ವಿವಿಯಲ್ಲಿ ಜೀವ ವೈವಿಧ್ಯ ದಾಖಲಾತಿ, ಪರಿಸರ ಸಂರಕ್ಷಣೆಗೆ ಆದ್ಯತೆ: ಪ್ರೊ.ಪಿ.ಎಲ್.ಧರ್ಮ
'ಮಂಗಳೂರು ವಿವಿ ಆವರಣದ ಪ್ರಾಣಿಜಾಲ ವೈವಿಧ್ಯತೆ' ಕೃತಿ ಬಿಡುಗಡೆ
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಆವರಣವು ಮಹತ್ವದ ಪರಿಸರ ಮತ್ತು ಶೈಕ್ಷಣಿಕ ಸಂಪನ್ಮೂಲ ಕೇಂದ್ರವಾಗಿದೆ. ಅನೇಕ ಹಸಿರು ಉಪಕ್ರಮಗಳ ಮೂಲಕ ಸಮೃದ್ಧ ನೈಸರ್ಗಿಕ ಪರಿಸರವನ್ನು ಕಾಪಾಡಿಕೊಂಡಿದೆ. ಜೀವವೈವಿಧ್ಯ ದಾಖಲಾತಿ ಹಾಗೂ ಪರಿಸರ ಸಂರಕ್ಷಣೆ ಕುರಿತಂತೆ ಇನ್ನಷ್ಟು ಮಹತ್ವದ ಯೋಜನೆಗಳನ್ನು ರೂಪಿಸಲಾಗುವುದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದ್ದಾರೆ.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗವು ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಹಯೋಗ ಸಹಯೋಗದೊಂದಿಗೆ ಮಂಗಳೂರು ವಿವಿ ಕ್ಯಾಂಪಸ್ ನ ಪ್ರಾಣಿ ವೈವಿಧ್ಯತೆಯ ಕುರಿತಾದ ಕೃತಿ 'ಮಂಗಳೂರು ವಿಶ್ವವಿದ್ಯಾಲಯ ಆವರಣದ ಪ್ರಾಣಿಜಾಲ ವೈವಿಧ್ಯತೆ – ಒಂದು ಚಿತ್ರಮಾಲಿಕೆ ಮಾರ್ಗದರ್ಶಿ' ಯನ್ನು ಶುಕ್ರವಾರ ಮಂಗಳೂರು ವಿವಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಇಂತಹ ದಾಖಲಾತಿ, ಸಮೀಕ್ಷೆಗಳು ಹೆಚ್ಚು ಸ್ಥಳೀಯ ಪ್ರಭೇದಗಳನ್ನು ಪತ್ತೆಹಚ್ಚಲು ಮತ್ತು ಕಾಲಾನುಕ್ರಮದಲ್ಲಿ ಜೀವಿವೈವಿಧ್ಯದ ಬದಲಾವಣೆಗಳನ್ನು ತಿಳಿಯಲು ಸಹಾಯ ಮಾಡುತ್ತವೆ ಎಂದ ಅವರು ಈ ಐತಿಹಾಸಿಕ ಯೋಜನೆಗೆ ಸಹಯೋಗ ನೀಡಿದ ಭಾರತೀಯ ಪ್ರಾಣಿ ಸಮೀಕ್ಷೆ ಸಂಸ್ಥೆಗೆ ಅವರು ಕೃತಜ್ಞತೆ ಸಲ್ಲಿಸಿದರು.
ಮಂಗಳೂರು ವಿವಿ ಕುಲಸಚಿವ ಕೆ.ರಾಜು ಮೊಗವೀರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಭಾರತೀಯ ಪ್ರಾಣಿ ಸಮೀಕ್ಷೆ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ರಾಮಕೃಷ್ಣ ಜೀವಿವೈವಿಧ್ಯದ ದಾಖಲಾತಿಯ ಮಹತ್ವವನ್ನು ಒತ್ತಿ ಹೇಳಿದ ಅವರು, ಆಧುನಿಕ ತಂತ್ರಜ್ಞಾನ ಮತ್ತು ಪರಿಸರಸ್ನೇಹಿ ವಿಧಾನಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ಸಾಹ ಮತ್ತು ಬದ್ಧತೆಯಿಂದ ಇಂತಹ ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಪ್ರಾಧ್ಯಾಪಕ ಡಾ.ಮುಹಮ್ಮದ್ ಜಾಫರ್ ಪಾಲೋಟ್, ಪ್ರೊ. ರಾಜಾರಾಮ ತೋಳ್ಪಾಡಿ, ಡಾ.ನರಸಿಂಹಯ್ಯ ಎನ್., ಪ್ರೊ.ಮಂಜಯ್ಯ, ಪ್ರೊ.ಚಂದ್ರಶೇಖರ್ ಜೋಶಿ, ಪ್ರೊ.ಸರೋಜಿನಿ, ಡಾ.ರಮೇಶ್ ಗಾಣಿ, ಡಾ.ಸತೀಶ್, ಪ್ರೊ.ವಿಶಾಲಾಕ್ಷಿ, ಪ್ರೊ.ಗಣೇಶ್ ಸಂಜೀವ, ಯಮುನಾ, ಡಾ.ತಿರುಮಲೇಶ್, ಡಾ.ಉದಯ ಕುಮಾರ್ ಉಪಸ್ಥಿತರಿದ್ದರು.
ವಿಭಾಗದ ಮುಖ್ಯಸ್ಥರು ಹಾಗೂ ಕಾರ್ಯಕ್ರಮದ ಸಂಚಾಲಕ ಡಾ.ಕೆ.ಎಸ್.ಶ್ರೀಪಾದ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಡಾ.ಎಂ.ಎಸ್.ಮುಸ್ತಾಕ್ ವಂದಿಸಿದರು. ಅಮೃತಾ ಕಾರ್ಯಕ್ರಮ ನಿರೂಪಿಸಿದರು.
ಯೂನಿವರ್ಸಿಟಿ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ ಸ್ಟ್ರೀಟ್, ಹಾಗೂ ಸೈಂಟ್ ಅಲೋಶಿಯಸ್ ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜೀವ ವೈವಿಧ್ಯತ, ಪರಿಸರ ಪರ ಕಾಳಜಿಯ ಅಧ್ಯಯನಗಳು ಹೆಚ್ಚೆಚ್ಚು ನಡೆಯಬೇಕು. ಮಂಗಳೂರು ವಿವಿ ಕ್ಯಾಂಪಸ್ ನಲ್ಲಿ ಇಂತಹ ಅಧ್ಯಯನ ನಡೆದು ಕೃತಿಯ ರೂಪದಲ್ಲಿ ಪ್ರಕಟಗೊಂಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.
-ಕೆ.ರಾಜು ಮೊಗವೀರ, ಕುಲಸಚಿವರು, ಮಂಗಳೂರು ವಿಶ್ವವಿದ್ಯಾನಿಲಯ