×
Ad

ಮೇಲ್ತೆನೆಯಿಂದ ಬ್ಯಾರಿ ಭಾಷಾ ದಿನಾಚರಣೆ

Update: 2025-10-03 12:33 IST

ದೇರಳಕಟ್ಟೆ, ಅ.3: ಬ್ಯಾರಿ ಎಲ್ತ್ ಕಾರ್-ಕಲಾವಿದಮಾರೊ ಕೂಟ(ಮೇಲ್ತೆನೆ)ದ ವತಿಯಿಂದ ಬ್ಯಾರಿ ಭಾಷಾ ದಿನವನ್ನು ನಾಟೆಕಲ್ನಲ್ಲಿರುವ ಎಲೈಟ್ ಟ್ಯೂಶನ್ ಸೆಂಟರ್ ನಲ್ಲಿ ಶುಕ್ರವಾರ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ, ಆಧುನಿಕ ಭರಾಟೆಯ ಮಧ್ಯೆಯೂ ಜನಸಾಮಾನ್ಯರ ದಿನಬಳಕೆಯ ಆಡುಮಾತುಗಳಿಂದ ಇವತ್ತು ಪ್ರಾದೇಶಿಕ ಭಾಷೆಗಳು ಉಳಿಯಲು ಸಾಧ್ಯವಾಗಿದೆ. ಉನ್ನತ ಶಿಕ್ಷಣ ಪಡೆದ ಹೆಚ್ಚಿನವರಲ್ಲಿ ಆಂಗ್ಲ ಭಾಷೆಯ ಮೇಲೆ ವ್ಯಾಮೋಹ ಹೆಚ್ಚಿದೆ. ಆದರೆ ಕೂಲಿ ಕಾರ್ಮಿಕರು, ಸಣ್ಣಪುಟ್ಟ ಕೆಲಸ ಮಾಡುವವರು ಮಾತೃಭಾಷೆಯಲ್ಲೇ ದಿನನಿತ್ಯ ವ್ಯವಹರಿಸುತ್ತಾರೆ. ಹಾಗಾಗಿ ಭಾಷಾ ದಿನಾಚರಣೆಯ ಸಂದರ್ಭ ಅಂತಹವರನ್ನು ಗುರುತಿಸಿ ಗೌರವಿಸುವ ಪ್ರಯತ್ನ ಆಗಬೇಕಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್, ಭಾಷೆಯ ಬೆಳವಣಿಗೆಯಲ್ಲಿ ತಾಯಂದಿರ ಪಾತ್ರ ಅಪಾರವಿದೆ. ತಾಯಿಯಿಂದಲೇ ಮಕ್ಕಳು ಮಾತೃಭಾಷೆಯನ್ನು ಕಲಿಯುತ್ತಾರೆ. ಹಾಗಾಗಿ ತಾಯಂದಿರಿಲ್ಲದ ಭಾಷಾ ದಿನಾಚರಣೆಯು ಅರ್ಥಪೂರ್ಣವಾಗದು. ಮುಂದಿನ ದಿನಗಳಲ್ಲಿ ಎಲ್ಲಾ ಬ್ಯಾರಿ ಸಂಘಟನೆಗಳು ತಾಯಂದಿರನ್ನು ಒಳಗೊಂಡಂತೆ ಕಾರ್ಯಕ್ರಮಗಳು ಆಯೋಜಿಸಲು ಕ್ರಮ ವಹಿಸಬೇಕು ಎಂದು ಅಭಿಪ್ರಾಯಪಟ್ಟರು.

ಮೇಲ್ತೆನೆಯ ಅಧ್ಯಕ್ಷ ವಿ.ಇಬ್ರಾಹೀಂ ನಡುಪದವು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸದಸ್ಯರಾದ ಇಬ್ರಾಹೀಂ ರಫೀಕ್ ಮುದುಂಗಾರುಕಟ್ಟೆ, ರಫೀಕ್ ಕಲ್ಕಟ್ಟ ಪಾಲ್ಗೊಂಡಿದ್ದರು.

ಕೋಶಾಧಿಕಾರಿ ಮನ್ಸೂರ್ ಅಹ್ಮದ್ ಸಾಮಣಿಗೆ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಟಿ.ಇಸ್ಮಾಯೀಲ್ ಮಾಸ್ಟರ್ ವಂದಿಸಿದರು. ಬಶೀರ್ ಕಲ್ಕಟ್ಟ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News