×
Ad

ಉಳ್ಳಾಲ ನಗರ ಸಭೆ: ಸ್ಥಾಯಿ ಸಮಿತಿಗೆ ಅಧ್ಯಕ್ಷರ ನೇಮಕಕ್ಕೆ ಆಕ್ಷೇಪ

Update: 2025-09-29 20:03 IST

ಉಳ್ಳಾಲ: ನಗರ ಸಭೆ ಸ್ಥಾಯಿ ಸಮಿತಿಗೆ ಮೂರು ಮಂದಿಯನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಬಗೆ ಪರ - ವಿರೋಧ ಚರ್ಚೆಗಳು ನಡೆದು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಉಳ್ಳಾಲ ನಗರ ಸಭೆ ಸಾಮಾನ್ಯ ಸಭೆ ಯಲ್ಲಿ ನಡೆಯಿತು.

ನಗರ ಸಭೆ ಅಧ್ಯಕ್ಷೆ ಶಶಿಕಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೌನ್ಸಿಲರ್ ದಿನಕರ್ ಉಳ್ಳಾಲ ಅವರು ಸ್ಥಾಯಿ ಸಮಿತಿ ಗೆ ಮೂರು ಮಂದಿ ಅಧ್ಯಕ್ಷರ ನೇಮಕಾತಿ ಬಗೆ ಕಾರ್ಯ ಸೂಚಿ ಪಟ್ಟಿಯಲ್ಲಿ ಪ್ರಸ್ತಾಪಿಸಿಲ್ಲ. ಅವರ ನೇಮಕಾತಿ ಆದ ಬಗೆ ನಿರ್ಣಯ ಆಗದೇ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ‌ಮೂವರು ಅಧಿಕಾರ ವಹಿಸಿದ್ದು ಹೇಗೆ ? ಸ್ಥಾಯಿ ಸಮಿತಿ ಗೆ ಈ ರೀತಿ ಅಧ್ಯಕ್ಷರ ನೇಮಕ ಸರಿಯಲ್ಲ. ಜೆಡಿಎಸ್ ನಿಂದ ಕೌನ್ಸಿಲರ್ ಆಗಿ ಆಯ್ಕೆ ಆದವರು ಅವಧಿ ಮುಗಿಯುವ ಮೊದಲೇ ಕಾಂಗ್ರೆಸ್ ಸೇರಿ ಸ್ಥಾಯಿ ಸಮಿತಿಗೆ ಅಧ್ಯಕ್ಷ ಹೇಗೆ ಆಗುತ್ತಾರೆ? ಅವರನ್ನು ಅಮಾನತು ಮಾಡಬೇಕು ಎಂದರು.

ಸಹಾಯಕ ಕಾರ್ಯಪಾಲಕ ಅಭಿಯಂತರರಾದ ತೇಜು ಮೂರ್ತಿ ಮಾತನಾಡಿ ಸ್ಥಾಯಿ ಸಮಿತಿಗೆ ಮೂವರ ಅಧ್ಯಕ್ಷರ ನೇಮಕಕ್ಕೆ ತೀರ್ಮಾನ ಆಗಿದೆ. ಜಿಲ್ಲಾಧಿಕಾರಿ , ಶಾಸಕರ ಸೂಚನೆ ಮೇರೆಗೆ ಆಯ್ಕೆ ನಡೆದಿದೆ ಎಂದಾಗ ನಿರ್ಣಯ ಆಗಿರುವ ಬಗ್ಗೆ ಮಾಹಿತಿ ನೀಡಿ ಎಂದು ದಿನಕರ್ ಉಳ್ಳಾಲ ಪಟ್ಟು ಹಿಡಿದರು. ಈ ವಿಚಾರದಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಯಿತು.

ಜಬ್ಬಾರ್ ಮಾತನಾಡಿ, ದಿನಕರ್ ಉಳ್ಳಾಲ ಜೆಡಿಎಸ್ ಗೆ ರಾಜೀನಾಮೆ ನೀಡಿದ್ದಾರೆ ಅವರು ಯಾವ ಪಕ್ಷದಲ್ಲಿ ಇದ್ದಾರೆ ಎಂದು ಪ್ರಶ್ನಿಸಿದರು.

ಕುಡಿಯುವ ನೀರು ಪೈಪ್ ಲೈನ್ ನಲ್ಲಿ ಚರಂಡಿ ನೀರು ಮಿಶ್ರಿತ ಗೊಂಡು ಸರಬರಾಜು ಆಗುತ್ತಿದೆ.60 ಮನೆಗಳಿಗೆ ಕಲುಷಿತ ನೀರು ಹೋಗುತ್ತಿದೆ. ಮೂರು ವಾರ್ಡ್ ಗಳಲ್ಲಿ ಈ ಸಮಸ್ಯೆ ಇದೆ.ಇದನ್ನು ಇಂಜಿನಿಯರ್ ಗೆ ತೋರಿಸಿ ದ್ದೇವೆ. ಇದರಿಂದ ಜನರಿಗೆ ಜನರಿಗೆ ತೊಂದರೆ ಆಗುತ್ತಿದೆ. ಅಲ್ಲದೆ ಕುಡಿಯುವ ನೀರು ಪೈಪ್ ಲೈನ್ ಕಾಮಗಾರಿ ಗೆ ಗಮ್ ಬಳಕೆ ಮಾಡುವುದು ಅಪಾಯಕಾರಿ.ಇದರಿಂದ ವಾಂತಿಭೇದಿ ರೋಗ ಬಂದಿದೆ.ಈ ಬಗ್ಗೆ ಕ್ರಮ ಆಗಬೇಕು ಎಂದು ಅಯ್ಯೂಬ್ ಆಗ್ರಹಿಸಿದರು.

ಅಸ್ಗರ್ ಮಾತನಾಡಿ,ಕುಡಿಯುವ ನೀರಿನ ಸಮಸ್ಯೆಯೇ ಬಗೆ ಕರೆ ಮಾಡಿದರೆ ಎರಡು ದಿನ ಬಿಟ್ಟು ಬರುತ್ತಾರೆ. ಇದರಿಂದ ಸಮಸ್ಯೆ ಇತ್ಯರ್ಥ ಆಗದು ಎಂದರು. 

1.60 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಕಾಮಗಾರಿ ಅವ್ಯವಸ್ಥೆ ಆದರೆ ಹೇಗೆ, ಇದನ್ನು ಜವಾಬ್ದಾರಿ ಯುತ ವಾಗಿ ನಿರ್ವಹಣೆ ಮಾಡಬೇಕಲ್ವೇ ಎಂದು ದಿನಕರ್ ಉಳ್ಳಾಲ ಅಧಿಕಾರಿಗಳ ಗಮನ ಸೆಳೆದರು.

ಅಮೃತ 20 ಕುಡಿಯುವ ನೀರಿನ ಯೋಜನೆ ಸಹಾಯಕ ಇಂಜಿನಿಯರ್ ಶ್ರೀಕಾಂತ್ ಮಾತನಾಡಿ, ಇದನ್ನು ಪರಿಶೀಲನೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದರು.

ಚೆಂಡು ಗುಡ್ಡೆ, ಮಾಸ್ತಿಕಟ್ಟೆ ಸಹಿತ ನಗರ ಸಭೆ ವ್ಯಾಪ್ತಿಯ ಎಲ್ಲಾ ರಸ್ತೆಗಳು ಹೊಂಡಗಳಿಂದ ತುಂಬಿವೆ. ಈ ಹೊಂಡ ಮುಚ್ಚುವ ಕಾರ್ಯ ಆಗುತ್ತಿಲ್ಲ. ಚೆಂಡು ಗುಡ್ಡೆ ಬಳಿ ಪರವಾನಿಗೆ ಇಲ್ಲದೆ ಏಳು ಅಂತಸ್ತಿನ ಕಟ್ಟಡ ನಿರ್ಮಾಣ ಆಗುತ್ತಿದೆ. ಇದರಿಂದ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಸದಸ್ಯರೊಬ್ಬರು ಪ್ರಶ್ನಿಸಿದರು.

ಹೊಂಡಗಳ ರಸ್ತೆ ಗುರುತಿಸಿ ಶೀಘ್ರ ಕಾಮಗಾರಿ ಮಾಡಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ತೇಜು ಮೂರ್ತಿ ಸಭೆಗೆ ತಿಳಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ನೇಮಕದ ಬಗ್ಗೆ ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದ ಬಗೆ ದಿನಕರ್ ಉಳ್ಳಾಲ ಪ್ರಶ್ನಿಸಿ ದಾಗ ವ್ಯಾಪಕ ಚರ್ಚೆ ನಡೆಯಿತು. ನಗರಸಭೆ ವತಿಯಿಂದ ಜಾಹೀರಾತು ಮೊತ್ತ ನೀಡಲಾಗಿಲ್ಲ ಎಂದು ಅಧ್ಯಕ್ಷ ಶಶಿಕಲಾ ಹೇಳಿದರು.ಬಿಲ್ ಇಲ್ಲದೇ ಹಣ ನೀಡುವುದು ಹೇಗೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಖಲೀಲ್ ಪ್ರಶ್ನಿಸಿದರು.

2018-19 ನೇ ಸಾಲಿನ ಎಸ್ ಎಫ್ ಸಿ ವಿಶೇಷ ಅನುದಾನ ದಡಿ ಕೆ.ಪಿ.ಪಿ. ಮುಖಾಂತರ ಟೆಂಡರ್ ಕರೆದ ಕಾಮಗಾರಿಗೆ ಅನುಮೋದನೆ ನೀಡುವ ಬಗ್ಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.

ಉಳ್ಳಾಲ ದರ್ಗಾ ಉರೂಸ್ ಸಮಾರಂಭಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಆಗಮಿಸಿದ ಸಂದರ್ಭ ವೇದಿಕೆಯಿಂದ ಹಿಡಿದು 10 ಮೀ.ವ್ಯಾಪ್ತಿಯಲ್ಲಿ ಎರಡು ಶೌಚಾಲಯ ನಿರ್ಮಾಣಕ್ಕೆ 60,000 ರೂ. ಪಾವತಿಗೆ ಎಸ್ ಡಿಪಿಐ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಸರ್ಕಾರದ ಆದೇಶ ಮೇರೆಗೆ ನಡೆಯುವ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ಗೆ ದೂರದೂರುಗಳ ಶಿಕ್ಷಕರ ನೇಮಕಾತಿ ಮಾಡಬಾರದು. ಅವರಿಗೆ ಸಮೀಕ್ಷೆ ನಡೆಸಲು ಆಗುವುದಿಲ್ಲ. ದಿನಕ್ಕೆ ಒಂದು ಸಮೀಕ್ಷೆ ಕಷ್ಟದಲ್ಲಿ ಆಗು ತ್ತದೆ. ಇದರ ಬದಲು ಹತ್ತಿರದ ಶಾಲೆಗಳ ಶಿಕ್ಷಕರ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಅವಕಾಶ ನೀಡಬೇಕು ಎಂದು ಕೌನ್ಸಿಲರ್ ದಿನಕರ್ ಅವರು ಗ್ರಾಮಕರಣಿಕ ಸುರೇಶ್ ಅವರ ಗಮನ ಸೆಳೆದರು.

ಪೈಪ್ ಲೈನ್ ಕಾಮಗಾರಿಯಿಂದ ಇಂಟರ್ ಲಾಕ್ ಹಾನಿ ಆಗಿದೆ.ಅದನ್ನು ದುರಸ್ತಿ ಮಾಡುವ ಜವಾಬ್ದಾರಿ ಅಮೃತ್ 2.0 ಯೋಜನೆ ಯ ಅಧಿಕಾರಿಗಳದ್ದು, ಇದನ್ನು ದುರಸ್ತಿ ಯಾಕೆ ಮಾಡಿಲ್ಲ ಎಂದು ಗೀತಾ ಬಾಯಿ ಪ್ರಶ್ನಿಸಿದರು. ಸಭೆಯಲ್ಲಿ ಅಧಿಕಾರಿಗಳ ಗೈರು ಹಾಜರಿ ಬಗೆ ವ್ಯಾಪಕ ಚರ್ಚೆ ನಡೆಯಿತು.

ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಶ್ರಫ್, ಖಲೀಲ್, ವೀಣ ಶಾಂತಿ ಡಿ ಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News