ದ.ಕ. ಜಿಲ್ಲಾದ್ಯಂತ ಮೊಸರುಕುಡಿಕೆ ಸಂಭ್ರಮ
ಮಂಗಳೂರು: ಶ್ರೀ ಕೃಷ್ಣಾಷ್ಟಮಿಯ ಪ್ರಯುಕ್ತ ನಗರ-ಗ್ರಾಮಾಂತರದಲ್ಲಿ ಸೋಮವಾರ ಸಂಜೆ ಮೊಸರು ಕುಡಿಕೆ ಸಂಭ್ರಮ ಕಂಡು ಬಂತು. ವಿವಿಧ ಸಂಘಟನೆ, ಮಂದಿರಗಳ ವತಿಯಿಂದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ನಡೆಯಿತು. ಉತ್ಸವದ ಹಿನ್ನೆಲೆಯಲ್ಲಿ ನಗರದ ವಿವಿಧ ಬೀದಿಗಳನ್ನು ಸಿಂಗರಿಸಲಾಗಿತ್ತು. ವಿದ್ಯುದ್ದಿಪಾಲಂಕೃತವಿತ್ತು. ಅಲ್ಲಲ್ಲಿ ಬಣ್ಣ ಬಣ್ಣಗಳ ಕುಡಿಕೆಗಳ ಶೃಂಗಾರವಿತ್ತು. ಶ್ರೀ ಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆಯ ಅಂಗವಾಗಿ ನಗರದ ವಿವಿಧೆಡೆ ಹುಲಿ ವೇಷಗಳೂ ಗಮನ ಸೆಳೆಯಿತು.
*ದ.ಕ. ಜಿಲ್ಲೆಯ ಪುರಾತನ ಮೊಸರು ಕುಡಿಕೆ ಉತ್ಸವ ಎಂಬ ಹಿರಿಮೆಯಿರುವ ನಗರದ ಅತ್ತಾವರದ ಸಾರ್ವಜನಿಕ ಶ್ರೀಕೃಷ್ಣ ಜಯಂತ್ಯುತ್ಸವ ಸಮಿತಿಯ ವತಿಯಿಂದ ಈ ಬಾರಿ 116ನೇ ವರ್ಷದ ಮೊಸರು ಕುಡಿಕೆ ಉತ್ಸವ ನೆರವೇ ರಿತು. ಕೋಟಿ ಚೆನ್ನಯ ವೃತ್ತದಿಂದ ಸಂಘ-ಸಂಸ್ಥೆಗಳ ವೈಭವದ ಪೂರ್ಣ ಕಲಾರೂಪಕ, ವೇಷ, ದೃಶ್ಯಾವಳಿ ಯೊಂದಿಗೆ ಶ್ರೀಕೃಷ್ಣನ ಶೋಭಾ ಯಾತ್ರೆ ನಡೆಯಿತು. ಅತ್ತಾವರ ಮೊಸರು ಕುಡಿಕೆ ಕಟ್ಟೆಯಲ್ಲಿ ಗೌರವಾರ್ಪಣೆ ಯೊಂದಿಗೆ ಸಮಾಪನಗೊಂಡಿತು. ರಸ್ತೆಯುದ್ದಕ್ಕೂ ಕಟ್ಟಿದ್ದ ಮೊಸರು ತುಂಬಿದ್ದ ನೂರಾರು ಕುಡಿಕೆಗಳನ್ನು ಒಡೆದು ಯುವ ಸಮೂಹ ಸಂಭ್ರಮಿಸಿತು.
*ನಗರದ ಕದ್ರಿಯಲ್ಲಿ ಶ್ರೀ ಕೃಷ್ಣ ಜನ್ಮ ಮಹೋತ್ಸವ ಸಮಿತಿ ವತಿಯಿಂದ 56ನೇ ವರ್ಷದ ಮೊಸರು ಕುಡಿಕೆ ಉತ್ಸವ ನಡೆಯಿತು. ಶ್ರೀಗೋಪಾಲಕೃಷ್ಣ ಮಠದಿಂದ ಮಂಟಪದಲ್ಲಿ ಶ್ರೀಕೃಷ್ಣನ ವಿಗ್ರಹವು ಭಜನೆ, ಸ್ತಬ್ಧಚಿತ್ರಗಳೊಂದಿಗೆ ಸಾಗಿತು. ಚೆಂಡೆ, ಹುಲಿ ಹಾಗೂ ಇತರ ವೇಷಭೂಷಣ ಮೆರುಗಿನೊಂದಿಗೆ ಹೊರಟ ಶೋಭಾಯಾತ್ರೆ ಕದ್ರಿ ಕಂಬಳ ರಸ್ತೆ, ಸಿಟಿ ಹಾಸ್ಪಿಟಲ್ ತಿರುವು ರಸ್ತೆಯಾಗಿ ಮಲ್ಲಿಕಟ್ಟೆಯಲ್ಲಿರುವ ಶ್ರೀ ಮಂಜುನಾಥ ಸ್ವಾಮಿಯ ಮಹಾದ್ವಾರವನ್ನು ಹಾದು ಕದ್ರಿ ದೇವಸ್ಥಾನದ ರಾಜಾಂಗಣ ತಲುಪಿತು. ಅಲ್ಲಲ್ಲಿ ಅಟ್ಟಳಿಗೆಗಳಲ್ಲಿ ಕಟ್ಟಿದ್ದ ಕುಡಿಕೆಗಳನ್ನು ಯುವಕರ ತಂಡಗಳು ಪಿರಮಿಡ್ ನಿರ್ಮಿಸಿ ಒಡೆದು ಸಂಭ್ರಮಿಸಿದರು.
* ಕಾವೂರು ಮೊಸರು ಕುಡಿಕೆ ಉತ್ಸವ ಸಮಿತಿಯಿಂದ 29ನೇ ವರ್ಷದ ಉತ್ಸವವು ಸೋಮವಾರ ಸಂಜೆ ನಡೆಯಿತು. ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಮೊಸರು ಕುಡಿಕೆ ಉತ್ಸವದ ವಿಜೃಂಭಣೆಯ ಮೆರವಣಿಗೆ ಹೊರಟಿತು. ಅದಕ್ಕೂ ಮೊದಲು ಕಾವೂರು ಕೇಂದ್ರ ಮೈದಾನದ ನಂದಗೋಕುಲ ವೇದಿಕೆಯಲ್ಲಿ ತಾಳಮದ್ದಳೆ, ಸಂಗೀತ ರಸಮಂಜರಿ ನಡೆಯಿತು.