×
Ad

ಮಳೆ, ಗಾಳಿಯಿಂದ ಮೆಸ್ಕಾಂಗೆ 16.45 ಕೋಟಿ ರೂ.ಗೂ ಅಧಿಕ ನಷ್ಟ

Update: 2025-06-17 18:54 IST

ಮಂಗಳೂರು , ಜೂ.17: ಮುಂಗಾರು ಗಾಳಿ, ಮಳೆಗೆ ಮೆಸ್ಕಾಂ ವ್ಯಾಪ್ತಿಯಲ್ಲಿ 10583 ವಿದ್ಯುತ್ ಕಂಬ ಗಳು ಧರಾಶಾಹಿಯಾಗಿದ್ದು, ಪರಿವರ್ತಕಗಳು ಹಾನಿಗೊಳಲಾಗಿರುವುದು ಸೇರಿದಂತೆ ಒಟ್ಟು 16,45,63,000 ರೂ.ಗೂ ಅಧಿಕ ಮೊತ್ತದ ನಷ್ಟ ಸಂಭವಿಸಿದೆ.

ಕಳೆದ ಏಪ್ರಿಲ್ ತಿಂಗಳಿನಿಂದ ಜೂನ್ 15ರ ಅವಧಿಯಲ್ಲಿ ಗಾಳಿ, ಮಳೆಗೆ ಮೆಸ್ಕಾಂ ವ್ಯಾಪ್ತಿಯ ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6,91,37,000 ರೂ. ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 3,85,60,000 ರೂ. ಮೊತ್ತದ ಆಸ್ತಿಗಳಿಗೆ ಹಾನಿಯಾಗಿದೆ. ಉಳಿದಂತೆ ಉಡುಪಿಜಿಲ್ಲೆಯಲ್ಲಿ 3,73,53,000 ರೂ. ಮತ್ತು ಶಿವಮೊಗ್ಗದಲ್ಲಿ 1,95,14,000 ರೂ ಮೊತ್ತದ ಮೆಸ್ಕಾಂ ಆಸ್ತಿಗಳು ಹಾನಿಗೊಳಗಾಗಿದೆ.

ಹಾನಿಗೊಳಗಾದ ಬಹುತೇಕ ವಿದ್ಯುತ್ ಕಂಬಗಳು ಪರಿವರ್ತಕಗಳು ಹಾಗೂ ವಿದ್ಯುತ್ ಮಾರ್ಗಗಳನ್ನು ಬದಲಾಯಿಸಿ ವಿದ್ಯುತ್ ಪೂರೈಕೆ ಸುಗಮಗೊಳಿಸಲಾಗಿದೆ. ಕೆಲವೊಂದು ಕಡೆ ದುರಸ್ತಿ ಮತ್ತು ಬದಲಾವಣೆ ಕಾರ್ಯ ಮುಂದುವರಿದಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಅತೀ ಹೆಚ್ಚು ಕಂಬಗಳಿಗೆ ಹಾನಿ

ಮೆಸ್ಕಾಂ ವ್ಯಾಪ್ತಿಯ 4 ಜಿಲ್ಲೆಗಳಲ್ಲಿ ಗಾಳಿ-ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 4227 ಕಂಬಗಳಿಗೆ ಹಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 2238, ಶಿವಮೊಗ್ಗದಲ್ಲಿ 1945, ಉಡುಪಿ ಜಿಲ್ಲೆಯಲ್ಲಿ 2173 ಕಂಬಗಳು ಹಾನಿಗೊಳಗಾಗಿವೆ.

ಒಟ್ಟಾರೆ ಹಾನಿಗೊಳಗಾಗಿರುವ 10583 ವಿದ್ಯುತ್ ಕಂಬಗಳ ಪೈಕಿ 10338 ಕಂಬಗಳನ್ನು ಬದಲಾಯಿ ಸಲಾಗಿದೆ. ಅದೇ ರೀತಿ ಮೆಸ್ಕಾಂ ವ್ಯಾಪ್ತಿಯ 4 ಜಿಲ್ಲೆಗಳಲ್ಲಿ 180 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿವೆ.

ದಕ್ಷಿಣ ಕನ್ನಡದಲ್ಲಿ 120, ಉಡುಪಿ ಜಿಲ್ಲೆಯಲ್ಲಿ 6, ಶಿವಮೊಗ್ಗದಲ್ಲಿ 52 ವಿದ್ಯುತ್ ಪರಿವರ್ತಕಗಳು ಹಾನಿಗೊಂಡಿವೆ. ವಿದ್ಯುತ್ ಪರಿವರ್ತಕಗಳಿಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕನಿಷ್ಠ ಅಂದರೆ 2 ಪರಿವರ್ತಕಗಳಿಗೆ ಹಾನಿಯಾಗಿವೆ. ಹಾನಿಗೊಳಗಾಗಿರುವ ಎಲ್ಲಾ 180 ವಿದ್ಯುತ್ ಪರಿವರ್ತಕ ಗಳನ್ನು ದುರಸ್ತಿ ಮಾಡಲಾಗಿದೆ ಇಲ್ಲವೇ ಬದಲಾಯಿಸಲಾಗಿದೆ. ಇದಲ್ಲದೆ, 326.58. ಕಿ.ಮೀ. ವಿದ್ಯುತ್ ಮಾರ್ಗಗಳು ಹಾನಿಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 211. 35,ಕಿ.ಮೀ., ಉಡುಪಿ ಜಿಲ್ಲೆಯಲ್ಲಿ 32.83 ಕಿ.ಮೀ., ಚಿಕ್ಕಮಗಳೂರು ಜಿಲ್ಲೆಯಲ್ಲಿ 44.76 ಕಿ.ಮೀ. ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 37.6 4 ಕಿ.ಮಿ. ವಿದ್ಯುತ್ ಮಾರ್ಗ ಹಾನಿಗೊಂಡಿದೆ. ಇದರಲ್ಲಿ 323. ಕಿ.ಮೀ. ವಿದ್ಯುತ್ ಮಾರ್ಗ ಸರಿಪಡಿಸಲಾಗಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಸಹಕರಿಸಲು ಮನವಿ

ಮೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಗಾಳಿ, ಮಳೆ ಲೆಕ್ಕಿಸದೆ ಅವಿರತವಾಗಿ ಶ್ರಮಿಸಿ, ಗ್ರಾಹಕರ ಸಹಕಾರದಿಂದ ವಿದ್ಯುತ್ ಪೂರೈಕೆಯಲ್ಲಿ ಆಗಿರುವ ಅಡಚಣೆಗಳನ್ನು ಸರಿಪಡಿಸುತ್ತಿದ್ದಾರೆ. ಇನ್ನೂ ಹಲವೆಡೆ ದುರಸ್ಥಿ ಕಾರ್ಯ ಮುಂದುವರಿದಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.

ತುರ್ತು ಸಂದರ್ಭಗಳಿಗಾಗಿ ಮೆಸ್ಕಾಂನಿಂದ 2 ಹೊಸ ದೂರವಾಣಿ ಸಂಪರ್ಕ

ಗಂಭೀರ ಸಮಸ್ಯೆ ಹಾಗೂ ತುರ್ತು ಸಂದರ್ಭಗಳಲ್ಲಿ ಇಲಾಖೆಗೆ ತ್ವರಿತ ಮಾಹಿತಿ ಹಾಗೂ ದೂರು ನೀಡಲು 2 ಹೊಸ ತುರ್ತು ದೂರವಾಣಿಗಳನ್ನು ವ್ಯವಸ್ಥೆಗೊಳಿಸಲಾಗಿದ್ದು, ಸಾರ್ವಜನಿಕರು ಈ ಸೇವೆ ಯನ್ನು ಬಳಸಿಕೊಳ್ಳಬಹುದಾಗಿದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ದೂರವಾಣಿ ಸಂಖ್ಯೆಗಳು: 8277883388, 0824-2950953 ಸಾರ್ವಜನಿಕರು ಈ ದೂರವಾಣಿ ಸಂಖ್ಯೆಗಳನ್ನು ಗಂಭೀರ ಮತ್ತು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಬೇಕೆಂದು ವಿನಂತಿಸಲಾಗಿದೆ. ಇನ್ನಿತರ ಮೆಸ್ಕಾಂ ಸೇವೆಗಳಿಗಾಗಿ ಇಲಾಖೆಯ ಉಚಿತ ಸಹಾಯವಾಣಿ 1912 ಹಾಗೂ ಇಲಾಖೆ ಈಗಾಗಲೇ ವ್ಯವಸ್ಥೆಗೊಳಿಸಿರುವ ಸ್ಥಳೀಯ ಕಛೇರಿಯ ದೂರವಾಣಿಗಳನ್ನು ಬಳಸಿಕೊಳ್ಳಬೇಕು. ಮೆಸ್ಕಾಂ ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮುಂಗಾರು ತೀವ್ರ ಗೊಂಡಿದ್ದು, ಮಳೆಯ ಸಂದರ್ಭದಲ್ಲಿ ಸಂಭವಿಸಬಹುದಾದ ಅನಿರೀಕ್ಷಿತ ಅನಾಹುತಗಳನ್ನು ಪರಿಣಾಮ ಕಾರಿಯಾಗಿ ನಿಭಾಯಿಸಲು ಮೆಸ್ಕಾಂ ಸನ್ನದ್ಧವಾಗಿದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News