ಧರ್ಮಸ್ಥಳ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲಿನ ಹಲ್ಲೆ ಖಂಡನೀಯ: ದಸಂಸ
ಮಂಗಳೂರು, ಆ.9: ಧರ್ಮಸ್ಥಳ ಗ್ರಾಮದಲ್ಲಿ ಅನಾಮಿಕ ದೂರುದಾನ ಹೇಳಿಕೆ ಹಿನ್ನೆಲೆಯಲ್ಲಿ ಎಸ್ಐಟಿಯಿಂದ ನಡೆಯುತ್ತಿರುವ ಉತ್ಖನನ ಹಾಗೂ ತನಿಖೆಯ ಸಂದರ್ಭ ಯೂಟ್ಯೂಬರ್ ಗಳು ಸೇರಿದಂತೆ ಖಾಸಗಿ ವಾಹಿನಿಯ ವರದಿಗಾರರ ಮೇಲೆ ಹಲ್ಲೆ ನಡೆಸಿರುವ ಕೃತ್ಯವನ್ನು ಖಂಡಿಸುವುದಾಗಿ ಕರ್ನಾಟಕ ದಲಿತ ಹೋರಾಟ ಸಮಿತಿ ದ.ಕ. ಜಿಲ್ಲಾ ಶಾಖೆ ಹೇಳಿದೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಮಿತಿಯ ಜಿಲ್ಲಾ ಮುಖಂಡ ಎಸ್.ಪಿ. ಆನಂದ, ಹಲ್ಲೆಗೊಳಗಾಗಿರುವ ಖಾಸಗಿ ವಾಹಿನಿಯ ಕ್ಯಾಮರಾಮೆನ್ ಅಭಿಷೇಕ್ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಅಲ್ಲಿ ಗೂಂಡಾಗಳ ರೀತಿಯಲ್ಲಿ ವರ್ತಿಸಿದವರ ಕೃತ್ಯವನ್ನು ಖಂಡಿಸುವುದಲ್ಲದೆ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸಬೇಕು. ಮಾತ್ರವಲ್ಲದೆ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಅಲ್ಲಿ ನಡೆದಿರುವುದು ಕೇವಲ ವ್ಯಕ್ತಿಗಳ ಮೇಲಿನ ದಾಳಿಯಲ್ಲ. ಬದಲಾಗಿ ಸತ್ಯವನ್ನು ಬಯಲಿಗೆಳೆಯುವ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಹಾಳು ಮಾಡುವ ಪ್ರಯತ್ನ. ಪ್ರಶ್ನೆಗಳನ್ನ ಕೇಳುವ ಮತ್ತು ಸತ್ಯವನ್ನು ಜನರ ಮುಂದಿಡುವ ಧೈರ್ಯ ಮಾಡುವವರಿಗೆ ಹಿಂಸೆಯ ಮೂಲಕ ಉತ್ತರ ನೀಡಿದಾಗ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಪ್ರಶ್ನಿಸಿದಂತಾಗುತ್ತದೆ. ಎಸ್ಐಟಿ ತನಿಖೆಯಿಂದ ಸತ್ಯ ಹೊರಬರಲಿ, ಎಲ್ಲರ ಕುತೂಹಲಕ್ಕೆ ತೆರೆ ಬೀಳಲಿ ಎಂದರು.
ಎಸ್ಐಟಿ ತನಿಖೆಗೆ ಅಡ್ಡಿಪಡಿಸಿ ಅರ್ಧಕ್ಕೆ ನಿಲ್ಲಿಸಿದರೆ ಆರೋಪಿತರ ಬಗ್ಗೆ ಇನ್ನಷ್ಟು ಸಂಶಯಕ್ಕೆ ಕಾರಣವಾಗಲಿದೆ. ‘ಧನಿ’ ಎಂಬ ಶಬ್ದವನ್ನು ಯೂಟ್ಯೂಬರ್ ಗಳಿಗೆ ಹಲ್ಲೆ ಮಾಡಿದವರಲ್ಲೊಬ್ಬ ಹೇಳಿ ಧಮ್ಕಿ ಹಾಕಿರುವ ವೀಡಿಯೋ ಇದೆ. ಹಾಗಾಗಿ ಈ ರೀತಿಯ ಗೂಂಡಾ ವರ್ತನೆಗೆ ಯಾರ ಕೈವಾಡ ಇದೆ ಎಂಬುದನ್ನು ಪೊಲೀಸರು ತನಿಖೆ ಮಾಡಿ ಕಂಡು ಹಿಡಿಯಬೇಕು ಎಂದು ಅವರು ಒತ್ತಾಯಿಸಿದರು.
ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡ ಅನಿಲ್ ಕುಮಾರ್, ತಾಲೂಕು ಸಂಚಾಲಕ ಸತೀಶ್ ಮೂಡುಬಿದಿರೆ, ಸದಸ್ಯರಾದ ನವೀನ್ ಮೂಡಬಿದಿರೆ, ಸುಜಿತ್ ಮೂಡಬಿದಿರೆ, ಸುರೇಶ್ ಮೂಡುಬಿದಿರೆ ಉಪಸ್ಥಿತರಿದ್ದರು.