ಕ್ಷೇಮಾ ಸ್ಟೆಮ್ ಕಾನ್-2023: ಉದ್ಘಾಟನೆ
ಮಂಗಳೂರು: ನಿಟ್ಟೆ ವಿಶ್ವ ವಿದ್ಯಾಲಯದ ಸ್ಟೆಮ್ ಸೆಲ್ ಸಂಶೋಧನಾ ಕೇಂದ್ರ ವತಿಯಿಂದ ಐದನೇ ದ್ವೈವಾರ್ಷಿಕ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವು "ಸ್ಟೆಮ್ ಸೆಲ್ಸ್ ಮತ್ತು ರೀಜನರೇಟಿವ್ ಮೆಡಿಸಿನ್: ಕಾನ್ಸೆಪ್ಟ್ ಟು ಕ್ಲಿನಿಕಲ್ ಪ್ರಾಕ್ಟೀಸ್" ಉದ್ದೇಶದೊಂದಿಗೆ ಪ್ರಾರಂಭಿಸಲಾಯಿತು.
ಈ ಸಮ್ಮೇಳನದ ಉದ್ಘಾಟನಾ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಶಾಂತಾರಾಮ್ ಶೆಟ್ಟಿ, ಉಪಕುಲಾಧಿಪತಿಗಳು, ನಿಟ್ಟೆ ವಿಶ್ವ ವಿದ್ಯಾಲಯ ರವರು ಮಾತನಾಡಿ ಸ್ಟೆಮ್ ಸೆಲ್ ಸಂಶೋಧನೆಯ ಮಹತ್ವ, ಎದುರಿಸು ತ್ತಿರುವ ಸಮಸ್ಯೆಗಳು ಹಾಗೂ ಭಾರತದಲ್ಲಿರುವ ಸ್ಟೆಮ್ ಸೆಲ್ ಬಗೆಗಿನ ಶಾಸನಬದ್ಧ ಭಾದ್ಯತೆಗಳ ಕುರಿತು ಬೆಳಕು ಚೆಲ್ಲಿದರು. ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಡಾ. ಸತೀಶ್ ಕುಮಾರ್ ಭಂಡಾರಿ ಮೂವರು ಮಾತನಾಡಿ ಸ್ಟೆಮ್ ಸೆಲ್ ಸಂಶೋಧನೆಯ ಫಲಿತಾಂಶಗಳು ಪ್ರಯೋಗಾಲಯದಿಂದ ಚಿಕಿತ್ಸಾಲಯಕ್ಕೆ ತಲುಪಲು ಹೆಚ್ಚು ಪ್ರಯತ್ನಗಳು ನಡೆಯಬೇಕು ಎಂದು ಒತ್ತಾಯಿಸಿದರು.
ಹತ್ತನೇ ವಾರ್ಷಿಕೋತ್ಸವದ ಆಚರಣೆಯಲ್ಲಿರುವ ನಿಟ್ಟೆ ಸ್ಟೆಮ್ ಸೆಲ್ (ಆಕರ ಕೋಶ) ಸಂಶೋಧನಾ ಕೇಂದ್ರದ ಈ ಸಮ್ಮೇಳನದಲ್ಲಿ ದೇಶ ವಿದೇಶಗಳಿಂದ 250 ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು. ಅಲ್ಲದೇ, ವಿವಿಧ ವಿಷಯಗಳ ಕುರಿತು 10ಕ್ಕೂ ಅಧಿಕ ವಿಶೇಷ ಆಹ್ವಾನಿತ ಭಾಷಣಕಾರರು ಪ್ರಬಂಧ ಮಂಡನೆ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ದಕ್ಷಿಣ ಕೊರಿಯಾದ ಡಾ. ಸಿಓಕ್ ಜುಂಗ್ ಕಿಮ್, ನಿರ್ದೇಶಕರು, ಕ್ಯಾಥೋಲಿಕ್ ವಿಶ್ವ ವಿದ್ಯಾಲಯ, ಕೊರಿಯಾ ರವರನ್ನು ನಿಟ್ಟೆ ಸ್ಟೆಮ್ ಸೆಲ್ ಸಂಶೋಧನಾ ಕೇಂದ್ರವನ್ನು 2013ರಲ್ಲಿ ಪ್ರಾರಂಭಿಸಲು ನೀಡಿದ ಪ್ರಮುಖ ಕೊಡುಗೆಗಾಗಿ ಸನ್ಮಾನಿಸಲಾಯಿತು.
ನಿಟ್ಟೆ ವಿವಿ ಕುಲಪತಿಗಳಾದ ಡಾ. ಎಂ ಎಸ್ ಮೂಡಿತಾಯ ರವರು ಸಮಾರಂಭ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜನೆ ಮಾಡಿರುವ ಕ್ಷೇಮಾ ಸ್ಟೆಮ್ ಕಾನ್ ತಂಡವನ್ನು ಅಭಿನಂದಿಸಿ, ಈ ದಿನಮಾನದಲ್ಲಿ ಸ್ಟೆಮ್ ಸೆಲ್ ಸಂಶೋಧನೆಯ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಡಾ. ಪ್ರವೀಣ್ ಕುಮಾರ್ ಶೆಟ್ಟಿ, ಡಾ. ಯು ಎಸ್ ಕೃಷ್ಣ ನಾಯಕ್ ಹಾಗೂ ಡಾ. ಎ ಎಂ ಮಿರಾಜ್ಕರ ರವರು ಹಾಜರಿದ್ದರು. ಡಾ. ಜಯಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ಡಾ. ಮೋಹನ್ ಕುಮಾರ್ ಅಭಿನಂದನಾ ಪತ್ರವನ್ನು ಓದಿದರು. ಡಾ. ವೀಣಾ ಶೆಟ್ಟಿ ವಂದಿಸಿದರು. ಡಾ. ಶಿಲ್ಪಾ ಶೆಟ್ಟಿ ಕಾರ್ಯ ಕ್ರಮ ನಿರೂಪಿಸಿದರು.