ಕೊಣಾಜೆ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ʼಚೈತನ್ಯ ಚಿಲುಮೆʼ ಕಾರ್ಯಾಗಾರ ಉದ್ಘಾಟನೆ
ಆತ್ಮವಿಶ್ವಾಸದೊಂದಿಗೆ ಪರೀಕ್ಷೆ ಎದುರಿಸಿ: ವಿದ್ಯಾರ್ಥಿಗಳಿಗೆ ಕೆ.ಕೆ ಶಾಹುಲ್ ಹಮೀದ್ ಕರೆ
ಕೊಣಾಜೆ: ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂದರೆ ಯುದ್ದವೂ ಅಲ್ಲ, ಕಬ್ಬಿಣದ ಕಡಲೆಯೂ ಅಲ್ಲ. ಪರಿಶ್ರಮ ಹಾಗೂ ಆತ್ಮವಿಶ್ವಾಸದೊಂದಿಗೆ ಪರೀಕ್ಷೆ ಎದುರಿಸುವ ಚಾಕಚಕ್ಯತೆ ನಮ್ಮದಾಗಬೇಕು. ಪರೀಕ್ಷೆಗಾಗಿ ವೃತದಂತೆ ಪೂರ್ವತಯಾರಿ ನಡೆಸಿ, ಉತ್ತಮ ಅಂಕ,ಮೌಲ್ಯಯುತ ಶಿಕ್ಷಣದೊಂದಿಗೆ ಉತ್ತಮ ಭವಿಷ್ಯವನ್ನು ರೂಪಿಸಿ ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ಕೆ ಶಾಹುಲ್ ಹಮೀದ್ ಹೇಳಿದರು.
ಜಮೀಯ್ಯತುಲ್ ಫಲಾಹ್ ಉಳ್ಳಾಲ ತಾಲೂಕು ಘಟಕ ಇದರ ವತಿಯಿಂದ ಕೊಣಾಜೆ ವಿಶ್ವಮಂಗಳ ವಿದ್ಯಾಸಂಸ್ಥೆಯ ಸಹಯೋಗದೊಂದಿಗೆ ನಡೆದ ಉಳ್ಳಾಲ ತಾಲೂಕು ವ್ಯಾಪ್ತಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಶನಿವಾರ ನಡೆದ "ಚೈತನ್ಯ ಚಿಲುಮೆ" ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರ ಪ್ರಭಾರ ಶಿಕ್ಷಣಾಧಿಕಾರಿ ಡಾ.ಪ್ರಶಾಂತ್ ಕುಮಾರ್ ಅವರು ಮಾತನಾಡಿ, ಇದು ಶಿಕ್ಷಣದೊಂದಿಗೆ ಸಾಮಾಜಿಕ ಜವಬ್ದಾರಿ, ಮೌಲ್ಯವನ್ನು ಬೆಳೆಸುವ ಕಾರ್ಯಕ್ರಮವಾಗಿದೆ. ಪರೀಕ್ಷೆಯಲ್ಲಿ ಉತ್ತೀರ್ಣ ಆಗುವುದಕ್ಕಿಂತ ಗುಣಮಟ್ಟವನ್ನು ಹೆಚ್ಷಿಸುವ ಶಿಕ್ಷಣ ಮತ್ತು ಅಂತಹ ಪ್ರಯತ್ನಗಳು ಅಗತ್ಯ ಎಂದರು.
ಜಮೀಯತುಲ್ ಫಲಾಹ್ ಉಳ್ಳಾಲ ತಾಲೂಕು ಘಟಕಾಧ್ಯಕ್ಷ ಅಬ್ದುಲ್ ರಹ್ಮಾನ್ ಕೋಡಿಜಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರೀಕ್ಷೆಯ ಪೂರ್ವ ತಯಾರಿಯೊಂದಿಗೆ ಜೀವನದ ಪರೀಕ್ಷೆಗೂ ಇಂತಹ ಮಾಹಿತಿ ಕಾರ್ಯಕ್ರಮಗಳು ಪೂರಕವಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಮಾಡಿಕೊಳ್ಳಿ ಎಂದು ಹೇಳಿದರು.
ಶಿಕ್ಷಕರಾದ ಯಾಕೂಬ್ ಕೊಯ್ಯೂರು ಮತ್ತು ಸಯ್ಯದ್ ಶರೀಫ್ ನಾರಾವಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಮೂಡದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ವಿಶ್ವಮಂಗಳ ಸಂಸ್ಥೆಯ ಅಧ್ಯಕ್ಷ ಡಾ.ಜಗದೀಶ್ ಪ್ರಸಾದ್, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಅಚ್ಚುತ ಗಟ್ಟಿ, ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಬಂಟ್ವಾಳ ತಾಲೂಕು ಅಧ್ಯಕ್ಷ ಅಬ್ಬಾಸ್ ಅಲಿ, ದ.ಕ. ಮತ್ತು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನೀಫ್ ಮಾಸ್ಟರ್, ಕೊಣಾಜೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ತಾಜುದ್ದೀನ್, ಪ್ರಧಾನ ಕಾರ್ಯದರ್ಶಿ ಡಾ.ಗೋವಿಂದ ರಾಜ್, ಕೋಶಾಧಿಕಾರಿ ಸುಬ್ಬ ನಾಯಕ್, ಶಿಕ್ಷಕ-ರಕ್ಷಕ ಅಧ್ಯಕ್ಷ ರಾಜೀವ ನಾಯ್ಕ್, ಜಮೀಯತುಲ್ ಫಲಾಹ್ ತಾಲೂಕು ಕೋಶಾಧಿಕಾರಿ ಇಬ್ರಾಹಿಂ ನಡುಪದವು ಮೊದಲಾದವರು ಉಪಸ್ಥಿತರಿದ್ದರು.
ಉಪಾಧ್ಯಕ್ಷರಾದ ಎ ಕೆ ಅಬ್ದುಲ್ ರಹ್ಮಾನ್ ಕೊಡಿಜಾಲ್, ಜೊತೆ ಕಾರ್ಯದರ್ಶಿ ನಾಸೀರ್ ಸಾಮಣಿಗೆ, ಮಹಮ್ಮದ್ ಮುಸ್ತಫಾ, ಮಿಫ್ತಾಬ್ ಸಲಾಂ ಹಸನ್ ಕುಂಙಿ ಕೋಡಿಜಾಲ್, ಇಕ್ಬಾಲ್ ಸಾಮಣಿಗೆ, ಅಮೀರ್ ಕೋಡಿಜಾಲ್, ಶರೀಫ್ ಪಟ್ಟೊರಿ ಹಾಗೂ ಇನ್ನಿತರ ಸದಸ್ಯರು ಹಾಜರಿದ್ದರು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಾಸೀರ್ ಕೆಕೆ ಸ್ವಾಗತಿಸಿದರು. ಅಹಮದ್ ಕುಂಞಿ ಮಾಸ್ಟರ್ ವಂದಿಸಿದರು. ಉಪಾಧ್ಯಕ್ಷ ಕೆಎಂಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.