×
Ad

ಮಂಗಳೂರು: ಪ್ರವಾಸಿಗರ ಕಳೆದುಹೋದ ಮೊಬೈಲ್ ಮರಳಿಸಿದ ಟೂರಿಸ್ಟ್ ಪೊಲೀಸ್ ಸಿಬ್ಬಂದಿ

Update: 2025-12-28 14:51 IST

ಮಂಗಳೂರು: ತಣ್ಣೀರು ಬಾವಿ ಬೀಚ್‌ ನಲ್ಲಿ ಡಿ. 27ರಂದು ಶನಿವಾರ ಸಂಜೆ ಬೆಂಗಳೂರು ಮೂಲದ ಪ್ರವಾಸಿಗರ ಗುಂಪಿನ ಸದಸ್ಯರೊಬ್ಬರ ದುಬಾರಿ ಬೆಲೆಯ ಮೊಬೈಲ್ ಫೋನ್ ಕಳೆದುಹೋಗಿದ್ದ ಘಟನೆ ನಡೆದಿದೆ.

ಈ ವಿಷಯ ತಿಳಿದ ತಕ್ಷಣ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟೂರಿಸ್ಟ್ ಪೊಲೀಸ್ ಸಿಬ್ಬಂದಿ ರಾಘವೇಂದ್ರ (ಪ್ರವಾಸಿ ಮಿತ್ರ) ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ತನಿಖೆ ನಡೆಸಿದರು. ಕೆಲವೇ ಸಮಯದಲ್ಲಿ ಮೊಬೈಲ್ ಮತ್ತೊಬ್ಬರ ಕೈ ಸೇರಿರುವುದನ್ನು ಪತ್ತೆಹಚ್ಚಿ, ಕಳೆದುಕೊಂಡ ಪ್ರವಾಸಿಗರ ಕೈಗೆ ಮೊಬೈಲ್ ಅನ್ನು ಸುರಕ್ಷಿತವಾಗಿ ಹಸ್ತಾಂತರಿಸಿದರು.

ಸಮಯಪ್ರಜ್ಞೆ, ಕರ್ತವ್ಯ ನಿಷ್ಠೆಯಿಂದ ಪ್ರವಾಸಿಗರ ವಿಶ್ವಾಸ ಮತ್ತು ಪ್ರಶಂಸೆಗೆ ಟೂರಿಸ್ಟ್ ಪೊಲೀಸ್ ಸಿಬ್ಬಂದಿ ರಾಘವೇಂದ್ರ ಪಾತ್ರರಾಗಿದ್ದಾರೆ.

ಪ್ರವಾಸೋದ್ಯಮ ಇಲಾಖೆಯ ಯೋಜನೆಯಡಿ ಕರ್ನಾಟಕ ರಾಜ್ಯದ ವಿವಿಧ ಪ್ರವಾಸಿ ತಾಣಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ‘ಪ್ರವಾಸಿ ಮಿತ್ರ’ ಸಿಬ್ಬಂದಿಗಳು ಪ್ರವಾಸಿಗರು ಎದುರಿಸುವ ವಿವಿಧ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ನೆರವು ನೀಡುತ್ತಿರುವುದು ಶ್ಲಾಘನೀಯವಾಗಿದೆ.

ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ರಕ್ಷಣೆ, ಸುರಕ್ಷತೆ ಹಾಗೂ ಆಸ್ತಿಯ ಭದ್ರತೆಗೆ ಅವರು ನೀಡುತ್ತಿರುವ ಸೇವೆ ರಾಜ್ಯಾದ್ಯಂತ ಗಮನ ಸೆಳೆಯುತ್ತಿದ್ದು, ಇದು ಪ್ರವಾಸೋದ್ಯಮ ಇಲಾಖೆಗೆ ಗೌರವ ತಂದಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News