ಮಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ ಕಾರಿನ ಗಾಜು ಪುಡಿ; ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
ಮಂಗಳೂರು, ಅ.5: ರಾಷ್ಟ್ರೀಯ ಹೆದ್ದಾರಿ 66ರ ನಂತೂರ್‌ನಲ್ಲಿ ತನ್ನ ಸೂಚನೆಯನ್ನು ಪಾಲಿಸದೆ ಮುಂದುವರಿದ ಕಾರಿಗೆ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ಗುದ್ದಿದ ಪರಿಣಾಮವಾಗಿ ಕಾರಿನ ಹಿಂಬದಿಯ ಗಾಜು ಹಾನಿಗೊಂಡಿರುವ ಘಟನೆ ಗುರುವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಕಾರಿನಲ್ಲಿ ಚಾಲಕನು ಕುಡಿದು ವಾಹನ ಚಲಾಯಿಸುತ್ತಿದ್ದಾನೆಂದು ಅನುಮಾನ ಬಂದು ಪೊಲೀಸ್ ಕಾನ್‌ಸ್ಟೇಬಲ್ ಕಾರನ್ನು ನಿಲ್ಲಿಸುವಂತೆ ಚಾಲಕನಿಗೆ ಕೇಳಿಕೊಂಡರು. ಆದರೆ ಚಾಲಕನು ಕಾನ್‌ಸ್ಟೇಬಲ್‌ನ ಮಾತನ್ನು ಲೆಕ್ಕಿಸದೆ ಮುಂದುವರಿದಾಗ ಕಾನ್‌ಸ್ಟೇಬಲ್ ತನ್ನ ಕೈಯಲ್ಲಿದ್ದ ಮೊಬೈಲ್‌ನಿಂದ ಕಾರಿನ ಹಿಂಭಾಗದ ಗಾಜಿಗೆ ಗುದ್ದಿದ್ದಾರೆ. ಇದರ ಪರಿಣಾಮವಾಗಿ ಕಾರಿನ ಹಿಂಭಾಗದ ಗಾಜು ಒಡೆದಿದೆ ಎಂದು ತಿಳಿದು ಬಂದಿದೆ.
ಈ ಘಟನೆಯ ಬಳಿಕ ಸ್ಥಳದಲ್ಲಿ ಗುಂಪು ಜಮಾಯಿಸಿ ಗಾಜು ಒಡೆದು ಹಾಕಿರುವ ಆರೋಪದಲ್ಲಿ ಕಾನ್‌ಸ್ಟೇಬಲ್‌ನ್ನು ತರಾಟೆಗೆ ತೆಗದುಕೊಂಡ ಘಟನೆಯ ವೀಡಿಯೋ ವೈರಲ್ ಆಗಿದೆ. ಪಾನಮತ್ತನಾಗಿ ಕಾರು ಚಲಾಯಿಸಿದ ಆರೋಪದಲ್ಲಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.