ಕನ್ನಡ ಪುಸ್ತಕ ಪ್ರಕಾಶನ ಲೋಕದಲ್ಲಿ ಹೊಸ ನೀರು

ಅಕ್ಷತಾ ಹುಂಚದಕಟ್ಟೆ ಎಂದಾಕ್ಷಣ ಸಾಹಿತ್ಯ ಪ್ರಿಯರು ನೆನಪಿಸಿ ಕೊಳ್ಳುವುದು ಅಹರ್ನಿಶಿ ಪ್ರಕಾಶನವನ್ನು. ಕನ್ನಡ ಸಾಹಿತ್ಯ, ವೈಚಾರಿಕ ಲೋಕಕ್ಕೆ ಹಲವು ಮಹತ್ವದ ಪುಸ್ತಕಗಳನ್ನು, ಲೇಖಕರನ್ನು ಅಹರ್ನಿಶಿ ಮೂಲಕ ಪರಿಚಯಿಸಿದ ಹೆಗ್ಗಳಿಗೆ ಅಕ್ಷತಾ ಅವರದು. ಈ ಪ್ರಕಾಶನದ ಮೂಲಕ 115ಕ್ಕೂ ಅಧಿಕ ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ಕವಯತ್ರಿಯೂ ಆಗಿರುವ ಇವರು, ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ. ನೀರ ಮೇಲಣ ಚಿತ್ರ ಸಂಕಲನಗಳನ್ನು ಹೊರತಂದಿದ್ದಾರೆ. ಕಾಡತೊರೆಯ ಜಾಡು ( ಕಡಿದಾಳು ಶಾಮಣ್ಣನವರ ಆತ್ಮಕತೆ ಸಂಗ್ರಹ ರೂಪ) ಮತ್ತೆ ಮತ್ತೆ ಬೇಂದ್ರೆ (ಬೇಂದ್ರೆ ಕಾವ್ಯದ ಕುರಿತು ಕಿರಂ ಅವರ ಭಾಷಣಗಳ ಬರಹ ರೂಪ) ಇವರ ಸಂಪಾದನಾ ಕೃತಿಗಳು. ತನ್ನ ಪುಸ್ತಕ ಪ್ರಕಾಶನದ ಅನುಭವದ ನೆಲೆಯಲ್ಲಿ ಕನ್ನಡ ಪುಸ್ತಕ ಪ್ರಕಾಶನಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಇಲ್ಲಿ ಹಂಚಿ ಕೊಂಡಿದ್ದಾರೆ.

Update: 2024-01-07 15:43 GMT

ಕನ್ನಡ ಸಾಹಿತ್ಯವನ್ನು ಯಾರೂ ಓದುತ್ತಿಲ್ಲ, ಕನ್ನಡ ಸಾಹಿತ್ಯದಲ್ಲಿ ಹೊಸತೆನಿಸುವುದು ಏನೂ ಹುಟ್ಟುತ್ತಿಲ್ಲ, ಕನ್ನಡದಲ್ಲಿ ವೈಜ್ಞಾನಿಕ ಸಾಹಿತ್ಯ, ಮಕ್ಕಳ ಸಾಹಿತ್ಯ, ತತ್ವಶಾಸ್ತ್ರ, ಕ್ರೀಡಾ ಬರವಣಿಗೆ ಹೀಗೆ ಹಲವು ವಿಭಾಗದಲ್ಲಿ ಜಡತ್ವ ತಲೆದೋರಿದೆ.

ಗಮನ ಸೆಳೆಯುವ ಬರಹಗಳು ಬರುತ್ತಿಲ್ಲ, ಓದುವವರಂತೂ ಕಾಣುತ್ತಲೇ ಇಲ್ಲ ಎಂಬೆಲ್ಲ ಸಕಾರಣವಾದ ಕಳವಳಕಾರಿ ಸತ್ಯಗಳ ನಡುವೆಯೇ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರ ಕಳೆದ ಎರಡ್ಮೂರು ವರುಷಗಳಲ್ಲಿ ಒಂದಷ್ಟು ಹೊಸ ಹೊಸ ಪ್ರಕಾಶಕ/ಕಿಯರ ಹುಟ್ಟಿಗೆ ಕಾರಣವಾಗಿದೆ. ಜೊತೆಗೆ ಈ ಹೊಸ ಪ್ರಕಾಶಕ/ಕಿಯರು ಪ್ರಸಿದ್ಧರ, ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಸ್ಥಾಪಿತರಾದವರ ಕಥೆ, ಕಾದಂಬರಿ ಪ್ರಕಟಣೆಗಷ್ಟೇ ಈ ಹೊಸ ಪ್ರಕಾಶನಗಳು ಸೀಮಿತವಾಗದೇ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಎಲ್ಲೆಯನ್ನು ವಿಸ್ತರಿಸುವಂತಹ ಮತ್ತು ಈಗಾಗಲೇ ಹೇರಿಕೊಂಡಿದ್ದ ಹಲವು ಮಿತಿಗಳನ್ನು ದಾಟುವಂತಹ ಬರಹಗಳನ್ನು ಪ್ರಕಟಿಸುತ್ತಿವೆ ಜೊತೆಗೆ ಮಾರಾಟದಲ್ಲೂ ಯಶಸ್ಸು ಸಾಧಿಸುತ್ತಿವೆ ಎಂಬುದು ಬಹಳ ಮುಖ್ಯ ಸಂಗತಿ.

ಇದು ಬಹಳ ಸೀಮಿತತೆಯಲ್ಲಿ ನಡೆದರೂ ಪ್ರಕಾಶನ ಲೋಕದ ಇತ್ತೀಚಿನ ಈ ಯಶಸ್ವಿ ನಡೆಗಳು ಕನ್ನಡ ಪುಸ್ತಕ ಲೋಕಕ್ಕೆ ಹೊಸ ಚೈತನ್ಯ ತರುವಂತೆ ಕಾಣಿಸುತ್ತಿದೆ. ಇತ್ತೀಚಿನ ವರುಷಗಳಲ್ಲಿ ಸ್ಥಾಪಿತವಾದ ವೈಷ್ಣವಿ ಪ್ರಕಾಶನ ಕೌದಿ ಪ್ರಕಾಶನ, ಕಾರುಣ್ಯ ಪ್ರಕಾಶನ, ಜೀರುಂಡೆ ಪ್ರಕಾಶನ, ಜಲಜಂಬೂ ಲಿಂಕ್ಸ್, ಅಮೂಲ್ಯ ಪುಸ್ತಕ, ಪ್ರಜೋದಯ ಪ್ರಕಾಶನ, ತಮಟೆ ಪ್ರಕಾಶನ ಮೊದಲಾದವರು ಹೊರತಂದ ಪುಸ್ತಕಗಳು ಬಹುತೇಕ ಹೊಸ ಲೇಖಕ/ಕಿಯರನ್ನು ಪರಿಚಯಿಸಿವೆ. ನನಗೆ ತಿಳಿದಿರುವ

ಮಟ್ಟಿಗೆ ಈ ಪ್ರಕಾಶನಗಳ ಸೂತ್ರಧಾರರು ಅನಿರೀಕ್ಷಿತವಾಗಿ ಪ್ರಕಾಶನ ಕ್ಷೇತ್ರ ಪ್ರವೇಶಿಸಿದವರಲ್ಲ. ಒಂದು ಬಗೆಯ ತಯಾರಿ ಜೊತೆಗೆ ಆಸ್ಥೆ, ಪ್ರೀತಿ, ಆಸಕ್ತಿ, ಅರಿವು ಇಷ್ಟನ್ನು ಇರಿಸಿಕೊಂಡೇ ಪ್ರಕಾಶನ ಲೋಕ ಪ್ರವೇಶಿಸಿದ್ದಾರೆ. ಮತ್ತೆ ಇವರೆಲ್ಲ ಹತ್ತು, ಇಪ್ಪತ್ತು, ಐವತ್ತು, ನೂರು ಪುಸ್ತಕಗಳ ಪ್ರಕಟಣೆಗೆ ಒಮ್ಮೆಲೆ ಕೈ ಹಾಕುವ ಮೆಗಾ ಈವೆಂಟ್ ಮ್ಯಾನೇಜರುಗಳಲ್ಲ. ಇವರ ಪಾಲಿಗೆ ಪುಸ್ತಕ ಪ್ರಕಟಣೆ ಮತ್ತು ಮಾರಾಟ ಅದೊಂದು ಶ್ರದ್ಧೆಯಿಂದ ಮಾಡುವ ಅರಿವನ್ನು ಬೆಳೆಸುವ ಕೆಲಸ. ಆದ್ದರಿಂದ ಇವರ್ಯಾರು ಮಾರಾಟವಾಗುತ್ತದೆ ಎಂಬ ಏಕೈಕ ಕಾರಣಕ್ಕಾಗಿ ಜೀವವಿರೋಧಿ ಚಿಂತನೆಗಳನ್ನು ಹೊತ್ತ ಪುಸ್ತಕಗಳ, ಜೀವವಿರೋಧಿ ಮನುಷ್ಯರನ್ನು ಮೆರೆಸುವ ಪುಸ್ತಕಗಳ ಪ್ರಕಟಣೆಗೆ ಕೈ ಹಾಕಿದವರಲ್ಲ. ವೈಚಾರಿಕತೆಯನ್ನು ಹುಟ್ಟು ಹಾಕುವ ಪುಸ್ತಕಗಳನ್ನು ಪ್ರಕಟಿಸಿ ಮಾರಾಟದಲ್ಲೂ ಬಹು

ಮಟ್ಟಿಗೆ ಯಶಸ್ಸು ಸಾಧಿಸಿದ್ದು, ಹಾಕಿದ ಹಣಕ್ಕೆ ನಷ್ಟ ಮಾಡಿಕೊಳ್ಳದೇ ಇದ್ದುದು ಈ ಹೊತ್ತು ಆಶಾಕಿರಣವಾಗಿ ಗೋಚರಿಸುತ್ತದೆ. ಈ ಪ್ರಕಾಶನಗಳಿಂದ ‘೧೨೩೨ ಕಿ.ಮೀ. ಮನೆಸೇರಲು ಸಾಗಿದ ದೂರ’, ‘ಅಂಬೇಡ್ಕರ್ ಜಗತು’್ತ, ‘ಬೇಗಂಪುರ’, ಬೆಲ್ ಹುಕ್ಸ್ ಅವರ ಚಿಂತನೆಗಳು ಪುಸ್ತಕಗಳ ಅನುವಾದಗಳು, ‘ಅರಸು ಕುರನ್ಗರಾಯ’ ತರದ ದಾಖಲಾಗದ ಚರಿತ್ರೆಯ ಸಂಶೋಧನೆ, ‘ಕಣ್ಕಟ್ಟು’ ತರದ ಪಠ್ಯಪುಸ್ತಕದಲ್ಲಿ ಮತೀಯವಾದೀಕರಣದ ಸಂಚುಗಳನ್ನು ಬಿಡಿಸಿಡುವ ಕೃತಿ, ಶೋಭಾ ಗುನ್ನಾಪುರ ಅವರ ಹಳ್ಳಿಯ ರೈತಾಪಿ ಹೆಣ್ಣುಮಕ್ಕಳನ್ನು ಕೇಂದ್ರವಾಗಿಸಿಕೊಂಡ ಕತೆಗಳ ‘ಭೂಮಿಯ ಋಣ’, ದಲಿತ ಬದುಕಿನ ಕಥೆಗಳ ‘ಧಾವತಿ’ ಕಥಾ ಸಂಕಲನಗಳು ಪ್ರಕಟವಾಗುವಂತಾಯಿತು ಮತ್ತು ಒಂದು ವಿಶೇಷ ಎಂದರೆ ಇದರಲ್ಲಿ ಒಂದೆರಡು ಪ್ರಕಾಶನಗಳನ್ನು ಬಿಟ್ಟರೆ ಉಳಿದವು ರಾಜಧಾನಿ ಬೆಂಗಳೂರಿನಲ್ಲಿರದೆ ಜಿಲ್ಲಾಕೇಂದ್ರ, ತಾಲೂಕು ಕೇಂದ್ರಗಳಲ್ಲಿ ನೆಲೆಯೂರಿ ಅಲ್ಲಿಂದಲ್ಲೇ ಪುಸ್ತಕ ಸಂಸ್ಕೃತಿಯನ್ನು ಭಿತ್ತರಿಸುತ್ತಿರುವವು.

ಹೊಸ ಹೊಸ ಚಿಂತನೆಯ, ಆಳದ ಅರಿವನ್ನು ಬಿತ್ತುವ, ಹೊಸ ಹೊಸ ಆಲೋಚನೆಗಳ, ಸಿದ್ಧ ಮಾದರಿಯನ್ನು ಪೋಷಿಸದ ಜೊತೆಗೆ ಕನ್ನಡ ಪ್ರಕಾಶನ ಲೋಕ ಮುಟ್ಟಲು ಇದುವರೆಗೆ ಹಿಂಜರಿಯುತ್ತಿದ್ದ ವಸ್ತು ವಿಷಯ, ಚಿಂತನೆಗಳ ಪುಸ್ತಕಗಳನ್ನು ಪ್ರಕಟಿಸಲು ಧೈರ್ಯ ತೋರುತ್ತಿದ್ದಾರೆ. ಜೊತೆಗೆ ಬಹುತೇಕ ಹೊಸ ಪ್ರಕಾಶನಗಳು ಹೊಸ ಲೇಖಕ/ಕಿಯರ ಪುಸ್ತಕಗಳನ್ನು ಪ್ರಕಟಿಸುವಲ್ಲಿಯು ಉತ್ಸಾಹ ತೋರಿಸುತ್ತಿದ್ದಾರೆ, ಇದೆಲ್ಲದರ ಪರಿಣಾಮವಾಗಿ ಹಿಂದೆಂದೂ ಇರದಷ್ಟು ವಿವಿಧ ಸಮುದಾಯಗಳ ಲೇಖಕ/ಕಿಯರ ಸಮೂಹ ತಮ್ಮದೇ ಕಥನಗಳನ್ನು ಅಕ್ಷರರೂಪಕ್ಕಿಳಿಸುತ್ತಿದೆ. ಅದರಲ್ಲೂ ತಳಸಮುದಾಯದ ಮತ್ತು ಅಲ್ಪಸಂಖ್ಯಾತ ಲೇಖಕ/ಕಿಯರ ಕಥನಗಳು ಸೀಮಿತಸ್ವರೂಪದಲ್ಲೇ ಆದರೂ ಪ್ರಖರವಾಗಿ ಒಡಮೂಡುತ್ತಿವೆ. ಉಳಿದವರಿಗೂ ಇದು ಮಾದರಿಯಾಗಿ ಇನ್ನಷ್ಟು ಈ ಬಗೆಯ ಕಥನಗಳು ಒಡಮೂಡುವ ಭರವಸೆ ಮೂಡುತ್ತಿದೆ.

ಇಂಥದೊಂದು ಬೆಳವಣಿಗೆಯ ಹಿಂದೆ ಸಾಮಾಜಿಕ ಜಾಲತಾಣಗಳ ಪ್ರಮುಖ ಪಾತ್ರವಿದೆ. ನಾನು ಹದಿನೈದು ವರುಷದ ಹಿಂದೆ ಅಹರ್ನಿಶಿಯ ಮೂಲಕ ಪ್ರಕಾಶನ ಕ್ಷೇತ್ರ ಪ್ರವೇಶಿಸಿದಾಗ ಪುಸ್ತಕ ಮಾರಾಟಕ್ಕೆ ಪುಸ್ತಕದ ಅಂಗಡಿ, ಸಾಹಿತ್ಯ ಸಮ್ಮೇಳನ, ಕಾಲೇಜಿನ ಸೆಮಿನಾರ್ಗಳನ್ನು ಆಶ್ರಯಿಸಬೇಕಿತ್ತು. ಆದರೀಗ ಫೇಸ್ ಬುಕ್, ವಾಟ್ಸ್ಆ್ಯಪ್ ಮೂಲಕವೇ ಪುಸ್ತಕಗಳ ಪ್ರಚಾರ ನಡೆಯುತ್ತದೆ. ಪುಸ್ತಕಕ್ಕೆ ಅಲ್ಲೇ ಬೇಡಿಕೆಯನ್ನು ಇಡಬಹುದು. ಗೂಗಲ್ ಪೇ, ಫೋನ್ ಪೇ ಮೂಲಕ ಕ್ಷಣಾರ್ಧದಲ್ಲಿ ಹಣ ಸಂದಾಯವಾಗುತ್ತದೆ. ಇವೆಲ್ಲ ಹೊಸ ಪ್ರಕಾಶಕರಿಗೆ, ಹೊಸ ಲೇಖಕರಿಗೆ ತಮ್ಮ ಪುಸ್ತಕಗಳ ಪ್ರಚಾರ, ಪರಿಚಯ, ಮಾರಾಟಕ್ಕೆ ವರದಾನವಾಗಿ ಪರಿಣಮಿಸಿವೆ ಜೊತೆಗೆ ಈ ಕ್ಷೇತ್ರದಲ್ಲಿ ಈಗಾಗಲೇ ಪ್ರತಿಷ್ಠಾಪನೆಗೊಂಡವರ, ಪಟ್ಟಭದ್ರರ ಮರ್ಜಿ ಹಿಡಿಯುವುದರಿಂದಲೂ ಹೊಸ ಪ್ರಕಾಶಕ/ಕಿಯರನ್ನು ಬಚಾವು ಮಾಡಿ ಸ್ವತಂತ್ರವಾಗಿ ಪುಸ್ತಕ ಮಾರಾಟ ಮಾಡಲು ಅನುವು ಮಾಡಿಕೊಟ್ಟಿವೆ. ಹಾಗೆಂದು ಪುಸ್ತಕದ ಅಂಗಡಿಗಳು ಬೇಡವೆಂದಲ್ಲ. ಪುಸ್ತಕಕ್ಕೆ ಗ್ರಾಹಕರು ಹೆಚ್ಚಿದಂತೆ ಪುಸ್ತಕದ ಅಂಗಡಿಗಳು ಹೆಚ್ಚುತ್ತವೆ, ಆ ನಿಟ್ಟಿನಲ್ಲೂ ಇದು ಒಳ್ಳೆಯ ಬೆಳವಣಿಗೆಯೆ.

ಇಷ್ಟೆಲ್ಲದರಾಚೆ ಇತ್ತೀಚೆಗೆ ಹುಟ್ಟಿರುವ ಈ ಪ್ರಕಾಶನಗಳೆದುರು ಮತ್ತು ಸದ್ಯದಲ್ಲೇ ಹೊಸ ಹೊಸ ಪುಸ್ತಕಗಳೊಂದಿಗೆ ಪ್ರಕಾಶನ ಲೋಕಕ್ಕೆ ಕಾಲಿಡಲಿರುವ ಪ್ರಕಾಶನಗಳೆದುರು ಸವಾಲುಗಳೇ ಇಲ್ಲವೇ ಎಂದು ಕೇಳಿದರೆ, ಸವಾಲುಗಳ ಭರಪೂರವೇ ಇದೆ ಎಂದೇ ಉತ್ತರಿಸಬೇಕಾದೀತು... ಏಕೆಂದರೆ ಏನೇ ನಾವು ಸಂಭ್ರಮದ ಮಾತನಾಡಿದರೂ ಕನ್ನಡದಲ್ಲಿ ಗಂಭೀರ ಓದುಗರ ಸಂಖ್ಯೆ ಕುಸಿದಿದೆ. ದಿನಪತ್ರಿಕೆಯ ಹೊಸ ಪ್ರಕಟಣೆಗಳು ವಿಭಾಗ ನೋಡಿ ಪುಸ್ತಕ ಕೊಳ್ಳುವವರ ಸಂಖ್ಯೆಯೇ ಗಣನೀಯವಾಗಿದ್ದ ಕಾಲವು ಇತ್ತು. ಇದೀಗ ಅಂತಹ ಸಂದರ್ಭಗಳು ತೀರಾ ಕಡಿಮೆಯಾಗಿವೆ. ಸರಕಾರದ ಪುಸ್ತಕ ಖರೀದಿಯು ಪಟ್ಟಭದ್ರರಿಗೆ ಲಾಭ ಮಾಡಿಕೊಡುತ್ತಿತ್ತು, ಲೈಬ್ರೆರಿ ಖರೀದಿ ಸೂತ್ರಗಳೆಲ್ಲ ರಾಜಧಾನಿಯ ಪಟ್ಟಭದ್ರರ ಕೈಯೊಳಗೆ ಇತ್ತು ಎಂಬುದು ಸತ್ಯವಾದರೂ ಸಣ್ಣ ಸಣ್ಣ ಪ್ರಕಾಶಕರಿಗೂ ಸಹ ವರುಷಕ್ಕೆ ಒಂದಷ್ಟು ಹಣವನ್ನು ಒಮ್ಮೆಲೆ ಗಳಿಸಬಹುದಾಗಿದ್ದ ಮಾರ್ಗವನ್ನು ಲೈಬ್ರೆರಿ ಖರೀದಿಗಳು ತೆರೆದಿಟ್ಟಿದ್ದವು. ಇವು ಹೊಸ ಹೊಸ ಪ್ರಕಾಶಕ/ಕಿಯರಿಗೆ ನ್ಯಾಯೋಚಿತವಾಗಿ ಹಂಚಿಕೆಯಾದರೆ ಕನ್ನಡ ಪ್ರಕಾಶನ ಕ್ಷೇತ್ರ ಚೇತೋಹಾರಿಯಾಗಿ ಅರಳಿಕೊಳ್ಳುವುದರಲ್ಲಿ ಸಂಶಯವಿಲ್ಲ. ಕನ್ನಡ ಪುಸ್ತಕ ಲೋಕ ಸಮೃದ್ಧವಾಗಬೇಕಾದರೆ ಓದುಗರ ಸಂಖ್ಯೆಯು ಅಷ್ಟೇ ಸಮೃದ್ಧವಾಗಿರಬೇಕು, ಪುಟ್ಟ ಮಕ್ಕಳಲ್ಲಿ ಕನ್ನಡ ಓದಿನ ಬಗೆಗೆ ಪೋಷಕರು, ಶಿಕ್ಷಕರು ಒತ್ತಾಸೆ ನೀಡಬೇಕು.

ಇವೆಲ್ಲದರ ಜೊತೆಗೆ ಹೊಸ ಪ್ರಕಾಶನಗಳು ಮಾರಾಟವಾಗುತ್ತದೆ ಎಂಬ ಏಕೈಕ ಕಾರಣಕ್ಕೆ ಜೀವವಿರೋಧಿ ಕೆಟ್ಟ ಪುಸ್ತಕಗಳನ್ನು ಪ್ರಕಟಿಸಬಾರದು. ಹಾಗೇನಾದರೂ ಮಾಡಿದಲ್ಲಿ ಆ ಕ್ಷಣಕ್ಕೆ ಅಫೀಮಿನಂತೆ ಪುಸ್ತಕಗಳು ಮಾರಾಟವಾಗಬಹುದು, ಆದರೆ ಅನ್ನದ ಗುಣ ಬಹುಕಾಲ ಉಳಿಯುತ್ತದೆಯೇ ವಿನಃ ಅಫೀಮು ಅಲ್ಲ. ಆದ್ದರಿಂದ ರೈತರಂತೆ ಪ್ರಕಾಶಕರು ಅನ್ನವನ್ನು ಬೆಳೆಯಬೇಕೆ ವಿನಃ ಅಫೀಮನ್ನಲ್ಲ. ಹಾಗೆಯೇ ಒಳ್ಳೆಯ ಪುಸ್ತಕಗಳನ್ನೇ ಪ್ರಕಟಿಸಬೇಕು. ಜೊತೆಗೆ ಮುಖ್ಯವಾಗಿ ಅಪಾರ ಹಣವನ್ನು ಒಮ್ಮೆಲೆ ತೊಡಗಿಸಿ ಹತ್ತಾರು ಪುಸ್ತಕಗಳನ್ನು ಒಮ್ಮೆಲೆ ಪ್ರಕಟಿಸುವುದು ಸಾಹಿತ್ಯಲೋಕದಲ್ಲಿ ಅಸಾಧ್ಯ ಅದು ದುಬಾರಿಯಾಗಿ ಪರಿಣಮಿಸುತ್ತದೆ. ಆದ್ದರಿಂದ ಒಮ್ಮೆಲೆ ಒಂದೆರಡು ಪುಸ್ತಕಗಳನ್ನು ಪ್ರಕಟಿಸಿ ಅದರಿಂದ ಬಂದ ಹಣವನ್ನು ಇನ್ನೆರಡು ಪುಸ್ತಕ ಮಾಡಲು ಬಳಸುವುದು ಎಚ್ಚರಿಕೆಯ, ಜಾಣತನದ ನಡೆಯಾಗುತ್ತದೆ. ಇಂತಹ ನಡೆಗಳು ಪ್ರಕಾಶಕ/ಕಿಯರ ಮತ್ತು ಪುಸ್ತಕೋದ್ಯಮದ ಹಿತದೃಷ್ಟಿಯಿಂದಲೂ ಒಳ್ಳೆಯದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಅಕ್ಷತಾ ಹುಂಚದಕಟ್ಟೆ

contributor

Similar News

ಭಾವ - ವಿಕಲ್ಪ
ಕಥೆಗಾರ