ಗಾಂಧೀಜಿ ದಲಿತರ ಮಿತ್ರ , ಯಾವತ್ತೂ ಶತ್ರುವಲ್ಲ: ಡಾ. ಹನುಮಂತಯ್ಯ
ಮಂಗಳೂರು: ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಅಸ್ಪಶ್ಯತೆ ಮತ್ತು ದಲಿತರು ಎದುರಿಸುತ್ತಿರುವ ಸಮಸ್ಯೆ ಗಳನ್ನು ಕೈಗೆತ್ತಿಕೊಂಡು ಹೋರಾಟ ನಡೆಸಿದ ನಡೆಸಿದ ಏಕೈಕ ನಾಯಕ ಮಹಾತ್ಮ ಗಾಂಧೀಜಿ. ಅವರು ದಲಿತರ ಮಿತ್ರ, ಯಾವತ್ತೂ ಶತ್ರುವಲ್ಲ ಎಂದು ಮಾಜಿ ರಾಜ್ಯಸಭಾ ಸದಸ್ಯ , ಕೆಪಿಸಿಸಿ ಪ್ರಚಾರ ಸಮಿತಿಯ ಸಹ ಅಧ್ಯಕ್ಷ ಡಾ.ಎಲ್ .ಹನುಮಂತಯ್ಯ ಹೇಳಿದ್ದಾರೆ.
ನಗರದ ಬೆಂದೂರ್‌ನ ಸಂತ ಸೆಬೆಸ್ಟಿಯನ್ ಹಾಲ್‌ನಲ್ಲಿ ಶನಿವಾರ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ನಡೆದ ‘ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮ ಮತ್ತು ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರ ಪದಗ್ರಹಣ , ಕಾರ್ಯಕರ್ತರ ಸಮಾವೇಶದಲ್ಲಿ ಪ್ರಧಾನ ಭಾಷಣ ಮಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಪ್ರತ್ಯೇಕ ಚುನಾವಣಾ ವ್ಯವಸ್ಥೆಯ ಬಗ್ಗೆ ಅಂಬೇಡ್ಕರ್ ಚಿಂತನೆ ನಡೆಸಿದ್ದರು. ಅವರ ಪ್ರಕಾರ ದಲಿತರಿಗೆ ಎರಡು ಮತಗಳು. ಒಂದು ದಲಿತರೇ ತಮ್ಮ ನಾಯಕನನ್ನು ಆಯ್ಕೆ ಮಾಡುವುದು. ಇತರರಂತೆ ಇನ್ನೊಂದು ಮತ. ಆದರೆ ಗಾಂಧೀಜಿ ಇದನ್ನು ಒಪ್ಪಲಿಲ್ಲ. ದಲಿತರಿಗೆ ಪ್ರತ್ಯೇಕ ಮಾಡಿದರೆ ಅವರ ಮೇಲೆ ದೌರ್ಜನ್ಯ ಹೆಚ್ಚುತ್ತದೆ ಎಂಬ ಕಾರಣಕ್ಕಾಗಿ ಗಾಂಧೀಜಿ ಈ ವಿಚಾರವನ್ನು ವಿರೋಧಿಸಿದ್ದರು. ಅವರು ೨೧ ದಿವಸಗಳ ಕಾಲ ಯರವಾಡ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದರು ಎಂದು ಹೇಳಿದರು.
ಗಾಂಧೀಜಿ ಮೂಲಭೂತ ತತ್ವ ಸರಳವಾಗಿ ಬದುಕುವುದು ಆಗಿತ್ತು. ಸರಳವಾಗಿ ಬದುಕುವುದರಿಂದ ದೇಶವನ್ನು ಕಾಪಾಡಬಹುದು ಎಂಬ ಕಲ್ಪನೆ , ಮೂಲಮಂತ್ರ ಅಹಿಂಸೆ ಆಗಿತ್ತು. ಗಾಂಧೀಜಿ ಶಸ್ತ್ರಾಸ್ತ್ರ ಹಿಡಿದಿದ್ದರೆ ಒಂದು ವರ್ಷ ಮೊದಲೇ ಸ್ವಾತಂತ್ರ್ಯ ಸಿಗುತ್ತಿತ್ತು ಎನ್ನುವ ಭಾವನೆ ಅವತ್ತು ಇತ್ತು. ಇವತ್ತು ಇತ್ತು. ಆದರೆ ಅಂದು ಸ್ವಾತಂತ್ರ್ಯಕ್ಕಾಗಿ ಹಿಡಿದ ಅಸ್ತ್ರವು ಶಸ್ತ್ರಾಸ್ತ್ರಕ್ಕಿಂತಲೂ ಬಲಿಷ್ಠವಾಗಿತ್ತು ಎಂದು ನುಡಿದರು.
ಗಾಂಧೀಜಿ ಸನಾತನ ಹಿಂದೂ ಧರ್ಮದಲ್ಲಿ ಅಚಲ ನಂಬಿಕೆ ಇಟ್ಟಿದ್ದರು. ಆದರೆ ಅವರನ್ನು ಆರ್‌ಎಸ್‌ಎಸ್‌ನವರು ಹಿಂದು ಎಂದು ಒಪ್ಪದೆ ಅವರು ಮುಸ್ಲಿಂ ಪರ ಎಂದು ಹೇಳಿದ್ದರು ಎಂದು ಹನುಮಂತಯ್ಯ ನುಡಿದರು.
೧೯೨೪ರ ಬೆಳಗಾವಿ ಅಧಿವೇಶನದಲ್ಲಿ ಗಾಂಧೀಜಿ ಸಾಮಾಜಿಕ ಬದಲಾವಣೆಯ ಸಂದೇಶ ನೀಡಿದ್ದರು. ಖಾದಿ ಬಟ್ಟೆ ಧರಿಸಲು , ಹಿಂದೂ -ಮುಸ್ಲಿಂ ನಡುವೆ ಸಹಬಾಳ್ವೆಗೆ ಕರೆ ನೀಡಿದ್ದರು ಎಂದು ನೆನಪಿಸಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಕೆಪಿಸಿಸಿ ಪ್ರಚಾರ ಸಮಿತಿಯ ಸಂಯೋಜಕರಾದ ಸುಧೀರ್ ಕುಮಾರ್ ಮುರೊಳ್ಯ ಮತ್ತು ಅಬ್ದುಲ್ ಮುನೀರ್ ಈ ಸಂದರ್ಭದಲ್ಲಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಂಸದ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಮಾತನಾಡಿ ಪ್ರಚಾರ ಸಮಿತಿ ಕೇವಲ ಚುನಾವಣೆಗೆ ಸೀಮಿತವಲ್ಲ. ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಅಪಾರ ಕೊಡುಗೆ ಕೊಟ್ಟಿದೆ. ಆದರೆ ಕಾಂಗ್ರೆಸ್ ಪ್ರಚಾರದಲ್ಲಿ ಹಿಂದುಳಿದಿದೆ. ಪಕ್ಷದ ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಶೇ ೫ರಷ್ಟು ಮಾತ್ರ ಪ್ರಚಾರ ಆಗುತ್ತಿದೆ. ಸುಳ್ಳು ಪ್ರಚಾರ ಕಾಂಗ್ರೆಸ್‌ಗೆ ಬೇಕಾಗಿಲ್ಲ. ಪಕ್ಷ ಮಾಡಿರುವ ಕೆಲಸಗಳ ನೈಜ ವಿಚಾರಗಳನ್ನು ಜನರ ಮುಂದಿಡಲು ಕೆಪಿಸಿಸಿ ಪ್ರಚಾರ ಸಮಿತಿ ಶ್ರಮಿಸುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ನೂತನ ಅಧ್ಯಕ್ಷ ಡೆನಿಸ್ ಡಿ ಸಿಲ್ವ ಅವರು ಅಧಿಕೃತವಾಗಿ ಪದಗ್ರಹಣ ಮಾಡಿದರು. ಅವರಿಗೆ ರಾಜ್ಯಾಧ್ಯಕ್ಷ ವಿನಯ ಕುಮಾರ್ ಸೊರಕೆ ಅವರು ಕಾಂಗ್ರೆಸ್ ಪಕ್ಷದ ಧ್ವಜವನ್ನು ಹಸ್ತಾಂತರಿಸಿದರು.
ಸಭೆಯಲ್ಲಿ ಸಂವಿಧಾನದ ಪೀಠಿಕೆ ವಾಚನ ನಡೆಯಿತು. ಮಾಜಿ ಸಚಿವ ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ,ರಾಜ್ಯಸಭಾ ಮಾಜಿ ಸದಸ್ಯ ಬಿ. ಇಬ್ರಾಹೀಂ, ಪಕ್ಷದ ಪ್ರಮುಖರಾದ ವಿವಿಧ ನಿಗಮ ಮಂಡಳಿ ಗಳ ಅಧ್ಯಕ್ಷರುಗಳಾದ ಎಂ. ಎ. ಗಫೂರ್, ಲಾವಣ್ಯ ಬಲ್ಲಾಳ್, ಶಾಲೆಟ್ ಪಿಂಟೋ, ವಿಶ್ವಾಸ್‌ದಾಸ್, ಮಂಜುನಾಥ್ ಪೂಜಾರಿ, ಟಿ. ಎಂ. ಶಹೀದ್ ತೆಕ್ಕಿಲ್, ಪಕ್ಷದ ಪ್ರಮುಖರಾದ ಪಿ. ವಿ. ಮೋಹನ್,ಪದ್ಮರಾಜ್ ಪೂಜಾರಿ, ಇನಾಯತ್ ಆಲಿ, ಎಂ. ಎಸ್. ಮೊಹಮ್ಮದ್, ಎಸ್ ಅಪ್ಪಿ, ಉಷಾ ಅಂಚನ್, ಶಾಹುಲ್ ಹಮೀದ್, ಇಬ್ರಾಹೀಂ ನವಾಜ್, ದಿನೇಶ್ ಮುಳೂರ್, ತೇಜಸ್ವಿ ರಾಜ್, ಚಂದ್ರಹಾಸ್ ರೈ, ಶಶಿಕಿರಣ್ ರೈ, ಉಪಸ್ಥಿತರಿದ್ದರು.
ಮಾಜಿ ಶಾಸಕ ಜೆ.ಆರ್. ಲೋಬೊ ಸ್ವಾಗತಿಸಿದರು. ಟಿ.ಕೆ.ಸುಧೀರ್ ವಂದಿಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು.