ಸರಕಾರಿ ಶಾಲೆಗಳಿಗೆ 1 ಲಕ್ಷ ರೂ. ಕ್ರೀಡಾ ಪ್ರೋತ್ಸಾಹಧನ: ಅರ್ಜಿ ಆಹ್ವಾನ
ಮಂಗಳೂರು,ಜೂ.23: 2025-26ನೇ ಸಾಲಿನ ‘‘ನಮ್ಮೂರ ಶಾಲೆಗೆ ನಮ್ಮ ಯುವಜನರು’’ ಯೋಜನೆಯಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಮಾನ್ಯತೆ ಪಡೆದಿರುವ ಕ್ರೀಡಾ ಸಂಸ್ಥೆಗಳು ಆಯೋಜಿಸುವ ತಾಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ 2024-25ನೇ ಸಾಲಿನ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದನ ಕ್ರೀಡಾ ಪಟುಗಳನ್ನು ಹೊಂದಿರುವ ಸರಕಾರಿ ಶಾಲೆಗಳನ್ನು ಗುರುತಿಸಿ ಆಯ್ಕೆಯಾದ ಪ್ರತಿ ಶಾಲೆಗೆ ಪ್ರೋತ್ಸಾಹ ರೂ. 1 ಲಕ್ಷಗಳ ಅನುದಾನ ನೀಡಲಾಗುತ್ತದೆ. ಈ ಪೈಕಿ ರೂ. 10,000 ಗಳನ್ನು ಶಾಲೆಯ ದೈಹಿಕ ಶಿಕ್ಷಕರಿಗೆ ಪ್ರೋತ್ಸಾಹಧನವಾಗಿ ಮತ್ತು 90,000 ರೂ.ಗಳನ್ನು ಶಾಲೆಯ ಎಸ್.ಡಿ. ಎಂ.ಸಿ.ಗೆ ಅಗತ್ಯ ಕ್ರೀಡಾ ಸಾಮಾಗ್ರಿಗಳ ಪೂರೈಕೆಗಾಗಿ ಅನುದಾನ ರೂಪದಲ್ಲಿ ನೀಡಲಾಗುತ್ತದೆ.
ಪ್ರೋತ್ಸಾಹಧನ ಪಡೆಯಲು ಬಯಸುವ ಸರಕಾರಿ ಶಾಲೆಗಳ ಮುಖ್ಯಸ್ಥರು ಜೂನ್ 27 ರೊಳಗೆ ಪ್ರಸ್ತಾವನೆಯನ್ನು ಕ್ರೀಡಾಪಟುಗಳ ಸಾಧನೆಯ ವಿವರ, ದೈಹಿಕ ಶಿಕ್ಷಕರ ಹೆಸರು, ಮೊಬೈಲ್ ಸಂಖ್ಯೆಯೊಂದಿಗೆ ಕಳುಹಿಸಿಕೊಡಬೇಕು.
ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳಾ ಸ್ಟೇಡಿಯಂ, ಮಂಗಳೂರು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.