ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿಗೆ ಎಸ್ಸಿಡಿಸಿಸಿ ಬ್ಯಾಂಕ್‌ನಿಂದ ಸನ್ಮಾನ
ಒಂದು ಲಕ್ಷ ರೂ. ಬಹುಮಾನ
ಮಂಗಳೂರು: ಇತ್ತೀಚೆಗೆ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ವಿಶ್ವಕಪ್ ಮಹಿಳಾ ಕಬಡ್ಡಿ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತ ತಂಡದ ಪ್ರಮುಖ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ ಅವರನ್ನು ಎಸ್ಸಿಡಿಸಿಸಿ ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು.
ಎಸ್ಸಿಡಿಸಿಸಿ ಬ್ಯಾಂಕ್‌ನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಧನಲಕ್ಷ್ಮೀ ಪೂಜಾರಿ ಯನ್ನು ಶಾಲು ಹೊದಿಸಿ, ಫಲಪುಷ್ಪ , ಹಾರ , ಬೆಳ್ಳಿ ದೀಪ ಸ್ಮರಣಿಕೆಯೊಂದಿಗೆ 1ಲಕ್ಷ ರೂ. ಮೊತ್ತದ ಚೆಕ್ ನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜೇಂದ್ರ ಕುಮಾರ್ ಅವರು ಧನಲಕ್ಷ್ಮೀ ಪೂಜಾರಿ ವಿಶ್ವಕಪ್ ಮಹಿಳಾ ಕಬಡ್ಡಿ ಸ್ಪರ್ಧೆಯಲ್ಲಿ ಭಾಗವಹಿಸಿದ ಭಾರತ ತಂಡದ ಪ್ರಮುಖ ಆಟಗಾರ್ತಿಯಾಗಿದ್ದು,ತನ್ನ ಆಲ್‌ರೌಂಡರ್ ಆಟದಿಂದ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಶ್ಲಾಘಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಧನಲಕ್ಷ್ಮೀ ಪೂಜಾರಿ ಈ ಕ್ರೀಡಾ ಸಾಧನೆ ನಮ್ಮ ಜಿಲ್ಲೆಗೆ ಹೆಮ್ಮೆ ತರುವಂತದ್ದು . ಅವರ ಕ್ರೀಡಾ ಪ್ರತಿಭೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟೂ ಪ್ರಜ್ವಲಮಾನವಾಗಿ ಬೆಳಗಿ, ಹಲವಾರು ಪ್ರಶಸ್ತಿಗಳು ಅವರ ಕ್ರೀಡಾ ಸಾಧನೆಗೆ ಲಭಿಸಲಿ ಎಂದು ಶುಭ ಹಾರೈಸಿದರು.
ಸನ್ಮಾನಕ್ಕೆ ಉತ್ತರಿಸಿದ ಧನಲಕ್ಷ್ಮೀ ಪೂಜಾರಿ ಅವರು ತನ್ನ ಕ್ರೀಡಾ ಸಾಧನೆಯನ್ನು ಗುರುತಿಸಿ ಎಸ್ಸಿಡಿಸಿಸಿ ಬ್ಯಾಂಕ್ ವತಿಯಿಂದ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರಕುಮಾರ್ ಸನ್ಮಾನಿರುವುದು ತುಂಬಾ ಸಂತೋಷ ತಂದಿದೆ.ಅವರ ಅಭಿಮಾನಕ್ಕೆ ತಾನು ಚಿರಋಣಿ ಎಂದರು.
ಈ ಸಂದರ್ಭದಲ್ಲಿ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್(ರಿ) ಅಧ್ಯಕ್ಷ ರಾಜ್ ಕುಮಾರ್ ಅವರನ್ನು ಡಾ.ಎಂ.ಎನ್. ರಾಜೇಂದ್ರಕುಮಾರ್ ಅವರು ಸನ್ಮಾನಿಸಿದರು.
ಎಸ್ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು , ಎಂ. ಮಹೇಶ್ ಹೆಗ್ಡೆ, ಅಶೋಕ್ ಕುಮಾರ್ ಶೆಟ್ಟಿ , ಜೈರಾಜ್ ಬಿ.ರೈ , ಸದಾಶಿವ ಉಳ್ಳಾಲ್, ಸಹಕಾರ ಸಂಘಗಳ ಉಪನಿಂಬಂಧಕ ರಮೇಶ್ ಹೆಚ್.ಎನ್. ಎಸ್ಸಿಡಿಸಿಸಿ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ನ ಟ್ರಸ್ಟೀ ಮೇಘರಾಜ್ ಆರ್.ಜೈನ್ , ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್, ಉದ್ಯಮಿ ಜಯಪ್ರಕಾಶ್ ತುಂಬೆ ಮೊದಲಾದವರು ಉಪಸ್ಥಿತರಿದ್ದರು.
ಎಸ್ಸಿಡಿಸಿಸಿ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ವಂದಿಸಿದರು.