ಚೆರ್ರಿಲರ್ನ್- ಕೋಡ್ ಕ್ರಾಫ್ಟ್ ಟೆಕ್ನಾಲಜೀಸ್‌ನಿಂದ ದ.ಕ. ಜಿಲ್ಲೆಯ 1000 ಮಕ್ಕಳಿಗೆ ಉಚಿತ ಡಿಜಿಟಲ್ ಶಿಕ್ಷಣ
ಮಂಗಳೂರು: ಎಜುಟೆಕ್ ಸ್ಟಾರ್ಟ್ ಅಪ್ ಸಂಸ್ಥೆ ಚೆರ್ರಿಲರ್ನ್ ಹಾಗೂ ಸಾಫ್ಟ್‌ವೇರ್ ಸಂಸ್ಥೆಯಾದ ಕೋಡ್ ಕ್ರಾಫ್ಟ್ ಟೆಕ್ನಾಲಜೀಸ್ ಸಂಸ್ಥೆಯು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ದ.ಕ. ಜಿಲ್ಲೆಯ ಸರಕಾರಿ ಕನ್ನಡ ಮಾಧ್ಯಮ ಶಾಲೆಯ 1000 ಮಕ್ಕಳಿಗೆ ಉಚಿತ ಡಿಜಿಟಲ್ ಶಿಕ್ಷಣ ವ್ಯವಸ್ಥೆ ಒದಗಿಸಲು ನಿರ್ಧರಿಸಿದೆ.
ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಈಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಚೆರ್ರಿಲರ್ನ್ ಸಂಸ್ಥೆಯ ಸಿಇಒ ಶ್ರೀನಿಧಿ ಆರ್.ಎಸ್., ಈ ಉಚಿತ ಡಿಜಿಟಲ್ ಶಿಕ್ಷಣ ವ್ಯವಸ್ಥೆಯ ಭಾಗವಾಗಿ ಜೂನ್ ತಿಂಗಳ ಆರಂಭದಲ್ಲಿ ಬಂಟ್ವಾಳ ತಾಲೂಕಿನ ಉಳಿ ಗ್ರಾಮ ಎರಡು ಸರಕಾರಿ ಶಾಲೆಗಳಲ್ಲಿ ಕಾರ್ಯಕ್ರಮದ ಅಧಿಕೃತ ಉದ್ಘಾಟನೆ ನಡೆಸಲಾಗಿದೆ ಎಂದರು.
ಮೊದಲ ಹಂತದಲ್ಲಿ 300 ವಿದ್ಯಾರ್ಥಿಗಳನ್ನು ತಲುಪಿದ್ದು, ಆ್ಯಪ್ ಆಧಾರಿತ ಈ ಡಿಜಿಟಲ್ ಕಲಿಕೆಯು ಕನ್ನಡ ಭಾಷೆಯಲ್ಲಿ ಆಟದ ಮಾದರಿ, ಸಂವಹನಾತ್ಮಕ, ಪಠ್ಯ ಕ್ರಮಕ್ಕೆ ಹೊಂದಿಕೆಯಾಗುವ ವಿಷಯವನ್ನು ಗ್ರಾಮೀಣ ಭಾಗದ ಪ್ರಾಥಮಿಕ ತರಗತಿಯ ವಿದ್ಯಾರ್ಥಿಗಳಿಗೆ ಕಡಿಮೆ ಇಂಟರ್‌ನೆಟ್ ವ್ಯವಸ್ಥೆ ಹೊಂದಿರುವ ಪ್ರದೇಶಗಳಲ್ಲಿಯೂ ಲಭ್ಯವಾಗುವಂತೆ ಮಾಡುವುದಾಗಿದೆ ಎಂದವರು ಹೇಳಿದರು.
ಗೋಷ್ಟಿಯಲ್ಲಿ ಕೋಡ್ ಕ್ರಾಫ್ಟ್ ಟೆಕ್ನಾಲಜೀಸ್ ಸಂಸ್ಥೆಯ ಅಪರೇಶನ್ ಲೀಡ್ ಜೋಬಿನ್ ಜೋಸೆಫ್ ಪಿ.ಜೆ., ಚೆರ್ರಿಲರ್ನ್ ಎಚ್‌ಆರ್ ಟೀಮ್‌ನ ಲೀಡ್ ಸಜನಾ ಭಾಸ್ಕರ್ ಉಪಸ್ಥಿತರಿದ್ದರು.