×
Ad

ಉಪ್ಪಿನಂಗಡಿ | ಸರ್ವೀಸ್ ರಸ್ತೆ ಕಾಮಗಾರಿ ವಿಳಂಬ: ವರ್ತಕರಿಂದ ದೂರು

Update: 2025-12-05 01:01 IST

ಉಪ್ಪಿನಂಗಡಿ, ಡಿ.4: ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿಯ ಭಾಗವಾಗಿ ಉಪ್ಪಿನಂಗಡಿಯಲ್ಲಿ ಸರ್ವೀಸ್ ರಸ್ತೆ ಕಾಮಗಾರಿಯು ತೀರಾ ಮಂದಗತಿಯಲ್ಲಿ ನಡೆಯುತ್ತಿದ್ದು, ಇದರಿಂದಾಗಿ ಸುದೀರ್ಘ ಕಾಲ ಸಮಸ್ಯೆಗೆ ಸಿಲುಕುವಂತಾಗಿದೆ ಎಂದು ಇಲ್ಲಿನ ವರ್ತಕ ಸಂಘವು ಸ್ಥಳೀಯಾಡಳಿತ ಹಾಗೂ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದೆ.

ಮಳೆಗಾಲದ ಮೊದಲು ಶ್ಲಾಘನಾತ್ಮಕ ವೇಗದೊಂದಿಗೆ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದರೆ, ಮಳೆಗಾಲ ಮುಗಿದು ಮತ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆಯಾದರೂ ವೇಗ ಮಾತ್ರ ನಿರ್ಲಕ್ಷ್ಯದ ಪರಮಾವಧಿಯಂತಿದೆ. ಪರ್ಯಾಯವಾಗಿ ಕಲ್ಪಿಸಲಾದ ಮಾರ್ಗದಲ್ಲಿನ ವಾಹನ ಸಂಚಾರದಿಂದ ಪೇಟೆಯ ವ್ಯವಹಾರಿಕ ಕ್ಷೇತ್ರವನ್ನು ತಲ್ಲಣಗೊಳಿಸಿದ್ದು, ಕಾಮಗಾರಿಯನ್ನು ಆದ್ಯತೆಯ ನೆಲೆಯಲ್ಲಿ ಕ್ಷಿಪ್ರ ಗತಿಯಲ್ಲಿ ಪೂರ್ತಿಗೊಳಿಸಬೇಕೆಂದು ಅಗ್ರಹಿಸಿ ಬುಧವಾರ ಪಂಚಾಯತ್ ಕಚೇರಿಗೆ ಲಿಖಿತ ಮನವಿ ಸಲ್ಲಿಸಿದ್ದರು.

ಕಾಮಗಾರಿ ನಿರತ ಕೆಎನ್‌ಆರ್ ಸಂಸ್ಥೆಯ ಇಂಜಿನಿಯರ್‌ಗಳನ್ನು ಗುರುವಾರ ಸ್ಥಳಕ್ಕೆ ಕರೆಯಿಸಿದ ಪಂಚಾಯತ್ ಆಡಳಿತ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸುವಂತೆ ಅಗ್ರಹಿಸಿತು.

ಜನಪ್ರತಿನಿಧಿಗಳ ನಿರ್ಲಕ್ಷ್ಯ ಸಲ್ಲದು :

ಹಿರಿಯ ಉದ್ಯಮಿ ಯು.ರಾಮ, ವರ್ತಕ ಸಮೂಹ ಅನುಭವಿಸುತ್ತಿರುವ ಸಂಕಷ್ಠಗಳನ್ನು ಉಲ್ಲೇಖೀಸಿ, ಆಡಳಿತ ವ್ಯವಸ್ಥೆಯಾಗಲಿ, ಜನಪ್ರತಿನಿಧಿಗಳಾಗಲಿ ಈ ರೀತಿಯ ನಿರ್ಲಕ್ಷ್ಯ ಧೋರಣೆ ಅನುಸರಿಸುವುದು ಸರಿಯಲ್ಲ. ಪೇಟೆಯ ಪ್ರಮುಖ ಭಾಗದ ರಸ್ತೆಯಲ್ಲಿ ಅಗೆತ ಮಾಡಿ ವಾರಗಟ್ಟಲೆ ಕಾಮಗಾರಿ ನಡೆಸಿದರೆ, ಪೇಟೆಗೆ ಜನ ಬರುವುದಾದರೂ ಹೇಗೆ ? ವ್ಯಾಪಾರಿಗಳಿಗೆ ವ್ಯಾಪಾರವಾಗುವುದಾದರೂ ಹೇಗೆ ? ಎಂದು ಪ್ರಶ್ನಿಸಿದರು. ಜನರ ತಾಳ್ಮೆಯನ್ನು ಕೆಣಕಿದರೆ ಹೋರಾಟ ನಡೆಸುವುದು ಅನಿರ್ವಾಯ ಎಂದು ಎಚ್ಚರಿಸಿದರು.

ಇಂಜಿನಿಯರ್ ರಘುನಾಥ್ ರೆಡ್ಡಿ ವರ್ತಕ ಸಮೂಹದ ಅಗ್ರಹವನ್ನು ಆಲಿಸಿ , ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟ, ಕಾರ್ಯದರ್ಶಿ ಅಬ್ದುಲ್ ರಹ್ಮಾನ್, ಡಾ.ರಾಜಾರಾಮ ಕೆ.ಬಿ., ಉಪ್ಪಿನಂಗಡಿ ಗ್ರಾಪಂ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಪಂಚಾಯತ್ ಸದಸ್ಯ ಅಬ್ದುಲ್ ರಶೀದ್, ವರ್ತಕರಾದ ಮಸೂದ್, ಕೈಲಾರ್ ರಾಜಗೋಪಾಲ ಭಟ್, ಅನೂಷ್ ಕುಲಾಲ್, ಅರವಿಂದ ಭಂಡಾರಿ, ಪ್ರಕಾಶ್ ಬಿ., ರೂಪೇಶ್ ರೈ ಅಲಿಮಾರ, ಕರಾಯ ಸತೀಶ್ ನಾಯಕ್, ವಸಂತ ಗೌಡ, ಚೇತನ್ ಶೆಣೈ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News