×
Ad

ಸೌಜನ್ಯಾ ಪ್ರಕರಣ, ಇತರ ದೌರ್ಜನ್ಯ ಆರೋಪಗಳ ತನಿಖೆಯಾಗಲಿ: ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

ಧರ್ಮಸ್ಥಳ ಬಗ್ಗೆ ವೀಡಿಯೋಗೆ ಹಣದ ವ್ಯವಹಾರದ ಶಂಕೆ: ಪ್ರಕರಣ ಎನ್ಐಎಗೆ ವಹಿಸಲು ಒತ್ತಾಯ

Update: 2025-08-26 12:30 IST

ಮಂಗಳೂರು, ಆ.26: ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸೇರಿದಂತೆ ಇತರ ದೌರ್ಜನ್ಯಗಳ ಆರೋಪಗಳ ಬಗ್ಗೆ ಎಸ್ಐಟಿ ಸೇರಿದಂತೆ ಯಾವುದೇ ತನಿಖೆಗೆ ನಮ್ಮ ಅಭ್ಯಂತರವಿಲ್ಲ. ಆದರೆ ಧರ್ಮಸ್ಥಳದ ಬಗ್ಗೆ ವೀಡಿಯೋ ಮಾಡಿ ಕ್ಷೇತ್ರದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಡಿಸುವ ಷಡ್ಯಂತ್ರ ನಡೆಸಲಾಗಿದ್ದು, ಇದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣದ ಹರಿವಿನ ಬಗ್ಗೆ ಶಂಕೆ ಇದೆ. ಆದ್ದರಿಂದ ಪ್ರಕರಣವನ್ನು ಎನ್ಐಎಗೆ ವಹಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಒತ್ತಾಯಿಸಿದ್ದಾರೆ.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ನಡೆಯುತ್ತಿರುವ ಎಸ್ಐಟಿ ತನಿಖೆ ಬಗ್ಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಹಿಂದೂ ಧರ್ಮ ಕ್ಷೇತ್ರದ ಬಗ್ಗೆ ಆರೋಪಿಸಿ ಎಐ ಮೂಲಕ ಸಮೀರ್ ಎಂ.ಡಿ. ಮಾಡಿರುವ ವೀಡಿಯೋದಿಂದ ಪ್ರಕರಣ ಅಂತಾರಾಷ್ಟ್ರೀಯವಾಗಿ ಪ್ರಸಾರವಾಗಿದೆ. ಇದಕ್ಕೆ ಸಾಕಷ್ಟು ಹಣ ಪೂರೈಕೆಯಾಗಿರುವ ಅನುಮಾನವಿದ್ದು, ತನಿಖೆಯನ್ನು ಎನ್ಐಎಗೆ ವಹಿಸುವಂತೆ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ವೀಡಿಯೋ ಮೂಲಕ ಅನ್ಯ ಧರ್ಮದ ವ್ಯಕ್ತಿ ಇಷ್ಟೊಂದು ಆರೋಪ ಮಾಡಿದರೂ ಹಿಂದೂ ಧರ್ಮ ಸಹನೆಯಿಂದ ಇದೆ. ಅದೇ ಇನ್ನೊಂದು ಧರ್ಮದ ಬಗ್ಗೆ ಈ ರೀತಿ ಆಗಿದ್ದರೆ ಕತೆ ಏನಾಗುತಿತ್ತು ಎಂದು ಪ್ರಶ್ನಿಸಿದ ಸತೀಶ್ ಕುಂಪಲ, ಸಮೀರ್ ಎಂ.ಡಿ.ಯನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಧರ್ಮಸ್ಥಳದ ಪ್ರಕರಣದಲ್ಲಿ ಒಂದೆಡೆ ಸಮೀರ್ ಹಾಗೂ ಇನ್ನೊಂದೆಡೆ ಸೈಮನ್ ಎಂಬ ಅನ್ಯ ಧರ್ಮೀಯರ ಪಾತ್ರವೇನು? ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಯಾಕೆ ಮಾಡಿದ್ದಾರೆ ಎಂಬುದು ತಿಳಿಯಬೇಕು ಎಂದು ಅವರು ಹೇಳಿದರು.

ಎಸ್ಐಟಿಯಿಂದ ಪ್ರಸಕ್ತ ನಡೆಯುತ್ತಿರುವ ತನಿಖೆಯ ಬಗ್ಗೆ ವಿಶ್ವಾಸ ಇಲ್ಲದೆ ಎನ್ಐಎಗೆ ತನಿಖೆಗೆ ಬಿಜೆಪಿ ಒತ್ತಾಯಿಸುತ್ತಿದೆಯೇ ಎಂಬ ಪ್ರಶ್ನೆಗೆ, ಎಸ್ಐಟಿ ತನಿಖೆ ಮೇಲೆ ಯಾವುದೇ ಆಕ್ಷೇಪವಿಲ್ಲ. ಆದರೆ ಧರ್ಮಸ್ಥಳ ಕ್ಷೇತ್ರದ ಬಗ್ಗೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಅದಕ್ಕೆ ಸಾಕಷ್ಟು ಮಂದಿ ಪ್ರಾಯೋಜಕತ್ವ ನೀಡಿದ್ದಾರೆ. ಹಣದ ವ್ಯವಹಾರ ನಡೆದಿದೆ. ಆರ್ಟಿಫಿಶಿಯಲ್ ಇಂಟೆಲೆಜೆನ್ಸಿ ವೀಡಿಯೋ ಮಾಡಿ ಹಂಚಲು ಹಣದ ಅಗತ್ಯವಿದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.

ಹಣದ ವ್ಯವಹಾರದ ಬಗ್ಗೆ ಅಥವಾ ಎಷ್ಟು ಹಣದ ವ್ಯವಹಾರ ನಡೆದಿದೆ ಎಂಬ ಬಗ್ಗೆ ದಾಖಲೆ ಇದೆಯೇ ಎಂಬ ಪ್ರಶ್ನೆಗೆ, ಆ ಬಗ್ಗೆ ಅನುಮಾನವಿದೆ, ತನಿಖೆಯಾಗಲಿ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಂಜಯ್ ಪ್ರಭು, ಪ್ರೇಮಾನಂದ ಶೆಟ್ಟಿ, ವಸಂತ ಜೆ. ಪೂಜಾರಿ ಉಪಸ್ಥಿತರಿದ್ದರು.

ಸೆ.1ರಂದು ಬಿಜೆಪಿಯಿಂದ ಧರ್ಮಸ್ಥಳ ಭೇಟಿ

ದ.ಕ. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 50 ಸಾವಿರದಿಂದ ಒಂದು ಲಕ್ಷದವರೆಗೆ ಬಿಜೆಪಿ ಕಾರ್ಯಕರ್ತರು ಸೆಪ್ಟಂಬರ್ 1ರಂದು ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿನ ಧಾರ್ಮಿಕ ನಂಬಿಕೆ ಜತೆ ನಾವಿದ್ದೇವೆ ಎಂಬುದನ್ನು ತೋರಿಸುವ ಸಲುವಾಗಿ ಈ ಭೇಟಿ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News