ಕೊರಗ ಬುಡಕಟ್ಟು ಜನರ ಶಿಕ್ಷಣದ ಕೊರಗು!

Update: 2024-01-06 06:17 GMT

ಅತ್ಯಂತ ಹಿಂದುಳಿತ ಸಮುದಾಯವೆಂದು ಗುರುತಿಸಲ್ಪಟ್ಟಿರುವ ಕೊರಗ ಬುಡಕಟ್ಟಿನ ಕಲಾವತಿ ಅವರು ಆ ಸಮುದಾಯದ ಮೊತ್ತ ಮೊದಲ ಡಾಕ್ಟರೇಟ್ ಪದವಿ ಪಡೆದ ಮಹಿಳೆ. ‘ಕೊರಗ ಆದಿಮ ಸಮಾಜದ ಸಮಾಜೋ ಸಾಂಸ್ಕೃತಿಕ ಅಧ್ಯಯನ’ಎಂಬ ವಿಷಯದ ಕುರಿತಂತೆ ಬೃಹತ್ ಪ್ರಬಂಧವನ್ನು ಮಂಡಿಸಿದ್ದಾರೆ.

ನಮಗೆಲ್ಲರಿಗೂ ಗೊತ್ತಿರುವ ಹಾಗೆ ಭಾರತದಲ್ಲಿ ಸಾವಿರಾರು ವರ್ಷಗಳಿಂದ ಶಿಕ್ಷಣವು ಕೆಲವೇ ಕೆಲವರಿಗೆ ಮೀಸಲಾಗಿತ್ತು. ಬಹುತೇಕರಿಗೆ ನಿಷಿದ್ಧವಾಗಿತ್ತು. ಅಂತಹ ದೇಶದಲ್ಲಿ ಹುಟ್ಟಿದ ವಿದ್ಯಾರ್ಥಿಗಳು ನಾವು. ಇಂತಹ ಶಿಕ್ಷಣ ನಿಷಿದ್ಧ ದೇಶದಲ್ಲಿ ಬುದ್ಧ, ಬಸವಣ್ಣ, ಕನಕದಾಸರು ಹಾಗೂ ಇನ್ನಿತರರು ಹುಟ್ಟಿ ತಮ್ಮದೇ ಆದ ರೀತಿಯ ಅಧ್ಯಾತ್ಮದ ಶಿಕ್ಷಣ ನೀಡಿದರು. ಅವರದೇ ಆದ ಹೋರಾಟವನ್ನು ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ನಡೆಸಿದರು. ಸಾವಿತ್ರಿ ಬಾಯಿ ಫುಲೆ, ಜ್ಯೋತಿ ಬಾಫುಲೆ ಹೆಣ್ಣುಮಕ್ಕಳಿಗೆ ಮೊದಲ ಔಪಚಾರಿಕ ಶಾಲೆ ತೆರೆದರು. ಒಟ್ಟೊಟ್ಟಿಗೆ ಬ್ರಿಟಿಷರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು. ಆಗ ಕೆಲವು ಸಮುದಾಯಗಳು ಶಿಕ್ಷಣವನ್ನು ಪಡೆದರು. ಆದರೆ ಆಗ ಕೊರಗರು ಎಲ್ಲಿದ್ದರೋ ಗೊತ್ತೇ ಇಲ್ಲ. ಆಗಲೂ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಲಿಲ್ಲ. ಕೊರಗರು ಕಾಡಿನಲ್ಲಿಯೇ ಸ್ವಚ್ಛಂದವಾಗಿ ವಿಹರಿಸುತ್ತಾ ತಮ್ಮದೇ ನೆಲ, ತಮ್ಮದೇ ಆದ ಕಾಡು, ತಮ್ಮದೇ ಆದ ನದಿ, ಜ್ಞಾನ, ಕಲೆ, ಸಂಸ್ಕೃತಿ, ಆಚಾರ ವಿಚಾರ ಅಂತ ನೆಮ್ಮದಿಯಿಂದ, ಯಾವುದೇ ಶೋಷಣೆ, ಅಸ್ಪಶ್ಯತೆ, ದಬ್ಬಾಳಿಕೆ ಇಲ್ಲದೇ ಬದುಕುತ್ತಾ ಇದ್ದವರು. ಯಾವಾಗ ಈ ನಾಡಿನ ಸಂಪರ್ಕಕ್ಕೆ ಬಂದರೋ ಅಥವಾ ಸಂಪರ್ಕಕ್ಕೆ ಕರೆತರಲ್ಪಟ್ಟರೋ ಆಗ ಅವರಿಗೆ ಅನಿಸಿರಬೇಕು ‘ನಾಡಲ್ಲವೋ ಇದು ವಿಷದ ಸಮುದ್ರ’ ಎಂದು.

ಕೊರಗರನ್ನು ಈ ಸಮಾಜದ ಕೆಲವು ಮೌಢ್ಯಗಳು ಎಳೆತಂದು, ಅಜಲು ಎಂಬ ಹೀನ ಪದ್ಧತಿಗೆ ದೂಡಿದವೋ ಆಗಿನಿಂದ ಅವರ ಆ ಕಾಡಿನ ವೈಭವದ ನೆಮ್ಮದಿಯ ಜೀವನಕ್ಕೆ ಬೆಂಕಿ ಹಚ್ಚಲ್ಪಟ್ಟಿತು. ತಮ್ಮೆಲ್ಲಾ ಹಕ್ಕುಗಳು ಆಗಿಂದಲೇ ನಾಶವಾಗುತ್ತಾ ಇರುವುದು ಅವರಿಗೆ ಗೊತ್ತಿರಲಿಲ್ಲ. ಆದರೆ ಈ ಮೌಢ್ಯಗಳನ್ನು ಪ್ರತಿಪಾದಿಸುವ ಜನರಿಗೆ ಗೊತ್ತಿತ್ತು. ತಮಗೊದಗುವ ಕೇಡುಗಳಿಂದ ಪಾರಾಗಲು ಅಜಲು ಶಾಸ್ತ್ರವನ್ನು ಮಾಡಿ ಕೊರಗರನ್ನು ಅತಿಥಿ ತರ ಕರೆದು ಗೊತ್ತಾಗದ ಹಾಗೆ ಊಟದಲ್ಲಿ ರೋಗಿಗಳ ಕೂದಲು, ಉಗುರುಗಳನ್ನು ತಿನ್ನಿಸಿಬಿಟ್ಟರೋ ಆಗಿನಿಂದ ಕೊರಗರ ಅವನತಿ ಶುರುವಾಗಿ ಅದು ಇಲ್ಲಿಯತನಕ ಬಂದು ನಿಂತಿದೆ. ಅಂತಹ ಸಮುದಾಯದಲ್ಲಿ ಹುಟ್ಟಿದವಳು ನಾನು. ಕೊರಗರು ಕರ್ನಾಟಕದ ಕರಾವಳಿ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಹಾಗೂ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಾದ್ಯಂತ ನೆಲೆನಿಂತಿದ್ದಾರೆ. 2011ರ ಜನಗಣತಿಯ ಪ್ರಕಾರ ಅವರ ಸಂಖ್ಯೆ ಕರ್ನಾಟಕದಲ್ಲಿ 14,294 ಮತ್ತು ಕೇರಳದಲ್ಲಿ 1,582 ಎಂದು ದಾಖಲಾಗಿದೆ.

ಸಂವಿಧಾನ ಜಾರಿಗೆ ಬಂದು ಶಿಕ್ಷಣಕ್ಕೆ ಎಲ್ಲರೂ ತೆರೆದುಕೊಳ್ಳುವ ಸಂದರ್ಭ ಇದ್ದರೂ ಹಲವಾರು ಸಮುದಾಯಗಳು ಇನ್ನೂ ಅನಕ್ಷರಸ್ಥರಾಗೇ ಉಳಿಯಲು ಕಾರಣವನ್ನು ನೋಡುವುದಾದರೆ ಈ ಸಮಾಜದಲ್ಲಿನ ಜಾತಿ ಪದ್ಧತಿ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಯಾವ ಸಮಾಜವು ಸಾಮಾಜಿಕವಾದ ಒಳಗೊಳ್ಳುವಿಕೆಗೆ ಒಳಗಾಗದೆ ಇಂದಿಗೂ ಸಾಮಾಜಿಕ ಕಳಂಕ, ಬಹಿಷ್ಕಾರಕ್ಕೆ ಒಳಗಾಗುತ್ತಾ ಇದೆಯೋ ಆ ಸಮಾಜವು ಶಿಕ್ಷಣ ಪಡೆಯುವುದು ಎಷ್ಟು ಕಠಿಣವಾದದ್ದು ಮತ್ತು ಅದು ಎದುರಿಸಬೇಕಾದ ಸವಾಲುಗಳೇನು ಎಂಬುವುದು ಅನುಭವಿಸಿದವರಿಗೆ ಮಾತ್ರವೇ ಗೊತ್ತು.

ಎಲ್ಲಾ ಸಮುದಾಯಗಳು ಸಿಎಂ ಹುದ್ದೆಗಾಗಿ, ಮೀಸಲಾತಿಗಾಗಿ ಒತ್ತಾಯಿಸುತ್ತಿದ್ದ ಹೊತ್ತಿನಲ್ಲಿ ಕೊರಗ ಸಮುದಾಯ ಪೌಷ್ಟಿಕ ಆಹಾರಕ್ಕಾಗಿ ಬೀದಿ ಹೋರಾಟ ಮಾಡುತ್ತಿತ್ತು. ರೈತರು ಬೆಂಬಲ ಬೆಲೆಗೆ ಹೋರಾಡುತ್ತಿರುವಾಗ ಕೊರಗರು ಉಳಲು ತುಂಡು ಭೂಮಿಗಾಗಿ ಹೋರಾಡಿ ಜೈಲು ಸೇರುತ್ತಿದ್ದರು. ಆಗ ಜೈಲು ಸೇರಿದವಳಲ್ಲಿ ನಾನೂ ಸಹ. ಮಂಡ್ಯ, ಮೈಸೂರು ಭಾಗದಲ್ಲಿ ಕಾವೇರಿ ನದಿಗಾಗಿ ಹೋರಾಟ ನಡೆಯುವಾಗ ಕೊರಗರು ಪಂಚಾಯತ್ಗೆ ತಮಗೆ ಕುಡಿಯೋ ನೀರು ಕೊಡಿ ಎಂದು ಹೋರಾಡುತ್ತಿದ್ದರು. ಎಲ್ಲರೂ ಆಹಾರದ ಹಕ್ಕಿಗಾಗಿ ಹೋರಾಡುವಾಗ ಕೊರಗರು ಏನೋ ಬೇಟೆಯಾಡಿ ತಿಂದರು ಅಂತ ಜೈಲಿಗೆ ಹಾಕಲ್ಪಟ್ಟಿದ್ದರು. ಈ ತರಹದ ತುಂಬಾ ವೈರುಧ್ಯಗಳನ್ನು ನಾವು ಸಮಾಜದಲ್ಲಿ ಕಾಣಬಹುದು. ವಿವಿಧತೆಯಲ್ಲಿ ಏಕತೆ ಅಂತಾರೆ ಆದರೆ ಇಲ್ಲಿ ಅದರ ಜೊತೆ ಸಮಸ್ಯೆಯಲ್ಲಿಯೂ ಭಿನ್ನತೆ ಎನ್ನುವ ಅರಿವು ಬರಬೇಕು. ಎಲ್ಲಾ ಸಮುದಾಯಗಳಿಗೂ ಸಮಸ್ಯೆ ಇವೆ. ಆದರೆ ಸಮಸ್ಯೆ ಎಲ್ಲವು ಒಂದೇ ತರಹದ್ದಲ್ಲ. ಮೇಲ್ಜಾತಿಯ ಬಡವನ ಬಡತನಕ್ಕೆ ಇರುವ ಕಾರಣ ಬೇರೆ, ಶೂದ್ರ ಜಾತಿಗಿರುವ ಬಡತನಕ್ಕೆ ಕಾರಣ ಬೇರೆ. ದಲಿತ, ಅಸ್ಪೃಶ್ಯ, ಆದಿವಾಸಿ, ಬುಡಕಟ್ಟು, ಆದಿಮ ಬುಡಕಟ್ಟುಗಳ ಬಡತನ ಹಸಿವು, ಅವರು ಅನುಭವಿಸುವ ಶೋಷಣೆ, ದಬ್ಬಾಳಿಕೆ, ಕೊಲೆ, ಹಲ್ಲೆ, ಅತ್ಯಾಚಾರಕ್ಕಿರುವ ಕಾರಣಗಳೇ ಬೇರೆ ಎನ್ನುವ ಅರಿವು ನಮಗಷ್ಟೇ ಅಲ್ಲ ನಮ್ಮನ್ನಾಳುವ ಪ್ರಭುತ್ವಕ್ಕೆ, ಪಕ್ಷಗಳಿಗೆ, ಕಾನೂನು ರಚನಾಕಾರರಿಗೆ ಇರಬೇಕು. ಆ ಪ್ರಜ್ಞೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಇತ್ತು. ಆ ಕಾರಣಕ್ಕೆ ಅವರು ಸಾಮಾಜಿಕ ನ್ಯಾಯದ ತತ್ವದಡಿ ಸಂವಿಧಾನ ರಚಿಸಿ ಕ್ರಾಂತಿ ಮಾಡಿದ್ದು. ಆದರೆ ಅದನ್ನು ಜಾರಿಗೊಳಿಸುವ ಸರಕಾರಗಳಿಗೆ ಆ ಪ್ರಜ್ಞೆಯ ಅರಿವು ಇರದ ಕಾರಣ ಹಲವಾರು ತಳ ಸಮುದಾಯಗಳು ಇಂದಿಗೂ ಪೌಷ್ಟಿಕ ಆಹಾರಕ್ಕಾಗಿ, ತುಂಡು ಜಮೀನಿಗಾಗಿ ಹೋರಾಟ ಮಾಡುತ್ತಾ ಬಂದಿವೆ.

2011ರ ಜನಗಣತಿಯ ಪ್ರಕಾರ ಕೊರಗ ಬುಡಕಟ್ಟಿನ ಸಾಕ್ಷರತೆಯ ದರ ಶೇ.72.7. ನನ್ನ ಅಧ್ಯಯನವು 777 ಸದಸ್ಯರನ್ನು ಒಳಗೊಂಡಿದ್ದು ಇದರಲ್ಲಿ ಶೇ.76.57 ಸಾಕ್ಷರರು ಹಾಗೂ ಶೇ.23.42 ನಿರಕ್ಷರರು ಕಂಡು ಬಂದಿರುತ್ತಾರೆ. ಅದರಲ್ಲಿ ಸಮುದಾಯದ ಶಿಕ್ಷಣ ಮಟ್ಟವು ಪ್ರೌಢ ಹಾಗೂ ಪದವಿ ಪೂರ್ವ ಹಂತಕ್ಕೆ ಮೊಟಕುಗೊಳಿಸಿರುವುದು ಕಂಡು ಬಂದಿರುತ್ತದೆ. ಕೊರಗ ಮಕ್ಕಳು ಶಾಲೆಯಿಂದ ಹೊರಗುಳಿಯಲು ಅನೇಕ ಕಾರಣಗಳಿವೆ. ಕೊರಗ ಮಕ್ಕಳು ಶಾಲಾ ಶಿಕ್ಷಕರನ್ನು ನೋಡಿದರೆ ಭಯಪಡುತ್ತಾರೆ. ಹೊರಗಿನ ಮಕ್ಕಳನ್ನು ನೋಡಿದರೆ ಕೀಳರಿಮೆ ಪಟ್ಟುಕೊಳ್ಳುತ್ತಾರೆ. ಓದೋಕೆ ಸರಕಾರದ ಹಾಸ್ಟೆಲ್ ಇದ್ದರೂ, ಪೌರಕಾರ್ಮಿಕ ತಂದೆ ಕೆಮ್ಮಿ ಕೆಮ್ಮಿ ಸಾಯುವ ಹಂತದಲ್ಲಿರುವಾಗ ತಾಯಿ ಒಬ್ಬಳನ್ನು ಬಿಟ್ಟು ಪರೀಕ್ಷೆಗೆ ಹೋಗದೆ ಮಕ್ಕಳು ಶಾಲೆ ಕಾಲೇಜು ಬಿಡುತ್ತಾರೆ. ‘ಶಿಕ್ಷಣ ಪಡೆದುಕೊಂಡಿರುವ ಮಕ್ಕಳಿದ್ದು ಅವರಿಗೇ ಕೆಲಸ ಸಿಕ್ಕಿಲ್ಲ. ನಮಗೇನು ಸಿಗುತ್ತದೆ. ನಮ್ ಮನೇಲಿ ನಾವೇ ದುಡಿಯಬೇಕು, ತಿನ್ನಬೇಕು, ನಾವಾದ್ರು ಕೂಲಿ ಕೆಲಸ ಮಾಡಿಯೋ, ಕಸ ಗುಡಿಸಿಯೋ, ಚರಂಡಿ ಕ್ಲೀನ್ ಮಾಡಿಯೋ ದುಡಿತೀವಿ. ಈಗ ಶಾಲೆ ಕಾಲೇಜ್ಗಳಿಗೆ ಹೋದರೆ ನಮ್ಮ ಮನೆಯನ್ನು ಯಾರು ನೋಡಿಕೊಳ್ಳುತ್ತಾರೆ?’ ಈ ರೀತಿಯ ಮನಸ್ಥಿತಿಗೆ ಬಂದಿರುತ್ತಾರೆ.

ಬದುಕು ನನ್ನ ಶಿಕ್ಷಣವನ್ನು ಹತ್ತನೇ ಕ್ಲಾಸಿಗೆ ಮುಗಿಸೋತರ ಸವಾಲು ತಂದಿಟ್ಟಿತು, ಸಾಕಿನ್ನು ಓದುವುದಕ್ಕೆ ಆಗಲ್ಲ ಎಂದು ಚಿಕ್ಕ ಕೆಲಸಕ್ಕೆ ಸೇರಿದೆ. ಆನಂತರ ನನ್ನ ಭಾವ ಕುಮಾರ ಕೆಂಜೂರು ಮತ್ತು ದಿನಕರ ಕೆಂಜೂರು, ಅಶೋಕ ಶೆಟ್ಟಿ ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲ್ ಇವರು ನನಗೆ ಶಿಕ್ಷಣದ ಮಹತ್ವ ತಿಳಿಸಿ ಸ್ಫೂರ್ತಿ ತುಂಬಿ ನನ್ನ ಓದು ಮುಂದುವರಿಸಲು ಕಾರಣರಾದರು. ಈಗ ಕೊರಗ ಆದಿಮ ಸಮಾಜದ ಸಮಾಜೋ ಸಾಂಸ್ಕೃತಿಕ ಅಧ್ಯಯನ ಎಂಬ ಪ್ರಬಂಧದಡಿಯಲ್ಲಿ ಕೊರಗ ಸಮುದಾಯದ ಸಾಂಸ್ಕೃತಿಕ ಹಿನ್ನೆಲೆ, ಭವ್ಯ ಪರಂಪರೆಯ ಇತಿಹಾಸ, ಅದರ ಸಮಸ್ಯೆ ಸವಾಲು ಸಾಧ್ಯತೆಗಳ ಬಗ್ಗೆ ಇದರಲ್ಲಿ ನನ್ನ ಅಭಿಪ್ರಾಯ ಮಂಡಿಸಿದ್ದೇನೆ. ಅದಕ್ಕೀಗ ಡಾಕ್ಟರೇಟ್ ಗೌರವ ದೊರತಿರುವುದು ಸಂತಸ ತಂದಿದೆ.

ನನ್ನ ಹೆಸರು ಕಲಾವತಿ, ನನ್ನ ತಂದೆ ದಿ. ಗುಂಬಳ ಕೊರಗ, ತಾಯಿ ಅಕ್ಕು. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕರ್ಜೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಕಡಂಗೋಡು ನನ್ನೂರು. ನನಗೆ ಇಬ್ಬರು ಸಹೋದರಿಯರಿದ್ದಾರೆ. ನಾನು ಪ್ರಾಥಮಿಕ ವಿದ್ಯಾಭ್ಯಾಸವನ್ನು ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಸೂರಾಲು, ಹೈಸ್ಕೂಲ್ ವಿದ್ಯಾಭ್ಯಾಸವನ್ನು ಸರಕಾರಿ ಜೂನಿಯರ್ ಕಾಲೇಜು ಕೊಕ್ಕರ್ಣೆ ಇಲ್ಲಿ ಮುಗಿಸಿರುತ್ತೇನೆ. ನನ್ನ ಹತ್ತನೇ ತರಗತಿಯ ಪರೀಕ್ಷೆ ದಿನದಂದೇ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅಪ್ಪ ತೀರಿಕೊಂಡರು. ಮನೆಯ ಸ್ಥಿತಿ ಸರಿ ಇರದ ಕಾರಣ ನಾನು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುವ ನಿರ್ಧಾರಕ್ಕೆ ಬಂದೆ. ಆದರೆ ಅಕ್ಕ, ಭಾವ, ಅಮ್ಮ, ದಿನಕರ ಕೆಂಜೂರು ಇವರ ಒತ್ತಾಯದ ಮೇರೆಗೆ ಮರುಪರೀಕ್ಷೆಯನ್ನು ಬರೆದು ಪಾಸಾದೆ. ಆದರೆ ಮನೆಯಲ್ಲಿ ತುಂಬಾ ಕಷ್ಟ ಇದ್ದ ಕಾರಣಕ್ಕಾಗಿ ವಿದ್ಯಾಭ್ಯಾಸವನ್ನು ಮುಂದುವರಿಸಲು ಇಷ್ಟ ಇರಲಿಲ್ಲ. ಶಿಕ್ಷಣದಿಂದ ಹೊರಗುಳಿಯುವುದೆಂದೇ ನಿರ್ಧರಿಸಿದ್ದೆ. ಹಾಗಾಗಿ ನಂತರ ಎರಡು ವರ್ಷ ತೆಂಗಿನಕಾಯಿ ಫ್ಯಾಕ್ಟರಿಯಲ್ಲಿ ದುಡಿದೆ. ಇದರ ಮಧ್ಯದಲ್ಲಿ ನನ್ನ ಭಾವ ಕುಮಾರ ಕೆಂಜೂರು, ದಿನಕರ ಕೆಂಜೂರು, ಸಮಗ್ರ ಗ್ರಾಮೀಣ ಆಶ್ರಮದ ಕಾರ್ಯಕರ್ತರಾದ ಅಶೋಕ್ರವರು ಶಿಕ್ಷಣ ಮುಂದುವರಿಸಲು ತುಂಬಾ ಒತ್ತಾಯಿಸಿದರು. ಆಮೇಲೆ 2002ರಲ್ಲಿ ಸೈಂಟ್ ಮೇರಿಸ್ ಶಿರ್ವದಲ್ಲಿ ಪಿಯುಸಿಗೆ ಸೇರ್ಪಡೆಗೊಂಡೆ. ಹಾಸ್ಟೆಲ್ ವ್ಯವಸ್ಥೆಯನ್ನು ಸಮಗ್ರ ಗ್ರಾಮೀಣ ಆಶ್ರಮದಲ್ಲಿ ನೀಡಲಾಯಿತು. 2004 ರಲ್ಲಿ ಪಿಯುಸಿ ಪ್ರಥಮ ದರ್ಜೆಯಲ್ಲಿ ಪಾಸಾದೆ. ನಂತರ ಡಿಎಡ್ಗೆ ಅರ್ಜಿಯನ್ನು ಸಲ್ಲಿಸಿದೆ. ಆದರೆ ಸರಕಾರಿ ಸೀಟು ದೊರೆಯದ ಕಾರಣ ಮತ್ತು ಅದರ ಬಗ್ಗೆ ಹೆಚ್ಚು ಮಾಹಿತಿ ಇಲ್ಲದ ಕಾರಣ ಮತ್ತೆ ಒಂದು ವರ್ಷ ಗೇರು ಬೀಜ ಫ್ಯಾಕ್ಟರಿಯಲ್ಲಿ ಕೆಲಸವನ್ನು ಮಾಡಿದೆ. ನಂತರ ಈ ಹಿಂದೆ ಸಮಗ್ರ ಗ್ರಾಮೀಣ ಆಶ್ರಮದಲ್ಲಿ ಕಾರ್ಯ ನಿರ್ವಹಿಸಿದ ಗೀತಾ ಹಾಗೂ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ಪಳ್ಳಿ ಗೋಕುಲ್ ದಾಸ್ ರವರ ಸಹಕಾರದಿಂದ ರೋಶನಿ ನಿಲಯ ಮಂಗಳೂರು ಇಲ್ಲಿ ಬಿಎಸ್ಡಬ್ಲ್ಯೂಗೆ ಸೇರ್ಪಡೆಗೊಂಡು 2008ರಲ್ಲಿ ಮುಗಿಸಿದೆ. ನಂತರ ಆಗಸ್ಟ್ 2008ರಿಂದ 2011 ರವರೆಗೆ ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲ್ ಇಲ್ಲಿ ಸಮುದಾಯ ಕ್ಷೇತ್ರ ಸಂಘಟಕರಾಗಿ ಉಡುಪಿ, ದಕ್ಷಿಣ ಕನ್ನಡ, ಕೊಡಗುಗಳಲ್ಲಿ ಕೆಲಸವನ್ನು ನಿರ್ವಹಿಸಿದ್ದು, ಕೊರಗ, ಜೇನುಕುರುಬ, ಯರವ, ಬೆಟ್ಟಕುರುಬ ಸಮುದಾಯಗಳಲ್ಲಿ ಮಕ್ಕಳ ಶಿಕ್ಷಣ ಹಾಗೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಡಲು ಮಹಿಳಾ ಕೇಡರ್ ಗುಂಪುಗಳನ್ನು ಮತ್ತು ಮಕ್ಕಳ ಗುಂಪುಗಳನ್ನು ರಚಿಸಿ ಕೆಲಸವನ್ನು ನಿರ್ವಹಿಸಿದೆ. 2013 ರಿಂದ 2016 ರವರೆಗೆ ಓಡಿಪಿ(ಆರ್ಗನೈಜೇಶನ್ ಫಾರ್ ಡೆವೆಲಪ್ಮೆಂಟ್ ಆಫ್ ಪೀಪಲ್) ಮೈಸೂರು ಇಲ್ಲಿ ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡೆ. 2016 ರಿಂದ 2017 ಆರ್ಎಲ್ಎಚ್ಪಿ (ರೂರಲ್ ಲವ್ಲಿಹುಡ್ ಅ್ಯಂಡ್ ಹೆಲ್ತ್ ಪ್ರೋಗ್ರಾಮ್)ಮೈಸೂರು, ಎಂಬ ಸ್ವಯಂ ಸೇವಾ ಸಂಸ್ಥೆಯಲ್ಲಿ ಮಕ್ಕಳ ಸಹಾಯವಾಣಿ ಟೀಮ್ ಮೆಂಬರ್ ಆಗಿ ಮಕ್ಕಳ ಹಕ್ಕುಗಳ ರಕ್ಷಣೆ ಸಂದರ್ಭದಲ್ಲಿ ಕೆಲಸ ಮಾಡಿದೆ.

2013ರಲ್ಲಿ ಶೈಲೇಂದ್ರಕುಮಾರ್ ಎನ್. ಬೇಗೂರು ಎಚ್ಡಿ ಕೋಟೆ ಇವರನ್ನು ವಿವಾಹವಾಗಿದ್ದು, ಪ್ರಸ್ತುತ ಹುಣಸೂರು ಇಲ್ಲಿ ವಾಸವಾಗಿರುತ್ತೇನೆ. ಎಂಎ ಪಿಎಚ್ಡಿ ಸಂಪೂರ್ಣಗೊಳ್ಳುವುದಕ್ಕೆ ಅವರೇ ಮುಖ್ಯ ಕಾರಣ. ಹೆಣ್ಣು ಮಕ್ಕಳೇ ಶಿಕ್ಷಣವನ್ನು ಅರ್ಧಕ್ಕೆ ಕುಂಟಿತಗೊಳಿಸುವ ಕಾಲದಲ್ಲಿ ಬುಡಕಟ್ಟು ಹೆಣ್ಣು ಮಗಳಾಗಿ ಅದರಲ್ಲಿಯೂ ಮದುವೆಯಾಗಿ ಶಿಕ್ಷಣವನ್ನು ಮುಂದುವರಿಸಲು ಬಿಟ್ಟಿರುವುದು ಹೆಮ್ಮೆಯ ವಿಷಯ. ಹಾಗಾಗಿ ಅವರು ವಿಶೇಷವಾಗಿ ಕಾಣುತ್ತಾರೆ. 2017 ರಲ್ಲಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರ ವಿಭಾಗವನ್ನು ಪ್ರಾರಂಭಿಸುತ್ತಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿ ಬರುತ್ತದೆ. ಆಗ ಶೈಲೇಂದ್ರರವರು ಸಮುದಾಯ ಸಂಘಟಕರಾಗಿರುವುದರಿಂದ ಎಚ್ಡಿ ಕೋಟೆ ವ್ಯಾಪ್ತಿಗೆ ಬರುವ ಹಾಡಿಗಳಿಗೆ ಮಾಹಿತಿ ನೀಡಿ ವಿದ್ಯಾರ್ಥಿಗಳನ್ನು ಹುಡುಕುತ್ತಿದ್ದರು. ಅಂತಹ ಸಂದರ್ಭದಲ್ಲಿ ನನಗೂ ಶಿಕ್ಷಣ ಮುಂದುವರಿಸೋಕೆ ಆಸಕ್ತಿ ಇದೆ ನಾನು ಹೋಗುತ್ತೇನೆ ಎಂದಾಗ ಒಪ್ಪಿಕೊಂಡಿದ್ದರು. ಹಾಗಾಗಿ ಕನ್ನಡ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗಕ್ಕೆ ಎಂ.ಎ (ಸಮಾಜಶಾಸ್ತ್ರ) ಕೋರ್ಸ್ಗೆ ಸೇರ್ಪಡೆಗೊಂಡು 2019ದಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾದೆ. ಪ್ರಸ್ತುತ ಪಿಎಚ್ ಡಿ ಪದವಿಯನ್ನು ಡಾ.ಕೆ.ಎಂ. ಮೇತ್ರಿ, ಬುಡಕಟ್ಟು ಅಧ್ಯಯನ ವಿಭಾಗ ಇವರ ಮಾರ್ಗದರ್ಶನದಲ್ಲಿ ಮುಗಿಸಿದೆ. ಇದರೊಂದಿಗೆ ಕನ್ನಡ ವಿಶ್ವವಿದ್ಯಾನಿಲಯದ ಮಾನವಶಾಸ್ತ್ರ ವಿಭಾಗದಲ್ಲಿ ಮಾನವಶಾಸ್ತ್ರ ವಿಷಯದಲ್ಲಿ ಪಿಜಿ ಡಿಪ್ಲೋಮಾ ಮುಗಿಸಿದ್ದು ಪ್ರಥಮ ಶ್ರೇಣಿಯಲ್ಲಿ ಪಾಸಾದೆ. ಇವೆಲ್ಲವೂ ಸಾಧ್ಯವಾದುದು ಸಮುದಾಯ ಸಂಘಟನೆಯೊಂದಿಗೆ ಭಾಗವಹಿಸುವುದರ ಪರಿಣಾಮ ಹಾಗೂ ಕುಟುಂಬದವರ ಸಹಕಾರ. ನಾನು ಚಿಕ್ಕಂದಿನಿಂದಲೂ ಸಮುದಾಯದ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದೆ. ಕಳತ್ತೂರು ಭೂಮಿ ಚಳವಳಿಯಲ್ಲಿ 29 ಮಂದಿ ಜೈಲು ವಾಸ ಅನುಭವಿಸಿದ್ದು ಅದರಲ್ಲಿ ಒಬ್ಬಳು ನಾನು ಎನ್ನುವುದು ಹೆಮ್ಮೆಯಿದೆ. ಈ ರೀತಿಯಾಗಿ 8 ವರುಷಗಳ ನಂತರ ಸಮಾಜಶಾಸ್ತ್ರ ವಿಷಯದಲ್ಲಿ ಎಂಎ ಪಿಎಚ್ಡಿ ಪದವಿಯನ್ನು ಪಡೆದು, ಪ್ರಸ್ತುತ ಪಿಎಚ್ಡಿ ಮುಗಿಸಿರುವುದು ಸಂತಸವನ್ನು ತಂದಿದೆ. ಅದರ ಜೊತೆ ಕೊರಗ ಸಮುದಾಯದ ಶಿಕ್ಷಣದ ಬಗ್ಗೆ ಬೇಸರ ಆತಂಕ ಸಹ ಇದೆ. ಎಲ್ಲಿ ಸಮಸ್ಯೆ ಇದೆಯೋ ಅಲ್ಲೇ ಪರಿಹಾರ ಇರುತ್ತದೆ. ಹಾಗಾಗಿ ಎಷ್ಟೇ ಸಮಸ್ಯೆ ಇದ್ದರೂ ಅದನ್ನು ಮೀರಿ ಬೆಳೆಯುವ ಗುಣ ನಮ್ಮ ಕೊರಗ ಸಮುದಾಯದಲ್ಲಿ ಬರಲೇಬೇಕು. ಆ ಕೆಲಸವನ್ನು ಸಮುದಾಯ ಸಂಘಟನೆಗಳು ಜವಾಬ್ದಾರಿಯುತ ಪ್ರಜೆಗಳು ಮಾಡಬೇಕು ಎನಿಸುತ್ತದೆ. ನನ್ನ ಸಂಘಟನೆ, ನನ್ನ ಕುಟುಂಬ ಆ ಕೆಲಸ ಮಾಡಿದ್ದಕ್ಕೆ ನಾನು ಇಂದು ಸಾಧಿಸಲು ಆಗಿದೆ. ಅವರೆಲ್ಲರಿಗೂ ಚಿರಋಣಿಯಾಗಿದ್ದೇನೆ.

ಭಾರತದಲ್ಲಿ ಒಂದೊಂದು ಸಮುದಾಯಗಳಿಗೂ ಒಂದೊಂದು ಸಮಸ್ಯೆಗಳಿವೆ. ಸ್ವಾತಂತ್ರ್ಯ ಬಂದು ಏಳು ದಶಕವಾದರೂ ಇನ್ನೂ ಇಲ್ಲಿ ಹಸಿವಿಗಾಗಿ, ಸೂರಿಗಾಗಿ, ನೀರಿಗಾಗಿ ಮುಖ್ಯವಾಗಿ ಮಾನವ ಘನತೆಗಾಗಿ ಹೋರಾಟ ಮಾಡಲೇಬೇಕಿರುವುದು ದುರಂತ. ನಮ್ಮನ್ನು ಮನುಷ್ಯರಂತೆ ಕಾಣಿ ಎಂದು ಹೋರಾಡಬೇಕಿರುವುದು ಮನುಷ್ಯ ಸಮಾಜ ತಲೆತಗ್ಗಿಸಬೇಕಾದ ವಿಚಾರ. ಸಂವೇದನೆ ಇರುವ ಸರಕಾರಗಳು ಈಗಲಾದರೂ ಕೊರಗರಾದಿಯಾಗಿ ಎಲ್ಲಾ ಬುಡಕಟ್ಟು ಆದಿವಾಸಿಗಳ ಅಸ್ಪೃಶ್ಯರ ಏಳಿಗೆಗಾಗಿ ಬದ್ಧತೆ ತೋರಿಸಬೇಕಿದೆ. ಅದು ಸಾಮಾಜಿಕ ನ್ಯಾಯದ ಮೂಲಕ ಹೊರತು ಸಿಂಪಥಿಯಿಂದ, ಅನುಕಂಪದಿಂದಲ್ಲ. ನಮ್ಮ ಸರಕಾರ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳಿಗೆ ವಿಶೇಷ ಪ್ರಾತಿನಿಧ್ಯ ಕೊಟ್ಟು ಅವುಗಳನ್ನು ರಕ್ಷಿಸಲು ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿದೆ. ಅವುಗಳ ರಕ್ಷಣೆಗೆ ಬಲಿಷ್ಠ ಕಾನೂನು ಮಾಡುತ್ತಿದೆ. ಅದೇ ತರ ಕೊರಗ ಆದಿಮ ಬುಡಕಟ್ಟು ಈಗ ಅಳಿವಿನ ಅಂಚಿನಲ್ಲಿರುವ ಜನಾಂಗ ಆಗಿರುವ ಕಾರಣ ಅದನ್ನು ಸಹ ವಿಶೇಷವಾಗಿ ಗುರುತಿಸಿ ಆ ಜನಾಂಗದ ಸಂಸ್ಕೃತಿಯನ್ನು, ಅವರ ಮಾನವ ಹಕ್ಕುಗಳನ್ನು, ಅವರ ಆರೋಗ್ಯವನ್ನು, ಆ ಕೊರಗ ಮಕ್ಕಳ ಶಿಕ್ಷಣದ ಹಕ್ಕನ್ನು ರಕ್ಷಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ. ಯಾವ ಸಮುದಾಯದ ಜನಸಂಖ್ಯೆ ಹೆಚ್ಚು ಇರುತ್ತದೆಯೋ ಆ ಜನಸಂಖ್ಯೆಯ ಸಮಸ್ಯೆ ಕಡಿಮೆಯಿದ್ದರೂ, ಅದರ ತೀವ್ರತೆ ಕಡಿಮೆ ಇದ್ದರೂ ಅದಕ್ಕೆ ಪ್ರಾತಿನಿಧ್ಯ ಕೊಡುತ್ತಾರೆ. ಅವರ ಅಹವಾಲುಗಳಿಗೆ, ಬೇಡಿಕೆಗೆ ಎಲ್ಲಾ ಸಮುದಾಯ ಬೆಂಬಲಿಸುತ್ತದೆ. ಆದರೆ ಯಾವ ಸಮುದಾಯವು ಕಡಿಮೆ ಜನಸಂಖ್ಯೆ ಹೊಂದಿ ಹೆಚ್ಚು ನೋವು ತಿನ್ನುತ್ತಿರುತ್ತದೆಯೋ, ಅತೀ ಹೆಚ್ಚು ಸಮಸ್ಯೆಗಳನ್ನು ಹೊಂದಿರುತ್ತದೆಯೋ ಆ ಸಮುದಾಯಗಳಿಗೆ ಯಾರೂ ಬೆಂಬಲಿಸುವುದಿಲ್ಲ. ಏಕೆಂದರೆ ವೋಟು. ಈ ಮತಗಳು ಕ್ಷೀಣಿಸುತ್ತಿರುವ ಕೊರಗ ಸಮುದಾಯದಲ್ಲಿ ಇವರ ಬೇಡಿಕೆಗಳು ನೋವುಗಳು ಆಳುವವರಿಗೆ ನಗಣ್ಯ ಆಗಿರುವುದರಿಂದ ಈ ತನಕ ಕೊರಗರಿಗೆ ಸಿಗಬೇಕಿರುವ ಸಂವಿಧಾನಬದ್ಧ ಹಕ್ಕುಗಳು ಸಿಗುತ್ತಿಲ್ಲ. ಬರೀ ಜನಸಂಖ್ಯೆಯೇ ಪ್ರಧಾನವಾದರೆ ಸಣ್ಣ ಸಣ್ಣ ಜಾತಿಗಳ ಗತಿ ಏನು? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ಡಾ. ಕಲಾವತಿ, ಉಡುಪಿ

contributor

Similar News

ಭಾವ - ವಿಕಲ್ಪ
ಕಥೆಗಾರ