ಕರಾವಳಿಯ ಜಿಲ್ಲೆಗಳ ಶೈಕ್ಷಣಿಕ ಸಾಧನೆಯು ಅಭಿನಂದನೀಯ: ಲೋಕೇಶ್ ಸಿ.
ಕಾರ್ಕಳ : ಶಾಲಾ ಶಿಕ್ಷಣ ಇಲಾಖೆಯು ಶೈಕ್ಷಣಿಕ ಅಭಿವೃದ್ಧಿಯ ದೃಷ್ಟಿಯಿಂದ ಕಾಲಕಾಲಕ್ಕೆ ವಿನೂತನ ಯೋಜನೆಯಗಳನ್ನು ಜಾರಿಮಾಡುತ್ತಿದೆ. ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಶಿಕ್ಷಣ ಸಂಸ್ಥೆಗಳ, ಅಧ್ಯಾಪಕರ, ಹೆತ್ತವರ ಎಲ್ಲರ ಸಂಘಟಿತ ಪ್ರಯತ್ನ ಅಗತ್ಯವಾಗಿದೆ. ಕರಾವಳಿ ಕರ್ನಾಟಕದಲ್ಲಿ ಜಾಗೃತ ಸಮಾಜ ಇದ್ದು ಈ ಜಿಲ್ಲೆಗಳನ್ನು ದಾನಿಗಳ ಜಿಲ್ಲೆ ಎಂದು ಕರೆಯುತ್ತಾರೆ. ಇದರಿಂದಾಗಿ ಕರಾವಳಿಯ ಜಿಲ್ಲೆಗಳು ಇಂದು ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯ ಸ್ಥಾನದಲ್ಲಿ ಇವೆ. ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಈ ಜಿಲ್ಲೆಗಳು ಗುಣಮಟ್ಟದ ಫಲಿತಾಂಶವನ್ನು ಪಡೆಯಲು ಈ ಜಾಗೃತಿಯೇ ಕಾರಣ ಎಂದು ಉಡುಪಿ ಜಿಲ್ಲೆಯ ಶಿಕ್ಷಣ ಉಪ ನಿರ್ದೇಶಕ ಲೋಕೇಶ್ ಸಿ ಅಭಿಪ್ರಾಯಪಟ್ಟರು.
ಅವರು ಕಾರ್ಕಳದ ಬಂಡಿಮಠದ ಸರಕಾರಿ ನೌಕರರ ಸಭಾಭವನದಲ್ಲಿ ನಡೆದ ಸಾಧನಾ ಸಂಭ್ರಮ 2024-25 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಾರ್ಕಳ ತಾಲ್ಲೂಕು ಉಡುಪಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದದ್ದನ್ನು ಸಂಭ್ರಮಿಸುವ ಈ ಸಮಾವೇಶವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ತಾಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ, ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘ ಇವುಗಳು ಜೊತೆಯಾಗಿ ಆಯೋಜನೆ ಮಾಡಿದ್ದವು. ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ದಾಖಲೆಯ ಫಲಿತಾಂಶಕ್ಕೆ ಕಾರಣರಾದ ಎಲ್ಲರನ್ನೂ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾದ ಐವರು ಮುಖ್ಯೋಪಾಧ್ಯಾಯರು ಹಾಗೂ ಮೂವರು ಸಹಶಿಕ್ಷಕರನ್ನು ಸನ್ಮಾನಿಸಲಾಯಿತು. ಅದೇ ರೀತಿ ಡಯಟ್ ಸಂಸ್ಥೆಯ ನಿವೃತ್ತ ಹಿರಿಯ ಉಪನ್ಯಾಸಕರಾದ ಸುಬ್ರಹ್ಮಣ್ಯ ಭಟ್ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಇಂದಿರಾ ಬಾಯರಿ, ದಿವಾಕರ್ ಹೆಗ್ಡೆ, ರಮೇಶ್, ವಿವೇಕಾನಂದ ಹೆಗ್ಡೆ ಅವರು ಮಾತಾಡಿ ಕೃತಜ್ಞತೆ ಅರ್ಪಿಸಿದರು.
ನೂರು ಶೇಕಡಾ ಫಲಿತಾಂಶವನ್ನು ಪಡೆದ ತಾಲೂಕಿನ 14 ಶಾಲೆಗಳನ್ನು ಪ್ರಶಸ್ತಿಫಲಕವನ್ನು ನೀಡಿ ಸನ್ಮಾನಿಸಲಾಯಿತು. ಹಾಗೆಯೇ ತಾಲ್ಲೂಕಿನಲ್ಲಿ ಅತೀ ಹೆಚ್ಚು ಅಂಕ ಪಡೆದ ನಾಲ್ಕು ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಲಾಯಿತು. ಉಡುಪಿ ಜಿಲ್ಲೆಯ ಎಸ್ಎಸ್ಎಲ್ಸಿ ನೋಡಲ್ ಅಧಿಕಾರಿ ಬಾಲಕೃಷ್ಣ ಮತ್ತು ಕಾರ್ಕಳ ತಾಲ್ಲೂಕು ಎಸ್ಎಸ್ಎಲ್ಸಿ ನೋಡಲ್ ಅಧಿಕಾರಿ ಬಾಲಕೃಷ್ಣ ಅವರನ್ನು ಕೂಡ ಸನ್ಮಾನಿಸಲಾಯಿತು.
ತಾಲ್ಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಭಾಸ್ಕರ್ ಅವರು ಸ್ವಾಗತಿಸಿದರು. ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಅವರು ಅಭಿನಂದನಾ ಭಾಷಣ ಮಾಡಿದರು. ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವರ್ಣಲತಾ, ಸ್ಮಿತಾ ಭಂಡಾರಿ, ಚಂದ್ರಶೇಖರ್ ಭಟ್, ಉಷಾ ಪಡಿವಾಳ್ ಅವರು ಸನ್ಮಾನಿತರನ್ನು ಮತ್ತು ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಉಭಯ ಸಂಘಗಳ ವತಿಯಿಂದ ಬಿಇಒ ಗಿರಿಜಮ್ಮ ಮತ್ತು ಭಾಸ್ಕರ್ ಅವರನ್ನು ಸನ್ಮಾನಿಸಲಾಯಿತು.
ರಾಜೇಂದ್ರ ಭಟ್ ಕೆ ಕಾರ್ಯಕ್ರಮ ನಿರ್ವಹಣೆಯನ್ನು ಮಾಡಿದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಮುಖ್ಯಸ್ಥ ಸಂತೋಷ್ ಶೆಟ್ಟಿ ಅವರು ಉಪಸ್ಥಿತರಿದ್ದರು. ಶಿಕ್ಷಕರ ಸಂಘದ ಕಾರ್ಯದರ್ಶಿ ಸದಾಶಿವ ಬಾಯರಿ ಅವರು ಧನ್ಯವಾದ ಸಲ್ಲಿಸಿದರು.