ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ʼಐಕಳಬಾವ ಕಂಬಳʼ
ಮಂಗಳೂರು: ಇತಿಹಾಸ ಪ್ರಸಿದ್ಧ ಸಂಪ್ರದಾಯಬದ್ಧವಾದ ಹಾಗೂ ಪುರಾತನ ಹಿನ್ನೆಲೆಯುಳ್ಳ ದೈವಾರಾಧನೆಯೊಂದಿಗೆ ವಿಜೃಂಭಣೆಯಲ್ಲಿ ನಡೆಯುವ ‘ಐಕಳಬಾವ ಕಾಂತಾಬಾರೆ - ಬೂದಾಬಾರೆ ಜೋಡುಕೆರೆ ಕಂಬಳ’ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು , ಇದರ ‘ನೆನಪು ’ಸ್ಮರಣ ಸಂಚಿಕೆಯ ಮುಖಪುಟ ಪ್ರತಿಯನ್ನು ಎಸ್‌ಸಿಡಿಸಿಸಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ಸೋಮವಾರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಮಾತನಾಡಿ , ತುಳುನಾಡಿನ ಐತಿಹಾಸಿಕ ಹಿನ್ನೆಲೆಯುಳ್ಳ ಐಕಳಬಾವ ಕಾಂತಾಬಾರೆ ಬೂದಾಬಾರೆ ಕಂಬಳವು ಜೋಡುಕರೆ ಕಂಬಳವಾಗಿ ಇದೀಗ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದೆ.
ಈ 50 ವರ್ಷದ ಕಂಬಳೋತ್ಸವವು ಚಿರಸ್ಥಾಯಿ ಆಗಬೇಕೆಂಬ ನೆಲೆಯಲ್ಲಿ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ ಹೊರತರುತ್ತಿರುವ ‘ನೆನಪು’ ಸ್ಮರಣ ಸಂಚಿಕೆಯು ಉತ್ತಮವಾಗಿ ಹಾಗೂ ಸಂಗ್ರಹಯೋಗ್ಯ ಸಂಚಿಕೆಯಾಗಿ ಮೂಡಿ ಬರಲಿ ಎಂದರು.
ಐಕಳಬಾವ ಕಂಬಳೋತ್ಸವ ಸಮಿತಿಯ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾರ್ಯಾಧ್ಯಕ್ಷರಾದ ಐಕಳಬಾವ ಚಿತ್ತರಂಜನ್ ಭಂಡಾರಿ, ಮುಂಬಯಿ ಸಮಿತಿಯ ಅಧ್ಯಕ್ಷ ಐಕಳಬಾವ ಕುಶಲ್ ಭಂಡಾರಿ ,ಕೋಶಾಧಿಕಾರಿ ಐಕಳಬಾವ ವೇಣುಗೋಪಾಲ ಶೆಟ್ಟಿ, ಎಸ್ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಎಂ ವಾದಿರಾಜ ಶೆಟ್ಟಿ, ಶಶಿಕುಮಾರ್ ರೈ ಬಾಲ್ಯೊಟ್ಟು, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ನ ಟ್ರಸ್ಟೀ ಮೇಘರಾಜ್ ಆರ್.ಜೈನ್, ಉದ್ಯಮಿ ಜಯಪ್ರಕಾಶ್ ತುಂಬೆ, ಪತ್ರಕರ್ತ ಕೆ.ಸಿ.ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.