×
Ad

ಗುಂಪು ಆರೋಗ್ಯ ವಿಮೆಗೆ ಜಿಎಸ್‌ಟಿ ಇಳಿಕೆಯಾಗಿಲ್ಲ: ಪದ್ಮರಾಜ್ ಪೂಜಾರಿ

Update: 2025-10-23 21:05 IST

ಮಂಗಳೂರು, ಅ.23: ಕೇಂದ್ರ ಸರಕಾರವು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರ ಸ್ವಲ್ಪ ಇಳಿಕೆ ಮಾಡಿದೆ. ಆದರೆ ಗುಂಪು ಆರೋಗ್ಯ ವಿಮೆಯಂತಹ ಅಗತ್ಯ ಸೇವೆಗಳ ತೆರಿಗೆ ಇಳಿಕೆಯಾಗಿಲ್ಲ. ಇದಕ್ಕೆ ಇನ್ನೂ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ ಎಂದು ಕಾಂಗ್ರೆಸ್ ಧುರೀಣ ಪದ್ಮರಾಜ್ ಆರ್.ಪೂಜಾರಿ ಹೇಳಿದ್ದಾರೆ.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು ಜಿಎಸ್‌ಟಿ ದರ ಇಳಿಕೆಯಿಂದ ದೇಶದ ಜನಸಾಮಾನ್ಯರಿಗೆ ಭಾರೀ ಲಾಭವಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಅಭಿಯಾನ ನಡೆಸುವುದರಲ್ಲಿ ಅರ್ಥವೇ ಇಲ್ಲ ಎಂದರು.

ಪುತ್ತೂರಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಎಸ್‌ಟಿ ಬಗ್ಗೆ ಮಾತನಾಡಿದ್ದಕ್ಕೆ ‘ಕೈಲಾಗದವರು ಮೈಪರಚಿಕೊಂಡಂತಿದೆ’ ಎಂದು ಸಂಸದ ಬ್ರಿಜೇಶ್ ಚೌಟ ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಹಲವು ಬಜೆಟ್‌ಗಳನ್ನು ಮಂಡಿಸಿದ ಅನುಭವಿ. ಅವರ ನೇತೃತ್ವದ ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ. ಸರಕಾರದ ಈ ಯೋಜನೆಯ ಮೂಲಕ ಲಕ್ಷಾಂತರ ಮಂದಿ ಮಹಿಳೆಯರು, ಬಡವರು, ಯುವ ಜನರಿಗೆ ಲಾಭವಾಗಿದೆ. ಸಿದ್ದರಾಮಯ್ಯ ಅವರನ್ನು ಕೇವಲ ಟೀಕೆ ಮಾಡುವ ಬದಲು ಸಿದ್ದರಾಮಯ್ಯ ಅವರ ಒಳ್ಳೆಯ ಯೋಜನೆಗಳ ಬಗ್ಗೆಯೂ ಮಾತನಾಡಲಿ ಎಂದರು.

*3500 ಮಂದಿಗೆ ಉದ್ಯೋಗ: ನಗರದಲ್ಲಿ 135 ಕೋಟಿ ರೂ.ಮೊತ್ತದ ಟೆಕ್ ಪಾರ್ಕ್ ಸ್ಥಾಪನೆಯಿಂದ 3, 500 ಮಂದಿಗೆ ಉದ್ಯೋಗಾವಕಾಶ ದೊರೆಯಲಿದೆ. ರಾಜ್ಯದಲ್ಲಿ 800 ಕೆಪಿಎಸ್ ಶಾಲೆಗಳನ್ನು ಆರಂಭಿಸುವುದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲಿದೆ. ದ.ಕ. ಜಿಲ್ಲೆಯಲ್ಲೂ 17 ಕೆಪಿಎಸ್ ಶಾಲೆಗಳು ಆರಂಭ ವಾಗಲಿದೆ ಎಂದರು.

ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ರಜೆ ಜಾರಿಯಾಗಿದೆ. ಇದನ್ನು ಬಿಜೆಪಿಯ ಎಷ್ಟು ಜನ ಸ್ವಾಗತಿಸಿದ್ದಾರೆ ಎಂದು ಪ್ರಶ್ನಿಸಿದ ಪದ್ಮರಾಜ್ ಆರ್ ಪೂಜಾರಿ ಅವರು ವೆನ್ಲಾಕ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದ ಹಾಸಿಗೆಗಳ ಸಂಖ್ಯೆ ಕಡಿತ ಮಾಡಲಾಗಿದೆ ಎಂದು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದು ನುಡಿದರು.

ವೆನ್‌ಲಾಕ್‌ಗೆ ಬೇರೆ ಬೇರೆ ಜಿಲ್ಲೆಗಳಿಂದ ರೋಗಿಗಳು ಬರುತ್ತಿರುವುದರಿಂದ ಐಸಿಯುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಆಸ್ಪತ್ರೆಯಲ್ಲಿ ಶುಶ್ರೂಷಕಿಯರ ಕೊರತೆ ಇದೆ. ಈ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗಮನಕ್ಕೆ ತರಲಾ ಗಿದೆ ಎಂದು ಮಾಹಿತಿ ನೀಡಿದರು.

ಅಂತರ್‌ ರಾಷ್ಟ್ರೀಯ ಮಾರುಕಟ್ಟೆಯಲ್ಲಿ 2007ರಲ್ಲಿ ಕಚ್ಚಾತೈಲದ ದರ ಬ್ಯಾರೆಲ್‌ಗೆ 147 ಡಾಲರ್ ಇದ್ದಾಗ ದೇಶದಲ್ಲಿ ಪೆಟ್ರೋಲ್ ದರ 60ಕ್ಕಿಂತ ಕಡಿಮೆ ಇತ್ತು. ಕಚ್ಛಾ ತೈಲದ ದರ 61 ಡಾಲರ್‌ಗೆ ಕುಸಿದರೂ ಪೆಟ್ರೋಲ್ ದರ 103 ರೂಪಾಯಿ ಎಮದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಕೆ. ಅಶ್ರಫ್, ಕಾಂಗ್ರೆಸ್ ಧುರೀಣರಾದ ನವೀನ್ ಡಿ ಸೋಜ, ಕೇಶವ ಮರೋಳಿ , ಲಾರೆನ್ಸ್ ಡಿಸೋಜ, ಅಪ್ಪಿ, ಶುಭೋದಯ ಆಳ್ವ, ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News