×
Ad

ಉಪ್ಪಿನಂಗಡಿ| ಇಳಂತಿಲ ಗ್ರಾ.ಪಂ. ಅಧ್ಯಕ್ಷ ವಿರುದ್ಧ ಅವಿಶ್ವಾಸ ಗೊತ್ತುವಳಿ: 12 ಮಂದಿ ಸದಸ್ಯರಿಂದ ಮತ ಚಲಾವಣೆ

Update: 2025-03-18 23:08 IST

ತಿಮ್ಮಪ್ಪ ಗೌಡ

ಉಪ್ಪಿನಂಗಡಿ: ಇಳಂತಿಲ ಗ್ರಾ.ಪಂ.ನ ಅಧ್ಯಕ್ಷರಾದ ತಿಮ್ಮಪ್ಪ ಗೌಡ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯು ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರ ಅಧ್ಯಕ್ಷತೆಯಲ್ಲಿ ಇಳಂತಿಲ ಗ್ರಾ.ಪಂ. ಕಚೇರಿಯಲ್ಲಿ ಮಾ.18ರಂದು ನಡೆದಿದ್ದು, ಗ್ರಾ.ಪಂ.ನ 12 ಮಂದಿ ಸದಸ್ಯರು ಅವಿಶ್ವಾಸದ ನಿರ್ಣಯ ಸೂಚನಾ ಸಭೆಯಲ್ಲಿ ಅಧ್ಯಕ್ಷರ ವಿರುದ್ಧ ಮತ ಚಲಾಯಿಸಿದ್ದಾರೆ.

ಇದರಿಂದ ತಿಮ್ಮಪ್ಪ ಗೌಡ ಅವರು ಗ್ರಾ.ಪಂ.ನ ಅಧ್ಯಕ್ಷ ಸ್ಥಾನ ಕಳೆದುಕೊಳ್ಳುವಂತಾಗಿದೆ. ಅಧ್ಯಕ್ಷರ ಪರ ಓರ್ವ ಸದಸ್ಯ ಮಾತ್ರ ಮತ ಚಲಾಯಿಸಿದ್ದಾರೆ.

ಫೆ.20ರಂದು ಇಳಂತಿಲ ಗ್ರಾ.ಪಂ. ಸದಸ್ಯರಾದ ವಸಂತ ಕುಮಾರ್, ವಿಜಯಕುಮಾರ್, ಚಂದ್ರಿಕಾ ಭಟ್, ಉಷಾ ಯು., ಸುಪ್ರೀತ್ ಪಿ., ಸಿದ್ದೀಕ್, ಯು.ಕೆ. ಈಸುಬು, ಕುಸುಮ, ನುಸ್ರುತ್ ಹೀಗೆ 9 ಮಂದಿ ಸದಸ್ಯರು ಗ್ರಾ.ಪಂ. ಅಧ್ಯಕ್ಷ ತಿಮ್ಮಪ್ಪ ಗೌಡ ಅವರು ಗ್ರಾ.ಪಂ.ನಲ್ಲಿ ಸದಸ್ಯರುಗಳಾದ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಗ್ರಾ.ಪಂ.ನ ಹಿತವನ್ನು ಧಿಕ್ಕರಿಸಿ ತಮ್ಮ ಮನಸ್ಸೋ ಇಚ್ಚೆ ಕೆಲಸ, ನಿರ್ಧಾರ ಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಅಧ್ಯಕ್ಷರ ವಿರುದ್ಧ ಪುತ್ತೂರು ಉಪವಿಭಾಗಾಧಿಕಾರಿ ಅವರಿಗೆ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದ್ದರು.

ಅವಿಶ್ವಾಸ ನಿರ್ಣಯ ಸೂಚನಾ ಸಭೆ ಇಳಂತಿಲ ಗ್ರಾ.ಪಂ. ಕಚೇರಿಯಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರ ಅಧ್ಯಕ್ಷತೆಯಲ್ಲಿ ಮಾ.18ರಂದು ನಡೆಯಿತು. ಈ ಸಂದರ್ಭ ಈ 9 ಮಂದಿ ಸದಸ್ಯರಲ್ಲದೇ, ಗ್ರಾ.ಪಂ. ಉಪಾಧ್ಯಕ್ಷೆ ಸವಿತಾ, ಉಷಾ ಎಂ. ಜಾನಕಿ ಅವರು ಅಧ್ಯಕ್ಷರ ವಿರುದ್ಧ ಕೈ ಎತ್ತುವ ಮೂಲಕ ಮತ ಚಲಾಯಿಸಿದ್ದಾರೆ. ಅಧ್ಯಕ್ಷರ ಪರ ಗ್ರಾ.ಪಂ. ಸದಸ್ಯರಾಗಿರುವ ರಮೇಶ ಮಾತ್ರ ಇದ್ದರು.

14 ಮಂದಿ ಸದಸ್ಯರಿರುವ ಇಳಂತಿಲ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು 11, ಕಾಂಗ್ರೆಸ್ ಬೆಂಬಲಿತ ಸದಸ್ಯರು ಇಬ್ಬರು ಹಾಗೂ ಎಸ್‍ಡಿಪಿಐ ಬೆಂಬಲಿತ ಸದಸ್ಯರು ಒಬ್ಬರು ಇದ್ದಾರೆ. ಇಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಾಗಿರುವ ತಿಮ್ಮಪ್ಪ ಗೌಡರ ವಿರುದ್ಧವೇ 9 ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ತಿರುಗಿ ಬಿದ್ದಂತಾಗಿದೆ. ಅವಿಶ್ವಾಸದ ನಿರ್ಣಯ ಸೂಚನಾ ಸಭೆಯಲ್ಲಿ ಮೂರರಲ್ಲಿ ಎರಡು ಭಾಗದಷ್ಟು ಸದಸ್ಯರು ಅಧ್ಯಕ್ಷರ ವಿರುದ್ಧ ಮತ ಚಲಾಯಿಸಿದಾಗ ಮಾತ್ರ ಅಧ್ಯಕ್ಷರು ತನ್ನ ಸ್ಥಾನ ಕಳೆದುಕೊಳ್ಳಲು ಸಾಧ್ಯ. 14 ಮಂದಿ ಸದಸ್ಯ ಬಲದ ಈ ಗ್ರಾ.ಪಂ.ನಲ್ಲಿ ಅಧ್ಯಕ್ಷರು ತನ್ನ ಸ್ಥಾನ ಕಳೆದುಕೊಳ್ಳಲು 10 ಮಂದಿ ಸದಸ್ಯರು ಅಧ್ಯಕ್ಷರ ವಿರುದ್ಧ ಮತ ಚಲಾಯಿಸಬೇಕಿತ್ತು. ಆದರೆ ಇಲ್ಲಿ 12 ಮಂದಿ ಸದಸ್ಯರು ಅಧ್ಯಕ್ಷರ ವಿರುದ್ಧ ಮತ ಚಲಾಯಸಿದ್ದಾರೆ.

ಸಭೆಯಲ್ಲಿ ಗ್ರಾ.ಪಂ. ಪಿಡಿಒ ಸುಮಯ್ಯ, ಕಾರ್ಯದರ್ಶಿ ವಿಜಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News