ಮಂಗಳೂರು: ಫೆ.2ರಂದು ಯುನಿವೆಫ್ ಸದಸ್ಯತ್ವ ಅಭಿಯಾನ ಉದ್ಘಾಟನೆ
ಮಂಗಳೂರು: ಯುನಿವೆಫ್ ಸದಸ್ಯತ್ವ ಅಭಿಯಾನದ ಉದ್ಘಾಟನೆ ಫಳ್ನೀರ್‌ನ ಇಂದಿರಾ ಆಸ್ಪತ್ರೆಯ ಬಳಿಯ ಲುಲು ಸೆಂಟರ್‌ನಲ್ಲಿ ಫೆ.2ರಂದು ನಡೆಯಲಿದೆ ಎಂದು ಅಭಿಯಾನ ಸಂಚಾಲಕ ಆಸಿಫ್ ಕುದ್ರೋಳಿ ತಿಳಿಸಿದ್ದಾರೆ.
ಮುಸ್ಲಿಮ್ ಸಮಾಜದ ಸಮಗ್ರ ಸುಧಾರಣೆ, ಮುಸ್ಲಿಮೇತರ ಹಾಗೂ ದೇಶ ಬಾಂಧವರಲ್ಲಿ ನೆಲೆಯೂರಿರುವ ಇಸ್ಲಾಂ, ಶರೀಅತ್, ಪ್ರವಾದಿ (ಸ), ಕುರ್ ಆನ್ ಹಾಗು ಇತರ ಇಸ್ಲಾಮೀ ಆಚರಣೆಗಳ ಕುರಿತು ತಪ್ಪು ಕಲ್ಪನೆಗಳನ್ನು ನೀಗಿಸುವುದು, ಶೈಕ್ಷಣಿಕವಾಗಿ ಮುಸ್ಲಿಂ ಸಮುದಾಯವನ್ನು ಮೇಲೆತ್ತುವುದು ಮತ್ತು ಎಲ್ಲ ರಂಗಗಳಲ್ಲಿ ಅವರು ಅಭಿವೃದ್ಧಿ ಹೊಂದುವಂತೆ ಮಾಡುವುದು, ಸಮಾಜದ ನಿರ್ಗತಿಕ, ಬಡವ ಮತ್ತು ವಂಚಿತ ಸಮುದಾಯವನ್ನು ಸಮಾಜ ಸೇವೆಗಳ ಮೂಲಕ ಆರ್ಥಿಕ ವಾಗಿ ಪ್ರಗತಿ ಸಾಧಿಸುವಂತೆ ಮಾಡುವುದು. ನಾಡು ನುಡಿಗಾಗಿ ದುಡಿದು, ದೇಶವನ್ನು, ಸಮಾಜವನ್ನು ಮತ್ತು ಸಮುದಾಯವನ್ನು ಕಟ್ಟಿದ ಮಹಾನುಭಾವರ ಚರಿತ್ರಾವಲೋಕನ ನಡೆಸಿ ಮುಂದಿನ ಪೀಳಿಗೆಗೆ ಅದನ್ನು ತಲುಪಿಸುವುದು. ಇಂತಹ ಪ್ರಮುಖ ಉದ್ದೇಶಗಳನ್ನಿಟ್ಟು ಯುನಿವೆಫ್ ಕರ್ನಾಟಕ ಕಳೆದ 18 ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಸದ್ಯಕ್ಕೆ ದ.ಕ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಅದು ತನ್ನ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ತೀರ್ಮಾನಿಸಿದೆ.
ಅದರಂತೆ ಫೆ.2ರಿಂದ 16ರ ತನಕ ಸದಸ್ಯತ್ವ ಅಭಿಯಾನವನ್ನು ಕೈಗೊಂಡು ಮುಸ್ಲಿಂ ಸಮಾಜದ ಸಬಲೀಕರಣ ಮತ್ತು ಸ್ವಾವಲಂಬಿಗಾಗಿ ತನ್ನ ಪ್ರಯತ್ನವನ್ನು ಮುಂದುವರಿಸಲು ತೀರ್ಮಾನಿಸಿದೆ. ಅದರ ಜೊತೆ ಈ ಸಮಾಜವನ್ನು ಸಹಿಷ್ಣು ಸಮಾಜವಾಗಿ ಪರಿವರ್ತಿಸಿ ದೇಶದ ಅಖಂಡತೆಯನ್ನು ಹಾಗು ಸಂವಿಧಾನವನ್ನು ರಕ್ಷಿಸುವ ಹೊಣೆಗಾರಿಕೆಯೊಂದಿಗೆ ಮಂಗಳೂರು, ಕುದ್ರೋಳಿ, ಉಳ್ಳಾಲ, ದೇರಳಕಟ್ಟೆ, ಬಂಟ್ವಾಳ, ಬಜ್ಪೆ, ಕೃಷ್ಣಾಪುರ ಶಾಖೆಗಳಲ್ಲಿ ಈ ಅಭಿಯಾನವನ್ನು ಹಮ್ಮಿಕೊಂಡಿದೆ.
ಎಲ್ಲ ಸಾರ್ವಜನಿಕರು ಯುನಿವೆಫ್ ಕರ್ನಾಟಕದ ಯೋಜನೆಗಳನ್ನು, ಉದ್ದೇಶಗಳನ್ನು ಮತ್ತು ಕಾರ್ಯ ಚಟುವಟಿಕೆಗಳನ್ನು ಅರಿತು ಇದರ ಸದಸ್ಯರಾಗಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಅದು ಬಯಸುತ್ತದೆ. ಆ ಮೂಲಕ ಒಂದು ಸದೃಢ ಸಮಾಜದ ನಿರ್ಮಾಣಕ್ಕಾಗಿ ಅದು ತನ್ನ ಪ್ರಯತ್ನವನ್ನು ಮುಂದುವರಿಸಲು ತೀರ್ಮಾನಿಸಿದೆ. ಹೆಚ್ಚಿನ ಮಾಹಿತಿಗಾಗಿ 9902326591 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.