತ್ತಾರೆ.

ಕಲ್ಯಾಣ ಕರ್ನಾಟದ ದೈವಗಳು, ಜಾತ್ರೆ-ಉರೂಸ್ಗಳು ಸಮುದಾಯಗಳ ನಡುವಿನ ಸಂಬಂಧದ ನೇಯ್ಗೆಯನ್ನು ಗಟ್ಟಿಗೊಳಿಸುತ್ತಲೇ ಇವೆ. ಆ ಭಾಗದ ಜನತೆ ಈ ಹೊತ್ತಿಗೂ ಸಂತರ, ಶರಣರ, ಸೂಫಿಗಳ ಸೌಹಾರ್ದ ಪರಂಪರೆಯನ್ನು ಶ್ರದ್ಧಾ ಭಕ್ತಿಯಿಂದ ಮುಂದುವರಿಸುತ್ತಿದ್ದಾರೆ. ಮತೀಯ ಗಲಭೆಗೆ, ಸಂಘರ್ಷಕ್ಕೆ ಆಸ್ಪದ ಕೊಡದಂತೆ ಸಾಮರಸ್ಯದ ಬದುಕು ನಡೆಸುತ್ತಿದ್ದಾರೆ. ಸಂತರು, ಶರಣರು, ಸೂಫಿಗಳಿಗೆ ಶರಣು. ಸೌಹಾರ್ದ ಪರಂಪರೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿರುವ ಜಾತ್ರೆ, ಉರೂಸ್ ಮತ್ತು ಅಲ್ಲಿ ಭಾಗವಹಿಸುವ ಸಮಸ್ತ ಭಕ್ತಾದಿಗಳ ನಿಶ್ಕಲ್ಮಷ ಭಕ್ತಿಭಾವಕ್ಕೆ ಶರಣು.

Writer - ವಾರ್ತಾಭಾರತಿ

contributor

Editor - Ismail

contributor

Byline - ಡಾ. ರಾಜಶೇಖರ ಹತಗುಂದಿ

ಹಿರಿಯ ಬರಹಗಾರ, ಪತ್ರಕರ್ತ

Similar News

ಭಾವ - ವಿಕಲ್ಪ
ಕಥೆಗಾರ