ದಸರಾ ಗೊಂಬೆ ಪ್ರದರ್ಶನ, ತುಳುನಾಡಿನ ಪಾರಂಪರಿಕ ವಸ್ತು ಪ್ರದರ್ಶನ ಉದ್ಘಾಟನೆ
ಮಂಗಳೂರು: ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಕದ್ರಿ ಕಂಬಳ ಮಲ್ಲಿಕಾ ಬಡಾವಣೆಯಲ್ಲಿರುವ ಮಂಜು ಪ್ರಾಸಾದ ನಿವಾಸದ ವಾದಿರಾಜ ಮಂಟಪದ, ವಿಶ್ವೇಶತೀರ್ಥ ವೇದಿಕೆಯಲ್ಲಿ ಆಯೋಜಿಸಲಾದ ದಸರಾ ಪಾರಂಪರಿಕ ಗೊಂಬೆ ಪ್ರದರ್ಶನ ಹಾಗೂ ತುಳುನಾಡಿನ ಪಾರಂಪರಿಕ ವಸ್ತುಪ್ರದರ್ಶನ ಗುರುವಾರ ಉದ್ಘಾಟನೆಗೊಂಡಿತು.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ದೀಪ ಬೆಳಗಿ ಪ್ರದರ್ಶನವನ್ನು ಉದ್ಘಾಟಿಸಿ ‘ ಮೈಸೂರು ಪ್ರಾಂತದ ಪಾರಂಪರಿಕ ಗೊಂಬೆ ಪ್ರದರ್ಶನದ ಜೊತೆಗೆ ತುಳುನಾಡಿನ ಪಾರಂಪರಿಕ ವಸ್ತುಗಳ ಪ್ರದರ್ಶನವು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಂಡಿರುವುದು ಸ್ತುತ್ಯರ್ಹವಾಗಿದೆ ಎಂದರಲ್ಲದೆ, ಕೃಷಿ ಸಂಸ್ಕೃತಿ-ಋಷಿ ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಇಂತಹ ವಿಶಿಷ್ಟ ಪ್ರದರ್ಶನವು ಯುವ ಜನಾಂಗಕ್ಕೆ ನಮ್ಮ ಪರಂಪರೆಯನ್ನು ಪರಿಚಯಿಸುವುದಕ್ಕೆ ಸಹಕಾರಿ ’ಎಂದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಪ್ರಸ್ತಾವನೆಗೈದು ಈ ಕಾರ್ಯಕ್ರಮವು ನಮ್ಮನ್ನಗಲಿದ ಅಪ್ರತಿಮ ಸಾಹಿತಿ ಎಸ್.ಎಲ್ ಭೈರಪ್ಪ ನವರಿಗೆ ಸಮರ್ಪಿತ ಎಂದರು .
ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ, ದ.ಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕೇಶವ ಸ್ಮ ಸಂವರ್ಧನಾ ಸಮಿತಿಯ ಪ್ರಮುಖ ಗಜಾನನ ಪೈ, ಸಾಮಾಜಿಕ ಕಾರ್ಯಕರ್ತ ಪಮ್ಮಿ ಕೊಡಿಯಾಲ್ ಬೈಲ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಬ್ದುಲ್ ರಹಿಮಾನ್ ಸುಬ್ಬಯ್ಯಕಟ್ಟೆ, ಜೀವವಿಮಾ ನಿಗಮದ ನಿವೃತ್ತ ಅಭಿವೃದ್ಧಿ ಅಧಿಕಾರಿ ಅರುಣ್ ವಿ.ರಾವ್, ಪ್ರಭಾಕರ ರಾವ್ ಪೇಜಾವರ, ಚಂದ್ರಶೇಖರ ಮಯ್ಯ, ವಿನೋದ ಕಲ್ಕೂರ, ಪೂರ್ಣಿಮಾ ರಾವ್ ಪೇಜಾವರ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.