ಉಳ್ಳಾಲ | ತಡೆ ಗೋಡೆ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿತ; ಮಣ್ಣಿನಡಿ ಸಿಲುಕಿ ಕಾರ್ಮಿಕ ಮೃತ್ಯು
ಉಳ್ಳಾಲ : ಮನೆಯ ಹಿಂಬದಿಯ ಆವರಣ ತಡೆ ಗೋಡೆ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿದು ಬಿದ್ದ ಪರಿಣಾಮ ವಲಸೆ ಕಾರ್ಮಿಕನೋರ್ವ ಮಣ್ಣಿನಡಿ ಸಿಲುಕಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಲ್ಲಾಪು ಸಮೀಪದ ಸೇವಂತಿಗುತ್ತು ಎಂಬಲ್ಲಿ ಮಂಗಳವಾರ ನಡೆದಿದೆ.
ಕೂಳೂರಿನಲ್ಲಿ ವಾಸವಾಗಿರುವ ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕು ಹನುಮಕಟ್ಟೆ ನಿವಾಸಿ ಬಾಳಪ್ಪ (35) ಮೃತ ವ್ಯಕ್ತಿ.
ಸೇವಂತಿಗುತ್ತುವಿನಲ್ಲಿ ಗೌತಮ್ ರಾಜ್ ಎಂಬವರು ಇತ್ತೀಚಿಗೆ ಮನೆಯೊಂದನ್ನು ಖರೀದಿಸಿದ್ದರು. ಮನೆಯ ಹಿಂಭಾಗಕ್ಕೆ ತಾಗಿಕೊಂಡು ಎತ್ತರದ ಗುಡ್ಡವೊಂದಿದ್ದು, ಕಳೆದ ಮಳೆಗಾಲದಲ್ಲಿ ಸುರಿದಿದ್ದ ಭಾರೀ ಮಳೆಗೆ ಗುಡ್ಡದ ಮಣ್ಣು ಕುಸಿತವಾಗಿತ್ತು. ಗೌತಮ್ ರಾಜ್ ಅವರು ಕಳೆದ ಕೆಲ ದಿನಗಳ ಹಿಂದಷ್ಟೆ ಮನೆಯ ಹಿಂಭಾಗದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದರು. ಮಂಗಳವಾರದಂದು ಜೆಸಿಬಿ ಸಹಿತ ವಲಸೆ ಕಾರ್ಮಿಕರಾದ ಬಾಳಪ್ಪ, ಹನುಮಂತ, ಭೀಮಪ್ಪ, ಶಿವು ಎಂಬವರು ತಡೆಗೋಡೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದರು. ಈ ವೇಳೆ ಮನೆಯ ಹಿಂಭಾಗದ ಎತ್ತರದ ಗುಡ್ಡದ ಮಣ್ಣು ಏಕಾಏಕಿ ಕುಸಿದು ಬಿದ್ದಿದೆ. ಇದರಿಂದ ಕಾರ್ಮಿಕರಾದ ಬಾಳಪ್ಪ, ಹನುಮಂತ, ಭೀಮಪ್ಪ ಮಣ್ಣಿನಡಿ ಸಿಲುಕಿದ್ದಾರೆ. ಹನುಮಂತ ಮತ್ತು ಭೀಮಪ್ಪ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಮಣ್ಣಿನಡಿ ಬಿದ್ದು ಗಂಭೀರ ಗಾಯಗೊಂಡಿದ್ದ ಬಾಳಪ್ಪ ಅವರನ್ನು ಸ್ಥಳೀಯರು ಹರಸಾಹಸ ಪಟ್ಟು ಹೊರ ತೆಗೆದರೂ ಆ ವೇಳೆಗೆ ಅವರು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಎಸಿಪಿ ವಿಜಯಕ್ರಾಂತಿ, ಉಳ್ಳಾಲ ಪೊಲೀಸ್ ನಿರೀಕ್ಷವಿರೂಪಾಕ್ಷ ಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.