ಹಲ್ಲೆ ಪ್ರಕರಣ: ಆರೋಪಿಗೆ 20 ಸಾವಿರ ರೂ. ದಂಡ
ಮಂಗಳೂರು: ನಗರದ ಶಕ್ತಿನಗರದಲ್ಲಿ ನಡೆದ ಹಲ್ಲೆ ಪ್ರಕರಣವೊಂದರ ಆರೋಪಿ ಭವಿತ್ ಶೆಟ್ಟಿ ಎಂಬಾತನಿಗೆ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20,000 ರೂ.ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸಲು ತಪ್ಪಿದಲ್ಲಿ 6 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ತಾನು ಶಕ್ತಿನಗರ ಶ್ರೀ ರಾಜರಾಜೇಶ್ವರಿ ದೇವಾಸ್ಥಾನದ ಬಳಿಯ ಅಂಗಡಿಯಿಂದ ಹಾಲು ಖರೀದಿಸುತ್ತಿರುವಾಗ ಭವಿತ್ ಶೆಟ್ಟಿ ಎಂಬಾತ ಅಲ್ಲಿಗೆ ತಲವಾರು ಹಿಡಿದುಕೊಂಡು ಬಂದು ತನಗೆ ಅವಾಚ್ಯ ಶಬ್ದಗಳಿಂದ ಬೈದು, ಬಳಿಕ ಕೊಲೆ ಮಾಡುವ ಉದ್ದೇಶದಿಂದ ತೋಳಿಗೆ, ಎಡಕೈಗೆ, ಬೆನ್ನಿಗೆ ತಲವಾರಿನಿಂದ ಚುಚ್ಚಿ ಮಾರಣಾಂತಿಕ ಹಲ್ಲೆ ನಡೆಸಿದ್ದ ಎಂದು ಹರೀಶ್ ಕುಮಾರ್ ನೀಡಿದ ದೂರಿನಂತೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ತನಿಖಾಧಿಕಾರಿಯಾಗಿದ್ದ ಎಸ್ಸೈ ರಘುನಾಯಕ್ ತನಿಖೆ ಪೂರೈಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶ್ರೀಧರ ಗೋಪಾಲಕೃಷ್ಣ ಭಟ್ ಅಭಿಯೋಗದ ಪರ ಹಾಜರುಪಡಿಸಲಾದ ಸಾಕ್ಷಿ ಪುರಾವೆಗಳನ್ನು ಆಧರಿಸಿ ಆರೋಪಿಯ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಆರೋಪಿಗೆ 20,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ದಂಡದ ಹಣದಲ್ಲಿ 18,000 ರೂ.ವನ್ನು ಗಾಯಾಳುವಿಗೆ ಪರಿಹಾರದ ರೂಪದಲ್ಲಿ ನೀಡಲು ಆದೇಶಿಸಿದ್ದಾರೆ.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ಸಾಕ್ಷಿ ವಿಚಾರಣೆ ನಡೆಸಿದ್ದು, ಪ್ರಭಾರ ಸರಕಾರಿ ಅಭಿಯೋಜಕ ಚೌಧರಿ ಮೋತಿಲಾಲ್ ವಾದ ಮಂಡಿಸಿದ್ದರು.