×
Ad

ದೇರಳಕಟ್ಟೆ: 'ರತ್ನೋತ್ಸವ 2023' ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನ ಉದ್ಘಾಟನೆ

Update: 2023-12-20 18:34 IST

ಕೊಣಾಜೆ: ಸಾಹಿತ್ಯ-ಸಾಂಸ್ಕೃತಿಕ ಸಂಗತಿಗಳು ಮಕ್ಕಳನ್ನು ಕ್ರೀಯಾತ್ಮಕಗೊಳಿಸುವುದಲ್ಲದೆ ಲೋಕಜ್ಞಾನದೆಡೆಗೆ ಕೊಂಡೊಯ್ಯುತ್ತವೆ ಹಾಗೂ ಅವರ ಅನುಭವ ದಾರಿದ್ರ್ಯವನ್ನು ದೂರಗೊಳಿಸಿ ಉತ್ತಮ ಬದುಕು ರೂಪಿಸುತ್ತದೆ ಎಂದು ಹಾವೇರಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿನ್ನಪ್ಪ ಗೌಡ ಅವರು ಹೇಳಿದರು.

ಅವರು ದೇರಳಕಟ್ಟೆಯ ವಿದ್ಯಾ ರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ 12 ನೇ ವರ್ಷದ ನಾಡು ನುಡಿ ವೈಭವದ 'ರತ್ನೋತ್ಸವ 2023' ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಭಾಗವಹಿಸಿ ಮಾತನಾಡಿದರು.

ಮಕ್ಕಳನ್ನು ಸಂಪನ್ನಗೊಳಿಸಬೇಕಾದ ಅನೇಕ ಸಾಹಿತ್ಯ ಸಾಂಸ್ಕೃತಿಕ ಸಂಗತಿಗಳು ನಮ್ಮಲ್ಲೇ ಇದೆ. ರಾಷ್ಟ್ರ ಮಟ್ಟದಲ್ಲಿ, ಅಂತರಾಷ್ಟ್ರೀಯ ಮಟ್ಟದ ವಿಚಾರಗಳನ್ನು ಅರಿತುಕೊಂಡರೂ ಸ್ಥಳೀಯ ಜ್ಞಾನ ಸಾಹಿತ್ಯ ಸಂಸ್ಕೃತಿಯ ಬೇರುಗಳನ್ನು ಮೊದಲು ತಿಳಿದುಕೊಳ್ಳಬೇಕು. ನಾವು ವಿದ್ಯಾವಂತರಾಗಬೇಕು ಜೊತೆಗೆ ಹೃದಯವಂತರಾಗಬೇಕಿದೆ. ಈ ಹೃದಯವಂತಿಕೆಯನ್ನು ಬೆಳೆಸುವ ಕಾರ್ಯ ಸಾಹಿತ್ಯದಿಂದ ಆಗಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಕಸಪಾ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಅವರು,‌ ನಮ್ಮಲ್ಲಿ ಹಣ ಮಾಡುವ ಉದ್ದೇಶ ಮಾತ್ರ ಇರದೆ ಬದುಕು ಸಾರ್ಥಕವಾಗಬೇಕಾದರೆ ಕಲೆ ಸಾಹಿತ್ಯದ ಒಲವನ್ನು ನಾವು ಬೆಳೆಸಿಕೊಂಡು ಮುನ್ನಡೆಯಬೇಕು ಎಂದರು. ಸಮಾಜದಲ್ಲಿ ಸದಾ ಶಾಂತಿ, ಸಾಮರಸ್ಯ, ಸೌಹಾರ್ದತೆ ಇರಬೇಕಾದರೆ ಇಂತಹ ಸಾಹಿತ್ಯ, ಸಾಂಸ್ಕೃತಿಕ ಸಮ್ಮೇಳನಗಳು ಕೂಡಾ ಅತ್ಯಂತ ಅಗತ್ಯ.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರು ಸಮಾಜಕ್ಕೆ‌ ಸಾಹಿತಿಗಳ ಕೊಡುಗೆ ಅಪಾರ. ವಿದ್ಯಾರ್ಥಿಗಳಲ್ಲಿ ಸಾಹಿತ್ಯಿಕ ಪ್ರಜ್ಞೆಯನ್ನು ಬೆಳೆಸುವಂತಹ ಕಾರ್ಯಕ್ರಮ ಹೆಚ್ಷು ಹೆಚ್ಚು ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ದೇವದಾಸ ರೈ, ಕಸಪಾ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ, ನಿವೃತ್ತ ಅಧ್ಯಾಪಕ ಡಾ.ರವೀಂದ್ರ ರೈ ಹರೇಕಳ, ತೋನ್ಸೆ ಪುಷ್ಕಲ್ ಕುಮಾರ್ , ಸಾಹಿತಿ ಡಾ.ಬಾಸ್ಕರ ರೈ ಕುಕ್ಕುವಳ್ಳಿ, ತಾ.ಪಂ.ನ ಮಾಜಿ ಸದಸ್ಯರಾದ ಸುರೇಶ್ ಚೌಟ, ರತ್ನ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ಸೌಮ್ಯ ಆರ್ .ಶೆಟ್ಟಿ, ಮುಖ್ಯ ಶಿಕ್ಷಕಿ ನಯೀಮ್ ಹಮೀದ್, ಟ್ರಸ್ಟಿ‌ ಅರ್ಜುನ್ ಮೊದಲಾದವರು ಉಪಸ್ಥಿತರಿದ್ದರು.

ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲಾಡಳಿತ ನಿರ್ದೇಶಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕದ್ರಿ ನವನೀತ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು.

ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯಿಂದ ಸಮ್ಮೇಳನ ನಡೆಯುವ ಶಾಲೆಯವರೆಗೆ ನಡೆದ ವೈಭವದ ಮೆರವಣಿಗೆಗೆ ರತ್ನ ಎಜ್ಯುಕೇಶನ್ ಟ್ರಸ್ಟ್ ನ ರತ್ನಾವತಿ ಕೆ.ಶೆಟ್ಟಿ ಅವರು ದ್ವಜಾರೋಹನ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಾಹಿತ್ಯ- ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಗೈದ ತೋನ್ಸೆ ಪುಷ್ಕಲ್ ಕುಮಾರ್ ಅವರಿಗೆ 'ವಿದ್ಯಾರತ್ನ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕವಿ ಗೋಷ್ಠಿ ಹಾಗೂ ವಿವಿದ ಜಾನಪದನೃತ್ಯ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.‌




Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News