ಅಡ್ಕರೆಪಡ್ಪು: ಗ್ರೀನ್ ವ್ಯೂ ನಲ್ಲಿ ಟಾಪರ್ಸ್ ಗಳಿಗೆ ಸನ್ಮಾನ ಕಾರ್ಯಕ್ರಮ
ಕೊಣಾಜೆ: ಕಳೆದ (2024-25ನೇ) ಶೈಕ್ಷಣಿಕ ಸಾಲಿನಲ್ಲಿ ಹೆಚ್ಚು ಅಂಕ ಗಳಿಸಿರುವ ಅಡ್ಕರೆಪಡ್ಪು ಜಮೀಯ್ಯತುಲ್ ಫಲಾಹ್ ಗ್ರೀನ್ ವ್ಯೂ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಆರು ವಿದ್ಯಾರ್ಥಿನಿಯರನ್ನು ಹಾಗೂ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ಮೂವರು ವಿದ್ಯಾರ್ಥಿಗಳನ್ನು ನಗದು ಪುರಸ್ಕಾರದೊಂದಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಂಇಯ್ಯತುಲ್ ಫಲಾಹ್ ದಕ್ಷಿಣ ಕನ್ನಡ ಮತ್ತು ಉಡುಪಿ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ. ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲೆಂದು ಶುಭ ಹಾರೈಸಿದರು.
ಜಂಇಯ್ಯತುಲ್ ಫಲಾಹ್ ಪ್ರಧಾನ ಕಾರ್ಯದರ್ಶಿ ಶೇಖ್ ಅಬ್ದುಲ್ ಗಫೂರ್, ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಅಬ್ದುರ್ರಹ್ಮಾನ್ ಕೊಡಿಜಾಲ್, ಜಂಇಯ್ಯತುಲ್ ಫಲಾಹ್ ಕಾರ್ಪೊರೇಶನ್ ಘಟಕದ ಕಾರ್ಯದರ್ಶಿ ಸೈಫುಲ್ಲಾ, ಜಂಇಯ್ಯತುಲ್ ಫಲಾಹ್ ಕಚೇರಿ ಮ್ಯಾನೇಜರ್ ಆದಂ ಬ್ಯಾರಿ, ಶಾಲಾ ಸಂಚಾಲಕರಾದ ಅಬ್ದುನ್ನಾಸಿರ್ ಕೆ.ಕೆ., ಎಸ್.ಬಿ.ಸಿ. ಅಧ್ಯಕ್ಷ ಎ.ಬಿ. ಹಸೈನಾರ್ ಮತ್ತಿತರರು ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾದರು.
ಶಾಲಾ ಸಂಚಾಲಕ ಅಬ್ದುನ್ನಾಸಿರ್ ಕೆ.ಕೆ. ಸ್ವಾಗತಿಸಿದರು. ಸಹ ಶಿಕ್ಷಕಿ ಫಝಾನ ವಂದಿಸಿದರು. ಪ್ರಾಂಶುಪಾಲ ಅಬೂಬಕರ್ ಕೆ. ಕಾರ್ಯಕ್ರಮ ನಿರೂಪಿಸಿದರು.