×
Ad

ಶ್ರದ್ಧಾಭಕ್ತಿಪೂರ್ವಕ ಹಬ್ಬ ಆಚರಣೆಗಿಲ್ಲ ಅಡ್ಡಿ: ಪದ್ಮರಾಜ್

Update: 2025-08-22 21:06 IST

ಮಂಗಳೂರು, ಆ.22: ನಮ್ಮ ಧರ್ಮಗಳ ಸಂಸ್ಕೃತಿ ಪ್ರಕಾರ ಶ್ರದ್ಧಾಪೂರ್ವಕವಾಗಿ ಹಬ್ಬಗಳ ಆಚರಣೆಗೆ ಯಾರಿಂದಲೂ ತೊಂದರೆ ಆಗದು. ಹಬ್ಬ ಹರಿದಿನಗಳನ್ನು ವೈಭದಿಂದ ಆಚರಿಸಲು ಯಾವ ಅಡೆತಡೆಯೂ ಇಲ್ಲ ಎಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾನೂನಿನ ಚೌಕಟ್ಟಿನಲ್ಲಿ ಡಿಜೆ ನಿಷೇಧಿಸಲಾಗಿದೆ. ಶ್ರದ್ಧಾಭಕ್ತಿಯ ಆಚರಣೆಗೆ ಪೊಲೀಸರು ಹಿಂದೆಯೂ ಅಡ್ಡಿ ಪಡಿಸಿಲ್ಲ. ಆದರೆ ಬಿಜೆಪಿಯವರಿಗೆ ಇಂತಹ ವಿಚಾರ ಬಿಟ್ಟರೆ ಮಾತನಾಡಲು ವಿಷಯವೇ ಇಲ್ಲ. ಜನರನ್ನು ತಪ್ಪುದಾರಿಗೆ ಎಳೆಯುವ ಕೆಲಸ ಹಿಂದಿ ನಿಂದಲೂ ಮಾಡಿಕೊಂಡು ಬಂದಿದ್ದಾರೆ. ಜನಪ್ರತಿನಿಧಿಗಳನ್ನು ಮತದಾರರು ಆಯ್ಕೆ ಮಾಡಿದ್ದು, ಜನಪರ ಕೆಲಸ ಮಾಡಲು ಎಂದವರು ಹೇಳಿದರು.

ಬಿಜೆಪಿ ಸರ್ಕಾರ ಇರುವಾಗಲೇ ಸಮಯದ ಬಗ್ಗೆ ಕಾನೂನು ತರಲಾಗಿದೆ. ಅಧಿಕಾರಿಗಳ ಕೆಲಸ ಕಾನೂನನ್ನು ಪಾಲನೆ ಮಾಡುವುದು. ಆದರೂ ಕೂಡಾ ಆಯಾಯ ಭೌಗೋಳಿಕ ಪ್ರದೇಶದಲ್ಲಿ ನಡೆಯುವ ಹಬ್ಬಗಳಿಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಿಂದೆಯೂ ಅವಕಾಶ ಕೊಟ್ಟಿತ್ತು ಮುಂದೆಯೂ ಕೊಡಲಿದ್ದಾರೆ. ಎಲ್ಲಿಯೂ ತೊಂದರೆ ಇಲ್ಲ. ಈ ಬಾರಿಯೂ ಧೈರ್ಯದಿಂದ ಹೇಳ್ತಾ ಇದ್ದೇವೆ, ಮುಂದೆ ಬರುವ ಗಣೇಶೋತ್ಸವ, ದಸರಾ ಹಬ್ಬಗಳೂ ಕೂಡ ಹಿಂದೆ ನಾವು ಯಾವ ರೀತಿ ಮಾಡುತ್ತಾ ಇದ್ದೇವೋ ಅದೇ ರೀತಿ ಆಚರಣೆಗೆ ತೊಂದರೆ ಇಲ್ಲ. ಈ ಬಗ್ಗೆ ನಾನು ಮಂಗಳೂರು ಪೊಲೀಸ್ ಕಮೀಷನರ್ ಅವರನ್ನು ಭೇಟಿಯಾಗಿದ್ದೆ. ಕಾನೂನನ್ನು ಮೀರಿ ಮಾಡಿ ಎಂದು ಅವರು ಹೇಳಲು ಆಗುವು ದಿಲ್ಲ. ಕಾನೂನಿನ ಚೌಕಟ್ಟಿನೊಳಗಡೆ ಮಾಡಿ, ಆದರೆ ಡಿಜೆಗೆ ಅವಕಾಶವಿಲ್ಲ, ಅದು ನಮ್ಮ ಸಂಸ್ಕೃತಿಯ ಚೌಕಟ್ಟು ಕೂಡ ಅಲ್ಲ. ಅದನ್ನು ನಿಷೇಧಿಸಬೇಕು ಎಂದು ಹಿಂದಿನಿಂದಲೂ ಆಗ್ರಹವಿದ್ದು, ಅದರ ಬಗ್ಗೆ ಅವರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಮೊಸರು ಕುಡಿಕೆಯ ಸಂದರ್ಭ ತೊಕ್ಕೊಟ್ಟು, ಕುಂಪಲದಲ್ಲಿಯೂ ಆಚರಣೆ ಆಗಿದೆ. ಸಮಯಾವಕಾಶ 11 ಗಂಟೆ ಇದ್ದರೂ ರಾತ್ರಿ 2 ಗಂಟೆವರೆಗೆ ಮೆರವಣಿಗೆ ನಡೆದಿದೆ. ಯಾರಿಗೂ ತೊಂದರೆ ಮಾಡಿಲ್ಲ ಎಂದವರು ಹೇಳಿದರು.

ಗೋಷ್ಟಿಯಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಎಂ.ಎಸ್.ಮಹಮ್ಮದ್, ನವೀನ್ ಡಿಸೋಜ, ಸುಭಾಶ್ಚಂದ್ರ ಶೆಟ್ಟಿ, ಅಪ್ಪಿಲತಾ, ಶಶಿಧರ ಹೆಗ್ಡೆ, ಚಿತ್ತರಂಜನ್, ಶಾಹುಲ್ ಹಮೀದ್, ನವಾಜ್, ದಿನೇಶ್, ವಿಕಾಸ್, ನೀರಜ್‌ಪಾಲ್, ಪ್ರೇಮ್ ಬಳ್ಳಾಲ್‌ಬಾಗ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News