ಭರತನಾಟ್ಯದಂತಹ ಕಲೆಗಳಿಂದ ಸೌಂದರ್ಯಪ್ರಜ್ಞೆ ಮೂಡಲು ಸಾಧ್ಯ: ಡಾ. ಮೋಹನ್ ಆಳ್ವ
ಮಂಗಳೂರು,ಅ.8; ಶಾಸ್ತ್ರೀಯ ಕಲೆಗಳಾದ ಭರತನಾಟ್ಯ, ಯಕ್ಷಗಾನ, ಮದ್ದಳೆ, ಚೆಂಡೆ, ಚಿತ್ರಕಲೆ ಹಾಗೂ ಕರ್ನಾಟಕ ಸಂಗೀತದ ಮೂಲಕ ಸೌಂದರ್ಯಪ್ರಜ್ಞೆ ಬೆಳೆಸುವ ಪ್ರಯತ್ನ ಸಮಾಜದ ಶ್ರೇಯೋಭಿವೃದ್ಧಿಗೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಮೂಡಬಿದಿರೆಯ ಆಳ್ವಾಸ್ ಎಜ್ಯುಕೇಶನ್ ಫೌಂಡೇಷನ್ ನ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಅಭಿಪ್ರಾಯಪಟ್ಟರು.
ಅವರು ಮಂಗಳೂರು ಪುರಭವನದಲ್ಲಿ ಸೋಮವಾರ ಕೊಲ್ಯ ನಾಟ್ಯನಿಕೇತನದ ಭರತನಾಟ್ಯ ಕಲಾವಿದ ಪ್ರದ್ಯುಮ್ನ ಅಶ್ವಿನ್ ತೇಜಸ್ವಿ ರಂಗಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ನಿವೃತ್ತ ಸೇನಾಧಿಕಾರಿ ಗಣೇಶ್ ಕಾರ್ಣಿಕ್ ಭರತನಾಟ್ಯ ಕೇವಲ ಪ್ರದರ್ಶನ ಕಲೆಯಲ್ಲ ಇದರಲ್ಲಿ ದೊಡ್ಡ ಅಧ್ಯಾತ್ಮ ಇದೆ. ಭಾರತೀಯ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಮ್ಮಲ್ಲಿರುವ ದಿವ್ಯತೆಯ ಅನುಸಂದಾನ ಮಾಡಿಕೊಳ್ಳುವಂತಹ ಅವಕಾಶ ನಮ್ಮ ಹಿರಿಯರು ಮಾಡಿಕೊಟ್ಟಿದ್ದಾರೆ ಎಂದರು.
ಕಲೆ ವಿದ್ಯಾರ್ಥಿಗಳಲ್ಲಿ ಚಿಂತನೆ, ಮಾನವೀಯತೆ ಮತ್ತು ಪ್ರಜ್ಞೆಯನ್ನು ವಿಸ್ತರಿಸುತ್ತದೆ ಎಂದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾನು ಕೆ. ಎಸ್. , ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಕುಲ ಸಚಿವ ಪ್ರೊ| ಡಾl ಹರ್ಷ ಹಾಲಹಳ್ಳಿ ಮಾತನಾಡಿದರು.
ನಾಟ್ಯನಿಕೇತನ ಕೊಲ್ಯ ಇದರ ನೃತ್ಯಗುರುಗಳಾದ ಶಾಂತಲಾ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾ ತಿಲಕ ನಾಟ್ಯಾಚಾರ್ಯ ಗುರು ಉಳ್ಳಾಲ ಮೋಹನ್ ಕುಮಾರ್ ಮತ್ತು ವಿದುಷಿ ರಾಜಶ್ರೀ ಉಳ್ಳಾಲ್ ಅವರಿಗೆ ನೃತ್ಯ ಕಲಾವಿದ ಪ್ರದ್ಯುಮ್ನ ಅಶ್ವಿನ್ ತೇಜಸ್ವಿ ಗುರುನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯಕ್ಷಗಾನ ಮದ್ದಳೆಗಾರ ಮುರಾರಿ ಕಡಂಬಡಿತ್ತಾಯ ಮತ್ತು ಯಕ್ಷಗುರು ರಾಕೇಶ್ ರೈ ಅಡ್ಕ ಅವರನ್ನು ಗೌರವಿಸಲಾಯಿತು.
ಹಿಮ್ಮೇಳದಲ್ಲಿ ನಟುವಂಗಂ ಮತ್ತು ನಿರ್ದೇಶನ ವನ್ನು ಗುರು ವಿದುಷಿ ರಾಜಶ್ರೀ ಉಳ್ಳಾಲ್, ಗಾಯನದಲ್ಲಿ ವಿದ್ವಾನ್ ಶ್ರೀ ಸ್ವರಾಗ್, ಮಾಹೆ, ಮೃದಂಗಂನಲ್ಲಿ ವಿದ್ವಾನ್ ಸುರೇಶ್ ಬಾಬು, ಕಣ್ಣೂರು , ಕೊಳಲಿನಲ್ಲಿ ವಿದ್ವಾನ್ ಕೆ. ಮುರಳೀಧರ್, ಉಡುಪಿ, ಮೋರ್ಸಿಂಗ್ ನಲ್ಲಿ ವಿದ್ವಾನ್ ಬಾಲಕೃಷ್ಣ ಹೊಸಮನೆ, ವಿಟ್ಲ ಭಾಗವಹಿಸಿದ್ದರು. ಶಾಲಿನಿ ಅಶ್ವಿನ್ ಸಹಕರಿಸಿದರು.
ಜರ್ನಿ ಥಿಯೇಟರನ್ ನ ರೋಹನ್ ಎಸ್. ಸ್ವಾಗತಿಸಿದರು. ಭರತನಾಟ್ಯ ವಿದುಷಿ ಸುಮಂಗಲಾ ರತ್ನಾಕರ ,ಮತ್ತು ಡಾ| ಶಾಲಿನಿ ರಾಜೀವ್ ಕಾರ್ಯಕ್ರಮ ನಿರ್ವಹಿಸಿದರು. ಡಾl ಅಶ್ವಿನ್ ತೇಜಸ್ವಿ ವಂದಿಸಿದರು.