ಮಾನಸಿಕ ಕಾಯಿಲೆಗಳನ್ನು ಮೊದಲ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕು: ನ್ಯಾಯಾಧೀಶೆ ಜೈಬುನ್ನಿಸಾ
ಮಂಗಳೂರು,ಅ.15: ಪ್ರತಿಯೊಬ್ಬರಿಗೂ ಸಮಾಜದಲ್ಲಿ ಜೀವಿಸುವ ಹಕ್ಕಿದೆ. ಈ ಸಂದರ್ಭ ಸತ್ಪಥದಲ್ಲಿ ನಡೆಯ ಬೇಕು. ವ್ಯಕ್ತಿಯ ಗೌರವಕ್ಕೆ ಚ್ಯುತಿ ಬಾರದಂತೆ ಸಮಾಜದಲ್ಲಿ ತೊಡಗಿಸಬೇಕು. ಮಾನಸಿಕ ಕಾಯಿಲೆಗಳನ್ನು ಮೊದಲ ಹಂತದಲ್ಲಿಯೇ ಪತ್ತೆ ಹಚ್ಚಿ ಸರಿಯಾದ ಚಿಕಿತ್ಸೆ/ಸಮಾಲೋಚನೆ ಮೂಲಕ ಮಾನಸಿಕ ಕಾಯಿಲೆಯಿಂದ ಮುಕ್ತರನ್ನಾಗಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ ಕರೆ ನೀಡಿದರು.
ದ.ಕ.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದ.ಕ. ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಕಚೇರಿ ಹಾಗೂ ಫಾದರ್ ಮುಲ್ಲರ್ ಮೆಡಿಕಲ್ ಮತ್ತು ನರ್ಸಿಂಗ್ ಕಾಲೇಜಿನ ಆಶ್ರಯದಲ್ಲಿ ರವಿವಾರ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾನಸಿಕ ಆರೋಗ್ಯ ಕಾರ್ಯಕ್ರಮವು ಮಾನಸಿಕ ರೋಗಿಗಳ ಹಕ್ಕುಗಳಿಗೆ ಸಂಬಂಧಿಸಿದ ಕಾಯ್ದೆಗಳಲ್ಲಿರುವ ಕಾನೂನಿನ ತೊಡಕನ್ನು ಎದುರಿಸಿ ಮಾನಸಿಕ ಕಾಯಿಲೆಯ ಬಗ್ಗೆ ಅರಿವು ಮೂಡಿಸುವುದಾಗಿದೆ ಎಂದು ನ್ಯಾಯಾಧೀಶೆ ಜೈಬುನ್ನಿಸಾ ಹೇಳಿದರು.
ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕಕ ಮತ್ತು ಅಧೀಕ್ಷಕ ಡಾ. ಶಿವಪ್ರಕಾಶ್ ಮಾತನಾಡಿ ದಿನದಿಂದ ದಿನಕ್ಕೆ ಯುವ ಜನತೆ ಸಮಾಜಿಕ ಜಾಲತಾಣಗಳ ಮೂಲಕ ಕೆಲವು ಹವ್ಯಾಸಗಳಿಗೆ ಬಲಿಯಾಗಿ ಮಾನಸಿಕ ಖಿನ್ನತೆಗೆ ಒಳಗಾಗುವುದು ಸಾಮಾನ್ಯವಾಗಿದೆ. ಇಂದಿನ ಶಿಕ್ಷಣ ಕೇವಲ ಅಂಕ ಪಡೆಯುವುದಕ್ಕ ಸೀಮಿತವಾಗಿದೆ. ಹೊರಗಿನ ಪ್ರಪಂಚದ ಪರಿಜ್ಞಾನವಿಲ್ಲದೆ ಮೊಬೈಲ್ ಬಳಕೆ ಹೊಸ ಹೊಸ ಸಾಹಸಕ್ಕೆ ಒಳಗಾಗುವುದು ಕಂಡುಬರುತ್ತಿದೆ ಎಂದರು.
ಫಾದರ್ ಮುಲ್ಲರ್ ಮೆಡಿಕಲ್ ಮತ್ತು ನರ್ಸಿಂಗ್ ಕಾಲೇಜಿನ ನಿರ್ದೇಶಕ ರೆ.ಫಾ. ಫಾಸ್ಟಿನ್ ಲೂಕಸ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಕಾರ್ಯಕ್ರಮ ಅಧಿಕಾರಿ ಡಾ. ಸುದರ್ಶನ್, ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಡಾ.ಮೈಕಲ್ ಸಾಂತು ಮಯೂರ್, ಪ್ರಮುಖರಾದ ಡಾ. ಪ್ರಜಕ್ತಾ ವಿ.ರಾವ್, ಡಾ. ರಾಹುಲ್ ಎಂ.ರಾವ್ ಉಪಸ್ಥಿತರಿದ್ದರು.
ಡಾ. ಸುಪ್ರಿಯಾ ಹೆಗ್ಡೆ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳ್ಳೆಪಾಡಿ ವಂದಿಸಿದರು.