ಸಾಮಾಜಿಕ ಜವಾಬ್ದಾರಿ ಬರಹಗಾರರ ಆಶಯವಾಗಬೇಕು : ವಿಲ್ಸನ್ ಕಟೀಲ್
ತುಳು ಭವನದಲ್ಲಿ ದಸರಾ ಬಹುಭಾಷಾ ಕವಿಗೋಷ್ಠಿ
ಮಂಗಳೂರು, ಸೆ.20: ಪ್ರಸಕ್ತ ಕಾಲದಲ್ಲಿ ಕವಿಗಳಿಗೆ ಸಾಮಾಜಿಕ ಜಾಲತಾಣ ಸಹಿತ ಬರೆಯಲು ಅನೇಕ ಅವಕಾಶಗಳು ಇವೆ. ಆದರೆ ಬರಹಗಾರರು ಸಾಮಾಜಿಕ ಜವಾಬ್ದಾರಿಯ ಧ್ವನಿಯಾಗಿ ಶೋಷಣೆಯ ವಿರುದ್ಧ ಬರೆದಾಗಲೇ ಒಳ್ಳೆಯ ಕವಿತೆ ಸೃಷ್ಟಿಯಾಗಲು ಸಾಧ್ಯ ಎಂದು ಕವಿ ವಿಲ್ಸನ್ ಕಟೀಲು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ತುಳು ಪರಿಷತ್ ಹಾಗೂ ಮಯೂರಿ ಫೌಂಡೇಶನ್ ಜಂಟಿಯಾಗಿ ನಗರದ ಉರ್ವಸ್ಟೋರಿನ ತುಳುಭವನದಲ್ಲಿ ಶನಿವಾರ ಆಯೋಜಿಸಿದ 5ನೇ ವರ್ಷದ ದಸರಾ ಬಹುಭಾಷಾ ಕವಿಗೋಷ್ಠಿ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸನ್ನಿವೇಶದಲ್ಲಿ ಸಾಮಾಜಿಕ ಸ್ವಾಸ್ಥ್ಯ ಹಾಗೂ ಸಾಮರಸ್ಯವನ್ನು ಕಾಪಾಡಲು ತುಳುನಾಡಿನ ಪಾಡ್ದನಗಳಲ್ಲಿ ಉಲ್ಲೇಖ ಮಾಡಿರುವ ಸತ್ಯ, ನ್ಯಾಯ, ಧರ್ಮದ ಆಶಯಗಳು ಹಾಗೂ ಬ್ರಹ್ಮಶ್ರೀ ನಾರಾಯಣ ಗುರು, ಮಹಾತ್ಮ ಗಾಂಧಿ, ಬಸವಣ್ಣ ಅವರಂತಹ ದಾರ್ಶನಿಕರ ಆದರ್ಶಗಳನ್ನು ಪರಿಸರದ ಹಾಗೂ ಸ್ಥಳೀಯ ಭಾಷೆಗಳ ಮೂಲಕ ಅಭಿವ್ಯಕ್ತಪಡಿಸುವ ಅಗತ್ಯ ಇದೆ ಎಂದು ವಿಲ್ಸನ್ ಕಟೀಲು ಅಭಿಪ್ರಾಯಪಟ್ಟರು.
ತುಳು ಅಕಾಡಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಮಲಾರು ಜಯರಾಮ್ ರೈ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ಮಯೂರಿ ಫೌಂಡೇಶನ್ ಅಧ್ಯಕ್ಷ ಜಯ ಕೆ. ಶೆಟ್ಟಿ ಮುಂಬೈ, ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ, ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಚಂಚಲ ತೇಜೋಮಯ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ ಉಪಸ್ಥಿತರಿದ್ದರು.
ಕವಿಗಳಾದ ಚೆನ್ನಪ್ಪಅಳಿಕೆ (ತುಳು), ಮಂಜುಳಾ ಶೆಟ್ಟಿ (ತುಳು), ಸತೀಶ್ ಪಡುಬಿದ್ರಿ (ಕೊರಗ ಭಾಷೆ), ಸದಾನಂದ ನಾರಾವಿ (ಕನ್ನಡ), ಕವಿತಾ ಅಡೂರು (ಶಿವಳ್ಳಿ ತುಳು), ರತ್ನಾ ಕೆ ಭಟ್ ತಲಂಜೇರಿ (ಹವ್ಯಕ ಕನ್ನಡ), ಕರುಣಾಕರ್ ಬಳ್ಕೂರು (ಕುಂದಗನ್ನಡ), ಶಮೀಮಾ ಕುತ್ತಾರ್ (ಬ್ಯಾರಿ), ಉದಯ ಭಾಸ್ಕರ್ (ಅರೆಭಾಷೆ), ಡಾ. ಮೀನಾಕ್ಷಿ ರಾಮಚಂದ್ರ (ಮಲೆಯಾಳಂ), ಬಾಲಕೃಷ್ಣ ಬೇರಿಕೆ (ಮರಾಠಿ) ರಾಧಿಕಾ ಪೈ (ಕೊಂಕಣಿ), ಚಂದ್ರಕಾಂತ್ ಗೋರೆ (ಚಿತ್ಪಾವನಿ), ಮೀರಾ ಭಟ್ (ಕರಾಡ) ಕವಿತೆಗಳನ್ನು ವಾಚಿಸಿದರು.
ತುಳು ಅಕಾಡಮಿಯ ಸದಸ್ಯರಾದ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಬಾಬು ಕೊರಗ ಪಾಂಗಾಳ ವಂದಿಸಿದರು. ಅಕ್ಷಯ ಆರ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.