ಸುರತ್ಕಲ್ | ಮನೆಗೆ ಅಕ್ರಮವಾಗಿ ಪ್ರವೇಶಿಸಿ ಒಂಟಿ ವೃದ್ಧೆಯನ್ನು ಬೆದರಿಸಿ ನಗ-ನಗದು ಲೂಟಿ
ಸುರತ್ಕಲ್, ಡಿ.4: ಒಂಟಿ ವೃದ್ಧೆಯ ಮನೆಯ ಹೆಂಚು ತೆಗೆದು ಒಳನುಗ್ಗಿದ ಕಳ್ಳರು ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮಿತ್ರಪಟ್ಣ ಎಂಬಲ್ಲಿ ಮಂಗಳವಾರ ತಡರಾತ್ರಿ ನಡೆದಿರುವುದು ವರದಿಯಾಗಿದೆ.
ಮಿತ್ರಪಟ್ಣ ನಿವಾಸಿ ಜಲಜಾ (86) ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ಕಳ್ಳರು ಸುಮಾರು 16 ಗ್ರಾಂ ತೂಕದ ಚಿನ್ನದ ಸರ, 20 ಗ್ರಾಂ ತೂಕದ 2 ಚಿನ್ನದ ಬಳೆಗಳು ಹಾಗೂ ಪರ್ಸ್ ನಲ್ಲಿಟ್ಟಿದ್ದ ಸುಮಾರು 14 ಸಾವಿರ ರೂ. ನಗದು ಕಳವುಗೈದಿದ್ದಾರೆ.
ಜಲಜಾ ತಮ್ಮ ಮನೆಯಲ್ಲಿ ಮಲಗಿದ್ದ ವೇಳೆ ಸುಮಾರು 2:30ರ ಸುಮಾರಿಗೆ ಇಬ್ಬರು ಯುವಕರು ನೀರು ಕೊಡುವಂತೆ ಬಾಗಿಲು ತಟ್ಟಿದ್ದಾರೆ. ಆಗ ಎಚ್ಚರಗೊಂಡ ಜಲಜಾ ನೀರು ಮನೆಯ ಹೊರಗಡೆ ಇದೆ. ಕುಡಿದು ಹೋಗಿ ಎಂದು ಹೇಳಿ ಮಲಗುವ ಕೋಣೆಗೆ ಹೋಗಿ ಮಲಗಲು ಮುಂದಾದಾಗ ಹೆಂಚು ಬೀಳುವ ಶಬ್ದ ಕೇಳಿಸಿದೆ. ತಕ್ಷಣ ಮನೆಯ ಛಾವಡಿಗೆ ತೆರಳಿ ನೋಡಿದಾಗ ಯುವಕನೋರ್ವ ಮಾಡಿನ ಹೆಂಚು ತೆಗೆದು ಮನೆಯ ಒಳಗೆ ಬಂದು ಮುಂಬಾಗಿಲನ್ನು ತೆರೆದು ಮತ್ತೋರ್ವನನ್ನು ಒಳಗೆ ಕರೆದಿದ್ದ.
ಚಿನ್ನಾಭರಣ ಎಲ್ಲಿದೆ ಎಂದು ವಿಚಾರಿಸಿದ ಕಳ್ಳರು ಜಲಜಾರ ಕುತ್ತಿಗೆಗೆ ಟವಲ್ ಸುತ್ತಿ ಹಿಡಿದು ಕೊಲೆ ಮಾಡುವುದಾಗಿ ಬೆದರಿಸಿ ಮನೆಯ ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣ ಮತ್ತು 14 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಜಲಜಾ ಸುರತ್ಕಲ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನುಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.