×
Ad

ಮಂಗಳೂರು ಮಹಾನಗರ ಪಾಲಿಕೆ: 157.43 ಕೋಟಿ ರೂ. ಮಿಗತೆ ಬಜೆಟ್ ಮಂಡನೆ

Update: 2024-02-27 22:24 IST

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 2024 -25ನೇ ಸಾಲಿನಲ್ಲಿ 820.87 ಕೋಟಿ ರೂ. ಆದಾಯ, 956.01 ಕೋಟಿ ರೂ. ವೆಚ್ಚ ಹಾಗೂ 157.43 ಕೋಟಿ ರೂ. ಮೊತ್ತದ ಮಿಗತೆ ಬಜೆಟ್‌ನ್ನು ಮಂಡಿಸಲಾಯಿತು.

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆಯಲ್ಲಿ ಮಂಗಳವಾರ ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆದ ಮನಪಾ ವಿಶೇಷ ಸಭೆಯಲ್ಲಿ ತೆರಿಗೆ ನಿರ್ಧರಣೆ , ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ವರುಣ್ ಚೌಟ ಬಜೆಟ್ ಮಂಡಿಸಿದರು.

ಉಪ ಮೇಯರ್ ಸುನೀತಾ , ಆಯುಕ್ತರಾದ ಆನಂದ್ ಸಿ ಮತ್ತಿತರರು ಉಪಸ್ಥಿತರಿದ್ದರು.

ಜನಪರ ಜನಸ್ನೇಹಿ ಆಡಳಿತ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ *ಬಿಟ್ಟು ಹೋದ ಆದಾಯ ಮೂಲಗಳನ್ನು ಗುರುತಿಸಿ ರಾಜಸ್ವ ಕ್ರೋಢೀಕರಣಕ್ಕೆ ಒಳಪಡಿಸುವುದು * ಸ್ವಚ್ಛತೆ ಮತ್ತು ಶುಚಿತ್ವಕ್ಕೆ ಹೆಚ್ಚು ಒತ್ತು * ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆಧ್ಯತೆ *ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆ *ಪರಿಸರ ಮತ್ತು ನೀರಿನ ಸಂರಕ್ಷಣೆಗೆ ಆದ್ಯತೆ *ಕಲ್ಯಾಣ, ಆರೋಗ್ಯ ಮತ್ತು ಅಭಿವೃದ್ಧಿಗೆ ವಿಶೇಷ ಗಮನ *ಕುಡಿಯುವ ನೀರು, ಒಳಚರಂಡಿಗಳ ಅಭಿವೃದ್ಧಿಗೆ ಆಧ್ಯತೆ *ನಾಗರೀಕರ ಕಲ್ಯಾಣಕ್ಕೆ ವಿಶೇಷ ಕಾರ್ಯಕ್ರಮಗಳು ಇದು ಮನಪಾ ಬಜೆಟ್‌ನ ಪ್ರಮುಖ ಅಂಶಗಳಾಗಿವೆ.

‘ನಾಗರಿಕರ ಕರ ನಗರ ಸುಸ್ಥಿರ ’ಎಂಬ ಧ್ಯೇಯದೊಂದಿಗೆ 2023-24 ಸಾಲಿನ ಪರಿಷ್ಕೃತ ಆಯ-ವ್ಯಯ ಪತ್ರವನ್ನು ಮತ್ತು 2024-25ನೇ ಸಾಲಿನ ಆಯ-ವ್ಯಯ ಪತ್ರವನ್ನು ಮಂಡಿಸಿದ ವರುಣ್ ಚೌಟ ಅವರು ಕೇಂದ್ರ ಸರಕಾರದ ಸ್ಮಾರ್ಟ್ ಯೋಜನೆಯಿಂದ ತ್ವರಿತವಾಗಿ ಬೆಳೆಯುತ್ತಿರುವ ಮಂಗಳೂರು ನಗರಕ್ಕೆ ದೊರಕಿದ ಮೂಲ ಸೌಕರ್ಯಗಳ ಅಭಿವೃದ್ಧಿ ಯಿಂದ ನಗರದ ಸೌಂದರ್ಯ ವೃದ್ಧಿಸಿದೆ. ಈವರೆಗೆ ಸುಮಾರು 734.75 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ. ಪ್ರಗತಿಯಲ್ಲಿರುವ ಅತ್ಯಂತ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ವಾಟರ್ ಫಂಡ್ ಅಭಿವೃದ್ಧಿ ಸಹಿತ 20 ಕಾಮಗಾರಿ ಗಳನ್ನು ಜೂನ್ 24ರ ಮೊದಲು ಪೂರ್ಣಗೊಳಿಸಲು ಗುರಿ ನಿಗದಿಪಡಿಸಲಾಗಿದೆ ಎಂದರು.

2024-25ನೇ ಸಾಲಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ವಿವಿಧ ಲೆಕ್ಕ ಶೀರ್ಷಿಕೆಗಳ ಅಡಿಯಲ್ಲಿ 26512.50 ಲಕ್ಷ ಅನುದಾನ ನಿರೀಕ್ಷಿಸಲಾಗಿದೆ.

*ಆಸ್ತಿ ತೆರಿಗೆ 93 .66 ಕೋಟಿ: ಆಯ-ವ್ಯಯದಲ್ಲಿ ಆಸ್ತಿ ತೆರಿಗೆ ಮೂಲಕ ಸೆಸ್ಸ್ ಹೊರತುಪಡಿಸಿ 93.66 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. 2023-24ನೇ ಸಾಲಿನಲ್ಲಿ 77.29 ಕೋಟಿ ರೂ. ತೆರಿಗೆ ವಸೂಲಿ ಮಾಡಲಾಗಿದೆ. ಡ್ರೋನ್ ಮೂಲಕ ಪಾಲಿಕೆಯ ಆಸ್ತಿಗಳ ಸರ್ವೇಗೆ 8 ಕೋಟಿ ರೂ. ಅನುದಾನ ನೀಡಲು ಉದ್ದೇಶಿಸಲಾಗಿದೆ.

ನೀರಿನ ಶುಲ್ಕ 6825 ಲಕ್ಷ ರೂ, ಉದ್ದಿಮೆ ಪರವಾನಿಗೆ 9366 ಲಕ್ಷ ರೂ, ಎಸ್‌ಡಬ್ಲ್ಯುಎಂ ಕರ 2700 ಲಕ್ಷ ರೂ, ರಸ್ತೆ ಕಡಿತ ಪುನರ್ ನಿರ್ಮಾಣ ಶುಲ್ಕ 2150 ಲಕ್ಷ ರೂ, ಒಳಚರಂಡಿ ಶುಲ್ಕ 461 ಲಕ್ಷ ರೂ, ಮಾರುಕಟ್ಟೆ /ಸ್ಟಾಲ್ ಹಾಗೂ ಇತರ ಬಾಡಿಗೆ 678 ಲಕ್ಷ ರೂ, ಖಾತಾ ವರ್ಗಾವಣೆ ಶುಲ್ಕ 450 ಲಕ್ಷ ರೂ, ಕಟ್ಟಡ ಪರವಾನಿಗೆ ಮತ್ತು ಪ್ರೀಮಿಯಂ ಎಫ್‌ಎಆರ್ 4390 ಲಕ್ಷ ರೂ, ಅಧಿಬಾರ ಶುಲ್ಕ 650 ಲಕ್ಷ ರೂ, ಜಾಹೀರಾತು ತೆರಿಗೆ ಮೂಲಕ 380 ಲಕ್ಷ ರೂ. ತೆರಿಗೆ ನಿರೀಕ್ಷಿಸಲಾಗಿದೆ.

ಅಭಿಲೇಖಾಲಯ ವಿಭಾಗದ ಕಡತಗಳನ್ನು ಇ-ತತ್ರಾಂಶದ ಮೂಲಕ ಡಿಜಿಟಲೀಕರಣಗೊಳಿಸಲಾಗಿದ್ದು, ಕಡತಗಳ ಶೀಘ್ರ ಹುಡುಕುವಿಕೆ ಮತ್ತು ವೀಕ್ಷಣೆಗಾಗಿ ರೆಕಾರ್ಡ್ ರೂಂ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಆರ್‌ಆರ್‌ಎಂಎಸ್) ಅಳವಡಿಸುವುದು, ಪಾಲಿಕೆಯ ಖಾಯಂ ನೌಕರರಿಗೆ ಜೆಪ್ಪುವಿನಲ್ಲಿ ನಿರ್ಮಿಸಲಾಗುತ್ತಿರುವ ವಸತಿ ಸಂಕೀರ್ಣವನ್ನು ಮುಂದಿನ ಜೂನ್‌ನೊಳಗೆ ಹಸ್ತಾಂತರ ಮಾಡಲು ಕ್ರಮ, ಅನಧಿಕೃತವಾಗಿ ಬೀದಿಬದಿ ಮತ್ತು ಇತರ ವ್ಯಾಪಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿರಂತರ ‘ಟೈಗರ್ ಗ್ಯಾಂಗ್’ ಕಾರ್ಯಾಚರಣೆಗೆ ಆಯ-ವ್ಯಯದಲ್ಲಿ 75 ಲಕ್ಷ ರೂ. ಕಾಯ್ದಿರಿಸಲಾಗಿದೆ.

ನೀರಿನ ಬಿಲ್ ಪಾವತಿ ಮತ್ತು ಮಾಹಿತಿ ತಿಳಿಯಲು ನೀರಿನ ತೆರಿಗೆ ತಂತ್ರಾಂಶ ಅಳವಡಿಕೆ, ಟೌನ್ ಹಾಲ್, ಅಂಬೇಡ್ಕರ್ ಭವನ ಮತ್ತು ತೆರೆದ ಮೈದಾನಗಳ ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ಗೆ ಮತ್ತು ಕಟ್ಟಡ ಬಾಡಿಗೆ ನಿರ್ವಹಣೆಗೆ ತಂತ್ರಾಂಶವನ್ನು 2024-25ನೇ ಸಾಲಿನಲ್ಲಿ ಜಾರಿಗೊಳಿಸಲಾಗುವುದು. ಹೊಸ ಜಾಹೀರಾತು ಫಲಕಗಳ ಅಳವಡಿಕೆ, ನವೀಕರಣ ಮತ್ತು ಅರ್ಜಿ ಸಲ್ಲಿಸಲು ತಂತ್ರಾಂಶವನ್ನು ವಿನ್ಯಾಸಗೊಳಿಸಲಾಗಿದೆ. ಕಟ್ಟಡ ಪ್ರವೇಶ ಪತ್ರ ಪಡೆಯಲು ಆನ್‌ಲೈನ್ ತಂತ್ರಾಂಶ ವನ್ನು ವಿನ್ಯಾಸಗೊಳಿಸಲಾಗುತ್ತಿದೆ.

ಹಸಿವು ಮುಕ್ತ ಮಂಗಳೂರು ಪರಿಕಲ್ಪನೆಯಲ್ಲಿ ಮನಪಾ ವ್ಯಾಪ್ತಿಯಲ್ಲಿನ 5 ಇಂದಿರಾ ಕ್ಯಾಂಟಿನ್‌ಗಳಿಗೆ 1.10 ಕೋಟಿ ರೂ. ಮೊಬಲಗನ್ನು ಪಾವತಿಸಲಾಗಿದ್ದು, 2024-25ನೇ ಸಾಲಿನಲ್ಲಿ 1.40 ಕೋಟಿ ರೂ. ಕಾಯ್ದಿರಿಸಲಾಗಿದೆ.ವಿಕಲಚೇತನರ ಅಭಿವೃದ್ಧಿಗಾಗಿ 88.30 ಲಕ್ಷ ರೂ. ಕುಟೀರ ಭಾಗ್ಯ ಮತ್ತು ಕುಟೀರ ಭಾಗ್ಯ ಯೋಜನೆಯಲ್ಲಿ ಪ್ರತಿ ವಾರ್ಡ್‌ಗೆ 10 ಮನೆಗಳ ದುರಸ್ಥಿಗೆ ಹಿಂದೆ ನೀಡಲಾಗುತ್ತಿದ್ದ ತಲಾ 30 ಸಾವಿರ ಸಹಾಯಧನವನ್ನು 40 ಸಾವಿರ ರೂ.ಗೆ ಏರಿಸಲಾಗುವುದು. ಕುಟೀರ ಭಾಗ್ಯ ಮತ್ತು ಕುಟೀರ ಜ್ಯೋತಿ ಯೋಜನೆಯಲ್ಲಿ ಮನೆ ದುರಸ್ತಿ ಮತ್ತು ವಿದ್ಯುತ್ತೀಕರಣಕ್ಕೆ 2.5 ಕೋಟಿ ರೂ ಮೀಸಲಿರಿಸಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ 89.80ಕೋಟಿ ರೂ, ಬೀದಿ ದೀಪಗಳ ನಿರ್ವಹಣೆಗೆ 13 ಕೋಟಿ ರೂ, ರಾಜಕಾಲುವೆಗಳ ಅಭಿವೃದ್ಧಿಗೆ 5.50 ಕೋಟಿ ರೂ, ನೀರು ಸರಬರಾಜು ಕಾಮಗಾರಿಗೆ 45.40 ಕೋಟಿ ರೂ, ಒಳಚರಂಡಿ ನಿರ್ವಹಣೆಗೆ 35.90 ಕೋಟಿ ರೂ, ರಸ್ತೆ , ಚರಂಡಿ, ನಿರ್ಮಾಣ ಮತ್ತು ಪಾದಚಾರಿ ಪಥಗಳ ನಿರ್ಮಾಣ ಹಾಗೂ ನಿರ್ವಹಣೆಗೆ 150 ಕೋಟಿ ರೂ, ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯಕ್ಕೆ 22.27 ಕೋಟಿ ರೂ ಕಾಯ್ದಿರಿಸಲಾಗಿದೆ.

ನಾಗರಿಕರ ಕಲ್ಯಾಣಕ್ಕಾಗಿ ವಿಶೇಷ ಕಾರ್ಯಕ್ರಮ : ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಸಂರಕ್ಷಣೆಗೆ 25 ಲಕ್ಷ ರೂ* ವಿದ್ಯಾರ್ಥಿಗಳಿಗೆ ಜ್ಞಾನ ಸಿರಿ ಯೋಜನೆ ವಿಸ್ತರಣೆ * ವೀರ ಯೋಧರ ಕಲ್ಯಾಣ ನಮ್ಮ ಕರ್ತವ್ಯ ‘ನಮ್ಮ ಯೋಧ’ * ಅಗ್ನಿ ಪಥ ಯೋಜನೆಗೆ ಉತ್ತೇಜನ -‘ಅಗ್ನಿವೀರ’ *ಸಿಬ್ಬಂದಿ ಆರೋಗ್ಯ ಸಿರಿ ಯೋಜನೆ ‘ ಸಿಬ್ಬಂದಿ ಕುಟುಂಬ ಮಿತ್ರ * ತುಳು ಭಾಷೆಯ ಅಭಿವೃದ್ಧಿ ‘ ಬಲೆ ತುಳು ಒರಿಪಾಲೆ’* ಜನಸಾಮಾನ್ಯರಿಂದ ವಿಜ್ಞಾನ ‘ ವಿಜ್ಞಾನಿ/ಸುಜ್ಞಾನಿ’ * ಕಾಡು ಬೆಳಸಿ -ನಗರ ಉಳಿಸಿ ‘ಹಸಿರೇ ಉಸಿರು’* ಕೊಳಗೇರಿಗಳ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ *ನಗರ ಸೌಂಧರ್ಯೀಕರಣ* ಮಹಿಳೆಯರಿಗಾಗಿ ನಗರದಲ್ಲಿ ‘ಪಿಂಕ್ ಟಾಯ್ಲಟ್’ *ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ತರಬೇತಿ ಶಿಬಿರಗಳ ಆಯೋಜನೆ * ಪ್ರಾಕೃತಿಕ ವಿಕೋಪ -ಮೃತ ಕುಟುಂಬಗಳಿಗೆ ಸಹಾಯಹಸ್ತ * ಬ್ರಹ್ಮಶ್ರೀ ನಾರಾಯಣಗುರು ಜಯಂತಿ -ತತ್ವ ಪಾಲನೆ *ಲಿಂಗತ್ವ ಅಲ್ಪಸಂಖ್ಯಾತರಿಗೆ ತಾತ್ಕಾಲಿಕ ರಾತ್ರಿ -ವಸತಿ ಕೇಂದ್ರ * ಗರ್ಭಿಣಿಯರಿಗೆ , ರೋಗಿಗಳಿಗೆ ತುರ್ತು ಚಿಕಿತ್ಸೆಗೆ ನೆರವಿಗೆ 3 ಉಚಿತ ಆ್ಯಂಬುಲೆನ್ಸ್ ‘ ಆಪ್ತ ರಕ್ಷಕ’ * ಕರಕುಶಲಕರ್ಮಿಗಳಿಗೆ ಉತ್ತೇಜನ *ಹೈನುಗಾರಿಕೆಗೆ ಉತ್ತೇಜನ ‘ಕಾಮಧೇನು’ * ಯಕ್ಷಗಾನದ ತರಬೇತಿಗೆ ‘ಯಕ್ಷಗಾನಂ-ವಿಶ್ವಗಾನಂ’* ಎರಡು ಸ್ಮಾರ್ಟ್ ಆ್ಯಂಡ್ ಡಿಜಿಟಲ್ ಬಸ್ ನಿಲ್ದಾಣ ನಿರ್ಮಾಣ ಗುರಿ.

ಬಜೆಟ್ ಬಗ್ಗೆ ಪ್ರತಿಕ್ರಿಯೆ

*ಪಾಲಿಕೆಯ ಇತಿಹಾಸದಲ್ಲೇ ಇದೊಂದು ಹಿಮ್ಮುಖ ಬಜೆಟ್. ನಮ್ಮ ನಿರೀಕ್ಷೆ ಸುಳ್ಳಾಗಿದೆ, ನಮ್ಮ ಸಲಹೆಯನ್ನು ಪರಿಗಣಿಸಲಾಗಿಲ್ಲ: ಪ್ರವೀಣ್ ಚಂದ್ರ ಆಳ್ವ, ವಿಪಕ್ಷ ನಾಯಕರು

* ಪಾಲಿಕೆಯ ಆದಾಯ ಹೆಚ್ಚಿಸುವ ಯೋಜನೆ ಇಲ್ಲ: ಶಶಿಧರ ಹೆಗ್ಡೆ , ಮಾಜಿ ಮೇಯರ್

*ಕ್ರೀಡಾ ಚಟುವಟಿಕೆಗಳಿಗೆ ಅನುದಾನ ಕನಿಷ್ಠ 50 ಲಕ್ಷ ರೂ. ಮೀಸಲಿರಿಸಬೇಕಿತ್ತು: ಅಬ್ದುಲ್ ಲತೀಫ್ - ವಿಪಕ್ಷ ಸದಸ್ಯರು

*ಕೇವಲ ಅಂಕಿ-ಅಂಶ ತೋರಿಸುವ ಬಜೆಟ್ ಆಗಿದೆ -ನವೀನ್ ಡಿ ಸೋಜ, ವಿಪಕ್ಷ ಸದಸ್ಯರು

*ಸ್ಮಶಾನಕ್ಕೆ ಹೆಚ್ಚಿನ ಅನುದಾನ ನೀಡಬೇಕಿತ್ತು: ವಿಪಕ್ಷ ಅಬ್ದುಲ್ ರವೂಫ್ . ವಿಪಕ್ಷ ಸದಸ್ಯರು






Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News