ಗಾಂಜಾ ಸಾಗಾಟ: ಆರೋಪಿ ಸೆರೆ
ಮಂಗಳೂರು, ಆ.18: ವಿದ್ಯಾರ್ಥಿ ಮತ್ತಿತರರಿಗೆ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿ ಉಪ್ಪಿನಂಗಡಿ ಹಿರ್ತಡ್ಕ ಮನೆ ನಿವಾಸಿ ಅಬ್ದುಲ್ ಅಝೀಝ್ (37) ಎಂಬಾತನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಅಡ್ಯಾರ್ ಕಣ್ಣೂರಿನಲ್ಲಿ ಬಂಧಿಸಿದ್ದಾರೆ.
ಆ.16ರಂದು ಸಂಜೆ 5:15ರ ವೇಳೆಗೆ ಬಿಸಿ ರೋಡ್ ಕಡೆಯಿಂದ ಕಪ್ಪು ಬಣ್ಣದ ಸ್ಕೂಟರ್‌ಲ್ಲಿ ಬಂದ ಅಝೀಝ್‌ನನ್ನು ಪೊಲೀಸರು ಕಣ್ಣೂರಿನಲ್ಲಿ ತಪಾಸಣೆಗೆ ನಡೆಸಿದಾಗ ಗಾಂಜಾ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಪರಿಚಯದ ಜಪ್ಪಿನಮೊಗರಿನ ಗಗನ್ ಎಂಬಾತ ತನಗೆ ಗಾಂಜಾ ನೀಡಿದ್ದು, ಅದನ್ನು ಮಾರಾಟ ಮಾಡಲು ಕೊಂಡುಹೋಗುತ್ತಿರುವುದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ.
ಆರೋಪಿಯ ಸ್ಕೂಟರ್‌ನಲ್ಲಿ 60 ಸಾವಿರ ರೂ. ಮೌಲ್ಯದ 1.280 ಕೆಜಿ ತೂಕದ ಹೂವು, ಬೀಜ ಮತ್ತು ಎಲೆ ಸಹಿತ ಒಣಗಿದ ಗಾಂಜಾ ಪತ್ತೆಯಾಗಿದೆ. ಆರೋಪಿಯಿಂದ 5 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್, ಪ್ಲಾಸ್ಟಿಕ್ ಜಿಪ್ ಲಾಕ್ ಪಾಕೆಟ್‌ಗಳು, 50 ಸಾವಿರ ರೂ. ಮೌಲ್ಯದ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿಯ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತನಿಗೆ ಗಾಂಜಾ ನೀಡಿದ್ದ ಗಗನ್ ನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.