ದೇರಳಕಟ್ಟೆ : ಯುನಿವೆಫ್‌ನಿಂದ ಸೀರತ್ ಸಮಾವೇಶ
ದೇರಳಕಟ್ಟೆ, ಅ.20: ಯುನಿವೆಫ್ ಕರ್ನಾಟಕವು ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ) ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ 20ನೇ ವರ್ಷದ ಅರಿಯಿರಿ ಮನುಕುಲದ ಪ್ರವಾದಿಯನ್ನು ಅಭಿಯಾನದ ಸೀರತ್ ಸಮಾವೇಶವು ದೇರಳಕಟ್ಟೆಯ ಸಿಟಿ ಗ್ರೌಂಡ್‌ನಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಣಚೂರು ಇನ್‌ಸ್ಟ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಸೈಯನ್ಸ್‌ನ ಪ್ರಾಂಶುಪಾಲ ಇಕ್ಬಾಲ್ ಅಹ್ಮದ್ ಯು.ಟಿ. ಮಾತನಾಡಿ ಪ್ರವಾದಿ ಪ್ರೇಮದ ಬಗ್ಗೆ ಮಾತನಾಡುವ ಜನರು ಪ್ರವಾದಿ ಆಶಯದಲ್ಲಿ ಜೀವಿಸಲು ಹಿಂಜರಿಯುತ್ತಾರೆ. ಇಂತಹ ಸಂದರ್ಭದಲ್ಲಿ ಪ್ರವಾದಿ ಬೋಧನೆಗಳನ್ನು ಮನೆಮಾತಾಗಿ ಸುವ ಈ ಅಭಿಯಾನ ಶ್ಲಾಘನೀಯ ಎಂದು ಹೇಳಿದರು.
ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮಾತನಾಡಿ ಕೆಡುಕು ಮತ್ತು ಶೋಷಣೆ ಮುಕ್ತ ಸಮಾಜ ಕಾಲದ ಅಗತ್ಯವಾಗಿದೆ. ಕೆಡುಕನ್ನು ಕಂಡಾಗ ಕೈಯಿಂದ ತಡೆಯಿರಿ ಅಥವಾ ಮಾತಿನಿಂದ, ಅದೂ ಸಾಧ್ಯವಿಲ್ಲದಿರೆ ಮನಸ್ಸಿಂದಲಾದರೂ ವಿರೋಧಿಸಿರಿ ಎಂಬ ಪ್ರವಾದಿ ವಚನ ಇಂದಿನ ಪರಿಸ್ಥಿತಿಗೆ ಸೂಕ್ತವಾದ ಉಪದೇಶವಾಗಿದೆ. ಒಳಿತಿನ ಸ್ಥಾಪನೆ ಮತ್ತು ಕೆಡುಕಿನ ನಿರ್ಮೂಲನೆಯೇ ಧ್ಯೇಯವಾಗಿರುವ ಮುಸ್ಲಿಮ್ ಸಮಾಜ ಅನ್ಯಾಯ, ಅಕ್ರಮವನ್ನು ಕಂಡಾಗ ಧ್ವನಿಯೆತ್ತಬೇಕು. ಅದುವೇ ನೈಜ ಧರ್ಮಪಾಲನೆ ಎಂದು ಹೇಳಿದರು.
ವೇದಿಕೆಯಲ್ಲಿ ದೇರಳಕಟ್ಟೆ ಶಾಖಾಧ್ಯಕ್ಷ ಅಬ್ದುರ‌್ರಹ್ಮಾನ್ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಚಾಲಕ ಮುಹಮ್ಮದ್ ಸೈಫುದ್ದೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿರಾಜುಲ್ ಹಸನ್ ಕಿರಾಅತ್ ಪಠಿಸಿದರು. ಅಭಿಯಾನದ ಸಂಚಾಲಕ ಯು. ಕೆ. ಖಾಲಿದ್ ಕಾರ್ಯಕ್ರಮ ನಿರೂಪಿಸಿದರು.