×
Ad

ರಾಷ್ಟ್ರೀಯ ಹೆದ್ದಾರಿ ದುರಸ್ತಿಗೊಳಿಸದ ರಾ.ಹೆ. ಪ್ರಾಧಿಕಾರದ ಧೋರಣೆ ಖಂಡಿಸಿ ಸೆ.12ರಂದು ಪ್ರತಿಭಟನೆ: ಹರೀಶ್ ಕುಮಾರ್

Update: 2025-09-11 16:03 IST

ಮಂಗಳೂರು, ಸೆ.11: ಗುಂಡಿಗಳಿಂದಾಗಿ ಹಲವು ಮಂದಿ ದ್ವಿಚಕ್ರ ವಾಹನಗಳ ಸವಾರರ ಸಾವಿಗೆ ಕಾರಣವಾಗಿರುವ ರಾಷ್ಟ್ರೀಯ ಹೆದ್ದಾರಿ 66ನ್ನು ದುರಸ್ತಿ ಮಾಡದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಧೋರಣೆಯನ್ನು ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಸೆ.12ರಂದು ಬೆಳಗ್ಗೆ ನಂತೂರ್ ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.

ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಯ ಬಳಿಕ ರಸ್ತೆ ದುರಸ್ತಿಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

*ವಿಜಯೇಂದ್ರ , ಅಶೋಕ್ ಏಕೆ ಬಂದಿಲ್ಲ ? : ಎರಡು ದಿನಗಳ ಹಿಂದೆ ದ್ವಿಚಕ್ರ ವಾಹನ ರಾಷ್ಟ್ರೀಯ ಹೆದ್ದಾರಿಯಲ್ಲಿನ ಗುಂಡಿಗೆ ಬಿದ್ದು ಮಾಧವಿ ಎಂಬವರು ಮೃತಪಟ್ಟಿದ್ದಾರೆ. ಆದರೆ ಅವರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಧ್ವನಿಯೆತ್ತಿಲ್ಲ ಏಕೆ?. ಹಿಂದೂ ಮಹಿಳೆ ಅಪಘಾತದಲ್ಲಿ ಮೃತಪಟ್ಟಿದ್ದರೂ ಆಕೆಗೆ ನ್ಯಾಯ ದೊರಕಿಸಲು ಬಿಜೆಪಿಯ ರಾಜ್ಯ ವಿಪಕ್ಷ ನಾಯಕ ಆರ್. ಅಶೋಕ್ , ರಾಜ್ಯಾಧ್ಯಕ್ಷ ವಿಜಯೇಂದ್ರ, ಪಕ್ಷದ ನಾಯಕರಾದ ಸಿ.ಟಿ.ರವಿ, ನಾರಾಯಣ ಸ್ವಾಮಿ ಯಾಕೆ ಬಂದಿಲ್ಲ ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.

*ಅಕ್ರಮ , ಕಾನೂನುಬಾಹಿರ ಚಟುವಟಿಕೆಗಳು ಬಂದ್: ದ.ಕ. ಜಿಲ್ಲೆಯಲ್ಲಿ ಸರಣಿಯ ಹತ್ಯೆಗಳು ನಡೆದ ಬಳಿಕ ಪೊಲೀಸ್ ಅಧಿಕಾರಿಗಳು ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದ ಕಾರಣದಿಂದಾಗಿ ಶಾಂತಿ ನೆಲೆಸಿದೆ. ಇದೀಗ ಆತಂಕ ದೂರವಾಗಿ ಜನರಿಗೆ ಶಾಂತಿ, ನೆಮ್ಮದಿಯ ಜೀವನ ನಡೆಸುವ ವಾತಾವರಣ ನಿರ್ಮಾಣವಾಗಿದೆ.ಹೊಡಿ, ಬಡಿ, ಕಡಿ, ಕೋಮು ದ್ವೇಷದ ಭಾಷಣಕ್ಕೆ ಮಂಗಳೂರು ಪೊಲೀಸ್ ಆಯುಕ್ತರು ಮತ್ತು ದ.ಕ. ಜಿಲ್ಲಾ ಎಸ್ಪಿ ಕಡಿವಾಣ ಹಾಕಿದ್ದಾರೆ. ಕಾನೂನಿನ ಅನುಷ್ಠಾನ ಸಮರ್ಪಕವಾಗಿ ಆಗಿರುವ ಹಿನ್ನೆಲೆಯಲ್ಲಿ ಡ್ರಗ್ಸ್ ಪೂರೈಕೆ , ಮಟ್ಕಾ, ಸ್ಕಿಲ್ ಗೇಮ್, ಜುಗಾರಿ, ಇಸ್ಪೇಟ್ ಮತ್ತಿತರರ ಅಕ್ರಮ , ಕಾನೂನುಬಾಹಿರ ಚಟುವಟಿಕೆಗಳು ಬಂದ್ ಆಗಿವೆ ಎಂದರು.

ಕಾನೂನು ಎಲ್ಲರಿಗೂ ಒಂದೇ. ಆದರೆ ಅನುಷ್ಠಾನದಲ್ಲಿ ಅಧಿಕಾರಿಗಳು ಎಡವಿದ ಹಿನ್ನೆಲೆಯಲ್ಲಿ ಹಿಂದೆ ಸಮಸ್ಯೆ ಆಗಿತ್ತು. ಈಗ ಎಲ್ಲಡೆ ಗಣೇಶೋತ್ಸವ ಶಾಂತಿಯುತವಾಗಿ ನಡೆದಿದೆ. ಕಾರ್ಯಕ್ರಮಗಳಿಗೆ ಅನುಮತಿ ಪಡೆಯದವರಿಗೆ ಸ್ವಲ್ಪ ತೊಂದರೆ ಆಗಿದ್ದು ನಿಜ. ಡಿಜೆಗೆ ಅವಕಾಶ ನೀಡದಿರುವುದು ಸ್ವಾಗತಾರ್ಹ. ಆರೋಗ್ಯಕ್ಕೆ ಹಾನಿಕಾರವಾದ ಡಿಜೆಗೆ ಇನ್ನು ಮುಂದೆಯೂ ಪೊಲೀಸ್ ಇಲಾಖೆ ಅವಕಾಶ ನೀಡಬಾರದು. ಧ್ವನಿವರ್ಧಕ, ಶಾಮಿಯಾನ, ಲೈಟಿಂಗ್ಸ್ ನವರಿಗೆ ತೊಂದರೆ ಆಗಿಲ್ಲ . ಸರಕಾರ ಕಾನೂನು ಮಾಡಿರುವುದನ್ನು ಅಧಿಕಾರಿಗಳು ಅನುಷ್ಠಾನ ಮಾಡಿದ್ದಾರೆ. ಏನಾದರೂ ಸಣ್ಣಪುಟ್ಟ ಲೋಪದೋಷಗಳು ಕಾಣಿಸಿಕೊಂಡಿದ್ದರೆ ಅವುಗಳನ್ನು ಸಂಬಂಧಪಟ್ಟವರನ್ನು ಕರೆಸಿ ಸಭೆ ನಡೆಸಿ ಸರಿಪಡಿಸುವ ಬಗ್ಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದಾರೆ ಎಂದು ಹರೀಶ್ ಕುಮಾರ್ ಹೇಳಿದರು.

ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಸಮಾನವಾಗಿ ನೋಡುತ್ತಿದೆ. ಹಿಂದೂ, ಮುಸ್ಲಿಮ್, ಕ್ರೈಸ್ತರ ಹಬ್ಬಗಳ ಆಚರಣೆಗೆ ಸರಕಾರ ಒಂದೇ ಮಾನದಂಡವನ್ನು ಅನುಸರಿಸುತ್ತಿದೆ ಎಂದರು.

*ಜಿಎಸ್ಟಿ ದರ ಇಳಿಕೆ ರಾಹುಲ್ ಗಾಂಧಿ ಹೋರಾಟಕ್ಕೆ ಸಂದ ಜಯ: ಎಂಟು ವರ್ಷಗಳಲ್ಲಿ ಜಿಎಸ್ಟಿಯಿಂದಾಗಿ ಜನ ಸಾಮಾನ್ಯರು ಬಹಳಷ್ಟು ಸಮಸ್ಯೆ ಎದುರಿಸಿದ್ದರು. ಉದ್ಯಮಗಳು ಸಾಕಷ್ಟು ತೊಂದರೆ ಅನುಭವಿಸಿತ್ತು. ಇದೀಗ ಜಿಎಸ್ಟಿ ದರವನ್ನು ಕೇಂದ್ರ ಸರಕಾರ ಇಳಿಸಿರುವುದು ಸ್ವಾಗತಾರ್ಹ, ಕಾಂಗ್ರೆಸ್ ಪಕ್ಷ ಜಿಎಸ್ಟಿ ದರ ಇಳಿಸುವುದು ಕಾಂಗ್ರೆಸ್ನ ಚಿಂತನೆ ಆಗಿತ್ತು. ಜಿಎಸ್ಟಿ ದರ ಇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೋರಾಟ ನಡೆಸಿದ್ದರು. ಇದೀಗ ಜಿಎಸ್ಟಿ ದರ ಇಳಿಕೆಯಾಗಿರುವುದು ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಹರೀಶ್ ಕುಮಾರ್ ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ , ಜಿಲ್ಲಾ ನಗರ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಸ್.ಅಪ್ಪಿ, ಮುಖಂಡರಾದ ಶಬೀರ್ ಸಿದ್ದಕಟ್ಟೆ, ಸುರೇಂದ್ರ ಕಂಬಳಿ, ವಿಕಾಶ್ ಶೆಟ್ಟಿ, ನೀರಜ್ಚಂದ್ರ ಪಾಲ್, ಪದ್ಮಪ್ರಸಾದ್ ಜೈನ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News