ಕರಾವಳಿಯ ಅಭಿವೃದ್ಧಿಗೆ ವಿಶೇಷ ಪ್ರವಾಸೋದ್ಯಮ ನೀತಿ: ಜಿಲ್ಲಾಧಿಕಾರಿ ದರ್ಶನ್
ಮಂಗಳೂರು, ಸೆ.7: ಕರಾವಳಿಯ ಅಭಿವೃದ್ಧಿಗೆ ವಿಶೇಷ ಪ್ರವಾಸೋದ್ಯಮ ನೀತಿ ರೂಪಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಮೂಲಕ ಚಿಂತನೆ ನಡೆಯುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.
ಅವರು ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಶನಿವಾರ ಕ್ರೆಡೈ ಮಂಗಳೂರು ಘಟಕದ 2025-27ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಬೆಂಗಳೂರು ನಂತರ ವೇಗವಾಗಿ ಅಭಿವೃದ್ಧಿ ಹೊಂದಲು ಸಾಕಷ್ಟು ಅವಕಾಶ ಹೊಂದಿರುವ ಹಾಗೂ ಸಂಪನ್ಮೂಲ ಹೊಂದಿರುವ ಮಂಗಳೂರು ನಗರವನ್ನು ಈ ನಿಟ್ಟಿನಲ್ಲಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕಾಗಿದೆ. ಮುಂಬೈ, ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶ ಮಂಗಳೂರಿಗೆ ಇದೆ. ಮೈಸೂರು, ಬೆಳಗಾವಿ, ಶಿವಮೊಗ್ಗದಲ್ಲೂ ಸಾಕಷ್ಟು ಹೂಡಿಕೆ ನಡೆಯುತ್ತಿದೆ. ಆದರೆ ಮಂಗಳೂರಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಹೂಡಿಕೆ ನಡೆಯುತ್ತಿಲ್ಲ. ದೇಶ ವಿದೇಶಗಳಲ್ಲಿ ಅದ್ಭುತವಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕರಾವಳಿಯ ಜನರು ಮಂಗಳೂರಿನ ಅಭಿವೃದ್ಧಿಯ ಬಗ್ಗೆ ಚಿಂತನೆ,ಹೂಡಿಕೆ ಮಾಡಬೇಕಾಗಿದೆ. ಸರಕಾರ ನೀತಿಗಳಿಂದ ಸಮಸ್ಯೆಗಳಿದ್ದರೆ ಅದನ್ನು ಸರಿಪಡಿಸಲು ಪ್ರಯತ್ನಿಸಲಾಗುವುದು.ಈ ನಿಟ್ಟಿನಲ್ಲಿ ಕ್ರೆಡೈ ಯಂತಹ ಸಂಸ್ಥೆಗಳ ಜೊತೆ ಜಿಲ್ಲಾಡಳಿತ ಸೂಕ್ತ ಸಹಕಾರ ನೀಡಲು ಸಿದ್ಧವಿದೆ ಎಂದರು.
ಕ್ರೆಡೈ ಕರ್ನಾಟಕ ದ ಅಧ್ಯಕ್ಷ ಭಾಸ್ಕರ್ ಟಿ. ನಾಗೇಂದ್ರ ಪದಗ್ರಹಣ ಕಾರ್ಯಕ್ರಮ ನೆರವೇರಿಸಿದರು.ಚುನಾಯಿತ ರಾಜ್ಯ ಘಟಕದ ಅಧ್ಯಕ್ಷ ಡಿ.ಬಿ.ಮೆಹ್ತಾ, ಕ್ರೆಡೈ ಮಂಗಳೂರು ಘಟಕದ ಪುನರಾಯ್ಕೆಯಾದ ಅಧ್ಯಕ್ಷ ವಿನೋದ್ ಪಿಂಟೋ, ಕಾರ್ಯದರ್ಶಿ ಧೀರಜ್ ಅಮೀನ್, ಕೋಶಾಧಿಕಾರಿ ಎಸ್.ಎಂ.ಅರ್ಶದ್ , ಜೊತೆ ಕಾರ್ಯದರ್ಶಿ ರೋಹನ್ ಮೊಂತೆರೋ, ಪೂರ್ವಾಧ್ಯಕ್ಷ ಪುಷ್ಪರಾಜ್ ಜೈನ್, ಉಪಾಧ್ಯಕ್ಷ ಸಿರಾಜ್ ಅಹ್ಮದ್, ಕಾರ್ಯಕಾರಿ ಸಮಿತಿ ಸದಸ್ಯರಾದ ಸುಧೀಶ್, ಗುರುಮೂರ್ತಿ, ಗಣೇಶ್, ಗುರುದತ್ತ ಶೆಣೈ, ಯುವ ಘಟಕದ ಸಂಚಾಲಕ ಪ್ರಶಾಂತ್ ಸನಿಲ್, ಮಹಿಳಾ ಘಟಕದ ಸಂಚಾಲಕಿ ಕೃತಿನ್ ಅಮೀನ್, ಯುವ ಘಟಕದ ಪದಾಧಿಕಾರಿ ನಿಶಾಂತ್ ಸೇಠ್ ಮೊದಲಾದವರು ನೂತನ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು.
ಕ್ರೆಡೈ ಮಂಗಳೂರು ಘಟಕದ ಸಿಇಒ ಅರ್ಜುನ್ ರಾವ್ ಸ್ವಾಗತಿಸಿದರು.