ಬೆಳ್ತಂಗಡಿ | ಮಹಿಳಾ ನ್ಯಾಯ ಸಮಾವೇಶ
Update: 2025-12-16 12:43 IST
ಬೆಳ್ತಂಗಡಿ : ʼಕೊಂದವರು ಯಾರು?ʼ ಎಂಬ ಪ್ರಶ್ನೆಯೊಂದಿಗೆ ವಿವಿಧ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಮೌನ ಮೆರವಣಿಗೆ ಹಾಗೂ ಮಹಿಳಾ ನ್ಯಾಯ ಸಮಾವೇಶ ಬೆಳ್ತಂಗಡಿಯಲ್ಲಿ ಆರಂಭಗೊಂಡಿದೆ.
ಸಮಾವೇಶದಲ್ಲಿ ಮಹಿಳಾ ಮುಖಂಡೆ ಮಲ್ಲಿಗೆ ಮಾತನಾಡಿ, ನ್ಯಾಯ ಕೇಳುವುದು ತಪ್ಪೇ, ಕೊಲೆ, ಅತ್ಯಾಚಾರ ನಡೆದಿದೆ. ಆದರೆ, ಆರೋಪಿಗಳು ಸಿಗುತ್ತಿಲ್ಲ ಅಂದರೆ ಕೊಂದವರು ಯಾರು ಎಂದು ಪ್ರಶ್ನಿಸಲೇಬೇಕಾದ ಅನಿವಾರ್ಯತೆಯಿದೆ. ನ್ಯಾಯ ಸಿಗುವವರೆಗೂ ಮಹಿಳಾ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದು ಹೇಳಿದರು.
ಹಿರಿಯ ಸಾಹಿತಿ ರೋಹಿಣಿ ಮಾತನಾಡಿ, ಈ ನೆಲದಲ್ಲಿ ಮಹಿಳೆಯರ ನೋವಿನ ಅಳು ಕೇಳಿಸುತ್ತಿದೆ. ನಾವು ಅವರಿಗೆ ನ್ಯಾಯ ಕೊಡಿಸಲು ಬಂದಿದ್ದೇವೆ ಎಂದರು
ಮಹಿಳಾ ನ್ಯಾಯ ಸಮಾವೇಶದ ಅಂಗವಾಗಿ ಬೆಳ್ತಂಗಡಿ ಮಾರಿಗುಡಿಯಿಂದ ಮಿನಿ ವಿಧಾನ ಸೌಧದವರೆಗೆ ನೂರಾರು ಮಹಿಳೆಯರ ಮೌನ ಮೆರವಣಿಗೆ ನಡೆಯಿತು.
ರಾಜ್ಯದ ವಿವಿಧ ಭಾಗಗಳಿಂದ ನೂರಾರು ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸಿದ್ದಾರೆ.