ದ.ಕ. ಜಿಲ್ಲೆ| ರಾಜ್ಯ ಬಜೆಟ್ - 2026: ಗಣ್ಯರ ಪ್ರತಿಕ್ರಿಯೆಗಳು...
ಕರಾವಳಿಯ ಅಭಿವೃದ್ಧಿಗೆ ಮಹತ್ವ
ರಾಜ್ಯ ಸರಕಾರ ಮಂಡಿಸಿದ ಬಜೆಟ್ ಜನಪರವಾಗಿದೆ. ರೈತರು, ಮಹಿಳೆಯರು, ಯುವಕರು ಹಾಗೂ ಮಧ್ಯಮ ವರ್ಗದ ಜನರಿಗೆ ನೀಡಿದ ಯೋಜನೆಗಳು ಸ್ವಾಗತಾರ್ಹ. ಕರಾವಳಿಯ ಪ್ರವಾಸೋದ್ಯಮ, ಮೀನುಗಾರಿಕೆ, ಪೊಲೀಸ್ ಠಾಣೆಗಳ ಬಲವರ್ಧನೆ, ಕೃಷಿ, ಅರಣ್ಯ, ಆರೋಗ್ಯ, ಮುಜರಾಯಿ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ, ವಸತಿ, ಶಿಕ್ಷಣ ಕ್ಷೇತ್ರ ಸಹಿತ ಎಲ್ಲಾ ವರ್ಗದ ಕಲ್ಯಾಣಕ್ಕಾಗಿ ವಿಶೇಷ ಆದ್ಯತೆ ನೀಡಿರುವುದು ಸಂತಸ ಸಂಗತಿಯಾಗಿದೆ. ರಾಜ್ಯದ ಸಮಗ್ರ ಹಾಗು ಕರಾವಳಿ ಅಭಿವೃದ್ಧಿಗೆ ಈ ಬಜೆಟ್ ಮಹತ್ವದ ಹೆಜ್ಜೆಯಾಗಿದೆ.
-ಬಿ. ರಮಾನಾಥ ರೈ, ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರು, ಕರ್ನಾಟಕ ಸರಕಾರ
ತಂತ್ರಜ್ಞಾನ ಆಧಾರಿತ ಬೆಳವಣಿಗೆಗೆ ಒತ್ತು
ರಾಜ್ಯ ಬಜೆಟ್‌ನಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ತಂತ್ರಜ್ಞಾನ ಆಧಾರಿತ ಬೆಳವಣಿಗೆಗೆ ಒತ್ತು ನೀಡಲಾಗಿರುವು ದನ್ನು ಕೆಸಿಸಿಐ ಸ್ವಾಗತಿಸುತ್ತದೆ. ಮಂಗಳೂರು ಮೀನುಗಾರಿಕಾ ಕಾಲೇಜಿನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆಗೆ ಮುಂದಾಗಿರುವುದು, ಮೀನುಗಾರರ ಕಿಟ್‌ಗಳಿಗೆ ಸಬ್ಸಿಡಿ ಹೆಚ್ಚಳದ ಮೂಲಕ ಮೀನುಗಾರಿಕಾ ಕ್ಷೇತ್ರಕ್ಕೆ ಗಮನ ಹರಿಸಲಾಗಿದೆ. ಪ್ರಮುಖ ಜಿಲ್ಲೆಗಳಲ್ಲಿ ಮತ್ಸ್ಯದರ್ಶಿನಿಯನ್ನು ವಿಸ್ತರಿಸಲು ಮುಂದಾಗಿರುವುದು ಶ್ಲಾಘನೀಯ. ಆದರೆ ಕೆಸಿಸಿಐ ತನ್ನ ಪೂರ್ವಬಜೆಟ್ ಮನವಿ ಪತ್ರದಲ್ಲಿ ಪ್ರಸ್ತಾಪಿಸಿರುವ ಮಂಗಳೂರು ಬಂದರು ಆಧುನೀಕರಣ, ಕರಾವಳಿ ಹೆದ್ದಾರಿ ವಿಸ್ತರಣೆ, ತೋಟಗಾರಿಕಾ ಘಟಕಗಳಿಗೆ ಪ್ರೋತ್ಸಾಹ ನೀಡುವಂತಹ ಪ್ರಸ್ತಾವನೆಗಳಿಗೆ ಬಜೆಟ್‌ನಲ್ಲಿ ಮನ್ನಣೆ ನೀಡಿಲ್ಲ.
- ಪಿ.ಬಿ. ಅಹ್ಮದ್ ಮುದಸ್ಸರ್, ಅಧ್ಯಕ್ಷರು, ಕೆಸಿಸಿಐ-ಮಂಗಳೂರು
*ಹೊಸ ಭಾಷ್ಯ ಬರೆದ ಬಜೆಟ್
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ಕರಾವಳಿಯ ಆರ್ಥಿಕತೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡುವಂತಿದೆ. ಇದು ಕೇವಲ ಅಂಕಿ-ಅಂಶಗಳ ಬಜೆಟ್ ಆಗಿರದೆ, ದೂರದೃಷ್ಟಿಯ ’ಅಭಿವೃದ್ಧಿ ಪತ್ರ’ವಾಗಿದೆ. ಮೀನುಗಾರಿಕೆಯ ಅಭಿವೃದ್ಧಿಗೆ ಅತ್ಯಾಧುನಿಕ ’ಸೆಂಟರ್ ಆಫ್ ಎಕ್ಸಲೆನ್ಸ್’ ಸ್ಥಾಪಿಸಲು ಮುಂದಾಗಿರುವುದು ಸ್ವಾಗ ತಾರ್ಹ. ಕರಾವಳಿಯ ಪ್ರವಾಸೋದ್ಯಮಕ್ಕೆ ವೇಗ ನೀಡಲು ’ಸೀ ಪ್ಲೇನ್’ ಮತ್ತು ’ಹೆಲಿ ಟ್ಯಾಕ್ಸಿ’ಗಳಂತಹ ಆಧುನಿಕ ಸಾರಿಗೆ ಸೌಲಭ್ಯಗಳನ್ನು ಘೋಷಿಸಿರುವುದು ಜಾಗತಿಕ ಮಟ್ಟದಲ್ಲಿ ಮಂಗಳೂರನ್ನು ಪ್ರವಾಸಿ ತಾಣವಾಗಿ ಗುರುತಿ ಸಲು ಸಹಕಾರಿಯಾಗಲಿದೆ. ಮಾಣಿ ಮತ್ತು ಸಜಿಪನಡುವಿನಲ್ಲಿ ಹೊಸ ಪೊಲೀಸ್ ಠಾಣೆಗಳನ್ನು ಸ್ಥಾಪಿಸುವ ಸರಕಾರದ ನಿರ್ಧಾರವು ಶ್ಲಾಘನೀಯ,
-ಮಂಜುನಾಥ ಭಂಡಾರಿ, ಕೆಪಿಸಿಸಿ ಕಾರ್ಯಾಧ್ಯಕ್ಷರು, ವಿಧಾನ ಪರಿಷತ್ ಸದಸ್ಯರು
ಸಾಲದ ಹೊರೆ ಹೆಚ್ಚಿಸಿದ ಬಜೆಟ್
ಹಿಂದಿನ ಬಜೆಟ್‌ನಂತೆ ಈ ಬಜೆಟ್ ಕೂಡಾ ಕೇವಲ ಘೋಷಣೆಗೆ ಸೀಮಿತವಾಗಿದೆ. ಬಜೆಟ್ ಗಾತ್ರ ಹಿಗ್ಗಿದೆ. ಜತೆಗೆ ಸಾಲದ ಹೊರೆಯೂ ಇಮ್ಮಡಿಯಾಗಿದೆ. ಅಬಕಾರಿ ಇಲಾಖೆ ಮೂಲಕ ಸರಕಾರ ಹೆಚ್ಚಿನ ರಾಜಸ್ವ ನಿರೀಕ್ಷಿಸಿರುವುದು ರಾಜ್ಯದ ಜನತೆಯ ದುರಂತ. ಸಾಲದಲ್ಲಿ ಮುಳುಗಿರುವ ಈ ಸರಕಾರ ಬಜೆಟ್‌ನ ಶೇ.25ರಷ್ಟು ಘೋಷಣೆಗಳನ್ನು ಕೂಡಾ ಕಾರ್ಯಗತ ಮಾಡುವುದು ಸಾಧ್ಯವಿಲ್ಲ. ಅಲ್ಪಸಂಖ್ಯಾತರನ್ನು ಓಲೈಕೆ ಮಾಡಿರುವುದೇ ಬಜೆಟ್‌ನ ದೊಡ್ಡ ಸಾಧನೆ. ಕರಾವಳಿ ಭಾಗವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ. ಪುತ್ತೂರು ಮೆಡಿಕಲ್ ಕಾಲೇಜ್‌ಗೆ ಯಾವುದೇ ಅನುದಾನ ಘೋಷಣೆಯಾಗಿಲ್ಲ.
-ನಳಿನ್ ಕುಮಾರ್ ಕಟೀಲ್, ಮಾಜಿ ಸಂಸದರು, ದ.ಕ.
ಪ್ರಗತಿ ಶೂನ್ಯ ಬಜೆಟ್
ರಾಜ್ಯದಲ್ಲಿ 17 ಬಾರಿ ಬಜೆಟ್ ಮಂಡಿಸಿ ಅಪಾರ ಆರ್ಥಿಕ ಅನುಭವ ಹೊಂದಿರುವ ಸಿಎಂ ಸಿದ್ದರಾಮಯ್ಯ ಇಂದು ಮಂಡಿಸಿದ ಬಜೆಟ್ ನಿರಾಸದಾಯಕ ಮತ್ತು ಪ್ರಗತಿ ಶೂನ್ಯವಾಗಿದೆ. ಇದು ಕೇವಲ ಅಂಕಿ-ಅಂಶಗಳ ಕಸರತ್ತಾಗಿದ್ದು, ರಾಜ್ಯದ ಜನತೆಯನ್ನು ಇನ್ನಷ್ಟು ಸಾಲದ ಸುಳಿಯಲ್ಲಿ ಸಿಲುಕಿಸುವುದರಲ್ಲಿ ಅನುಮಾನವಿಲ್ಲ. ರಾಜ್ಯದ ಒಟ್ಟು ಸಾಲವು 8.24 ಲಕ್ಷ ಕೋ.ರೂ.ದಾಟುತ್ತಿರುವುದು ಆತಂಕಕಾರಿಯಾಗಿದೆ. ಇಂತಹ ’ಆರ್ಥಿಕ ಪಾಂಡಿತ್ಯ’ಕ್ಕೆ ರಾಜ್ಯದ ಜನತೆ ಬೆಚ್ಚಿಬಿದ್ದಿದ್ದು ಇದು ಸರಕಾರದ ಆರ್ಥಿಕ ಶಿಸ್ತಿನ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಯಾವುದೇ ಮಹತ್ವಾಕಾಂಕ್ಷೆಯ ಅಥವಾ ಉದ್ಯೋಗ ಸೃಷ್ಟಿಸುವ ಯೋಜನೆಗಳನ್ನು ಘೋಷಣೆ ಮಾಡದಿರುವುದು ಖೇದಕರ. ಕರಾವಳಿ ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ ಯಾವುದೇ ಹೊಸ ಯೋಜನೆಗಳನ್ನು ಘೋಷಿಸದೆ ಜಿಲ್ಲೆಯನ್ನು ಸರಕಾರ ಸಂಪೂರ್ಣ ವಾಗಿ ನಿರ್ಲಕ್ಷ್ಯ ಮಾಡಿದೆ.
-ಬ್ರಿಜೇಶ್ ಚೌಟ, ಸಂಸದರು, ದ.ಕ.
ಅಭಿವೃದ್ಧಿಗೆ ಪೂರಕ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ. ಸಮಾಜದ ಎಲ್ಲಾ ವರ್ಗಗಳ ಜನರನ್ನು ಒಳಗೊಂಡ ಜನಪರ ಬಜೆಟ್ ಇದಾಗಿದೆ. ರಾಜ್ಯದ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುವ ಜೊತೆಗೆ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುವ ಮೂಲಕ ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ಕೆಲಸವನ್ನು ಸರಕಾರ ಮಾಡಿದೆ. ಜಿಲ್ಲೆಯ ಅಭಿವೃದ್ಧಿಗೆ ಅನೇಕ ಪ್ರಮುಖ ಯೋಜನೆಗಳನ್ನು ಘೋಷಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕೊಲ್ಲೂರು ಮೂಕಾಂಬಿಕ ದೇವಸ್ಥಾನಗಳಿಗೆ ಅಭಿವೃದ್ಧಿ ಪ್ರಾಧಿಕಾರ ಗಳನ್ನು ರಚಿಸುವ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹವಾಗಿದೆ. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಅಭಿವೃದ್ಧಿಗೆ ಅನುದಾನ ನೀಡಲಾಗಿದ್ದು, ಮೆಡಿಕಲ್ ಕಾಲೇಜಿನ ಕಾಮಗಾರಿಯನ್ನು ಪ್ರಾರಂಭಿಸಲು ಬಜೆಟ್‌ನಲ್ಲಿ ತಿಳಿಸಲಾಗಿದೆ.
-ಐವನ್ ಡಿಸೋಜ, ಶಾಸಕರು, ವಿಧಾನ ಪರಿಷತ್
ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು
ಈ ಬಜೆಟ್ ಭವಿಷ್ಯದ ತಂತ್ರಜ್ಞಾನ ಮೂಲಸೌಕರ್ಯವನ್ನು ನಿರ್ಮಿಸುವ ಮತ್ತು ಬೆಂಗಳೂರನ್ನು ಹೊರತುಪಡಿಸಿ ಇತರ ಪ್ರದೇಶಗಳಿಗೂ ಹೊಸ ಆವಿಷ್ಕಾರ ಸಾಧ್ಯತೆಯನ್ನು ವಿಸ್ತರಿಸುವ ಬದ್ಧತೆಯನ್ನು ರಾಜ್ಯ ಸರಕಾರ ಸಾರಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡ್ರೋನ್ ಪರೀಕ್ಷಾ ಸೌಲಭ್ಯದ ಘೋಷಣೆ, ಹೊಸ ಎಐ ಸೆಂಟರ್ ಆಫ್ ಎಕ್ಸಲೆನ್ಸ್‌ಗಳು ಹಾಗೂ ಕೌಶಲಾಭಿವೃದ್ಧಿ ಮತ್ತು ಸುಧಾರಿತ ತಂತ್ರಜ್ಞಾನಗಳಲ್ಲಿನ ಹೂಡಿಕೆಗಳು, ಮುಂದಿನ ಪೀಳಿಗೆಯ ಆವಿಷ್ಕಾರ ಮೂಲಸೌಕರ್ಯವನ್ನು ನಿರ್ಮಿಸುವ ಸರಕಾರದ ಗುರಿಯನ್ನು ಪ್ರತಿಬಿಂಬಿಸುತ್ತವೆ.
-ಬಿ.ವಿ. ನಾಯ್ಡು, ಅಧ್ಯಕ್ಷರು, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ)
ಇದು ಬಿಳಿ ಹಾಳೆಯ ಬಜೆಟ್
ಕಳೆದ ಬಾರಿ ಬಜೆಟ್ ಮಂಡಿಸುವಾಗ ಬಜೆಟ್ ಎಂಬುದು ಕೇವಲ ಬಿಳಿ ಹಾಳೆ ಅಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿನ ಎಷ್ಟು ಘೋಷಣೆಗಳನ್ನು ಕರಾವಳಿ ಭಾಗದಲ್ಲಿ ಸಾಕಾರಗೊಳಿಸಿದ್ದಾರೆ ಎಂಬುದನ್ನು ಬಹಿ ರಂಗಪಡಿಸಿದಾಗ ಮಾತ್ರ ಇಂದಿನ ಬಜೆಟ್‌ಗೆ ತೂಕ ಬರುತ್ತದೆ. ನಾರಾಯಣ ಗುರು ಅಭಿವೃದ್ಧಿ ನಿಗಮ ಹಾಗೂ ಬಂಟ ನಿಗಮಕ್ಕೆ ಈ ಬಾರಿಯೂ ಅನ್ಯಾಯವೆಸಗಲಾಗಿದೆ. ಕರಾವಳಿಯ ಪಾಲಿಗೆ ಇದು ನೀರಸ ಬಜೆಟ್ ಆಗಿದೆ. ಒಟ್ಟಾರೆಯಾಗಿ ಇದು ಕೇವಲ ಬಿಳಿ ಹಾಳೆ ಅಷ್ಟೇ ಆಗುತ್ತದೆ.
-ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ನಗರ ದಕ್ಷಿಣ
ನಿರಾಶಾದಾಯಕ ಬಜೆಟ್
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ರಾಜ್ಯದ ಜನತೆಗೆ ಸಾಲದ ಹೊರೆಯ ಭಾಗ್ಯ ನೀಡಿದೆ. ಅಭಿವೃದ್ಧಿಗೆ ಬೇಕಾದ ಚಿಂತನೆಯೇ ಇಲ್ಲದ ಬಜೆಟ್ ಇದಾಗಿದ್ದು, ಕರ್ನಾಟಕವನ್ನು ಸಾಲದತ್ತ ತಳ್ಳಲಿದೆ. ಯುವಕರ ಕೈ ಬಲ ಪಡಿಸುವ ಯೋಜನೆಯಿಲ್ಲ. ಮೀನುಗಾರರನ್ನು ನಿರ್ಲಕ್ಷಿಸಲಾಗಿದೆ. ಪ್ರವಾಸೋದ್ಯಮವನ್ನು ಸರಕಾರ ಮರೆ ತಿದೆ. ಪ್ರಗತಿಗೆ ಕೊಡುಗೆ ನೀಡದ ಇದೊಂದು ನೀರಸ ಬಜೆಟ್ ಆಗಿದೆ.
-ಡಾ. ಭರತ್ ಶೆಟ್ಟಿ, ಶಾಸಕರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ
ಸಮತೋಲಿತ ಬಜೆಟ್
ಮುಖ್ಯಮಂತ್ರಿ ಸಿದ್ದರಾಮಯ್ಯ 4.48 ಲಕ್ಷ ಕೋ.ರೂ. ಗಾತ್ರದ ಈ ಬಜೆಟ್‌ನಲ್ಲಿ ಜನಪ್ರಿಯ ಗ್ಯಾರಂಟಿ ಯೋಜನೆ ಗಳು ಮತ್ತು ತಾಂತ್ರಿಕ ಅಭಿವೃದ್ಧಿಯ ನಡುವೆ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಇದು ಸಿದ್ದರಾಮಯ್ಯ ಅವರ ಅನುಭವದ ಬಜೆಟ್ ಆಗಿದ್ದು, ಬಡವರ ಹಿತ ಕಾಯುವ ಜೊತೆಗೆ ರಾಜ್ಯವನ್ನು ತಾಂತ್ರಿಕವಾಗಿ ಮುನ್ನಡೆಸುವ ದೂರದೃಷ್ಟಿ ಹೊಂದಿದೆ.
-ಪದ್ಮರಾಜ್ ಆರ್. ಪೂಜಾರಿ, ಕಾಂಗ್ರೆಸ್ ಮುಖಂಡರು
ಅಲ್ಪಸಂಖ್ಯಾತರ ಶಿಕ್ಷಣ ಕ್ಷೇತ್ರಕ್ಕೆ ಒತ್ತು
ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಬಜೆಟ್ ಮಂಡಿಸಿದ್ದಾರೆ. 25 ಹೊಸ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿ ಸುವುದು, 10 ಹೊಸ ವಸತಿ ಶಾಲೆಗಳನ್ನು ಸಿಬಿಎಎಸ್‌ಇ ಪಠ್ಯಕ್ರಮದೊಂದಿಗೆ ಆರಂಭಿಸುವುದು, 117 ಮೌಲಾನಾ ಆಝಾದ್ ಉರ್ದು ಶಾಲೆಗಳನ್ನು ಕೆಪಿಎಸ್ ಮಾದರಿಯಲ್ಲಿ ಉನ್ನತೀಕರಿಸುವುದು, ಅಲ್ಪಸಂಖ್ಯಾತರ ವಸತಿ ಶಾಲೆ ಗಳಲ್ಲಿನ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು 4 ವಸತಿ ಶಾಲೆ, ಅಲ್ಪಸಂಖ್ಯಾತ ಸಮುದಾಯದ 5000 ಬಡ ವಿದ್ಯಾರ್ಥಿಗಳಿಗೆ ತಾಂತ್ರಿಕ ಮತ್ತು ಉನ್ನತ ಶಿಕ್ಷಣಕ್ಕಾಗಿ ಲ್ಯಾಪ್‌ಟಾಪ್ ಖರೀದಿಸಲು ತಲಾ 50,000 ರೂ. ಸಹಾಯಧನ ನೀಡುವುದು ಇತ್ಯಾದಿ ಹಲವು ಉತ್ತಮ ಯೋಜನೆಗಳನ್ನು ಪ್ರಕಟಿಸಿದ್ದಕ್ಕಾಗಿ ರಾಜ್ಯ ಸರಕಾರ ವನ್ನು ಅಭಿನಂದಿಸುತ್ತೇವೆ.
-ಮೂಸಬ್ಬ ಪಿ. ಬ್ಯಾರಿ, ಅಧ್ಯಕ್ಷರು, ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಕೇಂದ್ರ ಸಮಿತಿ, ಮಂಗಳೂರು
ಖಾಸಗಿ ಮೆಡಿಕಲ್ ಕಾಲೇಜಿಗೆ ಸರಕಾರ ಮಣಿದಿದೆ
ಕ್ಯಾನ್ಸರ್, ಹೃದಯದ ಆಸ್ಪತ್ರೆಗಳ ಘೋಷಣೆ ಇಲ್ಲ, ಹೊಸ ತಾಲೂಕುಗಳಿಗೆ ಆಸ್ಪತ್ರೆಗಳು ಇಲ್ಲ, ಸಮುದಾಯ ಆಸ್ಪತ್ರೆಗಳ ಸ್ಥಾಪನೆಯೂ ಇಲ್ಲ, ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುದಾನ ಇಲ್ಲ. ಒಟ್ಟಾರೆ ಸರಕಾರ ಖಾಸಗಿ ಮೆಡಿಕಲ್ ಕಾಲೇಜು, ಆಸ್ಪತ್ರೆಗಳ ಲಾಬಿಗೆ ರಾಜ್ಯ ಸರಕಾರ ಮಣಿದಿದೆ. ಬೆಳಗಾವಿ ಅದಿವೇಶನದಲ್ಲಿ ದ.ಕ. ಜಿಲ್ಲೆಗೆ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯದ ಆಸ್ಪತ್ರೆ ಮಂಜೂರು ಮಾಡುವ, ಸುರತ್ಕಲ್ ಮತ್ತಿತರ ಕಡೆ ಸಮುದಾಯ ಆಸ್ಪತ್ರೆ ಸ್ಥಾಪನೆ ಮಾಡುವ ಭರವಸೆ ನೀಡಲಾಗಿತ್ತು. ಪುತ್ತೂರಿಗೆ ಘೋಷಿಸಲಾಗಿರುವ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಅನುದಾನ ಮಂಜೂರು ಮಾಡುವ, ವೆನ್ಲಾಕ್ ಜಿಲ್ಲಾಸ್ಪತ್ರೆಯನ್ನು ಮಲ್ಟಿ ಸ್ಪೆಷಾಲಿಟಿ ಪ್ರಾದೇಶಿಕ ಆಸ್ಪತ್ರೆಯಾಗಿಸಿ ಮೇಲ್ದರ್ಜೆಗೆ ಏರಿಸುವ ಹೇಳಿಕೆ ನೀಡಲಾಗಿತ್ತು. ಆದರೆ ಅದ್ಯಾವುದನ್ನೂ ಈಡೇರಿಸದೆ ನಿರಾಶೆಗೊಳಿಸಲಾಗಿದೆ.
-ಮುನೀರ್ ಕಾಟಿಪಳ್ಳ, ಸಂಚಾಲಕರು, ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ, ದ.ಕ.ಜಿಲ್ಲೆ
ದ.ಕ. ಜಿಲ್ಲೆಯ ಆರೋಗ್ಯ ಕ್ಷೇತ್ರ ಕಡೆಗಣಿಸಿದ ಬಜೆಟ್
ಈ ಸಾಲಿನ ಆಯವ್ಯಯ ಬಜೆಟ್‌ನಲ್ಲಿ ಕರಾವಳಿಯ ಜಿಲ್ಲೆಗಳಿಗೆ ಮತ್ತು ಯುವಜನರಿಗೆ ಯಾವೊಂದು ಕೊಡುಗೆ ಗಳನ್ನು ನೀಡಿಲ್ಲ. ಜಿಲ್ಲೆಯ ಆರೋಗ್ಯ ಕ್ಷೇತ್ರದ ಅಭಿವೃದ್ಧಿ, ಜಯದೇವ, ಕಿದ್ವಾಯಿ ಆಸ್ಪತ್ರೆ ಸ್ಥಾಪನೆಯ ಯಾವೊಂದು ಪ್ರಸ್ತಾಪವಿಲ್ಲ. ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು ಎಂಬ ಈ ಭಾಗದ ಜನರ ಬೇಡಿಕೆಯನ್ನು ಈ ಬಾರಿಯೂ ಕಡೆಗಣಿಸಲಾಗಿದೆ. ಹಿಂದೆ ಕಾಲೇಜು ಸ್ಥಾಪನೆಯ ಘೋಷಣೆ ಮಾಡಿ ವರ್ಷಗಳು ಉರುಳಿದ ನಂತರ ಈ ಬಾರಿ ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು 300 ಹಾಸಿಗೆಯ ಆಸ್ಪತ್ರೆ ನಿರ್ಮಿಸಲು ಅನುಮೋದನೆ ಯನ್ನಷ್ಟೇ ನೀಡಲಾಗಿದೆಯೇ ಹೊರತು ಮೆಡಿಕಲ್ ಕಾಲೇಜು ಸ್ಥಾಪನೆಗೆ ಬಿಡಿಗಾಸನ್ನೂ ಈ ಬಜೆಟ್‌ನಲ್ಲೂ ಮೀಸಲಿ ಟ್ಟಿಲ್ಲ. ಒಟ್ಟಾರೆಯಾಗಿ ಈ ಬಜೆಟ್ ದ.ಕ. ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ ಬಜೆಟ್ ಆಗಿದೆ.
-ಸಂತೋಷ್ ಬಜಾಲ್, ಕಾರ್ಯದರ್ಶಿ, ಡಿವೈಎಫ್‌ಐ ದ.ಕ. ಜಿಲ್ಲೆ
ಸಾರ್ವಜನಿಕ ಶಿಕ್ಷಣದ ವ್ಯವಸ್ಥಿತ ಅವನತಿ
ಉನ್ನತ ಶಿಕ್ಷಣದ ಪರಿವರ್ತನೆ ಮತ್ತು ಗುಣಮಟ್ಟದ ಕಲಿಕೆ ಎಂಬ ಆಕರ್ಷಕ ಪದಗಳ ಮುಸುಕಿನಲ್ಲಿದ್ದರೂ ವಾಸ್ತವ ದಲ್ಲಿ ಇದು ಸಾರ್ವಜನಿಕ ಶಿಕ್ಷಣ ಮೂಲಸೌಕರ್ಯವನ್ನು ಕೇಂದ್ರೀಕೃತಗೊಳಿಸುವ ಮತ್ತು ನಿರ್ಲಕ್ಷಿಸುವ ಒಂದು ವ್ಯವಸ್ಥಿತ ಸಂಚಾಗಿದೆ. ಈ ಪ್ರಕ್ರಿಯೆಯ ಹಿಂದೆ ವಿವಾದಾತ್ಮಕ ಕೆಪಿಎಸ್ ನೀತಿಯ ಪ್ರಬಲ ಪ್ರಭಾವವಿದೆ. ಈ ಬಾರಿಯ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಲಾದ ಪಾಲನ್ನು ಗಮನಿಸಿದರೆ, ಒಟ್ಟಾರೆ ಬಜೆಟ್ ಪ್ರಮಾಣದಲ್ಲಿ ಶಿಕ್ಷಣದ ಪಾಲು ಕಳೆದ ವರ್ಷಕ್ಕಿಂತ ಕುಸಿದಿರುವುದು ಆತಂಕಕಾರಿ ಸಂಗತಿಯಾಗಿದೆ. ಇದು ಸರಕಾರಕ್ಕೆ ಸಾರ್ವಜನಿಕ ಶಿಕ್ಷಣದ ಮೇಲಿರುವ ಬದ್ಧತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ.
-ವಿನಯ್ ಚಂದ್ರ, ಎಐಡಿಎಸ್‌ಒ-ಸಂಚಾಲಕರು, ದ.ಕ.ಜಿಲ್ಲೆ