ಫಿಶ್ ಕಟ್ಟಿಂಗ್ ಕಾರ್ಖಾನೆಗೆ ದಾಳಿ: 10 ಬಾಲ ಕಾರ್ಮಿಕರು ಪತ್ತೆ
Update: 2025-09-23 20:45 IST
ಮಂಗಳೂರು, ಸೆ.23: ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ ಜಂಟಿ ಯಾಗಿ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಫಿಶ್ ಕಟ್ಟಿಂಗ್ ಕಾರ್ಖಾನೆ ಮೇಲೆ ಮಂಗಳವಾರ ದಾಳಿ ನಡೆಸಿ ಅಲ್ಲಿ ಕೆಲಸ ಮಾಡುತ್ತಿದ್ದ 10 ಬಾಲಕಾರ್ಮಿಕ/ಕಿಶೋರ ಕಾರ್ಮಿಕರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ.
ಪತ್ತೆಯಾಗಿರುವ ಮಕ್ಕಳು ಬಿಹಾರ ಮತ್ತು ನೇಪಾಳ ಮೂಲದವರಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ, ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್, ಹಿರಿಯ ಕಾರ್ಮಿಕ ನಿರೀಕ್ಷಕ ರಾಜಶೇಖರ ರೆಡ್ಡಿ, ಯೋಜನಾ ನಿರ್ದೇಶಕ ಶ್ರೀನಿವಾಸ ನಾಯಕ್, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಪಣಂಬೂರು ಪೊಲೀಸ್ ಠಾಣೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ರಕ್ಷಿಸಿದ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಕಾವೂರು ಶಾಂತಿನಗರದ ಬಾಲಕಿಯರ ಬಾಲಮಂದಿರದಲ್ಲಿ ಪುನರ್ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.